ತಮಿಳುನಾಡಿನಲ್ಲಿ ದಳಪತಿ ಸೆರೆಯಾದರೂ ಸಮರ ಮುಗಿದಿಲ್ಲ… ಗಮನಿಸಲೇಬೇಕಾದ 3 ಅಂಶಗಳು

 

ಡಿಜಿಟಲ್ ಕನ್ನಡ ಟೀಮ್:

  • ಸುಪ್ರೀಂಕೋರ್ಟ್ ತೀರ್ಪಿನಿಂದ ಶಶಿಕಲಾಗೆ ಆದ ಆಘಾತ ಪನ್ನೀರ್ ಸೆಲ್ವಂ ಗೆಲುವಲ್ಲ….

ಇದು ಮಂಗಳವಾರ ಮಧ್ಯಾಹ್ನದ ಹೊತ್ತಿಗೆಲ್ಲ ಅರ್ಥವಾಗುತ್ತಿರುವ ಸಂಗತಿ. ಇನ್ನು ಹತ್ತು ವರ್ಷ ತನಗೆ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಿಲ್ಲ, ನಾಲ್ಕು ವರ್ಷ ಜೈಲಲ್ಲಿ ಕಳೆಯಬೇಕು ಎಂದು ಗೊತ್ತಿದ್ದೂ ಎಐಎಡಿಎಂಕೆ ಮೇಲಿನ ಹಿಡಿತ ತಪ್ಪಿಸಿಕೊಳ್ಳುವುದಕ್ಕೆ ಚಿನ್ನಮ್ಮ ತಯಾರಿಲ್ಲ. ಹಾಗೆಂದೇ ರೆಸಾರ್ಟಿನಿಂದ ಶಶಿಕಲಾ ಪಾಳೆಯದಲ್ಲಿರುವ ಶಾಸಕರ್ಯಾರೂ ಹೊರಬರುತ್ತಿಲ್ಲ. ತನ್ನ ಬದಲು ಇನ್ನೊಬ್ಬರನ್ನು ಕೂರಿಸಿಯೇ ಸಿದ್ಧ ಎಂಬ ಕೊನೇ ಆಟದಲ್ಲಿ ವ್ಯಸ್ತರಾಗಿದ್ದಾರೆ ಶಶಿಕಲಾ. ಅಪರಾಧಿಯಾದರೂ, ಜೈಲಿನಲ್ಲಿದ್ದರೂ ರಾಜಕೀಯ ಸೂತ್ರ ನಿರ್ವಹಿಸುವ ಕಲೆಯನ್ನು ಬಹುಶಃ ಜಯಲಲಿತಾ ಅವರಿಂದಲೇ ಕಲಿತಿದ್ದಿರಬೇಕು. ಈ ನಿಟ್ಟಿನಲ್ಲಿ ಸ್ಫೂರ್ತಿ ನೀಡುವುದಕ್ಕೆ ಭಾರತೀಯ ರಾಜಕಾರಣದಲ್ಲಿ ಲಾಲು ಪ್ರಸಾದ ಯಾದವರಂಥವರೂ ಇದ್ದಾರಲ್ಲ.

  • ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಬೊಟ್ಟು ಮಾಡುತ್ತಿರುವಂತೆ, ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ದೋಷಿ ಎಂದಾದರೆ, ಜಯಲಲಿತಾ ಬದುಕಿದ್ದರೆ ಮೊದಲ ದೋಷಿ ಆಗುತ್ತಿದ್ದರು. ಹೀಗಾಗಿ ಎಐಎಡಿಎಂಕೆಯ ಸೆಲ್ವಂ ಪಾಳೆಯದ ಸಂಭ್ರಮಾಚರಣೆ ಅಮ್ಮನ ಆತ್ಮಕ್ಕೆ ಎಷ್ಟು ಖುಷಿ ಕೊಡುವುದೋ ಗೊತ್ತಿಲ್ಲ!
  • ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಶಶಿಕಲಾಗೆ ಬಹುಮತ ಸಾಬೀತಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂಬ ಆಕ್ಷೇಪವೊಂದಿತ್ತು. ಶಶಿಕಲಾ ವಿರುದ್ಧದ ದಾವೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಸುಬ್ರಮಣಿಯನ್ ಸ್ವಾಮಿ ಸಹ ಈ ವಿಚಾರದಲ್ಲಿ ರಾಜ್ಯಪಾಲರ ವಿರುದ್ಧವೇ ಮಾತನಾಡಿದ್ದರು. ಆದರೆ, ಸುಪ್ರೀಂಕೋರ್ಟಿನಲ್ಲಿ ಶಶಿಕಲಾ ಪ್ರಕರಣದ ತೀರ್ಪು ಅತಿ ಹತ್ತಿರದಲ್ಲೇ ಇದ್ದಾಗ, ರಾಜ್ಯಪಾಲರು ಕಾದಿದ್ದು ಸರಿಯಾಗಿಯೇ ಇದೆ ಅಂತ ಈಗೊಂದು ಅಭಿಪ್ರಾಯ ಮೂಡುತ್ತಿದೆ. ವಿಶ್ಲೇಷಕ ಎಸ್. ಗುರುಮೂರ್ತಿ ತಮ್ಮ ಟ್ವೀಟ್ ಗಳಲ್ಲಿ ಇದನ್ನು ಹೀಗೆ ಹೇಳಿದ್ದಾರೆ.

ವಾರದಲ್ಲೇ ತಾನು ತೀರ್ಪು ಕೊಡುವೆ ಎಂದು ಸುಪ್ರೀಂಕೋರ್ಟ್ ಹೇಳಿರದಿದ್ದರೆ ಆಗ ರಾಜ್ಯಪಾಲರು ಶಶಿಕಲಾಗೆ ಪ್ರತಿಜ್ಞಾವಿಧಿ ಭೋದಿಸದೇ ಬೇರೆ ಆಯ್ಕೆ ಇರಲಿಲ್ಲ. ರಾಜ್ಯಪಾಲರು ಕಾಯದೇ ಶಶಿಕಲಾರಿಗೆ ಅವಕಾಶ ಮಾಡಿಕೊಟ್ಟಿದ್ದರೆ ಈಗ ಸರ್ಕಾರ ಬಿದ್ದು ಹೋಗುತ್ತಿತ್ತು. ಶಶಿಕಲಾ ಜೈಲಿಗೆ ಹೋಗುವುದರಿಂದ ಹಂಗಾಮಿ ಮುಖ್ಯಮಂತ್ರಿ ನೇಮಕಕ್ಕೂ ರಾಜ್ಯಪಾಲರು ಹುಡುಕಬೇಕಾಗುತ್ತಿತ್ತು.

tweet

Leave a Reply