ಪರಪ್ಪನ ಅಗ್ರಹಾರ ಜೈಲು ಸೇರಿದ ಶಶಿಕಲಾ, ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಶವಮೂರ್ತಿ ಕಣಕ್ಕೆ, ಎಚ್ಎಎಲ್ ವಿಮಾನ ನಿಲ್ದಾಣ ಪುನರಾರಂಭ?, ಬಿಎಸ್ವೈ-ಅನಂತ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರಿನ ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ವೃತ್ತದ ಬಳಿ ನಿರ್ಮಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಮೇಲ್ಸೇತುವೆ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ ಜಾರ್ಜ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಬಿಬಿಎಂಪಿ ಮೇಯರ್ ಪದ್ಮಾವತಿ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು ‘ನಗರದ ವಾಹನ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ನಾಲ್ಕು ಮೇಲ್ಸೇತುವೆ ನಿರ್ಮಾಣ ಮಾಡುತ್ತೇವೆ’ ಎಂದರು.

ಡಿಜಿಟಲ್ ಕನ್ನಡ ಟೀಮ್:

ಪರಪ್ಪನ ಅಗ್ರಹಾರ ತಲುಪಿದ ಶಶಿಕಲಾ

ಅಕ್ರಮ ಆಸ್ತಿ ಸಂಪತ್ತು ಪ್ರಕರಣದಲ್ಲಿ ಅಪರಾಧಿಯಾಗಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಇಂದು ಸಂಜೆ ಪರಪ್ಪನ ಅಗ್ರಹಾರ ಜೈಲು ತಲುಪಿದ್ದಾರೆ. ಶರಣಾಗತಿಗೆ ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟ್ ತಳ್ಳಿ ಹಾಕಿತ್ತು. ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಶ್ವತ್ಥನಾರಾಯಣ ಅವರ ಮುಂದೆ ಶಶಿಕಲಾ ಇತರೆ ಅಪರಾಧಿಗಳಾದ ಇಳವರಸಿ ಹಾಗೂ ಸುಧಾಕರ್ ಜತೆ ಶರಣಾದರು. ಇದಕ್ಕೂ ಮುನ್ನ ಬುಧವಾರ ಬೆಳಗ್ಗೆ ನಡೆದ ತಮಿಳುನಾಡಿನ ಇತರೆ ರಾಜಕೀಯ ವಿದ್ಯಮಾನಗಳ ವಿವರವಾದ ವರದಿ ಇಲ್ಲಿ ಓದಬಹುದು.

ಕೇಶವಮೂರ್ತಿ ಕಣಕ್ಕೆ

ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದ ಕಾಂಗ್ರೆಸ್ ಪಕ್ಷ ಈಗ ಜೆಡಿಎಸ್ ಪಕ್ಷದಲ್ಲಿದ್ದ ಕಳವೆ ಕೇಶವಮೂರ್ತಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಕಳೆದ ಬಾರಿ ಕೇಶವಮೂರ್ತಿ ಅವರು ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು ಸೋತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಪ್ರತಿಷ್ಠೆಯ ಕಣವಾಗಿ ಈ ಚುನಾವಣೆ ಬಿಂಬಿತವಾಗಿದ್ದು, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕೇಶವಮೂರ್ತಿ ಅವರನ್ನು ಕಣಕ್ಕಿಳಿಸುವ ಕಾಂಗ್ರೆಸ್ ನ ಹಲವು ದಿನಗಳ ಪ್ರಯತ್ನ ಯಶಸ್ವಿಯಾಗಿದೆ. ಕಳೆದ ಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕೇಶವಮೂರ್ತಿ ಕಡಿಮೆ ಅಂತರದಲ್ಲಿ ಸೋತಿದ್ದರಿಂದ ಈ ಬಾರಿಯ ಉಪಚುನಾವಣೆ ರೋಚಕತೆ ಪಡೆದುಕೊಂಡಿದೆ.

ಗಿರಿಜನರಿಗೆ ಪರ್ಯಾಯ ವಸತಿ

ಕೊಡಗು ಜಿಲ್ಲೆಯ ದಿಡ್ಡಳ್ಳಿ ಅರಣ್ಯದಲ್ಲಿ ನೆಲೆಸಿರುವ ಗಿರಿಜನರಿಗೆ ಪರ್ಯಾಯವಾಗಿ ವಸತಿ ಹಾಗೂ ಮೂಲಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ. ದಿಡ್ಡಹಳ್ಳಿ ಸಂತ್ರಸ್ತರ ನಿಯೋಗ ಬುಧವಾರ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಜನರ ಜತೆ ಮಾತುಕತೆ ನಡೆಸಿತು. ಈ ವೇಳೆ ಮಾತನಾಡಿದ ಸಚಿವರು, ‘ಅರಣ್ಯ ಪ್ರದೇಶಗಳಲ್ಲಿ ಬಿಡು ಬಿಟ್ಟಿರುವ ಗಿರಿಜನ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸುತ್ತಮುತ್ತಲಿನ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ ಇದೇ ಸ್ಥಳದಲ್ಲಿ ವಸತಿ ಬೇಕು ಎಂಬ ಗಿರಿಜನರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ’ ಎಂದರು.

ಹೆಚ್ಎಎಲ್ ವಿಮಾನ ನಿಲ್ದಾಣ ಪುನರಾರಂಭ?

ಪ್ರಾದೇಶಿಕ ಮತ್ತು ವಾಣಿಜ್ಯ ಬಳಕೆ ಉದ್ದೇಶಕ್ಕಾಗಿ ಹೆಚ್ಎಎಲ್ ವಿಮಾನ ನಿಲ್ದಾಣವನ್ನು ಪುನರಾರಂಭ ಮಾಡಲಾಗುವುದು ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕಿ ಬಿ.ಸುವರ್ಣರಾಜು ತಿಳಿಸಿದ್ದಾರೆ. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಿಂದ ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿದಂತೆ ಪ್ರಾದೇಶಿಕ ಕೇಂದ್ರಗಳಿಗೆ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಪ್ರಯಾಣಿಕರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ವಿಮಾನ ಹತ್ತುವ ಮೊದಲೇ ಈ ಕೇಂದ್ರದಿಂದ ನಿರ್ದಿಷ್ಟ ಸ್ಥಳ ತಲುಪಬಹುದು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ, ನಗರ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದರು.

ಬಿಎಸ್ವೈ- ಅನಂತ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಪಕ್ಷದ ವರಿಷ್ಠರಿಗೆ ಕಪ್ಪ ನೀಡುವ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವಣ ಮಾತುಕತೆ ಪ್ರಕರಣ ವಿರುದ್ಧ ಕಾಂಗ್ರೆಸ್ ಕಾನೂನು ಘಟಕ ಲೋಕಾಯುಕ್ತಕ್ಕೆ ದೂರು ನೀಡಿದೆ. ಘಟಕದ ಅಧ್ಯಕ್ಷ ಧನಂಜಯ್ ಕುಮಾರ್, ಲೋಕಾಯುಕ್ತಕ್ಕೆ ಇಂದು ಲಿಖಿತ ದೂರು ನೀಡಿದ್ದಾರೆ. ಬಿಜೆಪಿ ಹೈಕಮಾಂಡಿಗೆ ಲಂಚದ ರೂಪದಲ್ಲಿ ದೇಣಿಗೆ ನೀಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಉಲ್ಲಂಘನೆಯಾಗಿದೆ. ಹೀಗಾಗಿ ಇವರಿಬ್ಬರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಎಸಿಬಿಯಲ್ಲೂ ಐಪಿಸಿ 355ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply