ಸೇನಾ ಕಾರ್ಯಾಚರಣೆಗೆ ಅಡ್ಡಿಪಡಿಸುವವರನ್ನು ಉಗ್ರರೆಂದೇ ಪರಿಗಣನೆ, ಸೇನಾ ಮುಖ್ಯಸ್ಥ ಬಿಪಿನ್ ರಾವತ್  ಮಾತಿಗೆ ಕೆಲವರದ್ದೇಕೆ ಆಕ್ಷೇಪಣೆ?

ಡಿಜಿಟಲ್ ಕನ್ನಡ ಟೀಮ್:

‘ಉಗ್ರರನ್ನು ಹತ್ತಿಕ್ಕುವ ಕಾರ್ಯಾಚರಣೆಗೆ ಅಡ್ಡಿಪಡಿಸುವ ಸ್ಥಳಿಯರನ್ನು ಸಹ ಎದುರು ನಿಂತಿರುವ ಉಗ್ರವಾದಿ ಕೆಲಸಗಾರರೆಂದೇ ಪರಿಗಣಿಸುತ್ತೇವೆ’ – ಇದು ಬುಧವಾರ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ ಮಾತು. ಉಗ್ರರೊಂದಿಗಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧರಿಗೆ ಅಂತಿಮ ನಮನ ಸಲ್ಲಿಸುವ ಸಂದರ್ಭದಲ್ಲಿ ಹೇಳಿದ ಮಾತಿದು.

ಇದು ಯಾರೂ ಒಪ್ಪಬಹುದಾದ ಮಾತು. ಉಗ್ರನೊಬ್ಬನ ನಿಗ್ರಹಕ್ಕೆ ಅಡ್ಡಿ ಮಾಡುತ್ತಿರುವವರು ಆತನ ಹಿತಾಸಕ್ತಿ ಕಾಯುವವರಲ್ಲದೇ ಇನ್ನೇನಾಗುತ್ತಾರೆ?

ಆದರೆ ಈ ಸರಳ ಸಮೀಕರಣಕ್ಕೂ ಜಮ್ಮು-ಕಾಶ್ಮೀರದಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತವೆ. ಗೃಹಖಾತೆ ಸಹಯಾಕ ಸಚಿವ ಕಿರಣ್ ರೆಜೆಜು ಅವರನ್ನು ಅಡ್ಡಗಟ್ಟಿ ಮಾಧ್ಯಮ ಪ್ರಶ್ನಿಸುತ್ತದೆ- ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅರೇ.. ಅಭಿಪ್ರಾಯವೇನಿರಲು ಸಾಧ್ಯ? ಉಗ್ರರನ್ನು ಕಾಪಾಡುವುದು ಜನರ ಸ್ವಾತಂತ್ರ್ಯ ಎನ್ನಲಾಗುತ್ತದೆಯೇ?

‘ಒಬ್ಬ ಸೇನಾ ಮುಖ್ಯಸ್ಥರೇ ಹೀಗೆ ಜನರನ್ನು ಹೆದರಿಸಿದರೆ ಹೇಗೆ? ಜನರ ವಿಶ್ವಾಸ ಗಳಿಸಬೇಕಲ್ಲದೇ ಹೀಗೆಲ್ಲ ಹೇಳಬಾರದು. ಸೇನೆಯ ಸದ್ಭಾವನಾ ಕಾರ್ಯಕ್ರಮ ವಿಫಲವಾಗಿದೆಯೇ’ ಅಂತ ಪ್ರಶ್ನಿಸುತ್ತಾರೆ ಎನ್ಡಿಟಿವಿ ಜತೆಗೆ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ಶಾಸಕರೊಬ್ಬರು.

ಸೇನೆ ಸದ್ಭಾವನೆ ಕಾರ್ಯಕ್ರಮಗಳ ಮೂಲಕ ಜನರನ್ನು ಮುಟ್ಟುತ್ತಿರುವಾಗಲೂ ಸ್ಥಳೀಯರಲ್ಲಿ ಕೆಲವರು ಉಗ್ರರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುತ್ತಿರುವುದು ಕ್ಷಮಾರ್ಹವಲ್ಲ ಎಂದು ವಿಶ್ಲೇಷಿಸುವುದನ್ನು ಬಿಟ್ಟು, ಸೇನೆ ಜನರ ವಿಶ್ವಾಸ ಗೆಲ್ಲುವಲ್ಲಿ ವಿಫಲವಾಗಿದೆಯೇ ಎಂದು ಕುಹಕವಾಡುವುದರ ಹಿಂದಿರುವ ನಂಜು ಎಂಥಾದ್ದು?

ಅದೇನೇ ಇರಲಿ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮಾತ್ರ ಅಸ್ಪಷ್ಟತೆಗೆ ಎಡೆಯೇ ಇಲ್ಲದಂತೆ ಮಾತಾಡಿದ್ದಾರೆ. ಅವರು ಹೇಳಿರುವುದು- ‘ಬಂದೂಕು ಎತ್ತಿಕೊಂಡಿರುವ ಸ್ಥಳೀಯರಿಗೆ, ಪಾಕಿಸ್ತಾನ ಮತ್ತು ಐಎಸ್ಐಎಸ್ ಬಾವುಟ ತೋರಿಸುತ್ತಿರುವ ಯುವಕರಿಗೆ ಅದನ್ನು ಬಿಡುವಂತೆ ಸೇನೆ ಮನವಿ ಮಾಡಿಕೊಳ್ಳುತ್ತದೆ. ಈ ಮನವಿ ಪುರಸ್ಕರಿಸದಿದ್ದರೆ ಅವರೆಲ್ಲರನ್ನೂ ದೇಶ ವಿರೋಧಿಗಳೆಂದೇ ಕಾಣಲಾಗುತ್ತದೆ. ಇಂಥವರ ನಿಗ್ರಹಕ್ಕೆ ಸೇನೆ ಹಿಂಜರಿಯುವುದಿಲ್ಲ. ಅಂಥವರ ವಿರುದ್ಧ ಶಸ್ತ್ರವನ್ನೂ ಪ್ರಯೋಗಿಸಬೇಕಾಗುತ್ತದೆ. ಇವತ್ತು ತಪ್ಪಿಸಿಕೊಂಡಂತೆ ಕಂಡರೂ ನಾಳೆ ನಮಗೆ ಶಿಕಾರಿಯಾಗಲೇಬೇಕು. ಏಕೆಂದರೆ ನಮ್ಮದು ದಣಿವರಿಯದ ನಿರಂತರ ಕಾರ್ಯಾಚರಣೆ.’

Leave a Reply