ಕೃಷಿ ಬಲವರ್ಧನೆಯ ಆಯವ್ಯಯ ಎಂಬ ಮುಮಂ ಯೋಚನೆ, ಸಾಲಮನ್ನಾ ಏಕಿಲ್ಲ ಎಂದು ರೈತ ಮುಖಂಡರ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ರಾಜ್ಯ ಬಜೆಟ್ ಕೃಷಿಕೇಂದ್ರಿತವಾಗುವ ಸೂಚನೆ ಮುಖ್ಯಮಂತ್ರಿಗಳಿಂದ ಬಂದಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರ ಜತೆ ಸಮಾಲೋಚನೆ ಪ್ರಾರಂಭಿಸುವ ಮೂಲಕ ಪೂರ್ವಬಾವಿ ಬಜೆಟ್ ಚರ್ಚೆಗೆ ಚಾಲನೆ ನೀಡಿದ ಅವರು, ಸತತ ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಪ್ರೋತ್ಸಾಹ ಸೇರಿದಂತೆ ಯುವ ಸಮೂಹಕ್ಕೆ ಹೆಚ್ಚು ಉದ್ಯೋಗ ಗ್ರಾಮೀಣ ಭಾಗದಲ್ಲೇ ಸಿಗುವಂತೆ ಮಾಡಲಾಗುವುದು ಎಂದು ಹೇಳಿದರು.

ಕೃಷಿ ಬಲಪಡಿಸುವ ಜತೆ ನಗರದತ್ತ ವಲಸೆಯನ್ನೂ ತಡೆದು, ಹಳ್ಳಿಗಳು ವೃದ್ಧಾಶ್ರಮವಾಗುವುದನ್ನು ತಪ್ಪಿಸಬೇಕಿದೆ ಎಂಬ ಇಂಗಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ವ್ಯಕ್ತವಾಗಿದೆ.

ಯುವಸಮೂಹ ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಹಣಕಾಸಿನ ಸಹಾಯ ಕಲ್ಪಿಸಲಾಗುವುದು. ಉಳಿದಂತೆ ರೈತ ಕೃಷಿ ಕಾರ್ಮಿಕರು ಬೇರೆಡೆ ಗುಳೆ ಹೋಗುವುದು ತಡೆಯಲು  ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ದಿನ ಉದ್ಯೋಗ ಕಲ್ಪಿಸಲಾಗುವುದು ಎಂದು ಹೇಳಿದರು.

ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತಾಗಲು ಹೆಚ್ಚು ಗಮನ ನೀಡಲಾಗುವುದು. ಮಾರುಕಟ್ಟೆಗಳಲ್ಲಿ ಕೃಷಿಕರ ಬೆಳೆಗೆ ಉತ್ತಮ ದರ ಸಿಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಒಣ ಭೂಮಿಯಲ್ಲಿ ಬೇಸಾಯ ಮಾಡುತ್ತಿರುವವರಿಗೆ 1 ಲಕ್ಷ ಕೃಷಿ ಹೊಂಡ ನಿರ್ಮಿಸಿದ್ದು ಇದಕ್ಕೆ ಸಾಕಷ್ಟು ಬೇಡಿಕೆ ಇರುವ ಕಾರಣ ಮಾರ್ಚ್ ವೇಳೆಗೆ ಇನ್ನೂ 30 ಸಾವಿರ ಹೊಂಡ ನಿರ್ಮಿಸಲಾಗುವುದು. ಮುಂದಿನ ಬಜೆಟ್‍ನಲ್ಲಿ ಇದನ್ನು ಹೆಚ್ಚು ಮಾಡಿ ಅದಕ್ಕೆ ಮೀಸಲಿಟ್ಟ ಹಣವನ್ನೂ ಹೆಚ್ಚಿಸಲಾಗುವುದು. ಫಾಲಿಹೌಸ್ ನಿರ್ಮಾಣಕ್ಕೂ ಹೆಚ್ಚು ಬೇಡಿಕೆ ಇದ್ದು ಅವುಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಬಹುತೇಕ ರೈತ ಮುಖಂಡರು ರಾಜ್ಯ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಸಮಾಧಾನವಾಗಿಯೇ ಉತ್ತರಿಸಿದ ಮುಖ್ಯಮಂತ್ರಿಯವರು , ‘ರೈತರು ವಾಣಿಜ್ಯ ಮತ್ತು ಸಹಕಾರ ಬ್ಯಾಂಕುಗಳಲ್ಲಿ 52200 ಕೋಟಿ ರೂ. ಸಾಲ ಮಾಡಿದ್ದಾರೆ. ಸಹಕಾರ ಬ್ಯಾಂಕುಗಳು ಕೊಟ್ಟಿರುವುದು 10 ಸಾವಿರ ಕೋಟಿ ರೂ. ಆದರೆ, ವಾಣಿಜ್ಯ ಬ್ಯಾಂಕುಗಳು 42200 ಕೋಟಿ ರೂ. ಕೊಟ್ಟಿವೆ. ನಾವು ಮನ್ನಾ ಮಾಡಿದರೆ ಶೇ.19 ರಷ್ಟು ರೈತರಿಗೆ ಮಾತ್ರ ಉಪಯೋಗ. ಕೇಂದ್ರ ಸರ್ಕಾರವೂ ಅರ್ಧದಷ್ಟಾದರೂ ಮನ್ನಾ ಮಾಡಿದರೆ ಶೇ.100 ಕ್ಕೆ 100 ರಷ್ಟು ರೈತರಿಗೆ ಉಪಯೋಗವಾಗುತ್ತದೆ.  ಈ ಮೂಲಕವಾದರೂ ರೈತರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ನಾನು ಕೇಂದ್ರದ ಮೇಲೆ ಒತ್ತಡ ತರುತ್ತಿದ್ದೇನೆ.’ ಎಂದರು.

ಆದರೆ ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಎಂದು ವಿಭಜನೆ ಮಾಡದೆ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡಿ. ಸಬೂಬು ಹೇಳುವುದನ್ನು ನಿಲ್ಲಿಸಿ ರೈತರನ್ನು ಉಳಿಸಿ. ಸಾಲಮನ್ನಾ ಆಗದಿದ್ದರೆ ಸಾಲ ಮರುಪಾವತಿ ಮಾಡುವುದಿಲ್ಲ ಎಂದು ಎಚ್ಚರಿಸಿದರು.

ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರ ಶೇಖರ್, ಚುಕ್ಕಿ ನಂಜುಂಡಸ್ವಾಮಿ, ಬಸವರಾಜು ಸೇರಿದಂತೆ ರೈತ ಸಂಘಟನೆಗಳ ನೂರಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply