ಉನ್ಮಾದಿಸುವ ಹಾರ್ಮೋನುಗಳೆಲ್ಲ ತಣ್ಣಗಾದ ಕಾಲಕ್ಕೂ ಮುಕ್ಕಾಗದ ಪ್ರೀತಿ

ಡಿಜಿಟಲ್ ಕನ್ನಡ ವಿಶೇಷ:

ಬ್ರಾಂಡ್ ಒಂದು ಹೇಗೆ ರೂಪುಗೊಳ್ಳುತ್ತದೆ ಎಂಬುದಕ್ಕೆ ವ್ಯಾಲಂಟೈನ್ಸ್ ಡೇ ಒಂದೊಳ್ಳೆ ಉದಾಹರಣೆ. ನೀವದನ್ನು ಇಷ್ಟಪಡುತ್ತಿರೋ, ವಿರೋಧಿಸುತ್ತೀರೋ ಬೇರೆ ಮಾತು. ಆದರೆ ನಿಮ್ಮ ಮಾತು-ಕತೆ-ವರ್ತನೆಗಳು ಬ್ರಾಂಡ್ ಒಂದರ ಸುತ್ತಲೇ ಗಿರ್ಕಿ ಹೊಡೆಯುತ್ತವೆ.

ಇದೊಂಥರ ಮೋದಿ ಬ್ರಾಂಡ್ ಇದ್ದ ಹಾಗೆ. ಮೋದಿಯನ್ನು ಹೊಗಳುವವರಿಗೆ ದೊಡ್ಡಮಟ್ಟದ ಗಮನ ಸಿಗುತ್ತದೆ. ಇನ್ನೊಂದು ಬದಿಯಲ್ಲಿ ನಿಂತು ಮೋದಿಯನ್ನು ತೆಗಳಿದರೂ ಗಮನ ಸಲ್ಲುತ್ತದೆ. ಆ ವಿಷಯ ಬಿಟ್ಟು ಮತ್ತೇನೋ ಮಾತಾಡಲು ಹೋದರೆ ಸಪ್ಪೆಯಾಗುತ್ತೀರಿ.

ಇವತ್ತು ವ್ಯಾಲಂಟೈನ್ ಡೇ ಪ್ರಯುಕ್ತ ಸಾಮಾಜಿಕ ಮಾಧ್ಯಮ ಗಮನಿಸಿದರೂ, ತಮಿಳುನಾಡು ಗಲಾಟೆ ನಡುವಲ್ಲೂ ಎಲ್ಲರೂ ಈ ದಿನದ ನೆನಕೆಯಲ್ಲಿ ಭಾಗವಹಿಸಿದ್ದಾರೆ. ಬಹಳಷ್ಟು ಮಂದಿ ತಮ್ಮ ಸಂಗಾತಿ ಜತೆಗಿನ ಫೋಟೋ ಹಾಕಿಕೊಂಡು, ಇನ್ನೇನೋ ಭಾವುಕ ಸಾಲು ಗೀಚಿಕೊಂಡು… ಇನ್ನು ವಿರೋಧಿಸುವವರೂ ವ್ಯಾಲಂಟೈನ್ ಡೇ ಎಂಬ ಬ್ರಾಂಡನ್ನು ಜಳಪಳಿಸಿಕೊಂಡೇ ಮಾತು ಮುಂದುವರಿಸಿದ್ದಾರೆ. ಯಥಾಪ್ರಕಾರ, ಇದು ಮಟೀರಿಯಲಿಸಮ್ಮು, ಪಾಶ್ಚಾತ್ಯ ಸಂಸ್ಕೃತಿ ಇತ್ಯಾದಿ ಕಾರಣಗಳು.

ಬ್ರಾಂಡ್ ಒಂದನ್ನು ಕಡೆಗಣಿಸುವುದಕ್ಕೆ ಸಾಧ್ಯವಿಲ್ಲ ಎಂದಾದಾಗ ಅದರ ದ್ವೇಷದಲ್ಲಿ ನಮ್ಮ ಐಡೆಂಟಿಟಿ ಕಟ್ಟಿಕೊಳ್ಳುವುದೇಕೆ? ಇರುವ ಸಕಾರಾತ್ಮಕತೆಯನ್ನೇ ಸಂಭ್ರಮಿಸಿಬಿಡೋಣ ಅಲ್ಲವೇ?

ಯೌವನದ ಪ್ರೀತಿ ಯುಗ ಯುಗಗಳು ಕಳೆದರೂ ಆಕರ್ಷಣೆ ಕಳೆದುಕೊಳ್ಳದ ಸಂಗತಿ- ಕಥಾವಸ್ತು. ಆದರೆ ಇಳಿಸಂಜೆಯ ಪ್ರೀತಿಯಲ್ಲಿ ಉದ್ವೇಗರಹಿತ ಆಪ್ತತೆಯೊಂದಿದೆ. ಜೈವಿಕ ಹಾರ್ಮೋನುಗಳೆಲ್ಲ ದಣಿದುಬಿದ್ದ ಕಾಲಕ್ಕೂ ಬಿಸುಪೊಂದನ್ನು ಉಳಿಸಿಕೊಳ್ಳುವುದು ಅಚ್ಚರಿಯಾಗಿ ಕಾಡುತ್ತದೆ.

ಅಂಥ ಎರಡು ದೃಶ್ಯ ಸೊಬಗುಗಳು ಇಲ್ಲಿವೆ. ಒಂದು ಬಹಳ ಹಳೆಯ ಕಥೆ. ಎಸ್ಬಿಐ ಪಿಂಚಣಿ ಯೋಜನೆಗೆ ಈ ದೇಶದ ಸೃಜನಶೀಲ ಜಾಹೀರಾತುಕರ್ತ ಪಿಯೂಶ್ ಪಾಂಡೆ ಬಹಳ ಹಿಂದೆ ಮಾಡಿದ ಆ್ಯಡ್ ಫಿಲ್ಮ್. ಈ ವಯಸ್ಸಿನಲ್ಲಿ ಇದೆಲ್ಲ ಏಕೆ ಎಂದು ಉಂಗುರ ನಿರಾಕರಿಸುವ ಅಜ್ಜಿಗೆ, ‘ವಜ್ರಕ್ಕೇನು ಗೊತ್ತು ನಿನ್ನ ವಯಸ್ಸಿನ ಲೆಕ್ಕ’ ಎಂದು ರಮಿಸುವ ಅಜ್ಜ.

ಇನ್ನೊಂದು ನಿನ್ನೆಯಷ್ಟೇ ವ್ಯಾಲಂಟೈನ್ ದಿನಕ್ಕೆಂದು ಸಿದ್ಧಮಾಡಿ ಯೂಟ್ಯೂಬಿನಲ್ಲಿ ತೇಲಿಬಿಟ್ಟಿರುವ ಅನುಪಮ್ ಖೇರ್ ಅಭಿನಯದ ಆರು ನಿಮಿಷದ ಚಿತ್ರ ‘ಕೀರ್’. ಅಜ್ಜನ ಗರ್ಲ್ಫ್ರೆಂಡು ಮತ್ತು ಮೊಮ್ಮಕ್ಕಳ ಪ್ರಶ್ನಾರ್ಥಕ ಚಿಹ್ನೆಯ ನಡುವೆ ಯೌವನವನ್ನು ಪ್ರಸ್ತಾಪಿಸದೆಯೂ ಮನಸ್ಸಿಗೆ ಹರೆಯ ಉಕ್ಕಿಸಬಲ್ಲ ಚಿತ್ರವಿದು.

 

Leave a Reply