ಅವತ್ತು ಜಯಾ ಅಧಿಕಾರ ಪಡೆಯ ಹೋದಾಗಲೂ ಇಂಥದ್ದೇ ಅಧ್ಯಾಯ, ಚರಿತ್ರೆಯನ್ನು ನೆನಪಿಸಿದ ಪಳನಿ ವಿಶ್ವಾಸಮತ ವಿಜಯ

ಡಿಜಿಟಲ್ ಕನ್ನಡ ಟೀಮ್:

ಗದ್ದಲ… ಕೂಗಾಟ… ಜಗ್ಗಾಟಗಳ ನಡುವೆಯೂ ಶಶಿಕಲಾ ಬೆಂಬಲಿತ ಮುಖ್ಯಮಂತ್ರಿ ಇ.ಪಳನಿಸ್ವಾಮಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶನಿವಾರ ಬೆಳಗ್ಗೆ ಆರಂಭವಾದ ವಿಶೇಷ ಕಲಾಪದಲ್ಲಿ ಡಿಎಂಕೆ ಪಕ್ಷದ ಶಾಸಕರ ಗಲಾಟೆ ನಡೆಸಿದ ಕಾರಣದಿಂದ ಸ್ಪೀಕರ್ ಅವರು ಕಲಾಪವನ್ನು 1 ಗಂಟೆಗೆ ಮುಂದೂಡಿದರು. ಎರಡನೇ ಬಾರಿಗೆ ಕಲಾಪ ಆರಂಭವಾದ ಮೇಲೂ ಡಿಎಂಕೆ ಪಕ್ಷದ ನಾಯಕರು ತಮ್ಮ ಪಟ್ಟು ಬಿಡದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಡಿಎಂಕೆ ಪಕ್ಷದ ಶಾಸಕರನ್ನು ಸದನದಿಂದ ಉಚ್ಛಾಟಿಸಿ ಬಹುಮತ ಸಾಬೀತು ಪ್ರಕ್ರಿಯೆ ಮುಂದುವರೆಸಿದರು. ಆ ಮೂಲಕ ವಿರೋಧ ಪಕ್ಷದ ಶಾಸಕರನ್ನು ಹೊರಗಿಟ್ಟು ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಸಲಾಯಿತು. ಈ ವೇಳೆ 122 ಶಾಸಕರ ಬೆಂಬಲ ಪಡೆದ ಪಳನಿಸ್ವಾಮಿ ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿ ತಮಿಳುನಾಡಿನ ಮುಖ್ಯಮಂತ್ರಿಯಾದರು. ತಮಿಳುನಾಡಿನ ವಿಧಾನ ಸಭೆಯಲ್ಲಿ ಇಂದು ನಡೆದ ಎಲ್ಲ ವಿದ್ಯಮಾನಗಳು ರಾಷ್ಟ್ರ ಮಟ್ಟದಲ್ಲಿ ಗಮನವನ್ನು ಸೆಳೆಯಿತು.

ಸುದೀರ್ಘ ರಾಜಕೀಯ ನಾಟಕಗಳ ನಂತರ ಬಹುಮತ ಸಾಬೀತು ಯಶಸ್ವಿಯಾಗಿದ್ದರೂ ಇಂದು ನಡೆದ ವಿದ್ಯಮಾನಗಳು ತಮಿಳುನಾಡು ರಾಜಕೀಯದ ಇತಿಹಾಸದ ಪುಟಗಳು ಹಾಗೂ ಜಯಲಲಿತಾ ಅವರ ರಾಜಕೀಯದ ಆರಂಭಿಕ ದಿನಗಳನ್ನು ನೆನಪಿಸಿದವು. ಕಾರಣ, 30 ವರ್ಷಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂಜಿಆರ್ ಅವರು ಸತ್ತ ನಂತರ ನಡೆದ ರಾಜಕೀಯ ವಿದ್ಯಮಾನಗಳಿಗೂ, ಇಂದಿನ ವಿದ್ಯಮಾನಕ್ಕೂ ಸಾಕಷ್ಟು ಸಾಮ್ಯತೆಗಳಿವೆ.

1988ರಲ್ಲಿ ಎಂಜಿಆರ್ ಅವರು ಸತ್ತ ನಂತರ ಅವರ ಪತ್ನಿ ಜಾನಕಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಎಲ್ಲ ರೀತಿಯ ಪ್ರಯತ್ನ ಪಟ್ಟರು. ಆಗ ಎಐಎಡಿಎಂಕೆ ಪಕ್ಷದ ಬಂಡಾಯ ವರ್ಗದ ನಾಯಕಿಯಾದ ಜಯಲಲಿತಾ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಅಂದು ಸ್ಪೀಕರ್ ಆಗಿದ್ದ ಪಿ.ಎಚ್.ಪಂಡಿಯನ್ ಅವರು ಜಾನಕಿ ಪರವಾಗಿದ್ದರು. ಆದರೆ ಒಟ್ಟಾರೆ ಬೆಂಬಲ ಮಾತ್ರ ಜಯಲಲಿತಾ ಅವರ ಬೆನ್ನಿಗಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ಜಾನಕಿ ಹಾಗೂ ಜಯಲಲಿತಾ ಅವರ ನಡುವೆ ಪೈಪೋಟಿ ಬಿದ್ದ ಕಾರಣ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಯಿತು.

ಇಂದು ವಿಧಾನಸಭೆಯಲ್ಲಿ ನಡೆದ ಗದ್ದಲದಂತೆ ಅಂದು ಸಹ ವಿಶ್ವಾಸ ಮತಯಾಚನೆ ಪ್ರಕ್ರಿಯೆಯಲ್ಲಿ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಜಯಲಲಿತಾ ಪರ ಶಾಸಕರು ಹಾಗೂ ಕೆಲವು ಕಾಂಗ್ರೆಸ್ ನಾಯಕರು ಸ್ಪೀಕರ್ ವಿರುದ್ಧ ಪ್ರತಿಭಟನೆ ನಡೆಸಿದರು. ಹೀಗಾಗಿ ಆಗಿನ ಸ್ಪೀಕರ್ ಪಂಡಿಯನ್ ಅವರು ಪ್ರತಿಭಟನಾನಿರತ ನಾಯಕರನ್ನು ಹೊರಹಾಕಿ ಜಾನಕಿ ಅವರಿಗೆ 97 ಶಾಸಕರ ಬೆಂಬಲವಿರುವುದಾಗಿ ನಿರ್ಧರಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟರು.

ವಿಧಾನಸಭೆಯಲ್ಲಿನ ಬೆಳವಣಿಗೆಗಳ ವಿರುದ್ಧ ಸಿಡಿದೆದ್ದ ಜಯಲಲಿತಾ ರಾಜ್ಯಪಾಲರ ಬಳಿ ದೂರು ನೀಡಿದರು. ಜಯಲಲಿತಾ ಅವರ ದೂರನ್ನು ಪರಿಶೀಲಿಸಿದ ನಂತರ ರಾಜ್ಯಪಾಲರು ಜಾನಕಿ ಅವರ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದರು.

ಆಗ ಎದುರಾದ ಚುನಾವಣೆ ಜಯಲಲಿತಾ ಅವರ ರಾಜಕೀಯ ಪಯಣಕ್ಕೆ ಮಹತ್ವದ ತಿರುವುಕೊಟ್ಟಿತು. ಆ ಚುನಾವಣೆಯಲ್ಲಿ ಜಾನಕಿ ಅವರ ಬಣ ಕೇವಲ 2 ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿತು. ಅಷ್ಟೇ ಅಲ್ಲದೆ ಚುನಾವಣೆಯಲ್ಲಿ ಜಾನಕಿ ಅವರು ಹೀನಾಯ ಸೋಲನುಭವಿಸಿದರು. ಇತ್ತ ಜಯಲಲಿತಾ ಅವರ ಬಣ 27 ಕ್ಷೇತ್ರಗಳಲ್ಲಿ ಗೆಲ್ಲುವುದರ ಜತೆಗೆ, ಜಯಲಲಿತಾ ಅವರು ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾದರು. ನಂತರ ಜಾನಕಿ ಅವರು ರಾಜಕೀಯದಿಂದ ನಿವೃತ್ತಿ ಪಡೆದ ಬೆನ್ನಲ್ಲೇ ಎರಡು ಬಣಗಳು ಒಂದಾದವು.

ಇಂದು ನಡೆದ ವಿಧಾನಸಭೆಯಲ್ಲಿನ ಗದ್ದಲ 1988ರ ಘಟನೆಯನ್ನು ಕಣ್ಮುಂದೆ ಮರುಕಳಿಸುವಂತೆ ಮಾಡಿದ್ದು, ಇಂದಿನ ಕಲಾಪದಲ್ಲಿ ಸ್ಪೀಕರ್ ಧನರಾಜ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಲ್ಲದೆ ರಾಜಭವನದ ಬಳಿ ತಮ್ಮ ನಾಯಕರ ಜತೆಗೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಇತ್ತ ಮುಂಬೈ ಪ್ರವಾಸ ಮಾಡಬೇಕಿದ್ದ ರಾಜ್ಯಪಾಲರಾದ ವಿದ್ಯಾಸಾಗರ್ ರಾವ್ ತಮ್ಮ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿದ್ದಾರೆ.

ಇನ್ನು ಇಂದಿನ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಬಗ್ಗೆ ಎಐಎಡಿಎಂಕೆ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪ್ರತಿಕ್ರಿಯೆ ನೀಡಿದ್ದು, ‘ವಿಶ್ವಾಸ ಮತಯಾಚನೆ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರುದ್ಧವಾಗಿ ಸಾಗಿದೆ. ನನ್ನ ಹೋರಾಟ ಮುಂದುವರಿಯುತ್ತದೆ. ಮತ್ತೆ ಅಮ್ಮಾ ಸರ್ಕಾರವನ್ನು ಸ್ಥಾಪಿಸುತ್ತೇನೆ. ಈ ವಿಚಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇನೆ’ ಎಂದಿದ್ದಾರೆ.

ಒಟ್ಟಿನಲ್ಲಿ ವಿಶ್ವಾಸಮತಯಾಚನೆಯ ನಂತರ ತಮಿಳುನಾಡಿನ ರಾಜಕೀಯ ನಾಟಕಕ್ಕೆ ತೆರೆ ಬೀಳಲಿದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಈ ಹೈಡ್ರಾಮಾ ಮತ್ತೊಂದು ತಿರುವು ಪಡೆದುಕೊಂಡಿದೆ.

Leave a Reply