ಈಶ್ವರಪ್ಪನವ್ರಿಗೆ ಹಿಂದುಳಿದ ಮೋರ್ಚಾ ಅಧ್ಯಕ್ಷ ಪಟ್ಟ, ಹಿಂದ ವಿವಾದಕ್ಕೆ ತೆರೆ ಎಳೆದ ಬಿಜೆಪಿ

ಬಿಜೆಪಿ ಹಿಂದುಳಿದ ಮೋರ್ಚಾದ ಸಭೆಯಲ್ಲಿ ಭಾಗವಹಿಸಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ.

ಡಿಜಿಟಲ್ ಕನ್ನಡ ಟೀಮ್:

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುವ ಮೂಲಕ ಅಹಿಂದ ಸಮಾವೇಶ ಮಾಡುವ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿದ್ದ ಈಶ್ವರಪ್ಪ ವರ್ಸಸ್ ಯಡಿಯೂರಪ್ಪ ನಡುವಣ ಕದನಕ್ಕೆ ಬ್ರೇಕ್ ಹಾಕುವತ್ತ ಹೆಜ್ಜೆ ಇಡಲಾಗಿದೆ.

ಇಂದು ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಂಡರಲ್ಲದೇ, ಈಶ್ವರಪ್ಪ ಅವರನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷ ಪಟ್ಟವನ್ನು ಕಟ್ಟಲಾಯಿತು. ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ‘ನಮ್ಮ ನಡುವೆ ಭಿನ್ನಾಭಿಪ್ರಾಯ ಇದ್ದದ್ದು ನಿಜ. ನಮ್ಮ ಆಂತರಿಕ ಕಲಹಕ್ಕೆ ಇಂದು ತೆರೆ ಬಿದಿದೆ. ನಾನು ಈಶ್ವರಪ್ಪ ಎಂದೂ ಜಗಳವಾಡಿಲ್ಲ. ಸಣ್ಣಪುಟ್ಟ ಅಸಮಾಧಾನವಿತ್ತು. ಅದೂ ಬಗೆಹರಿದಿದೆ. ಇನ್ನು ಮುಂದೆ ಪಕ್ಷದ ವೇದಿಕೆಯಲ್ಲೇ ಎಲ್ಲ ಸಂಘಟನೆಗಳು ಕಾರ್ಯನಿರ್ವಹಿಸಲಿವೆ. ಅದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಈಶ್ವರಪ್ಪನವರನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷರನ್ನಾಗಿ ಮಾಡಿರುವುದರಿಂದ ಪಕ್ಷಕ್ಕೆ ಈಗ ಆನೆ ಬಲ ಬಂದಂತಾಗಿದೆ. ನಾವು ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡಿದ ಯಡಿಯೂರಪ್ಪನವರು, ಇತರೆ ಪಕ್ಷದ ನಾಯಕರು ತಮ್ಮ ಪಕ್ಷ ಸೇರುವಂತೆ ಆಹ್ವಾನ ಕೊಟ್ಟರು. ಈ ಬಗ್ಗೆ ಅವರು ಹೇಳಿದಿಷ್ಟು…

‘ಸಿದ್ದರಾಮಯ್ಯನವರ ಸರ್ಕಾರ ನಾಲ್ಕು ವರ್ಷ ಆಡಳಿತ ನಡೆಸಿ ಮಾಡಿರುವ ಸಾಧನೆ ಶೂನ್ಯ. ಬಾಕಿ ಇರುವ ಒಂದು ವರ್ಷದಲ್ಲಿ ಏನು ನಿರೀಕ್ಷಿಸಲು ಸಾಧ್ಯ. ಅವರ ನಾಯಕತ್ವ ಬೇಸರಗೊಂಡು ಅನೇಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಬರುವುದಾದರೆ ಆ ನಾಯಕರು ಬಂದು ಬಿಡಲಿ. ಅವರ ಗೌರವಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾದರಿಯಲ್ಲೇ ಕರ್ನಾಟಕದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲು ಇಚ್ಛಿಸುವವರು ಪಕ್ಷ ಸೇರಬಹುದು. ಮುಂಬರುವ ವಿಧಾನಸಭೆಯಲ್ಲಿ 150 ಸೀಟು ಗೆಲ್ಲುವ ಶಕ್ತಿ ನಮ್ಮಲ್ಲಿದೆ.’

Leave a Reply