ಒಂದೇ ಬಾರಿಗೆ 104 ಉಪಗ್ರಹಗಳನ್ನು ಉಡಾಯಿಸಿ, ಅಸಾಧ್ಯ ಎಂಬ ಪದವನ್ನೇ ಅಲ್ಲಾಡಿಸಿದ ಇಸ್ರೋ!

ಉಡಾವಣೆಯಾದ ಪಿಎಸ್ಎಲ್ ವಿ- ಸಿ37 (ಚಿತ್ರಕೃಪೆ- ಟ್ವಿಟರ್)

ಡಿಜಿಟಲ್ ಕನ್ನಡ ಟೀಮ್:

ಬಾಹ್ಯಾಕಾಶ ಹಾಗೂ ಉಪಗ್ರಹ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಇಸ್ರೋ ಬುಧವಾರ ಮತ್ತೊಂದು ಇತಿಹಾಸ ನಿರ್ಮಿಸಿದೆ. ಇಸ್ರೋದ ಪೊಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ ವಿ) ಸಿ37 ಅನ್ನು ಉಡಾವಣೆ ಮಾಡಿದ್ದು, ಒಂದೇ ಬಾರಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ದಾಖಲೆ ಬರೆದಿದೆ.

ಇಂದು ಬೆಳಗ್ಗೆ 9.28ಕ್ಕೆ ಶ್ರೀಹರಿಕೋಟಾದಿಂದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಆಗಸಕ್ಕೆ ಚಿಮ್ಮಿದ ಪಿಎಸ್ಎಲ್ ವಿ 17 ನಿಮಿಷಗಳ ಪಯಣದ ನಂತರ ಒಂದೊಂದೇ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಕೇವಲ 11 ನಿಮಿಷಗಳ ಅವಧಿಯಲ್ಲಿ ಎಲ್ಲ ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆ ಸೇರಿಕೊಂಡವು. ಇದು ಪಿಎಸ್ಎಲ್ ವಿ ಶ್ರೇಣಿಯ 39ನೇ ಉಪಗ್ರಹ ಉಡಾವಣೆಯಾಗಿದೆ.

ಈ 104 ಉಪಗ್ರಹಗಳ ಪೈಕಿ ಭಾರತದ ಸ್ವದೇಶಿ ನಿರ್ಮಿತ ಕಾರ್ಟೊಸ್ಯಾಟ್-2 ಶ್ರೇಣಿಯ ಉಪಗ್ರಹ ಹಾಗೂ ಇಸ್ರೋದ ಎರಡು ನ್ಯಾನೊಸ್ಯಾಟಲೈಟ್ ಗಳಾದ ಐಎನ್ಎಸ್-1ಎ ಮತ್ತು ಐಎನ್ಎಸ್-1ಬಿ ಉಪಗ್ರಹಗಳು ಕಕ್ಷೆ ಸೇರಿವೆ. ಉಳಿದ 101 ಉಪಗ್ರಹಗಳು ವಿದೇಶಿ ಉಪಗ್ರಹಗಳಾಗಿದ್ದು, ಅಮೆರಿಕದ 96, ಇಸ್ರೇಲ್, ಯುಎಇ, ಹಾಲೆಂಡ್, ಸ್ವಿಜರ್ಲೆಂಡ್ ಮತ್ತು ಕಜಕಸ್ತಾನದ ಒಂದೊಂದು ಉಪಗ್ರಹಗಳು ಈ ಪಿಎಸ್ಎಲ್ ವಿ- ಸಿ37 ಮೂಲಕ ಕಕ್ಷೆ ಸೇರಿವೆ.

ಭಾರತದ ಕಾರ್ಟೊಸ್ಯಾಟ್-2 ಉಪಗ್ರಹವೊಂದೇ 66 ಕೆ.ಜಿ ತೂಕದ್ದಾಗಿದ್ದು, ಇದರಿಂದ ಲಭ್ಯವಾಗುವ ಮಾಹಿತಿಗಳನ್ನು ಭೂನಕ್ಷೆ, ನಗರ, ಗ್ರಾಮೀಣ ಮತ್ತು ಕರಾವಳಿ ಪ್ರದೇಶಗಳ ಮಾಹಿತಿಗೆ, ರಸ್ತೆ ಸಂಪರ್ಕ ಮತ್ತು ನಿರ್ವಹಣೆಯಂತಹ ಇತರೆ ಕಾರ್ಯಗಳಿಗೆ ನೆರವಾಗಲಿದೆ.

ಈವರೆಗೂ ರಷ್ಯಾ ಸ್ಪೇಸ್ ಏಜೆನ್ಸಿ 2014 ರಲ್ಲಿ ಒಂದೇ ಬಾರಿಗೆ 37 ಉಪಗ್ರಹಗಳನ್ನು ಉಡಾವಣೆ ಮಾಡಿ ದಾಖಲೆ ಬರೆದಿತ್ತು. ಆದರೆ ಈಗ ಇಸ್ರೋ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಈ ದಾಖಲೆಯನ್ನು ಅಳಿಸಿ ಹಾಕಿದೆ. ಭಾರತ 2015ರಲ್ಲಿ ಒಂದೇ ಬಾರಿಗೆ 23 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದು ಈವರೆಗಿನ ಸಾಧನೆಯಾಗಿತ್ತು.

ಈ ಸಾಧನೆಯ ನಂತರ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕ ಮಯಿಲ್ಸಾಮಿ ಅಣ್ಣಾದೊರೈ, ‘ನಮ್ಮ ಕ್ರಿಕೆಟಿಗರ ರೀತಿ ನಾವು ಶತಕಗಳನ್ನು ಬಾರಿಸಬಲ್ಲೆವು. ಮುಂದಿನ ಮೂರು ತಿಂಗಳಲ್ಲಿ ಮತ್ತೆ 100 ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆ ಇದೆ. ಜಿಎಸ್ಎಲ್ ವಿ ಯೋಜನೆ ಜತೆಗೆ, ಮುಂದಿನ ವರ್ಷ ಚಂದ್ರಯಾನ-2ನ್ನು ನಡೆಸಲು ಸಿದ್ಧವಿದ್ದೇವೆ’ ಎಂದು ತಿಳಿಸಿದ್ದಾರೆ.

Leave a Reply