ಕಮಲ ಮುಡಿದ ಹಳೆ ಹೆಂಡ್ತಿ ವರ್ಸಸ್ ಕೈ ಬೀಸುತ್ತಿರುವ ಹೊಸ ಹೆಂಡ್ತಿ! ಇದು ರಾಹುಲ್ ಗಾಂಧಿಯ ಅಮೇತಿ ರೋಚಕತೆ

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಐದನೇ ಹಂತದ ಮತದಾನದಲ್ಲಿ ಅಮೇತಿ ಕ್ಷೇತ್ರದ ಸ್ಪರ್ಧೆ ತೀವ್ರ ಕುತೂಹಲ ಹುಟ್ಟುಹಾಕಿದೆ. ‘ಅಮೇತಿಯ ರಾಜ’ ಎಂದೇ ರೂಢಿಯಲ್ಲಿ ಕರೆಯಲ್ಪಡುವ ಕಾಂಗ್ರೆಸ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರ ಎರಡನೇ ಪತ್ನಿ ಅಮಿತಾ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರಿಗೆ ಸೆಡ್ಡು ಹೊಡೆಯಲು ಬಿಜೆಪಿ, ಸಂಜಯ್ ಸಿಂಗ್ ಅವರ ಮೊದಲ (ಮಾಜಿ) ಪತ್ನಿ ಗರಿಮಾ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಆ ಮೂಲಕ ಅಮೇತಿಯಲ್ಲಿ ಹಳೇ ರಾಣಿ ವರ್ಸಸ್ ಹೊಸ ರಾಣಿ ಕದನ ಏರ್ಪಟ್ಟಿದೆ.

ಈ ಮಾಜಿ ರಾಜಮನೆತನದ ಕುಟುಂಬ ಕದನವೇ ರಾಹುಲ್ ಗಾಂಧಿಯ ಸ್ವಕ್ಷೇತ್ರ ಅಮೇತಿಯನ್ನು ರಂಗೇರಿಸಿದೆ. ಇಲ್ಲಿ ಇನ್ನೊಂದು ಸ್ವಾರಸ್ಯವೂ ಇದೆ. ಬೇರೆಲ್ಲ ಕಡೆ ಸಮಾಜವಾದಿ ಮತ್ತು ಕಾಂಗ್ರೆಸ್ ಮೈತ್ರಿ ಹೊಂದಾಣಿಕೆ ಪ್ರದರ್ಶಿಸಿವೆ. ಆದರೆ ಇಲ್ಲಿ ಮಾತ್ರ ಕಾಂಗ್ರೆಸ್ ಪರ ಹೊಸ ಪತ್ನಿ ಹಾಗೂ ಬಿಜೆಪಿ ಪಾಳೆಯದಲ್ಲಿರುವ ಹಳೆ ಪತ್ನಿ ಸಮೀಕರಣಕ್ಕೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಗಾಯತ್ರಿ ಪ್ರಜಾಪತಿ ಸ್ಪರ್ಧೆ ಇದೆ. ಆದರೆ ಈ ಹೊತ್ತಿಗೆ, ಪ್ರಜಾಪತಿ ವಿರುದ್ಧ ಅತ್ಯಾಚಾರ ದೂರಿನನ್ವಯ ಎಫ್ಐಆರ್ ದಾಖಲಿಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶಿಸಿರುವುದು ಎಸ್ಪಿಯನ್ನು ಅಷ್ಟರಮಟ್ಟಿಗೆ ಬಲಹೀನಗೊಳಿಸಿದೆ. ಈ ಪ್ರಜಾಪತಿ ಮಹಾಶಯನ ವಿರುದ್ಧ ಮಹಿಳೆಯೊಬ್ಬರು ತನಗೆ ಚಹಾದಲ್ಲಿ ಮತ್ತು ಬರಿಸಿ ನಗ್ನಚಿತ್ರಗಳನ್ನು ತೆಗೆದು ನಂತರದಲ್ಲಿ ನಿರಂತರವಾಗಿ ಬೆದರಿಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತ ಬಂದಿರುವುದಾಗಿ ದೂರಿದ್ದಾರೆ.

ಹಿಂದುಳಿದ ವರ್ಗದ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಜಾಪತಿ ಅವರು ಕಳೆದ ಬಾರಿ ಅಮಿತಾ ವಿರುದ್ಧ 10 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಹಾಗೆಂದೇ ಈ ಬಾರಿಯೂ ಅಮೇತಿ ಮತ್ತು ರಾಯ್ಬರೇಲಿ ವ್ಯಾಪ್ತಿಯ 10 ವಿಧಾನಸಭೆ ಸ್ಥಾನಗಳನ್ನು ಅಖಿಲೇಶ ಯಾದವ್ ತಮ್ಮ ಬಳಿಯೇ ಇಟ್ಟುಕೊಂಡರು. ಆದರೆ ರಾಹುಲ್- ಸೋನಿಯಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳೇ ಇಲ್ಲದಿರುವುದು ಅಭಾಸ ಎನ್ನುತ್ತ ಕಾರ್ಯಕರ್ತರ ಒತ್ತಾಯಕ್ಕೆ ಇಲ್ಲೆಲ್ಲ ಅಭ್ಯರ್ಥಿಗಳನ್ನು ಹಾಕಿದೆ ಕಾಂಗ್ರೆಸ್.

ತಮ್ಮ ಎರಡನೇ ಪತ್ನಿ ಅಮಿತಾ ಅವರ ಬೆಂಬಲಕ್ಕೆ ನಿಂತಿರುವ ಸಂಜಯ್ ಸಿಂಗ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ತಮ್ಮ ಮಾಜಿ ಪತ್ನಿ ಕಣಕ್ಕೆ ಪ್ರವೇಶಿಸಿದ ಮೇಲೆ ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅಮೇತಿಯ ಕೆಲವು ಭಾಗಗಳಲ್ಲಿ ಈಗಲೂ ರಾಣಿ ಎಂದೇ ಕರೆಸಿಕೊಳ್ಳುವ ಗರಿಮಾ ಸಾಕಷ್ಟು ಉತ್ತಮ ಹೆಸರು ಗಳಿಸಿದ್ದಾರೆ. ಅಲ್ಲದೇ, ಪರಿತ್ಯಕ್ತ ಮಹಿಳೆ ಎಂಬ ಅನುಕಂಪವೂ ಜನರಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಇದನ್ನೇ ಬಳಸಿಕೊಳ್ಳುತ್ತಿದೆ ಬಿಜೆಪಿ. ‘ಸಂಜಯ್ ಸಿಂಗ್ ಹಾಗೂ ಅಮಿತಾ ಅವರ ವಿವಾಹ ಕಾನೂನು ಬಾಹೀರ’ ಎಂದು ಆರೋಪಿಸಿರುವ ಗರಿಮಾ, ಚುನಾವಣಾ ಪ್ರಚಾರದ ವೇಳೆ ತಮ್ಮ ಮಾಜಿ ಪತಿಯ ಬಗ್ಗೆ ನೇರವಾಗಿ ಟೀಕಾ ಪ್ರಹಾರ ನಡೆಸಿದ್ದಾರೆ. ಇದು ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ.

ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ನಡುವೆ ಮೈತ್ರಿ ಹೊರತಾಗಿಯೂ ಅಮಿತಾ ಸಿಂಗ್, ತಮ್ಮ ಸಮಾಜವಾದಿ ಪಕ್ಷದ ಎದುರಾಳಿ ಪ್ರಜಾಪತಿ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ‘ಎರಡು ಪಕ್ಷಗಳ ಮೈತ್ರಿ ಇದ್ದರೂ ಸಮಾಜವಾದಿ ಪಕ್ಷದ ಅಭ್ಯರ್ಥಿಯ ದೌರ್ಜನ್ಯಕ್ಕೆ ಜನರು ಒಳಗಾಗಿದ್ದು, ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಹೀಗಾಗಿ ಜನರು ನನ್ನನ್ನೇ ಗೆಲ್ಲಿಸುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ. ಇದೇ ವೇಳೆ ಗರಿಮಾ ಅವರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮಿತಾ, ‘ಈ ಬಾರಿಯ ಚುನಾವಣೆ ನನ್ನ ಪಾಲಿಗೆ ಕಠಿಣ ಪರೀಕ್ಷೆಯಾಗಿರುವುದು ನಿಜ. ಇದು ಪ್ರಜಾಪ್ರಭುತ್ವದ ಭಾಗವಾಗಿದ್ದು, ಇಲ್ಲಿ ಯಾವುದೇ ವೈಯಕ್ತಿಕ ಸಮಸ್ಯೆಗಳು ಚರ್ಚೆಯ ಸಂಗತಿಯಲ್ಲ. ’ ಎಂದಿದ್ದಾರೆ.

ಮಾಜಿ ಹಾಗೂ ಹಾಲಿ ಪತ್ನಿಯರ ಕಾದಾಟದ ಬಗ್ಗೆ ಸಂಜಯ್ ಸಿಂಗ್ ಹೇಳೋದಿಷ್ಟು… ‘ನನ್ನ ಮಾಜಿ ಪತ್ನಿ ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡಿ ನಿಂದಿಸುತ್ತಿದ್ದಾರೆ. ಮನೆಯ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುತ್ತಿದ್ದಾರೆ. ಇದು ಸಹಜವಾಗಿಯೇ ನೋವುಂಟು ಮಾಡಿದೆ. ಇನ್ನು ಈ ಚುನಾವಣೆಯಲ್ಲಿ ರಾಜ್ಯದ ಜನ ಅಖಿಲೇಶ್ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಪರಿಗಣಿಸಿದ್ದಾರೆ. ಒಂದು ವೇಳೆ ಅಮಿತಾ ಗೆದ್ದರೂ ಅಖಿಲೇಶ್ ಅವರ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ.’

ಇದು ನೋಡಿ ಖುದ್ದು ರಾಹುಲ್ ಗಾಂಧಿ ಕ್ಷೇತ್ರದಲ್ಲಿ ತೆರೆದುಕೊಳ್ಳುತ್ತಿರುವ ತಮಾಷೆ ಮತ್ತು ರೋಚಕತೆ!

Leave a Reply