ಸದ್ಯದಲ್ಲೇ ಬರ್ತಿದೆ ತೆರಿಗೆ ಇಲಾಖೆಯ ಆ್ಯಪ್: ತೆರಿಗೆ ಪಾವತಿ, ಪ್ಯಾನ್ ಸಂಖ್ಯೆ- ಟ್ಯಾಕ್ಸ್ ರಿಟರ್ನ್ಸ್ ಎಲ್ಲವೂ ಸುಲಭ!

ಡಿಜಿಟಲ್ ಕನ್ನಡ ಟೀಮ್:

ದೇಶದ ಎಲ್ಲಾ ಕ್ಷೇತ್ರಗಳು ಡಿಜಿಟಲಿಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ತೆರಿಗೆ ಇಲಾಖೆ ಕೂಡ ಈ ದಿಕ್ಕಿನತ್ತ ಹೆಜ್ಜೆ ಇಟ್ಟಿದೆ. ಪರಿಣಾಮ, ಸದ್ಯದಲ್ಲೇ ತೆರಿಗೆ ಪಾವತಿ, ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಕೆ ಸೇರಿದಂತೆ ಇತರೆ ಕಾರ್ಯಗಳನ್ನು ಆನ್ ಲೈನ್ ಮೂಲಕವೇ ಮಾಡಲು ಅನುಕೂಲವಾಗುವಂತೆ ಹೊಸ ಆ್ಯಪ್ ಅನ್ನು ಸಿದ್ಧಗೊಳಿಸುತ್ತಿದೆ.

ಆಧಾರ್ ಕಾರ್ಡ್ ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ ಪ್ಯಾನ್ ಸಂಖ್ಯೆಯನ್ನು ನೀಡುವ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಆದಾಯ ತೆರಿಗೆ ಇಲಾಖೆ ತಯಾರಿ ನಡೆಸುತ್ತಿದೆ. ಆ ಮೂಲಕ ಹೆಚ್ಚು ಮಂದಿ ಪ್ಯಾನ್ ಸಂಖ್ಯೆ ಪಡೆದು ತೆರಿಗೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಆಧಾರ್ ಕಾರ್ಡ್ ಬಳಕೆಯಿಂದ ಪ್ಯಾನ್ ಸಂಖ್ಯೆ ಪಡೆಯಲು ನೀಡುವ ಹುಟ್ಟಿದ ದಿನಾಂಕ, ವಿಳಾಸ ಸೇರಿದಂತೆ ಇತರೆ ಮಾಹಿತಿಗಳು ಸುಲಭವಾಗಿ ನೀಡಬಹುದು. ಆಧಾರ್ ಸಂಖ್ಯೆಗಳನ್ನು  ಸಿಮ್ ಕಾರ್ಡ್ ಕೊಳ್ಳಲು, ಬ್ಯಾಂಕ್ ಖಾತೆ ತೆರೆಯಲು, ಸಬ್ಸಿಡಿ ಮರು ಪಾವತಿ ಮಾಡಲು ಹಾಗೂ ಇತರೆ ಡಿಜಿಟಲ್ ವ್ಯವಹಾರಗಳಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಈ ನೂತನ ಆ್ಯಪ್ ನಲ್ಲೂ ಆಧಾರ್ ಕಾರ್ಡ್ ಅನ್ನು ಬಳಸಲು ನಿರ್ಧರಿಸಲಾಗಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ ಸದ್ಯ ದೇಶದಲ್ಲಿ 25 ಕೋಟಿಗೂ ಹೆಚ್ಚು ಮಂದಿ ಪ್ಯಾನ್ ಕಾರ್ಡ್ ಹೊಂದಿದ್ದು, ಪ್ರತಿ ವರ್ಷ 2.5 ಕೋಟಿ ಜನ ಪ್ಯಾನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಈಗ ಸರ್ಕಾರ ₹50 ಸಾವಿರಕ್ಕೂ ಹೆಚ್ಚಿನ ಹಣ ಡ್ರಾ ಮಾಡಲು ಹಾಗೂ ₹ 2 ಲಕ್ಷಕ್ಕೂ ಹೆಚ್ಚಿನ ಮೊತ್ತದ ವ್ಯವಹಾರ ನಡೆಸಲು ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿರುವುದರಿಂದ ಪ್ಯಾನ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

ಈ ಹೊಸ ಆ್ಯಪ್ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ‘ಈ ಆ್ಯಪ್ ಸದ್ಯಕ್ಕೆ ಪ್ರಾಥಮಿಕ ಹಂತದಲ್ಲಿದೆ. ಈ ಆ್ಯಪ್ ನಿಂದ ಆನ್ ಲೈನ್ ಮೂಲಕ ತೆರಿಗೆ ಪಾವತಿ, ಪ್ಯಾನ್ ಸಂಖ್ಯೆ ಪಡೆಯಲು, ಟ್ಯಾಕ್ಸ್ ರಿಟರ್ಸ್ ಪಡೆಯಲು ಅನುಕೂಲವಾಗಲಿದೆ. ಹಣಕಾಸು ಸಚಿವಾಲಯದಿಂದ ಈ ಯೋಜನೆಗೆ ಅನುಮತಿ ಸಿಕ್ಕ ಕೂಡಲೇ ಒಂದು ಸಣ್ಣ ಸಮೀಕ್ಷೆಯನ್ನು ನಡೆಸಲಾಗುವುದು’ ಎಂದು ಹೇಳಿದ್ದಾರೆ.

Leave a Reply