ಶಶಿಕಲಾ ಶರಣಾಗತಿ ಕಾಲಾವಕಾಶ ಅರ್ಜಿ ನಿರಾಕರಿಸಿದ ಸುಪ್ರೀಂ, ಜಯಾರಿಂದ ಉಚ್ಛಾಟಿತ ದಿನಕರನ್ ಈಗ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ!

ಡಿಜಿಟಲ್ ಕನ್ನಡ ಟೀಮ್:

ಬುಧವಾರವೂ ತಮಿಳುನಾಡು ರಾಜಕೀಯ ವಿದ್ಯಮಾನಗಳು ಗರಿಗೆದರಿವೆ… ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ, ಶರಣಾಗತಿಗೆ ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮತ್ತೊಂದೆಡೆ ಶಶಿಕಲಾ ತಮ್ಮ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಅವರನ್ನು ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಜತೆಗೆ ಅಳಿಯ ಎಸ್.ವೆಂಕಟೇಶ್ ಅವರನ್ನು ಮತ್ತೆ ಪಕ್ಷಕ್ಕೆ ಕರೆ ತಂದಿದ್ದಾರೆ.

ಶಶಿಕಲಾ ಅವರ ಕಾಲಾವಕಾಶ ಅರ್ಜಿ ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ‘ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಹೀಗಾಗಿ ಮತ್ತೊಂದು ತೀರ್ಪು ನೀಡಲು ಸಾಧ್ಯವಿಲ್ಲ. ಈ ಕೂಡಲೇ ಜೈಲಿಗೆ ಶರಣಾಗಿ ಶಿಕ್ಷೆ ಅನುಭವಿಸಬೇಕು’ ಎಂದು ಸೂಚಿಸಿತು. ಈ ಹಿನ್ನೆಲೆಯಲ್ಲಿ ಶಶಿಕಲಾ ಶೀಘ್ರದಲ್ಲೇ ಬಂಧನವಾಗುವುದು ಖಚಿತ.

ಮಧ್ಯಾಹ್ನ 12ರ ಸುಮಾರಿಗೆ ಪೋಯೆಸ್ ಗಾರ್ಡನ್ ನಿವಾಸದಿಂದ ಹೊರಟ ಶಶಿಕಲಾ, ಮೊದಲು ಮರಿನಾ ಬೀಚ್ ಬಳಿ ಇರುವ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರದತ್ತ ಪಯಣ ಬೆಳೆಸಿದ್ದಾರೆ.

ಈ ಮಧ್ಯೆ ಶಶಿಕಲಾ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದು, ‘ಶಶಿಕಲಾ ಅವರು ಇಂದು ಬೆಂಗಳೂರಿನ ಜೈಲಿಗೆ ಶರಣಾಗಲಿದ್ದಾರೆ. ನಂತರ ಆರೋಗ್ಯದ ಕಾರಣ ಕೊಟ್ಟು ಎರಡು ವಾರಗಳ ಕಾಲಾವಕಾಶ ಕೋರಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ಇಂದು ಸಂಜೆ 5 ಗಂಟೆ ವೇಳೆಗೆ ಶಶಿಕಲಾ ಬೆಂಗಳೂರಿಗೆ ಆಗಮಿಸಿ ಜೈಲು ಸೇರುವ ನಿರೀಕ್ಷೆಗಳಿವೆ.

ನಿನ್ನೆ ತಡ ರಾತ್ರಿ ಸುದ್ದಿಗೋಷ್ಠಿ ನಡೆಸಿದ್ದ ಶಶಿಕಲಾ, ‘ನನ್ನನ್ನು ಕೇವಲ ಜೈಲಿಗೆ ಹಾಕಲು ಮಾತ್ರ ಸಾಧ್ಯ. ಪಕ್ಷದ ಮೇಲೆ ನನಗಿರುವ ಕಾಳಜಿಯನ್ನು ಹತ್ತಿಕ್ಕಲು ಆಗುವುದಿಲ್ಲ. ನಾನು ಎಲ್ಲೆ ಇದ್ದರೂ ನನ್ನ ಗಮನ ಇಲ್ಲೇ ಇರುತ್ತದೆ’ ಎಂದು ಹೇಳಿಕೆ ಕೊಟ್ಟಿದ್ದರು. ತಮ್ಮ ಮಾತಿನಂತೆ ಪಕ್ಷದ ಮೇಲಿನ ಹಿಡಿತ ಸಾಧಿಸಲು ಶಶಿಕಲಾ ಬುಧವಾರ ಪ್ರಬಲ ಅಸ್ತ್ರಗಳನ್ನೇ ಪ್ರಯೋಗಿಸಿದ್ದಾರೆ. ಆ ಪೈಕಿ ತಮ್ಮ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಅವರನ್ನು ಎಐಎಡಿಎಂಕೆ ಪಕ್ಷದ ಉಪ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದು, ತಮ್ಮ ಅಳಿಯ ಎಸ್.ವೆಂಕಟೇಶ್ ಅವರನ್ನು ಪಕ್ಷಕ್ಕೆ ಕರೆತರಲಾಗಿದೆ.

2012ರಲ್ಲಿ ಜಯಲಲಿತಾ ಅವರಿಂದ ಪಕ್ಷದಿಂದ ಉಚ್ಛಾಟಿತರಾಗಿದ್ದ ದಿನಕರನ್ ಹಾಗೂ ವೆಂಕಟೇಶ್ ಅವರನ್ನು ಮತ್ತೆ ಪಕ್ಷದ ಉನ್ನತ ಹುದ್ದೆಗೆ ತಂದು ಕೂರಿಸಿರುವ ಶಶಿಕಲಾ ಅವರ ನಿರ್ಧಾರ ಸ್ವತಃ ಅವರ ಬೆಂಬಲಿತ ಶಾಸಕರಿಗೂ ಆಶ್ಚರ್ಯ ಮೂಡಿಸಿದೆ.

ಇತ್ತ ಎಐಎಡಿಎಂಕೆ ಪಕ್ಷದ ಮುಖಂಡರಾದ ವಿ.ಮೈತ್ರೇಯನ್ ಹಾಗೂ ಪಿ.ಎಚ್ ಪಂಡಿಯನ್ ಅವರು ಪನ್ನೀರ್ ಸೆಲ್ವಂ ಅವರ ಪರವಾಗಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ಮಾಡಿದ್ದಾರೆ. ಈ ಮಧ್ಯೆ ರಾಜ್ಯಪಾಲರು ಬಹುಮತ ಸಾಬೀತಿಗೆ ಅವಕಾಶ ಮಾಡಿಕೊಟ್ಟರೆ ಆ ವಿಶೇಷ ಕಲಾಪಕ್ಕೆ ಬಹಿಷ್ಕಾರ ಹಾಕುವುದಾಗಿ ಡಿಎಂಕೆ ಪಕ್ಷ ನಿರ್ಧರಿಸಿದೆ. ಅಲ್ಲದೆ ಈ ಬಗ್ಗೆ ತಮ್ಮ ಪಕ್ಷದ ಎಲ್ಲ ಶಾಸಕರಿಗೂ ಸಮನ್ಸ್ ಅನ್ನು ಜಾರಿ ಮಾಡಲಾಗಿದೆ.

Leave a Reply