ತನ್ನ ಮರಿಯ ರಕ್ಷಣೆಗಾಗಿ ಈ ಜಿಂಕೆ ಚಿರತೆಗಳಿಗೆ ಶರಣಾಯಿತೆ? ವೈರಲ್ ಫೋಟೊದ ಹಿಂದಿರುವ ಸತ್ಯವೇನು?

ಸುಳ್ಳು ಕಥೆಯೊಂದಿಗೆ ವೈರಲ್ ಆದ ಚಿತ್ರ (ಚಿತ್ರಕೃಪೆ: ವನ್ಯಜೀವಿ ಛಾಯಾಗ್ರಾಹಕಿ ಅಲಿಸನ್ ಬಟ್ಟಿಗೈಗ್)

ಡಿಜಿಟಲ್ ಕನ್ನಡ ಟೀಮ್:

‘ತನ್ನ ಮರಿಗಳ ರಕ್ಷಣೆಗಾಗಿ ಜಿಂಕೆ(ಇಂಪಾಲ)ಯೊಂದು ಚಿರತೆಗಳಿಗೆ ಶರಣಾಯಿತು…’ ಎಂಬ ಕಥೆಯೊಂದಿಗೆ ಜಿಂಕೆಯೊಂದನ್ನು ಮೂರು ಚಿರತೆಗಳು ಬೇಟೆಯಾಡುತ್ತಿರುವ ಚಿತ್ರವೊಂದು ವಾಟ್ಸಪ್ ಅಥವಾ ಫೇಸ್ ಬುಕ್ ಪೇಜ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡಿರುವುದನ್ನು ನೀವು ನೋಡಿದ್ದೀರಿ. ಈಗ ಆ ಚಿತ್ರದ ಜತೆಗೆ ನೀಡಲಾಗಿದ್ದ ಕಥೆ ಕೇವಲ ಕಾಲ್ಪನಿಕ ಎಂಬುದು ಬೆಳಕಿಗೆ ಬಂದಿದೆ. ಇದರೊಂದಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹೇಗೆಲ್ಲಾ ಕಟ್ಟುಕಥೆಗಳನ್ನು ಹರಿಯಬಿಡಲಾಗುತ್ತದೆ ಎಂಬುದುಕ್ಕೆ ಈ ಪ್ರಕರಣ ತಾಜಾ ಉದಾಹರಣೆಯಾಗಿದೆ.

‘ಕಾಡಿನಲ್ಲಿ ಜಿಂಕೆಯೊಂದು ತನ್ನ ಮರಿಗಳ ಜತೆ ಸಾಗುವಾಗ ಚಿರತೆಗಳು ದಾಳಿ ಮಾಡಿದವು. ಆಗ ತನ್ನ ಮರಿಗಳ ಪ್ರಾಣ ಕಾಪಾಡುವ ನಿಟ್ಟಿನಲ್ಲಿ ತಾಯಿ ಜಿಂಕೆ ಚಿರತೆಗಳ ಮುಂದೆ ಶರಣಾಯಿತು. ಆ ಮೂಲಕ ತನ್ನ ಮರಿಗಳು ತಪ್ಪಿಸಿಕೊಂಡು ಪ್ರಾಣವನ್ನು ಕಾಪಾಡಿತು. ಈ ಕರುಣಾಜನಕ ದೃಶ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದ ಛಾಯಾಗ್ರಾಹಕ ಖಿನ್ನತೆಗೆ ಒಳಗಾಗಿದ್ದಾನೆ…’ ಎಂಬ ಕಥೆಯನ್ನು ಈ ಚಿತ್ರದ ಜತೆಗೆ ಸೇರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡಲಾಗಿತ್ತು.

ಆದರೆ… ಈ ಕಥೆ ಸುಳ್ಳು ಎಂದು ಸ್ವತಃ ಆ ಚಿತ್ರ ಸೆರೆ ಹಿಡಿದ ಛಾಯಾಗ್ರಾಹಕರೇ ಸ್ಪಷ್ಟನೆ ನೀಡಿದ್ದಾರೆ. ಈ ಫೋಟೊ ಅನ್ನು ತೆಗೆದಿರುವುದು 2013 ರಲ್ಲಿ, ಈ ಚಿತ್ರ ವೈರಲ್ ಆಗಿರುವುದು 2017ರಲ್ಲಿ. ಕಳೆದ ವಾರ ಈ ಫೋಟೋ ಜತೆಗೆ ಸುಳ್ಳು ಕಥೆ ಹರಿದಾಡಿದ ಹಿನ್ನೆಲೆಯಲ್ಲಿ ಈ ಫೋಟೊ ತೆಗೆದ ವನ್ಯಜೀವಿ ಛಾಯಾಗ್ರಾಹಕಿ ಅಲಿಸನ್ ಬಟ್ಟಿಗೈಗ್ ಈ ಚಿತ್ರವನ್ನು ತೆಗೆದ ಸಂದರ್ಭವನ್ನು ವಿವರಿಸಿದ್ದಾರೆ.

cheetha-2-min

‘ನನ್ನ ಈ ಚಿತ್ರಕ್ಕೆ ಸುಳ್ಳು ಕಥೆ ಸೇರಿಸಿರುವುದು ಬೇಸರ ತರಿಸಿದೆ. ಈ ಫೋಟೊ ಜತೆಗಿನ ಹೇಳಲಾಗಿರುವ ಕಥೆ ಶುದ್ಧ ಸುಳ್ಳು. ಅದರಲ್ಲೂ ಆ ಚಿತ್ರ ತೆಗೆದ ನಂತರ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ವದಂತಿ ಹಬ್ಬಿಸಿರುವುದು ದುರಾದೃಷ್ಟಕರ. ಇಲ್ಲಿ ಸುಳ್ಳು ಕಥೆಯೊಂದನ್ನು ವೈಭವೀಕರಿಸುವ ಪ್ರಯತ್ನ ಮಾಡಲಾಗಿದೆ. 2013ರಲ್ಲಿ ಕೀನ್ಯಾದ ಮಾಸೈ ಮಾರಾ ಕಾಡಿನಲ್ಲಿ ಈ ಚಿತ್ರವನ್ನು ತೆಗೆದಿದ್ದೆ. ತಾಯಿ ಚಿರತೆ ತನ್ನ ಮರಿಗಳಿಗೆ ಬೇಟೆಯಾಡುವುದು ಹೇಗೆ ಎಂಬುದನ್ನು ಕಲಿಸುತ್ತಿತ್ತು. ಆ ವೇಳೆ ಸಿಕ್ಕ ಜಿಂಕೆಯನ್ನು ಹಿಡಿದ ತಾಯಿ ಚಿರತೆ ಅದನ್ನು ಕೊಲ್ಲುವುದು ಹೇಗೆ ಎಂದು ತನ್ನ ಮರಿಗಳಿಗೆ ಕಲಿಸುತ್ತಿತ್ತು. ಆದರೆ ಬೇಟೆಯಾಡಲು ಗೊತ್ತಿಲ್ಲದ ಮರಿ ಚಿರತೆಗಳು ಆ ಜಿಂಕೆಯೊಂದಿಗೆ ಆಟವಾಡಲು ಆರಂಭಿಸಿದವು. ಸಾಮಾನ್ಯವಾಗಿ ಪ್ರಾಣಾಪಾಯದ ಪರಿಸ್ಥಿತಿಯಲ್ಲಿ ಬೇರೆ ಪ್ರಾಣಿಗಳು ಭಯಭೀತವಾಗುತ್ತವೆ. ಆದರೆ ಈ ಸಂದರ್ಭದಲ್ಲಿ ಜಿಂಕೆಯ ಮುಖದಲ್ಲಿ ಯಾವುದೇ ಗಾಬರಿ ಅಥವಾ ಆತಂಕ ಕಾಣಲಿಲ್ಲ. ಬಹುಶಃ ಆ ಪರಿಸ್ಥಿತಿಯ ಆಘಾತದಿಂದ ಜಿಂಕೆಯ ಮಿದುಳು ಸರಿಯಾಗಿ ಕೆಲಸ ಮಾಡದೇ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ತೋಚದಂತಾಗಿತ್ತು. ಹೀಗಾಗಿ ಜಿಂಕೆ ಸುಮ್ಮನೆ ನಿಂತಿತು. ಇದು ದೃಶ್ಯ ನನಗೆ ತುಂಬಾ ಆಶ್ಚರ್ಯವಾಗಿ ಕಾಣಿಸಿತು.’

ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕಥೆಗಳನ್ನೆಲ್ಲಾ ನಂಬುವ ಮೊದಲು ಅದರ ಸತ್ಯಾಸತ್ಯತೆ ಪರೀಕ್ಷಿಸಿಕೊಳ್ಳುವುದು ಮುಖ್ಯ. ಇಲ್ಲವಾದರೆ ಯಾರದ್ದೊ ಕಟ್ಟುಕಥೆಯನ್ನು ಸತ್ಯವೆಂದು ನಂಬಿ ಮೋಸ ಹೋಗುವುದು ಖಚಿತ.

Leave a Reply