ಜೈಲಾದರೇನಂತೆ ಶಶಿಕಲಾ ಸೋಲಲಿಲ್ಲ! ಆಪ್ತ ಪಳನಿಸ್ವಾಮಿಯೇ ಮುಖ್ಯಮಂತ್ರಿ, ತಮಿಳುನಾಡಲ್ಲಿ ಶುರುವಾಗಲಿದೆ ಶಶಿ ಕುಟುಂಬದ ಕಾರುಬಾರು

ಡಿಜಿಟಲ್ ಕನ್ನಡ ವಿಶೇಷ:

ನೆವರ್ ಸೇ ಡೈ ಸ್ಪಿರಿಟ್- ಸತ್ತೆನೆಂದೆನಬೇಡ, ಸೋತೆನೆಂದೆನಬೇಡ ಎಂಬ ಮಾದರಿಯನ್ನು ರಾಜಕೀಯವೇ ಚೆನ್ನಾಗಿ ಅರ್ಥ ಮಾಡಿಸುತ್ತದೆ. ಇಲ್ಲಿ ಧರ್ಮ-ಅಧರ್ಮ, ಸರಿ-ತಪ್ಪುಗಳ ಮಾತು ಬರುವುದಿಲ್ಲ. ವಿಲನ್ ಜಾಗದಲ್ಲೇ ನಿಂತರೂ ತನ್ನ ವರ್ಚಸ್ಸು ಬೆಳಗಿಯೇ ಸಿದ್ಧ ಎಂಬ ಕಟ್ಟರ್ ಮನಸ್ಥಿತಿ ಇಲ್ಲಿ ಮೆರೆಯುತ್ತದೆ.

ಶಶಿಕಲಾ ಜೈಲು ಸೇರಿದರೇನಂತೆ? ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗುವ ಕನಸು ಈಡೇರಲಿಲ್ಲ. ಮುಖ್ಯಮಂತ್ರಿ ಆಗುವುದು ಹಾಗಿರಲಿ, ಗಟ್ಟಿ ಪ್ರತಿರೋಧ ಒಡ್ಡಲೂ ಆಗದಂತೆ ಎಂಟು ಶಾಸಕರ ಜತೆ ಮೂಲೆಗುಂಪಾದರು. ಶಶಿಕಲಾರ ಆಪ್ತ ಪಳನಿಸ್ವಾಮಿ ಗುರುವಾರ ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವುದಕ್ಕೆ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು 15 ದಿನಗಳ ಕಾಲಾವಕಾಶವನ್ನೂ ನೀಡಿದ್ದಾರೆ.

ಲೆಕ್ಕ ಸ್ಪಷ್ಟವಿದೆ. 234 ಸದಸ್ಯಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತಕ್ಕೆ ಬೇಕಿರುವ ಶಾಸಕರ ಸಂಖ್ಯೆ 118. ಸದ್ಯಕ್ಕೆ 124 ಶಾಸಕರ ಬೆಂಬಲದ ಸಹಿಗಳನ್ನು ರಾಜ್ಯಪಾಲರಿಗೆ ಸಲ್ಲಿಸಿರುವ ಪಳನಿಸ್ವಾಮಿ (57) ಮುಖ್ಯಮಂತ್ರಿಯಾಗಲಿರುವುದು ಸ್ಪಷ್ಟ.

ಶಾಸಕರನ್ನು ಸೆಳೆದಿಟ್ಟುಕೊಳ್ಳುವ ಕಲೆಯಲ್ಲಿ ಪನೀರ್ ಸೆಲ್ವಂ ದುರ್ಬಲರಾದರು. ಹಾಗಂತ ಪಳನಿಸ್ವಾಮಿಯದ್ದು ಸಬಲ ನಾಯಕತ್ವವೇ? ಹಾಗೇನೂ ಇಲ್ಲ. ಶಶಿಕಲಾ ಕುಟುಂಬಕ್ಕೆ ಆಪ್ತವಾಗಿದ್ದುಕೊಂಡು ರಾಜಕಾರಣದಲ್ಲಿ ಬೆಳೆದ ಬಗೆ ಹೀಗೊಂದು ಅವಕಾಶವನ್ನು ತಂದಿದೆ. 1996ರ ವಿಧಾನಸಭೆ, 2004ರ ಲೋಕಸಭೆ, 2006ರ ವಿಧಾನಸಭೆ ಈ ಎಲ್ಲ ಚುನಾವಣೆಗಳಲ್ಲಿ ಪಳನಿಸ್ವಾಮಿ ಸೋತಿದ್ದಾರೆ. ಅಷ್ಟಾಗಿಯೂ ಅವರಿಗೆ 2011ರಲ್ಲಿ ವಿಧಾನಸಭೆ ಸ್ಪರ್ಧೆಗೆ ಟಿಕೆಟ್ ಸಿಕ್ಕಿದ್ದರ ಹಿಂದೆ ಈ ಕುಟುಂಬ ಸಾಮಿಪ್ಯವೇ ಕೆಲಸ ಮಾಡಿತ್ತು. ಹಾಗೆ ನಿಷ್ಠೆ ಪ್ರದರ್ಶನದ ನಾಜೂಕು ಪಳನಿಸ್ವಾಮಿಗೆ ಚೆನ್ನಾಗಿ ಇದೆಯೆಂಬುದಕ್ಕೆ ಸಾಕ್ಷಿ- 2011 ಮತ್ತು 2016ರ ನಡುವೆ ಜಯಲಲಿತಾ ತಮ್ಮ ಸಂಪುಟದಿಂದ ಹಲವು ಸಚಿವರನ್ನು ಹೊರಹಾಕುತ್ತ ಬಂದರಾದರೂ ಪಳನಿಸ್ವಾಮಿ ಸಂಪುಟದಲ್ಲಿ ಅಚಲರಾಗಿದ್ದರು. 2016ರ ವಿಧಾನಸಭೆ ಚುನಾವಣೆಯಲ್ಲಿ 40 ಸಾವಿರ ಮತಗಳ ಭರ್ಜರಿ ಅಂತರದಿಂದ ಗೆದ್ದುಬಂದಿದ್ದೂ ಹೌದು.

ಹಾಗಾದರೆ ಇನ್ನುಮುಂದೆ ಎಐಎಡಿಎಂಕೆಯನ್ನು ಹಿಡಿದಿಟ್ಟುಕೊಂಡು ಮುಂದೆ ಸಾಗಬಹುದಾದ ನಾಯಕತ್ವ ಪಳನಿಸ್ವಾಮಿಯವರಿಗಿದೆಯೇ?

ಈ ಪ್ರಶ್ನೆಗೆ ಉತ್ತರ ಏನೆಂದರೆ- ಇದು ನಾಯಕತ್ವದ ಪ್ರಶ್ನೆಯೇ ಅಲ್ಲ. ಬದಲಿಗೆ ಸಂಪನ್ಮೂಲ ಕ್ರೋಡಿಕರಣದ ಪ್ರಶ್ನೆ. ಇಂಥ ಹಣಕಾಸಿನ ಹಿಡಿತ ಉಳಿದುಕೊಂಡಿರುವುದು ಶಶಿಕಲಾ ಕುಟುಂಬದಲ್ಲೇ. ಹಾಗೆಂದೇ ಎಐಎಡಿಎಂಕೆ ಸದಸ್ಯರಿಗೆಲ್ಲ ಈ ಸಂಪನ್ಮೂಲವೆಂಬ ರಾಜಕೀಯ ಗುರುತ್ವದ ಸುತ್ತ ಸುತ್ತಬೇಕಿರುವುದು ಅನಿವಾರ್ಯ.

ಶಶಿಕಲಾ ಸುಪ್ರೀಂ ತೀರ್ಪಿನ ದಿನ ನ್ಯಾಯಾಲಯಕ್ಕೆ ಹೋಗುವ ಮುಂಚೆ ಮಾಡಿದ ಕೆಲಸವೆಂದರೆ ತನ್ನ ಸಹೋದರ ಸಂಬಂಧಿಗಳಾದ ಟಿಟಿವಿ ದಿನಕರನ್ ಮತ್ತು ಎಸ್. ವೆಂಕಟೇಶನ್ ಇಬ್ಬರನ್ನು ಎಐಎಡಿಎಂಕೆಗೆ ಸೇರಿಸಿದ್ದು. ಅಷ್ಟೇ ಅಲ್ಲ, ಟಿಟಿವಿ ದಿನಕರನ್ ಅನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾಗಿಸಿ, ಶಶಿಕಲಾ ಅನುಪಸ್ಥಿತಿಯಲ್ಲಿ ಎಲ್ಲ ಅಧಿಕಾರ ಈ ವ್ಯಕ್ತಿಯ ಕೈಯಲ್ಲಿರುವಂತೆ ನೋಡಿಕೊಳ್ಳಲಾಯಿತು. ಈ ಇಬ್ಬರೂ ವ್ಯಕ್ತಿಗಳನ್ನು ಶಶಿಕಲಾರ ಪತಿ ನಟರಾಜನ್ ಸಮೇತವಾಗಿ ಡಿಸೆಂಬರ್ 2011ರಲ್ಲಿ ಸರ್ಕಾರದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಕ್ಕಾಗಿ ಜಯಲಲಿತಾ ಪಕ್ಷದಿಂದ ಉಚ್ಚಾಟಿಸಿದ್ದರು.

ಅಂದಮೇಲೆ, ಸಮಾಧಿ ತಟ್ಟುವುದು, ಅಮ್ಮನ ಮಾರ್ಗದರ್ಶನ ಎನ್ನುವುದು ಎಂಬೆಲ್ಲ ಶಶಿಕಲಾ ವರ್ತನೆಗಳ ಸಾಚಾತನ ಇಲ್ಲಿ ಸ್ಪಷ್ಟವಾಗುತ್ತದೆ.

ಸಾರಾಂಶವಿಷ್ಟೆ. ತಮಿಳುನಾಡಿನಲ್ಲಿ ಜಯಲಲಿತಾ ಪರ್ವ ಮುಗಿದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ನಿರ್ದೇಶಿಸಲ್ಪಡುವ, ಚೆನ್ನೈನಲ್ಲಿ ಕುಟುಂಬವರ್ಗ ಸಹಯೋಗದ ಶಶಿಕಲಾ ಪರ್ವ ಆರಂಭವಾಗಿದೆ.

Leave a Reply