ಫೆ.14 ರಂದು ಕೇಂದ್ರದ ‘ಹೃದಯ’ಸ್ಪರ್ಶಿ ನಿರ್ಧಾರ, ಕೃತಕ ನಾಳಗಳ ಬೆಲೆಯಲ್ಲಿ ಭಾರಿ ಇಳಿಕೆ!

ಡಿಜಿಟಲ್ ಕನ್ನಡ ಟೀಮ್:

ಹೃದಯ ಸಂಬಂಧಿ ರೋಗಗಳಿಂದ ಬಳಲುವ ರೋಗಿಗಳಿಗೆ ದುಬಾರಿಯಾಗಿ ಪರಿಣಮಿಸಿದ್ದ ಡ್ರಗ್ ಎಲ್ಯುಟಿಂಗ್ ಸ್ಟೆಂಟ್ ಗಳ (ಹೃದಯದ ನಾಳಗಳಲ್ಲಿ ರಕ್ತ ಹರಿವಿಗೆ ಅನುಕೂಲವಾಗಲು ಅಳವಡಿಸುವ ಕೃತಕ ನಾಳ) ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಲಕ್ಷಾಂತರ ಹೃದ್ರೋಗಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ.

ಪ್ರಸ್ತುತ ಹೃದಯ ನಾಳಗಳಿಗೆ ಅಳವಡಿಸಲಾಗುವ ಸ್ಟೆಂಟ್ ಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ₹ 31 ಸಾವಿರದಿಂದ ₹ 1.21 ಲಕ್ಷದವರೆಗಿನ ದರಗಳಲ್ಲಿ ಲಭ್ಯವಾಗುತ್ತಿದೆ. ಈಗ ರಾಷ್ಟ್ರೀಯ ಔಷಧಿ ಬೆಲೆ ನಿಗದಿ ಪ್ರಾಧಿಕಾರ ಈ ಸ್ಟೆಂಟ್ ಗಳ ಬಳಕೆಯಲ್ಲಿ ಶೇ.85 ರಷ್ಟು ದರ ಇಳಿಕೆ ಮಾಡಿದೆ. ಈ ದರ ಇಳಿಕೆ ಫೆಬ್ರವರಿ 14ರಿಂದಲೇ ಜಾರಿಯಾಗಲಿದ್ದು, ಇನ್ನುಮುಂದೆ ಈ ಸ್ಟೆಂಟ್ ಗಳು ₹ 7 ಸಾವಿರದಿಂದ ₹ 30 ಸಾವಿರದ ದರಗಳಲ್ಲಿ ಲಭ್ಯವಾಗಲಿದೆ. ಈ ಬೆಲೆ ಇಳಿಕೆಯಿಂದ ಜನಸಾಮಾನ್ಯರಿಗೆ ₹ 80 ರಿಂದ 90 ಸಾವಿರ ಉಳಿತಾಯವಾಗಲಿದೆ.

ಈ ಬೆಲೆ ಇಲಾಖೆ ನಿರ್ಧಾರವನ್ನು ಪ್ರಕಟಿಸಿದ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್, ಈ ಸ್ಟೆಂಟ್ ಗಳ ಪೂರೈಕೆದಾರರು ಮತ್ತು ಆಸ್ಪತ್ರೆಗಳು ನಿಯಮ ಉಲ್ಲಂಘಿಸಿದರೆ ಕಾನೂನಿನ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ 2016ರ ವರ್ಷದಲ್ಲೇ ದೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ಹೃದಯ ರೋಗಿಗಳು ಈ ಸ್ಟೆಂಟ್ ಗಳ ಬಳಕೆ ಮಾಡಿದ್ದಾರೆ. ಇಷ್ಟು ದಿನಗಳಕಾಲ ಸ್ಟೆಂಟ್ ಗಳ ಬೆಲೆಯನ್ನು ದುಬಾರಿ ಮಾಡುವ ಮೂಲಕ ಆಸ್ಪತ್ರೆಗಳು ಜನಸಾಮಾನ್ಯರಿಂದ ಹೆಚ್ಚು ಹಣ ಪಡೆಯುತ್ತಿದ್ದವು. ಈಗ ಕೇಂದ್ರದ ಈ ನಿರ್ಧಾರದಿಂದ ಈ ಅಕ್ರಮಕ್ಕೆ ಬ್ರೇಕ್ ಬಿದ್ದಂತಾಗಿದೆ.

Leave a Reply