ಶಶಿಕಲಾ- ಪಳನಿಸ್ವಾಮಿ ವಿರುದ್ಧ ಕಿಡ್ನ್ಯಾಪ್ ಕೇಸ್! ‘ರೆಸಾರ್ಟ್ ಗೋಡೆ ಹಾರಿ ಬಂದೆ’ ಎಂದ ಶಾಸಕ!

ಡಿಜಿಟಲ್ ಕನ್ನಡ ಟೀಮ್:

ಶಶಿಕಲಾ ನಟರಾಜನ್ ಜೈಲಿನಲ್ಲಿ ಶರಣಾಗಲು ಬೆಂಗಳೂರಿನತ್ತ ಪ್ರಯಾಣ ಆರಂಭಿಸುತ್ತಿದ್ದಂತೆ ರೆಸಾರ್ಟ್ ವಾಸ್ತವ್ಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಎಐಎಡಿಎಂಕೆ ಪಕ್ಷದ ಮಧುರೈನ ಶಾಸಕ ಎಸ್.ಶರವಣನ್, ‘ತಮ್ಮನ್ನು ಅಪಹರಣ ಮಾಡಿ ಗೋಲ್ಡನ್ ಬೇ ರೆಸಾರ್ಟಿನಲ್ಲಿ ಇಷ್ಟು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದರು’ ಎಂದು ಶಶಿಕಲಾ ಹಾಗೂ ಪಳನಿಸ್ವಾಮಿ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುವತ್ತೂರ್ ಪೊಲೀಸರು ಈ ಇಬ್ಬರ ವಿರುದ್ಧ ಎಫ್ಐಆರ್ ಹಾಕಿದ್ದಾರೆ.

ಸೋಮವಾರ ರೆಸಾರ್ಟಿನಿಂದ ತಪ್ಪಿಸಿಕೊಂಡು ಬಂದ ಶರವಣನ್, ತಮ್ಮ ಮೇಲೆ ಪ್ರಾಣ ಬೆದರಿಕೆ ಇದೆ ಎಂದು ಮಂಗಳವಾರ ಡಿಜಿಪಿಗೆ ದೂರು ನೀಡಿದ್ದರು. ಇಂದು ಕುವತ್ತೂರ್ ಪೊಲೀಸ್ ಠಾಣೆಯಲ್ಲಿ ಅಪಹರಣದ ದೂರು ನೀಡಿದ್ದಾರೆ. ‘ನಾನು ವೇಷ ಮರೆಸಿಕೊಂಡು ಶಶಿಕಲಾ ಅವರ ಬೆಂಬಲಿಗರನ್ನು ಯಾಮಾರಿಸಿ ರೆಸಾರ್ಟ್ ನಿಂದ ತಪ್ಪಿಸಿಕೊಂಡು ಬಂದಿದ್ದೇನೆ. ಅವರಿಂದ ತಪ್ಪಿಸಿಕೊಂಡು ಬರಬೇಕಾದರೆ ರೆಸಾರ್ಟಿನ ಗೋಡೆ ಹಾರಬೇಕಾಯಿತು. ಅಲ್ಲಿನ ನೇರವಾಗಿ ನಾನು ನಮ್ಮ ಮುಖ್ಯಮಂತ್ರಿಗಳ ಮನೆಗೆ ಆಗಮಿಸಿದೆ’ ಎಂದು ಶರವಣನ್ ಮಾಹಿತಿ ಕೊಟ್ಟಿದ್ದಾರೆ.

ಶಶಿಕಲಾ ಅವರ ವಿರುದ್ಧ ಅಪಹರಣದ ಆರೋಪ ಹೊರಿಸಿದ ಶರವಣನ್, ‘ಶಾಸಕರು ರೆಸಾರ್ಟ್ ತಲುಪುತ್ತಿದ್ದಂತೆ ಎಲ್ಲರ ಮೊಬೈಲ್ ಫೋನ್ ಗಳನ್ನು ಕಸಿದುಕೊಳ್ಳಲಾಗಿತ್ತು. ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಶಾಸಕರಿಗೆ ಯಾವುದೇ ಮಾಹಿತಿ ನೀಡಲಿಲ್ಲ. ಎಲ್ಲರಿಗೂ ಅಶ್ಚರ್ಯವಾಗಿತ್ತು’ ಎಂದರು.

ಈ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗುತ್ತಿದ್ದಂತೆ ಪೊಲೀಸರ ತಂಡ ರೆಸಾರ್ಟಿಗೆ ಭೇಟಿ ಕೊಟ್ಟು ಅಲ್ಲಿ ಉಳಿದುಕೊಂಡಿದ್ದ ಎಲ್ಲ ಶಾಸಕರನ್ನು ಹೊರಗೆ ಕಳುಹಿಸಲು ಮುಂದಾದರು. ಈ ಶಾಸಕರೆಲ್ಲರೂ ರೆಸಾರ್ಟ್ ನಿಂದ ಹೊರ ಬಂದ ನಂತರ ಶಶಿಕಲಾ ಪರ ನಹಾಗೂ ಸೆಲ್ವಂ ಪರ ನಿಂತಿರುವ ಶಾಸಕರ ಅಂಕಿ ಅಂಶ ಬದಲಾಗುವ ನಿರೀಕ್ಷೆ ಇದೆ. ಅಲ್ಲದೆ ಸರ್ಕಾರ ರಚನೆಗೆ ಆಹ್ವಾನ ನೀಡುವ ಬಗ್ಗೆ ರಾಜ್ಯಪಾಲರಾದ ವಿದ್ಯಾಸಾಗರ್ ರಾವ್ ಇಂದು ಸಂಜೆ ತಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಶಶಿಕಲಾ ಕುಟುಂಬಸ್ಥರ ಸೇರ್ಪಡೆಗೆ ಅಸಮಾಧಾನ?

ಮತ್ತೊಂದೆಡೆ ಜಯಲಲಿತಾ ಅವರಿಂದ ಉಚ್ಛಾಟಿತರಾಗಿದ್ದ ಶಶಿಕಲಾ ಕುಟುಂಬ ಸದಸ್ಯರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿರುವುದು ಎಐಎಡಿಎಂಕೆಯಲ್ಲಿ ಹೊಸ ಭಿನ್ನಮತಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆ ಶಶಿಕಲಾ ಅವರು ದಿನಕರನ್ ಹಾಗೂ ಅಳಿಯ ವೆಂಕಟೇಶ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕರುಪ್ಪಾಸಾಮಿ ಪಂಡಿಯನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಶಶಿಕಲಾ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಪಂಡಿಯನ್, ದಿನಕರನ್ ಹಾಗೂ ವೆಂಕಟೇಶ್ ಅವರು ಪಕ್ಷ ಸೇರ್ಪಡೆಯಾಗಿರುವುದಕ್ಕೆ ತೀವ್ರ ಅಸಮಾಧಾನಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದಲ್ಲದೇ, ತಮ್ಮ ಬೆಂಬಲವನ್ನು ಪನ್ನೀರ್ ಸೆಲ್ವಂ ಅವರಿಗೆ ನೀಡಲು ಮುಂದಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಮುಕ್ತಾಯ ಕಾಣದ ತಮಿಳುನಾಡು ರಾಜಕಾರಣ ಹೊಸ ಹೊಸ ಬಣ್ಣ ಪಡೆದು ಕುತೂಹಲ ಹೆಚ್ಚಿಸುತ್ತಿದೆ.

Leave a Reply