ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗುವುದು ಕೇವಲ ಭಾವನಾತ್ಮಕ ಸಂಗತಿಯೇ?

author-ssreedhra-murthyಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭವಾಗುವ ಮೊದಲು ರಾಷ್ಟ್ರಗೀತೆಯನ್ನು ಮೊಳಗಿಸುವ ಕುರಿತು 2016ರ ನವೆಂಬರ್ 29ರಂದು ಸುಪ್ರೀಂ ಕೋರ್ಟಿನ  ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತ್ಲಾ ರಾಯ್ ನೀಡಿದ ಮಧ್ಯಂತರ ಆದೇಶ  ಹಲವು ನಿಟ್ಟಿನ ಆವೇಶಕಾರಿ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಇದು ಬಲವಂತದಿಂದ ದೇಶ ಪ್ರೇಮ ಹೇರುವ ಪ್ರಯತ್ನ ಎಂಬ ವಾದವಿದ್ದಂತೆ ಇದರಲ್ಲಿ ತಪ್ಪೇನು ಎನ್ನುವ ಉಗ್ರವಾದವೂ ಇದೆ. ಇದು ಖಾಸಗಿಯಾಗಿ ಸಲ್ಲಿಕೆಯಾದ ಅರ್ಜಿಗೆ ನ್ಯಾಯಾಲಯ ಮಾಡಿದ ಟಿಪ್ಪಣಿ ಎನ್ನುವುದನ್ನು ಮರೆತು ಸರ್ಕಾರವೇ ಇಂತಹ ಕಾನೂನನ್ನು ರೂಪಿಸುತ್ತಿದೆ ಎನ್ನುವ ಆಕ್ರೋಶ ಕೂಡ ವ್ಯಕ್ತವಾಗಿದೆ. ಈ ವರ್ಷದ ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್ ಚಿತ್ರದ ಮಧ್ಯದಲ್ಲಾಗಲಿ, ಭಾಗವಾಗಿಯಾಗಲಿ ಚಿತ್ರಗೀತೆ ಬಂದರೆ ಪ್ರೇಕ್ಷಕರು ಎದ್ದು ನಿಲ್ಲಬೇಕಿಲ್ಲ ಎಂದು ನೀಡಿರುವ ಸ್ಪಷ್ಟೀಕರಣ ಇನ್ನಷ್ಟು ಗೊಂದಲ ಮೂಡಿಸಿದೆ. ಇತ್ತೀಚೆಗೆ ಮುಕ್ತಾಯವಾದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರೊಬ್ಬರು ‘ದಿನಕ್ಕೆ ಚಿತ್ರೋತ್ಸವದಲ್ಲಿ ನಾಲ್ಕೈದು ಸಿನಿಮಾ ನೋಡುವವರು ಪ್ರತಿಸಲವೂ ತಮ್ಮ ದೇಶ ಭಕ್ತಿಯನ್ನು ಸಾಬೀತು ಮಾಡಬೇಕೆ ಎಂದು ತಕರಾರು ಎತ್ತಿದ ಪ್ರಸಂಗ ನಡೆದಿದೆ.  ಒಟ್ಟಿನಲ್ಲಿ ಈ ಕುರಿತು ತಮಗೆ ತಿಳಿದಂತೆ ಅರ್ಥ ಮಾಡಿಕೊಂಡು ಎಲ್ಲರೂ ಪ್ರತಿಕ್ರಿಯಿಸುತ್ತಿರುವದರಿಂದ ಗೊಂದಲಕರ ವಾತಾವರಣ ಉಂಟಾಗಿದೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವ ಕ್ರಮ ಆರಂಭವಾಗಿದ್ದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. 1962ರ ಅಕ್ಟೋಬರ್ 20ರಂದು ಭಾರತವು ಚೀನಾ ವಿರುದ್ಧದ ಯುದ್ಧದಲ್ಲಿ ಅಸಾಧಾರಣ ಹಿನ್ನೆಡೆ ಅನುಭವಿಸಿತು. ಇದಕ್ಕೆ ಆಗ ರಕ್ಷಣಾ ಸಚಿವರಾಗಿದ್ದ ವಿ.ಕೆ.ಕೃಷ್ಣ ಮೆನನ್ ಅವರ ತಪ್ಪು ನಿರ್ಧಾರಗಳೇ ಕಾರಣ ಎಂಬ ಮಾತು ಎಲ್ಲೆಡೆ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದರು. ಯಶವಂತ ಚೌಹಾಣ್ ಹೊಸ ರಕ್ಷಣಾ ಸಚಿವರಾದರು. ಅವರು ನಾಗರೀಕರಲ್ಲಿ ದೇಶ ಪ್ರೇಮ ಜಾಗೃತಗೊಳಿಸಲು ಹಲವು ಪ್ರಯತ್ನಗಳನ್ನು ಕೈಗೊಂಡರು. ಅದರಲ್ಲಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕೇಳಿಸುವುದೂ ಒಂದು. ಆಗ ಚಿತ್ರ ಮುಗಿದ ನಂತರ ರಾಷ್ಟ್ರಗೀತೆ ಕೇಳಿ ಬರುತ್ತಿತ್ತು. 1957ರ ರಾಷ್ಟ್ರೀಯ ಗೌರವಗಳ ರಕ್ಷಣೆ ಕಾಯಿದೆ ಅಡಿ ಈ ಕ್ರಮ ಕೈಗೊಳ್ಳಲಾಗಿದ್ದು ಇಂಡಿಯನ್ ಪೀನಲ್ ಕೋಡ್‍ 151ರ ಪ್ರಕಾರ ಅಗೌರವ ಸೂಚಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನೂ ಆಡಳಿತಕ್ಕೆ ನೀಡಲಾಗಿತ್ತು. ಮುಂದೆ 1971ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಲಾಂಛನಗಳಿಗೆ ಗೌರವ ಸಲ್ಲಿಕೆ ಕಾಯಿದೆಯಲ್ಲಿ ವಿಧಿ 32ರ ಅನ್ವಯ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗಿಸುವ ಬಗ್ಗೆ ಒಂದು ಅನುಬಂಧ ಸೇರಿಸಲಾಯಿತು. ಅದು ಹೀಗಿಯೇ ಇರಬೇಕು ಎನ್ನುವುದರ ಕುರಿತು ಸ್ಪಷ್ಟತೆ ಇಲ್ಲದಿದ್ದರೂ ಸೂಚನೆಯಂತೂ ಇತ್ತು.

1970ರ ದಶಕದಲ್ಲಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕೇಳಿ ಬರುತ್ತಿತ್ತಾದರೂ ಕ್ರಮೇಣ ನಿಂತು ಹೋಯಿತು. ಇದಕ್ಕೆ ಮರುಚಾಲನೆ ನೀಡಿದ್ದು ಮಹಾರಾಷ್ಟ್ರ ಸರ್ಕಾರ. 2003ರ ಜನವರಿ 26ರಿಂದ ಇಲ್ಲಿನ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವುದನ್ನು ಕಡ್ಡಾಯಗೊಳಿಸಲಾಯಿತು. ಆದರೆ ಇಂತಹ ಪ್ರಯತ್ನವನ್ನು ಚೆನ್ನೈ ಮತ್ತು ಕೊಲ್ಕತ್ತಾದ ಉಚ್ಚ ನ್ಯಾಯಾಲಯಗಳು ನಿರಾಕರಿಸಿದವು. ಇದರಿಂದ ಉಂಟಾದ ಗೊಂದಲವನ್ನು ಗಮನಿಸಿ ಶ್ಯಾಮನಾರಾಯಣ ಚೌಕಸೆ ಮತ್ತಿತರು ಸಲ್ಲಿಸಿದ ಅರ್ಜಿ ಸಂಬಂಧ ಸುಪ್ರಿಂ ಕೊರ್ಟ್ ಮಾಡಿರುವ ವಿಶ್ಲೇಷಣೆ ಈಗ ಚರ್ಚೆಗೆ ಗ್ರಾಸವಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ ಇದೇನು ಅಂತಿಮ ತೀರ್ಪಲ್ಲ. ಅಂತಿಮ ತೀರ್ಪಿನ ಹೊತ್ತಿಗೆ ಸುಪ್ರಿಂ ಕೋರ್ಟ್ ಕೆಲವು ಖಚಿತ ಸೂಚನೆಗಳನ್ನು ನೀಡುವ ನಿರೀಕ್ಷೆ ಇದೆ.

ಇದನ್ನು ಹೇಗೆ ಜಾರಿಗೆ ತರುತ್ತೀರಿ ಎನ್ನುವ ಪ್ರಶ್ನೆಗೆ ಸಾಲಿಟರ್ ಜನರಲ್ ಮುಕುಲ್ ರೊಹಟಗಿ ಸಂವಿಧಾನದ 51(ಎ)ನ 4(ಡಿ) ಭಾಗದ ಅನ್ವಯ ಎಂದು ಹೇಳಿರುವುದನ್ನು ಬಹಳ ಜನರು ಗಮನಿಸಿಲ್ಲ. ಅದು ಕರ್ತವ್ಯದ ಕುರಿತಾದ ವಿಧಿ. ಅದರಂತೆ ರಾಷ್ಟ್ರಧ್ವಜವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಅದರಲ್ಲಿ ಬೇಕು ಬೇಡಗಳ ಪ್ರಶ್ನೆಯೇ ಬರುವುದಿಲ್ಲ. ಎದ್ದು ನಿಲ್ಲದಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಗೂ ಇಲ್ಲಿಯೇ ಉತ್ತರವಿದೆ. ಜಗತ್ತಿನ 84 ದೇಶಗಳಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸುವ ಪದ್ದತಿ ಇದೆ ಎನ್ನುವುದನ್ನೂ ಈ ಕುರಿತು ತಕರಾರು ತೆಗೆದಿರುವವರು ಗಮನಿಸಬೇಕು. ಇದು ಕೇವಲ ಭಾವನಾತ್ಮಕ ಸಂಗತಿಯಲ್ಲ. ನೈತಿಕ ಹೊಣೆಗಾರಿಕೆ. ಅಂತಿಮ ತೀರ್ಪಿನ ವೇಳೆಗೆ ಈ ಹೊಣೆಗಾರಿಕೆಯನ್ನು ಚಿತ್ರಮಂದಿರದವರಿಗೋ, ಆಡಳಿತಕ್ಕೂ ಬಿಡುವುದರ ಕುರಿತು ಸುಪ್ರೀಂ ಕೋರ್ಟ್ ಉಲ್ಲೇಖಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಪಣಜಿಯಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿದಾಗ ಎದ್ದು ನಿಲ್ಲಲಿಲ್ಲವೆಂದು ಸಲೀಲ್ ಚೌಧರಿ ಎನ್ನುವವರ ಮೇಲೆ ಹಲ್ಲೆ ನಡೆಯಿತು. ಆದರೆ ಅವರು ವಿಕಲಚೇತನರಾಗಿದ್ದ ಕಾರಣದಿಂದ ಎದ್ದು ನಿಂತಿರಲಿಲ್ಲ ಎನ್ನುವ ಅಂಶ ನಂತರ ತಿಳಿಯಿತು. ಅಷ್ಟೇ ಅಲ್ಲ ಅವರು ವೀಲ್ ಚೇರ್ ಟೆನ್ನಿಸ್‍ನಲ್ಲಿ ಭಾರತವನ್ನು ಜಾಗತಿಕ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿದ್ದರು. ದೇಶ ಪ್ರೇಮದ ಹೊಣೆಯನ್ನು ತಾವೇ ಹೊತ್ತಿದ್ದೇವೆ ಎಂಬ ಭ್ರಮೆಯಲ್ಲಿರುವವರು ಗಮನಿಸಬೇಕಾದ ಸಂಗತಿ ಇದು.

ಗೊಂದಲಕ್ಕೆ ಕಾರಣವಾಗಿರುವ ಅಂಶವೆಂದರೆ ಚಿತ್ರಮಂದಿರದ ಆಗಮನ ನಿರ್ಗಮನದ ಬಾಗಿಲುಗಳು ರಾಷ್ಟ್ರಗೀತೆ ಮೊಳಗುವಾಗ ಮುಚ್ಚಿರಬೇಕು ಎನ್ನುವ ಸಂಗತಿ. ದೆಹಲಿ ಚಿತ್ರಮಂದಿರದಲ್ಲಿ ಹೀಗೆ ಬಾಗಿಲುಗಳನ್ನು ಮುಚ್ಚಿದ್ದರಿಂದಲೇ ಸಂಭವಿಸಿದ ಅಗ್ನಿದುರಂತದ ಉದಾಹರಣೆಯನ್ನು ಇಲ್ಲಿ ನೀಡುವವರಿದ್ದಾರೆ. ಇದು ರಾಷ್ಟ್ರಗೀತೆ ಪ್ರಸಾರವಾಗುವ ನಡುವೆ ಜನ ಓಡಾಡದಿರಲಿ ಎಂಬ ಕಾರಣದಿಂದ ತೆಗೆದು ಕೊಂಡಿರುವ ಮುನ್ನೆಚ್ಚರಿಕೆ ಕ್ರಮ ಎನ್ನುವುದನ್ನು ಗಮನಿಸ ಬೇಕು. ಚಿತ್ರಮಂದಿರದ ಸುರಕ್ಷತೆಗೆ ಸಂಬಂಧಿಸಿದವರು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ರಾಷ್ಟ್ರಗೀತೆ ಪ್ರಸಾರವಾಗುವ ಸಮಯ ಕೇವಲ 52 ಸೆಕೆಂಡ್‍ಗಳು. ಸರಿ ಸುಮಾರು  140-180 ನಿಮಿಷಗಳ ಕಾಲ ಚಿತ್ರವನ್ನು ನೋಡಿ ಆನಂದಿಸುವವರು ಇಷ್ಟು ಸಮಯವನ್ನು ದೇಶಕ್ಕಾಗಿ ನೀಡಲಾರರೆ? ಭಾವಾವೇಶವನ್ನು ಬಿಟ್ಟು ಯೋಚಿಸಿದರೆ ಸಮಸ್ಯೆಯ ಮೂಲ ಎಲ್ಲಿದೆ ಎನ್ನುವುದು ಗೊತ್ತಾಗುತ್ತದೆ.

Leave a Reply