ಮಾಲ್ಡಾದಲ್ಲಿ ₹2000 ನೋಟಿನ ‘ಉತ್ಕೃಷ್ಟ’ ನಕಲಿ ಜಾಲದ ಮೇಲೆ ಎನ್ಐಎ ದಾಳಿ, ಮಮತಾರ ಬಂಗಾಳದಲ್ಲಿ ಮತ್ತೆ ಶುರುವೇ ಹಳೆಚಾಳಿ?

 

ಡಿಜಿಟಲ್ ಕನ್ನಡ ವಿಶೇಷ:

ಮಮತಾ ಬ್ಯಾನರ್ಜಿಯವರ ಪಶ್ಚಿಮ ಬಂಗಾಳ ತಿಂಗಳ ಹಿಂದೆ ಭಾರಿ ಸುದ್ದಿಯಲ್ಲಿತ್ತು. ಕಾರಣ, ಮೋದಿ ಸರ್ಕಾರದ ನೋಟು ಅಮಾನ್ಯ ನೀತಿಯನ್ನು ಉನ್ಮಾದಿತ ರೀತಿಯಲ್ಲಿ ವಿರೋಧಿಸಿದವರು ಮಮತಾ ಬ್ಯಾನರ್ಜಿ.

ಪ್ರತಿಪಕ್ಷಗಳೆಲ್ಲ ನಾನಾ ಕಾರಣಗಳನ್ನಿಟ್ಟುಕೊಂಡು ವಿರೋಧಿಸಿದ್ದು ಹೌದಾದರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾರ ವಿರೋಧ ಮಾತ್ರ ಚೀರಾಟ-ಹಾರಾಟದ ಮಟ್ಟಕ್ಕೆ ಹೋಗಿ ಯಾವುದೋ ಹತಾಶೆಯೊಂದು ಅವರನ್ನು ಕಾಡಿರುವುದು ಸ್ಪಷ್ಟವಾಗಿತ್ತು. ನಗದಿನಲ್ಲೇ ನಡೆಯುತ್ತಿದ್ದ ಚಿಟ್ ಫಂಡ್ ವ್ಯವಹಾರಗಳಿಗೆ ಮಮತಾರ ತೃಣಮೂಲದ ಆಶ್ರಯವಿದ್ದದ್ದು, ಮಾಲ್ಡಾದಲ್ಲಿ ನಕಲಿ ನೋಟುಗಳನ್ನು ತಯಾರಿಸುವ ತಮ್ಮ ಮತಬ್ಯಾಂಕ್ ಸಮುದಾಯದ ಕಾರ್ಖಾನೆಗಳೆಲ್ಲ ಮುಚ್ಚಿಹೋಗುವ ಅಪಾಯ.. ಇಂಥವೆಲ್ಲ ಮಮತಾ ಕ್ರುದ್ಧವಾಗಿದ್ದರ ಹಿಂದಿನ ಕಾರಣ ಎಂದು ಡಿಜಿಟಲ್ ಕನ್ನಡ ವಿಶ್ಲೇಷಿಸಿತ್ತು.

ಇದೀಗ, ಮಂಗಳವಾರ ಅದೇ ಮಾಲ್ಡಾದಲ್ಲಿ ₹2000 ನೋಟಿನ ಉತ್ತಮ ನಕಲಿ ಮುದ್ರಣ ಮಾಡುತ್ತಿದ್ದ ಜಾಲವೊಂದನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭೇದಿಸಿದೆ. ಪಶ್ಚಿಮ ಬಂಗಾಳದ ಉಮರ್ ಫಾರೂಕ್ ಎಂಬಾತ ಸೆರೆಯಾಗಿರುವ ಪ್ರಮುಖ ಆರೋಪಿ. ಈತ 2000 ರುಪಾಯಿ ನೋಟಿನ ನಕಲಿ ಮಾದರಿಯನ್ನು ಇನ್ನೊಂದು ಜಾಲದೊಂದಿಗೆ ಹಂಚಿಕೊಳ್ಳಲು ಹೋಗುತ್ತಿದ್ದ ಸಂದರ್ಭದಲ್ಲಿಯೇ ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ.

₹2000 ನೋಟು ಬಂದಾಗಿನಿಂದ ಅದನ್ನು ನಕಲು ಮಾಡುವ ಪ್ರಯತ್ನಗಳು ದೇಶದ ಹಲವೆಡೆಗಳಲ್ಲಿ ಆಗಿದ್ದವು. ಆದರೆ ಮಾಲ್ಡಾದಲ್ಲಿ ಸಿಕ್ಕಿಬಿದ್ದಿರುವ ಜಾಲ ವಿಶೇಷವಾದದ್ದು. ಏಕೆಂದರೆ ಇದುವರೆಗೆ ನಕಲಿ ಮಾಡಲು ಹೋದವರೆಲ್ಲ ಕಲರ್ ಜೆರಾಕ್ಸ್ ಮಾಡಿ ಏಮಾರಿಸುವ ತಂತ್ರವನ್ನೋ ಅಥವಾ ಕಡಿಮೆ ಗುಣಮಟ್ಟದಲ್ಲಿ ₹2000ದ ನೋಟನ್ನು ನಕಲು ಮಾಡುವ ಯತ್ನವನ್ನೋ ಮಾಡುತ್ತ ಸಿಕ್ಕಿಬಿದ್ದಿದ್ದರು. ಆದರೆ ಉಮರ್ ಫಾರೂಕ್ ಗ್ಯಾಂಗ್ ಸೃಷ್ಟಿಸುತ್ತಿದ್ದ ನಕಲಿ ನೋಟುಗಳು ಅಸಲಿ ನೋಟುಗಳಿಗೆ ತುಂಬ ಹತ್ತಿರದಲ್ಲಿದ್ದು ಉನ್ನತ ದರ್ಜೆಯನ್ನೇ ಹೊಂದಿವೆ ಎಂಬುದು ಎನ್ಐಎ ತನಿಖಾದಳ ನೀಡಿರುವ ಮಾಹಿತಿ. ಹೊಸ ನೋಟಿನ ಭದ್ರತಾ ಗುರುತುಗಳನ್ನು ಸಹ ನಕಲು ಮಾಡುವಲ್ಲಿ ಭಾಗಶಃ ಯಶಸ್ಸು ಸಾಧಿಸಿದೆ ಈ ಕಳ್ಳಜಾಲ ಎಂಬುದು ಆತಂಕದ ಸಂಗತಿ.

ಬಾಂಗ್ಲಾದೇಶದ ಗಡಿಯಲ್ಲಿ ನಕಲಿ ನೋಟಿನ ಜಾಲ ಲಾಗಾಯ್ತಿನಿಂದ ಸಕ್ರಿಯವಾಗಿದೆ. ಹಳೆಯ ನೋಟುಗಳನ್ನು ರದ್ದುಪಡಿಸುವ ಸಂದರ್ಭದಲ್ಲಿ ಸಹ ಆ ನೀತಿ ನಕಲಿ ನೋಟುಗಳ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಹಾರ ಮಾಡಲಿದೆ ಎಂದು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದರು. ಅಂಥ ನೋಟು ಅಮಾನ್ಯ ಪರ್ವ ಮುಗಿದ ಬೆನ್ನಲ್ಲೇ ಗಡಿಯಲ್ಲಿ ಬಿಎಸ್ಎಫ್ ಹಾಗೂ ಪಶ್ಚಿಮ ಬಂಗಾಳದ ಪೊಲೀಸರು ಇಬ್ಬರಿಗೂ ಹೊಸ ನೋಟುಗಳನ್ನು ನಕಲಿ ಮಾಡಿ ದಾಟಿಸುತ್ತಿರುವ ಹಲವು ಪ್ರಕರಣಗಳು ಎದುರಾಗಿದ್ದವು. ಇಲ್ಲೆಲ್ಲ ಅಪರಾಧಿಗಳನ್ನು ಹಿಡಿಯುವುದಕ್ಕೆ ಹಾಗೂ ನಕಲಿ ನೋಟುಗಳನ್ನು ವಶಪಡಿಸುವುದಕ್ಕೆ ಈ ಏಜೆನ್ಸಿಗಳು ಸಫಲವಾಗಿದ್ದವು. ಆದರೆ ಅದು ದೊಡ್ಡಮಟ್ಟದ ವಿದ್ಯಮಾನವೇನಾಗಿರಲಿಲ್ಲ. ಏಕೆಂದರೆ ಆ ನಕಲಿ ನೋಟುಗಳೆಲ್ಲ ಕಳಪೆ ಗುಣಮಟ್ಟದಾಗಿದ್ದು, ಜಾಗರೂಕರಾಗಿ ಪರೀಕ್ಷಿಸುವ ಯಾರಾದರೂ ಅವು ನಕಲಿಯೆಂದು ಕಂಡುಹಿಡಿದುಬಿಡಬಹುದಾಗಿತ್ತು.

ಆದರೆ ಮಂಗಳವಾರ ಮಾಲ್ಡಾದಲ್ಲಿ ಪತ್ತೆಯಾಗಿರುವ ಜಾಲ ಈ ಕಳಪೆಗಳ ಸಾಲಿಗೆ ಸೇರುವಂಥದ್ದಲ್ಲ. ಎನ್ಐಎ ತನಿಖೆ ಮಾಡುತ್ತ ಹೋದಂತೆ ಇದರ ಬೇರುಗಳು ಎಲ್ಲೆಲ್ಲ ಹಬ್ಬಿವೆ ಎಂಬುದರ ಚಿತ್ರಣ ತೆರೆದುಕೊಳ್ಳುತ್ತ ಹೋದೀತೇನೋ.

ಹಳೆನೋಟುಗಳಿಲ್ಲವಾದ ನಂತರ ತಾವು ಮುದ್ರಿಸಿದ್ದನ್ನೆಲ್ಲ ಮೈಮೇಲೆ ಸುರಿದುಕೊಳ್ಳುವ ಅವಸ್ಥೆಗೆ ಹೋಗಿದ್ದ ಮಾಲ್ಡಾ ನಕಲಿ ನೋಟು ಜಾಲ ಮತ್ತೆ ಚಿಗುರಿಕೊಳ್ಳುತ್ತಿದೆ ಎಂಬುದಕ್ಕೆ ಈ ಹಿಂದೆಯೂ ವರದಿಯಾಗಿದ್ದ, ಆದರೆ ನಕಲಿತನ ‘ಉತ್ಕೃಷ್ಟ’ಮಟ್ಟದಲ್ಲಿರದಿದ್ದ ಪ್ರಕರಣಗಳು ಹೀಗಿವೆ.

– ಜನವರಿ 23ರಂದು 16 ವರ್ಷದ ಕಾರ್ಮಿಕ ಪಿಯರುಲ್ ಶೇಖ್ ಬಳಿ ₹2000ದ ಒಂದು ಖೋಟಾ ನೋಟು ಸಿಕ್ಕಿತ್ತು.

– ಕಾಳಿಚೌಕ ಪ್ರದೇಶದಲ್ಲಿ ಫೆಬ್ರವರಿ 8ರಂದು 2000ದ ಎರಡು ನೋಟುಗಳು ವಶವಾದವು.

– ಫೆಬ್ರವರಿ 8ರಂದು ಮಾಲ್ಡಾದ ಅಜಿವುರ್ ರೆಹ್ಮಾನ್ ಎಂಬಾತ ₹2000ದ 40 ನಕಲಿ ನೋಟುಗಳೊಂದಿಗೆ ಮುರ್ಷಿದಾಬಾದಿನಲ್ಲಿ ಸಿಕ್ಕಿಬಿದ್ದ.

Leave a Reply