ಫೇಸ್ಬುಕ್ಕಿನ ರಾಜಕೀಯ ಪ್ರಸ್ತುತತೆ ವಿಸ್ತರಿಸಲು ಮೋದಿಯ ಉದಾಹರಣೆ ನೀಡಿದ ಜುಕರ್ ಬರ್ಗ್!

ಡಿಜಿಟಲ್ ಕನ್ನಡ ಟೀಮ್:

‘ಜನಪ್ರತಿನಿಧಿಗಳು ಸಾಮಾನ್ಯ ಜನರ ಜತೆ ಸಂಪರ್ಕ ಸಾಧಿಸಲು ಸಾಮಾಜಿಕ ಜಾಲತಾಣ ಒಂದು ಪ್ರಮುಖ ಸಾಧನ…’ ಹೀಗೊಂದು ವಾದ ಮಂಡಿಸಿದ್ದಾರೆ ಫೇಸ್ಬುಕ್ಕಿನ ಮಾಲೀಕ ಮಾರ್ಕ್ ಜುಕರ್ ಬರ್ಗ್. ಆ ಮೂಲಕ ಫೇಸ್ ಬುಕ್ಕಿನ ರಾಜಕೀಯ ಪ್ರಸ್ತುತಿ ವಿಸ್ತರಿಸುವ ಪ್ರಯತ್ನ ನಡೆಸುತ್ತಿದ್ದು, ಅದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದಾಹರಣೆಯಾಗಿ ಬಳಸಿಕೊಂಡಿರುವುದು ಗಮನ ಸೆಳೆದಿದೆ.

ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಜನ ಪ್ರತಿನಿಧಿಗಳು ಜನರ ಜತೆಗೆ ಹಾಗೂ ಸಾಮಾನ್ಯ ಜನರು ತಮ್ಮ ರಾಜಕೀಯ ನಾಯಕನ ಜತೆಗೆ ನಿರಂತರ ಸಂಪರ್ಕ ಹೊಂದುವುದು ಸುಲಭ ಎಂದು ಪ್ರತಿಪಾದಿಸಿದ್ದಾರೆ ಜುಕರ್ಬರ್ಗ್. ತಮ್ಮ ಫೇಸ್ ಬುಕ್ ಪೇಜಿನಲ್ಲಿ ತನ್ನ ಕಂಪನಿಯ ಮೂಲಕ ಜಾಗತಿಕ ಸಮೂಹವನ್ನು ಕಟ್ಟುವ ಕನಸನ್ನು ವ್ಯಕ್ತಪಡಿಸಿರುವ ಜುಕರ್ ಬರ್ಗ್, ಆ ಬಗ್ಗೆ ಸುದೀರ್ಘ ಲೇಖನವನ್ನು ಬರೆದುಕೊಂಡಿದ್ದಾರೆ.

ತಮ್ಮ ಈ ಬರಹದಲ್ಲಿ ನರೇಂದ್ರ ಮೋದಿಯನ್ನು ಉದಾಹರಿಸಿರುವ ಜುಕರ್ ಬರ್ಗ್, ‘ಮೋದಿ ಅವರು ತಮ್ಮ ಸಚಿವರಿಗೆ ಅವರವರ ಅಭಿಪ್ರಾಯಗಳನ್ನು ಹಾಗೂ ಸಚಿವಾಲಯದ ಮಾಹಿತಿ, ಸಭೆ ಸಮಾರಂಭಗಳಲ್ಲಿನ ಪ್ರಮುಖ ಅಂಶಗಳು, ಗುರಿಗಳ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದು ಜನರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ. ಆ ಮೂಲಕ ಜನರು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ತಮ್ಮ ನಾಯಕರಿಗೆ ನೀಡಲು ಸಾಧ್ಯವಾಗಿದೆ. ಜನಪ್ರತಿನಿಧಿಗಳು ಹಾಗೂ ಜನರ ನಡುವಿನ ಸಂಪರ್ಕ ಸಾಧಿಸಲು ಈ ಮಾದರಿ ಪರಿಣಾಮಕಾರಿಯಾಗಿದೆ’ ಎಂದು ವಿವರಿಸಿದ್ದಾರೆ.

‘ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸುವದಷ್ಟೇ ಅಲ್ಲ. ತಾವು ಆರಿಸಿದ ನಾಯಕನ ಜತೆ ದಿನ ನಿತ್ಯ ಸಂಪರ್ಕದಲ್ಲಿ ಹೊಂದುವುದು ಮುಖ್ಯವಾಗುತ್ತದೆ. ಇದರಿಂದ ಹೊಣೆಗಾರಿಕೆ ಹೆಚ್ಚುವುದಲ್ಲದೆ, ಜನರು ಹಾಗೂ ನಾಯಕರ ನಡುವೆ ಉತ್ತಮ ಸಂಪರ್ಕ ಏರ್ಪಟ್ಟು, ಪರಿಣಾಮಕಾರಿ ಆಡಳಿತಕ್ಕೆ ನೆರವಾಗಲಿದೆ’ ಎಂಬುದು ಜುಕರ್ ಬರ್ಗ್ ವಾದ.

ಇದೇ ವೇಳೆ ಕೀನ್ಯಾದ ಒಂದು ಪುಟ್ಟ ಹಳ್ಳಿಯನ್ನು ಉದಾಹರಣೆಯಾಗಿ ಬಳಸಿಕೊಂಡಿರುವ ಜುಕರ್ ಬರ್ಗ್, ಆ ಹಳ್ಳಿಯಲ್ಲಿ ಜನರು ವಾಟ್ಸಪ್ ಗ್ರೂಪ್ ಮಾಡಿಕೊಂಡು ಅದರಲ್ಲಿ ಸ್ಥಳೀಯ ನಾಯಕನನ್ನು ಸೇರಿಸಿಕೊಂಡು ತಮ್ಮ ಸಮಸ್ಯೆ ಹಾಗೂ ಬೇಡಿಕೆ ತಿಳಿಸುವುದು ಹಾಗೂ ವಿಚಾರ ವಿನಿಮಯ ಮಾಡಲು ನೆರವಾಗಿರುವುದನ್ನು ವಿವರಿಸಿದ್ದಾರೆ. ‘1960ರ ದಶಕದಲ್ಲಿ ನಾಗರೀಕ ಸಮಾಜಕ್ಕೆ ದೂರದರ್ಶನ ಮಾಧ್ಯಮ ಹೇಗೆ ಪ್ರಮುಖ ಸಾಧನವಾಗಿ ಪರಿಣಮಿಸಿತ್ತೋ, ಅದೇ ರೀತಿ 21ನೇ ಶತಮಾನದಲ್ಲಿ ಸಾಮಾಜಿಕ ಜಾಲತಾಣಗಳು ಪ್ರಭಾವ ಬೀರುತ್ತಿವೆ’ ಎಂದಿದ್ದಾರೆ.

ಈ ಹಿಂದೆ ಜನರು ತಮ್ಮ ಭಾವನೆ, ಅಭಿಪ್ರಾಯವನ್ನು ಹಂಚಿಕೊಳ್ಳುವುದಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಈಗ ರಾಜಕೀಯವಾಗಿ ಸಂಪರ್ಕ ಸಾಧನೆಗೆ ಫೆಸ್ಬುಕ್, ವಾಟ್ಸಪ್ ನಂತಹ ಸಾಮಾಜಿಕ ಜಾಲತಾಣಗಳು ಮುಖ್ಯ ಎಂದು ಜುಕರ್ ಬರ್ಗ್ ಪ್ರತಿಪಾದಿಸುತ್ತಾ, ಅದಕ್ಕೆ ಮೋದಿ ಅವರನ್ನು ಉದಾಹರಣೆಗೆ ತೆಗೆದುಕೊಂಡಿರುವುದು ಆಸಕ್ತಿಕರ.

Leave a Reply