ಮೋಡಗಳ ಮಧ್ಯೆಯೂ ಡಿಜಿಟಲ್ ಇಂಡಿಯಾ, ವಿಮಾನ ಪ್ರಯಾಣಿಕರಿಗೆ ಇಂಟರ್ ನೆಟ್ ಒದಗಿಸಲು ದೂರಸಂಪರ್ಕ ಇಲಾಖೆ ಚಿಂತನೆ

(ಸಾಂದರ್ಭಿಕ ಚಿತ್ರ…)

ಡಿಜಿಟಲ್ ಕನ್ನಡ ಟೀಮ್:

ದೇಶದ ವಿಮಾನಯಾನವನ್ನು ವೃದ್ಧಿಸುವ ಹಿನ್ನೆಲೆಯಲ್ಲಿ ಕೇಂದ್ರ ದೂರಸಂಪರ್ಕ ಸಚಿವಾಲಯ ಹೊಸ ಕರಡನ್ನು ಸಿದ್ಧ ಪಡಿಸಿದೆ. ಅದೇನೆಂದರೆ, ಇನ್ನು ಮುಂದೆ ಭಾರತದಲ್ಲಿ ವಿಮಾನಯಾನದ ವೇಳೆ ಸ್ಯಾಟಲೈಟ್ ಮೂಲಕ ಪ್ರಯಾಣಿಕರಿಗೆ ಉಚಿತ ಇಂಟರ್ ನೆಟ್ ಸೌಲಭ್ಯ ನೀಡುವುದು.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಇಷ್ಟು ದಿನಗಳ ಕಾಲ ವಿಮಾನ ಪ್ರಯಾಣದ ವೇಳೆ ಮೊಬೈಲ್ ಬಂದ್ ಮಾಡುತ್ತಿದ್ದ ಪ್ರಯಾಣಿಕರು ಇನ್ನು ಮುಂದೆ ಇಂಟರ್ ನೆಟ್ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಹಾಗಾದರೆ ಇಷ್ಟು ದಿನಗಳ ಕಾಲ ವಿಮಾನಗಳಲ್ಲಿ ಇಂಟರ್ ನೆಟ್ ಸೌಲಭ್ಯ ಇರಲಿಲ್ಲವೇ? ಇತ್ತು… ಆದರೆ ಕೇವಲ ವಿದೇಶಿ ವಿಮಾನಯಾನಕ್ಕೆ ಮಾತ್ರ ಸೀಮಿತವಾಗಿತ್ತು. ವಿದೇಶಿ ವಿಮಾನಯಾನಗಳಲ್ಲಿ 35 ಸಾವಿರ ಅಡಿಯಷ್ಟು ಎತ್ತರದಲ್ಲಿ ವಿಮಾನ ಹಾರಾಟ ನಡೆಸಿದರು ಪ್ರಯಾಣಿಕರಿಗೆ ಇಂಟರ್ ನೆಟ್ ಸೌಲಭ್ಯ ಒದಗಿಸಲಾಗುತ್ತಿತ್ತು. ಆದರೆ ವಿಮಾನಗಳು ಭಾರತದ ವಾಯು ಮಾರ್ಗದ ವ್ಯಾಪ್ತಿಗೆ ಪ್ರವೇಶಿಸುತ್ತಿದ್ದಂತೆ ಈ ಇಂಟರ್ ನೆಟ್ ಸೌಲಭ್ಯ ಬಂದ್ ಆಗುತ್ತಿತ್ತು. ಹೀಗಾಗಿ ಭಾರತದ ವಿಮಾನಯಾನಗಳಲ್ಲೂ ಪ್ರಯಾಣಿಕರಿಗೆ ಇಂಟರ್ ನೆಟ್ ಸೌಲಭ್ಯ ಒದಗಿಸುವುದಿರುವುದು ಹೊಸ ನಿರ್ಧಾರ.

ಪ್ರಯಾಣಿಕರಿಗೆ ಇಂಟರ್ ನೆಟ್ ಸೌಲಭ್ಯ ಒದಗಿಸುವುದರಿಂದ ವಿಮಾನಯಾನದ ಸಿಗ್ನಲ್ ಹಾಗೂ ಇಂಟರ್ ನೆಟ್ ಸಿಗ್ನಲ್ ನಡುವೆ ಸಂಘರ್ಷವಾಗುವ ಅಥವಾ ಜಾಮ್ ಆಗುವ ಸಾಧ್ಯತೆ ಬರವುದಿಲ್ಲವೇ? ಸದ್ಯ ಸಚಿವಾಲಯದ ಈ ನಿರ್ಧಾರದಿಂದ ಸಿಗ್ನಲ್ ಜಾಮ್ ನಂತಹ ಸಮಸ್ಯೆ ಎದುರಾಗುವುದಿಲ್ಲ. ಕಾರಣ, ವಿಮಾನಯಾನ ಸಂಪರ್ಕದ ಸಿಗ್ನಲ್ ಗಳೂ ಹಾಗೂ ಪ್ರಯಾಣಿಕರಿಗೆ ನೀಡಲಾಗುವ ಇಂಟರ್ ನೆಟ್ ಸೌಲಭ್ಯಗಳು ಪ್ರತ್ಯೇಕವಾಗಿರುತ್ತವೆ. ಪ್ರಯಾಣಿಕರಿಗೆ ಸ್ಯಾಟಲೈಟ್ ಗಳ ಮೂಲಕ ಇಂಟರ್ ನೆಟ್ ಸೌಲಭ್ಯ ಕಲ್ಪಿಸುವುದರಿಂದ ಅದು ವಿಮಾನಯಾನ ಸಂಪರ್ಕಕ್ಕೆ ತೊಂದರೆಯಾಗುವುದಿಲ್ಲ.

 ಇತ್ತೀಚಿನ ದಿನಗಳಲ್ಲಿ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇರುವುದರಿಂದ ತಮ್ಮ ಮೊಬೈಲ್ ಅನ್ನು ಏರೋಪ್ಲೇನ್ ಮೋಡ್ ನಲ್ಲಿ ಹಾಕಿದರೂ ವೈಫೈ ಮೂಲಕ ಇಂಟರ್ ನೆಟ್ ಸೌಲಭ್ಯ ಪಡೆಯಬಹುದಾಗಿದೆ. ಈ ಸೌಲಭ್ಯ ನೀಡುವ ಕುರಿತು ಕರಡು ಸಿದ್ಧವಾಗಿದ್ದು, ಈ ಯೋಜನೆಯಲ್ಲಿ ಕೇವಲ ಭಾರತದ ಸ್ಯಾಟಲೈಟ್ ಗಳನ್ನು ಮಾತ್ರ ಬಳಸಿಕೊಳ್ಳಲಾಗುವುದೇ ಅಥವಾ ವಿದೇಶಿ ಸ್ಯಾಟಲೈಟ್ ಗಳ ಸೌಲಭ್ಯಗಳನ್ನು ಪಡೆಯಲಾಗುವುದೇ ಎಂಬುದರ ಬಗ್ಗೆ ಇನ್ನಷ್ಟೇ ಸ್ಪಷ್ಟ ಚಿತ್ರಣ ಸಿಗಬೇಕಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

Leave a Reply