ಪ್ಲಾಸ್ಟಿಕ್ ರಾಶಿ ಎತ್ತಲು ಸಮುದ್ರ ಮಂಥನ- ನರಕದಿಂದ ಪಾರಾಗಬಲ್ಲವೆ ಸಾಗರಜೀವಿಗಳು?

author-ananthramuನೀವು ಈ ಸಂಗತಿಯನ್ನು ಓದಿರುತ್ತೀರಿ ಇಲ್ಲವೇ ಮಾಧ್ಯಮಗಳ ಮೂಲಕ ನೋಡಿರುತ್ತೀರಿ. ಉತ್ತರ ಪೆಸಿಫಿಕ್ ಸಾಗರ ಮಧ್ಯ ಭಾಗದಲ್ಲಿ ಸಾಗರವೇ ಮುನಿದಿದೆ. ವಾಷಿಂಗ್ ಮೆಷಿನ್ನಿನಲ್ಲಿ ಬಟ್ಟೆ ಸುತ್ತುವಂತೆ, ಅಲ್ಲಿ ಸಾಗರದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಸುತ್ತುತ್ತಿವೆ. ಇದೇನೂ ನಿನ್ನೆ ಮೊನ್ನೆಯ ಸುದ್ದಿಯಲ್ಲ, ಮೂರು ದಶಕಗಳ ಹಿಂದಿನದು. ಈಗಲೂ ಸುಳಿ ಸುತ್ತುತ್ತಲೇ ಇದೆ, ಅದು ಹಿಡಿದು ಗಿರಿಗಿಟ್ಟಲೆ ತಿರುಗಿಸಿರುವ ಪ್ಲಾಸ್ಟಿಕ್ ಚೂರುಗಳ ವ್ಯಾಪ್ತಿ ಎಷ್ಟಿದೆಯೆಂದರೆ ಅಮೆರಿಕ ಸಂಯುಕ್ತ ಸಂಸ್ಥಾನದ ಎರಡು ಪಟ್ಟು. ಇದೇನೂ ಸಂತಸಪಡುವ ವಿಚಾರವಲ್ಲ. 1995ರಲ್ಲೇ ಈ ಭಾಗದಲ್ಲಿ ಹಾಯುತ್ತ ಬೋಟ್ ರೇಸಿನಲ್ಲಿ ಗೆದ್ದು ಹಿಂದಿರುಗುವಾಗ ಸ್ಪರ್ಧಾಳು ಒಬ್ಬ ನಿಟ್ಟುಸಿರುಬಿಟ್ಟಿದ್ದ. `ಅಬ್ಬಬ್ಬಾ ಬಚಾವಾದೆನಲ್ಲಾ’ ಎಂದು ಉದ್ಗರಿಸಿದ್ದ, ಅದೇ ಹೊತ್ತಿಗೆ ಜಗತ್ತಿನ ಗಮನ ಸೆಳೆದ.

ನಾವು ಪ್ಲಾಸ್ಟಿಕ್ ಯುಗವನ್ನು ಪ್ರವೇಶಿಸಿರುವುದರ ಜೀವಂತ ಸಾಕ್ಷಿ ಅದು. ತೆಳುವಾದ ಪ್ಲಾಸ್ಟಿಕ್ ಪಾರದರ್ಶಕ, ಸಣ್ಣ ಸಣ್ಣ ಚೂರಾಗಿ ನೀರಿನಲ್ಲಿ ತೇಲುತ್ತಿದ್ದರೂ ಅದು ಸುಲಭವಾಗಿ ಕಾಣದು. ಸ್ಪಷ್ಟವಾಗಿ ಗುರುತಿಸಲು ಉಪಗ್ರಹಗಳು ಕೂಡ ಸೋತಿವೆ. ಇದನ್ನೆಲ್ಲ ಗುಡಿಸಿ ಗುಡ್ಡೆ ಹಾಕಲು ಸಾಧ್ಯವೆ? ಅದೂ ಅಮೆರಿಕಕ್ಕಿಂತ ಎರಡು ಪಟ್ಟು ದೊಡ್ಡದಾದ ಸಾಗರ ಭಾಗದಲ್ಲಿ?  ಇದು ಭಾರಿ ಸವಾಲಿನ ಕೆಲಸ. ಹೊಲಸು ಮಾಡಿರುವ ಅನೇಕ ದೇಶಗಳಿಗಂತೂ ಗುಡಿಸುವ ಮನಸ್ಸಿದೆ. ಆದರೆ ಮಾರ್ಗ ಇನ್ನೂ ಅಸ್ಪಷ್ಟ. ಇದು ಒಂದು ದೇಶಕ್ಕೆ ಸೀಮಿತವಾದ ಪಾಪದ ರಾಶಿಯಲ್ಲ. ಕಡಲನ್ನು ಹಂಚಿಕೊಂಡಿರುವ ಎಲ್ಲ ದೇಶಗಳ ಕಾಣಿಕೆ. ನದಿಗಳು ಹೊತ್ತು ತಂದ ವೈವಿಧ್ಯಮಯ ಪ್ಲಾಸ್ಟಿಕ್ ಪದಾರ್ಥಗಳ ಪ್ರದರ್ಶನಕ್ಕೆ ಸಾಗರವೇ ಷೋರೂಂ ಆಗಿದೆ.

ಇದು ಒಂದು ದೃಶ್ಯವಾದರೆ, ಇನ್ನೊಂದು ಫಿಲಂಗೆ ಸಂಬಂಧಪಟ್ಟಿದ್ದು. `ಪ್ಲಾಸ್ಟಿಕ್ ಓಷನ್’ ಎನ್ನುವ ಫಿಲಂ 2013ರಲ್ಲೇ ಬಿಡುಗಡೆಯಾಗಿ ಭಯಂಕರ ಸನ್ನಿವೇಶಗಳನ್ನು ಜಗತ್ತಿಗೆ ತೋರಿಸಿತ್ತು. ನಾಲ್ಕು ವರ್ಷಗಳ ಕಾಲ ಎಲ್ಲ ಸಾಗರಗಳಲ್ಲೂ ಅಲೆದು, ಇಪ್ಪತ್ತು ಬೇರೆ ಬೇರೆ ಭಾಗಗಳಲ್ಲಿ ತೆಗೆದ ಫಿಲಂ ಇದು. ಕ್ಯಾಮೆರಾಮೆನ್ ಪ್ರತಿಬಾರಿಯೂ ಬೆಚ್ಚಿದ್ದನಂತೆ. `ನಾವಿರುವುದು ಒಂದೇ ತಲೆಮಾರಿನಲ್ಲಿ ಪರಿಹಾರ ಕಾಣಲು. ಈ ಚಿತ್ರವನ್ನು ಪ್ರತಿ ಶಾಲಾ ವಿದ್ಯಾರ್ಥಿಯೂ ನೋಡಬೇಕು, ಪ್ರತಿ ಸಮುದಾಯವೂ ನೋಡಬೇಕು’ ಎನ್ನುವುದು ಈ ಅವಾರ್ಡ್ ಫಿಲಂ ನಿರ್ಮಾಣ ಮಾಡಿರುವ  ಜೋ ರಕ್ಸೆಟ್ ಕಳಕಳಿ. ದಕ್ಷಿಣ ಫ್ರಾನ್ಸಿನ ಮಾರ್ಸಿಲೇ ಎಂಬ ಬಂದರಿನ ಸಮೀಪ ಹೆಚ್ಚಿನ ಭಾಗದ ಷೂಟಿಂಗ್ ಆಗಿದೆ. ಇತಿಹಾಸ ಕಾಲದಿಂದಲೂ ಇದು ಸಾರಿಗೆ ಮಾರ್ಗ. ಅಷ್ಟೇ ಕಲುಷಿತ. ಇಲ್ಲಿಂದ ಒಂದು ಕಿಲೋಮೀಟರ್ ಸಾಗರ ತಳದಲ್ಲಿ ಮುಳುಗು ಹಾಕಿದ ಕ್ಯಾಮೆರಾಮೆನ್ ಕಂಡದ್ದು ದಪ್ಪ ನೀರಿನ ಬಾಟಲ್, ಹೆಲ್ಮೆಟ್, ನೈಲಾನ್ ಹಗ್ಗ, ಸಿಡಿಯದ ಬಾಂಬು, ವಾಹನಗಳ ಟೈರು, ಹಳೆಯ ಪ್ಯಾರಾಚೂಟ್. ಇಂತಹವುಗಳ ಮಧ್ಯೆ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಕಡಲಜೀವಿಗಳು.

plasticjunknets1

ಫಿಲಂ ಮಾಡಲು ಜೋ ರಕ್ಸೆಟ್‍ಗೆ ಪ್ರೇರಣೆ ಬಂದದ್ದಾದರೂ ಹೇಗೆ? ಪ್ಲಾಸ್ಟಿಕ್ ಮಾಡುತ್ತಿರುವ ರಾದ್ಧಾಂತವನ್ನು ಬಹಿರಂಗಗೊಳಿಸುವಷ್ಟು ಸಾಗರ ಹೊಲಸಾಗಿತ್ತು. ವರ್ಷದಲ್ಲಿ ಜಗತ್ತಿನಾದ್ಯಂತ 300 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಗಳು ಹೊರಬರುತ್ತವೆ. ಈ ಪೈಕಿ ಶೇ.10 ಭಾಗ ನದಿಗಳ ಮೂಲಕ ಅಥವಾ ಬೀಚ್‍ಗಳ ಮೂಲಕ ಸಾಗರದ ಒಡಲನ್ನು ಸೇರುತ್ತವೆ. ಸದ್ಯದಲ್ಲಿ ಸಾಗರದ ತೇಲುಸಸ್ಯಗಳ ಅರ್ಧ ಪ್ರಮಾಣದಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಾಗರ ಸೇರಿದೆ. ಆಘಾತಕರ ವಿಚಾರವೆಂದರೆ ಸಾಗರ ಆಹಾರ ಸೇವಿಸುವವರು ತಮಗರಿವಿಲ್ಲದೆ ಪ್ರತಿವರ್ಷ ಹನ್ನೊಂದು ಸಾವಿರ ಅತಿಸೂಕ್ಷ್ಮ ಪ್ಲಾಸ್ಟಿಕ್ ಚೂರನ್ನು ತಮ್ಮ ಒಡಲಿಗೂ ಸೇರಿಸಿಕೊಂಡಿರುತ್ತಾರೆ ಎನ್ನುವುದು. ಬಿ.ಬಿ.ಸಿ.ಗಾಗಿ `ಬ್ಲೂ ಪ್ಲಾನೆಟ್’ ಎಂಬ ಚಿತ್ರ ಮಾಡಿರುವ ಜೋ, ಈಗ ಕಂಗೆಟ್ಟಿದ್ದಾಳೆ. `ನೀವು ಯಾವುದೇ ಸಾಗರ ಭಾಗಕ್ಕೆ ಚಿತ್ರೀಕರಣ ಮಾಡಲು ಹೋದರೂ, ಮೊದಲ ಮೂರು ನಾಲ್ಕು ಗಂಟೆ ನೀರನ್ನು ಕ್ಲೀನ್ ಮಾಡಿಯೇ ಶುರುಮಾಡಬೇಕು’ ಎನ್ನುತ್ತಾಳೆ.

ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ. ಅದೇ ಸಮಸ್ಯೆ ಈಗ ದೊಡ್ಡದಾಗಿ ಚರ್ಚೆಯಾಗುತ್ತಿದೆ. ಸಂಶೋಧಕರು ಗಂಭೀರವಾಗಿ ಶೋಧನೆ ಮಾಡುತ್ತಿದ್ದಾರೆ. ಇಂಗ್ಲೆಂಡಿನ ವಾರ್ವಿಕ್ ವಿಶ್ವವಿದ್ಯಾಲಯ ಒಂದು ಪ್ರಯೋಗ ಮಾಡುತ್ತಿದೆ. ನಿರ್ದಿಷ್ಟ ಶಾಖದಲ್ಲಿ ಪ್ಲಾಸ್ಟಿಕ್ಕನ್ನು ಒಡೆದು ಅಣುಮಟ್ಟಕ್ಕೆ ತರುವುದು. ಹೀಗೆ ಮಾಡುತ್ತ ತಜ್ಞರು ಅದರಿಂದ ತೈಲ ಪಡೆಯುವ ಹಂತವನ್ನು ಸಾಧಿಸಿದ್ದಾರೆ. ಇದನ್ನೇನೂ ಆಶಾದಾಯಕ ಎನ್ನುವಂತಿಲ್ಲ. ಹೊಸ ಪ್ಲಾಸ್ಟಿಕ್ಕನ್ನೂ ತಯಾರಿಸಬಹುದು. ಆದರೆ ಇವು ಎಂದೂ ಆದ್ಯತೆಯಾಗಬೇಕಾಗಿಲ್ಲ. ಸ್ವೀಡನ್ನಿನಲ್ಲಿ ಇನ್ನೊಂದು ವಿಶೇಷ ಪ್ರಯೋಗ ಮಾಡಲಾಗಿದೆ. ಈ ನಗರದಲ್ಲಿ ಉತ್ಪಾದನೆಯಾಗುವ ಎಲ್ಲ ಪ್ಲಾಸ್ಟಿಕ್ಕನ್ನು ಚೂರೂ ಬಿಡದ ಹಾಗೆ ಪ್ರತಿದಿನವೂ ಮೆಷಿನ್ ಬಾಯಿಗೆ ಕೊಡುವುದು. ಇಲ್ಲೂ ಕೂಡ ತೈಲ ಉತ್ಪಾದನೆಗಿಂತ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಿಸುವ ತಂತ್ರ. ಎಲ್ಲೆಲ್ಲಿ ಪ್ಲಾಸ್ಟಿಕ್ ಅವಾಂತರ ಸಾಗರದಲ್ಲಿ ಹೆಚ್ಚಾಗಿದೆಯೋ, ಅಲ್ಲಿ ಹೀರುವ ಪಂಪ್ ಬಳಸಿ ಪ್ಲಾಸ್ಟಿಕ್ ಸಂಗ್ರಹಮಾಡುವ ತಂತ್ರಕ್ಕೂ ಈಗ ಹೆಚ್ಚು ಗಮನಬಂದಿದೆ. ಒಂದು ಸಮಸ್ಯೆಯೆಂದರೆ ಗೃಹಮೂಲದಿಂದ ಬರುವ ಶೇ. 12 ಭಾಗ ತ್ಯಾಜ್ಯವನ್ನು ರೀಸೈಕ್ಲಿಂಗ್ ಮಾಡಬಹುದು ಅಷ್ಟೇ. ಅಮೆರಿಕದ ನೌಕಾಪಡೆ, ಹಡಗಿನಲ್ಲಿ ಪ್ರಯಾಣಿಕರು ಬಿಸುಡುವ, ಸಿಬ್ಬಂದಿಗಳು ರಾಶಿಹಾಕುವ ಪ್ಲಾಸ್ಟಿಕ್ಕನ್ನು ಗುಡ್ಡೆಮಾಡಿ, ಅದು ಇಂಧನ ತಯಾರಿಕೆಗೆ ಕೈಹಾಕಿದೆ.

ಜರ್ಮನಿ, ಪ್ಲಾಸ್ಟಿಕ್ ನಿರ್ವಹಣೆಯ ವಿಚಾರದಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ. ಬಳಕೆದಾರರೇ ಅದನ್ನು ನಿರ್ವಹಿಸಬೇಕು. ಪ್ಲಾಸ್ಟಿಕ್ ಬಾಟಲಿಗಳ ಮೇಲೆ ಬಾರ್ ಕೋಡ್ ಅಂಟಿಸಿರುವುದರಿಂದ ಮೂಲ ಉತ್ಪಾದನಾ ಕಂಪನಿಗಳಿಗೆ ಹಿಂತಿರುಗಿಸುವುದು ಸುಲಭ. ಇನ್ನೂ ಒಂದು ಕಹಿಸತ್ಯವಿದೆ. ಜಗತ್ತಿನಾದ್ಯಂತ ಪ್ರತಿವರ್ಷ ಒಂದು ಟ್ರಿಲಿಯನ್ ಟನ್ (1,000,000,000,000=1012) ಪ್ಲಾಸ್ಟಿಕ್ ಚೀಲಗಳು ಉತ್ಪಾದನೆಯಾಗುತ್ತಿವೆ. ಅವುಗಳ ಬಳಕೆ ಕೇವಲ ಹನ್ನೆರಡು ನಿಮಿಷ ಅಷ್ಟೇ ಎನ್ನುತ್ತದೆ ಒಂದು ಸಮೀಕ್ಷೆ. ಸಾಗರ ಪಕ್ಷಿಗಳಲ್ಲಿ ಹತ್ತರಲ್ಲಿ ಒಂಬತ್ತು ಪಕ್ಷಿಗಳ ಒಡಲಿನಲ್ಲಿ ಪ್ಲಾಸ್ಟಿಕ್ ರಾಶಿಯೇ ಕೂತಿರುತ್ತದೆ. ಆಲ್ಬೆಟ್ರಾಸ್ ಎಂಬ ದೂರ ಹಾರುವ ಸಾಗರ ಪಕ್ಷಿಯ ಹೊಟ್ಟೆಯೊಂದರಲ್ಲೇ ಎಂಟು ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ಇರುವುದನ್ನು ನೋಡಿ ಪಕ್ಷಿತಜ್ಞರು ಬೆಚ್ಚಿದ್ದಾರೆ.

plastic-island-2

‘ಮಿಡ್ ವೇ ಅಟಾಲ್’ ಎಂಬ ಪ್ರಶಾಂತ ದ್ವೀಪವೊಂದು ಉತ್ತರ ಪೆಸಿಫಿಕ್ ಸಾಗರದಲ್ಲಿ ನೆಲೆಯಾಗಿದೆ. ಅಲ್ಲಿ ಯಾರೂ ನೆಲೆಸಿದಂತಿಲ್ಲ. ಆದರೆ ಅದರ ತೀರದಲ್ಲಿ ಮೋಟಾರ್ ಸೈಕಲ್‍ನ ಹೆಲ್ಮೆಟ್ ಬಿದ್ದಿರುವುದನ್ನು, ಕೊಡೆಯ ಹಿಡಿಗಳು ಬಿದ್ದಿರುವುದನ್ನೂ ಇಂಥ ಇನ್ನೂ ನೂರಾರು ಪದಾರ್ಥಗಳನ್ನು ಸಮೀಕ್ಷೆ ಮಾಡುವವರು ಕಂಡಿದ್ದಾರೆ. ಇವು ಯಾವೂ ಆಕಾಶದಿಂದ ಬಿದ್ದ ಪದಾರ್ಥಗಳಲ್ಲ. ಸಾಗರ ಅಲೆಗಳು ತಂದು ಒಂದು ಕಡೆ ಜಮಾಮಾಡಿವೆ ತಮ್ಮ ಶಕ್ತಿ ಕುಂದಿದಾಗ. ಈ ಅಧ್ವಾನಕ್ಕೆ ತಜ್ಞರು ಕೈಮಾಡಿ ತೋರಿಸುತ್ತಿರುವುದು ಚೀನ ಮತ್ತು ಅಮೆರಿಕದ ಕಡೆಗೆ.

ಈಗಲೂ ಸಾಗರ ತಳ ಸೇರಿರುವ ಪ್ಲಾಸ್ಟಿಕ್ಕನ್ನು ನಿಭಾಯಿಸಲು ಜಾಗತಿಕ ಮಟ್ಟದ ಚಿಂತನೆ ಆಗಬೇಕು. ಪ್ಲಾಸ್ಟಿಕ್ ಹೂಳನ್ನು ಯಂತ್ರಗಳಿಂದ ಎತ್ತಬಹುದು ನಿಜ. ಯಾರು ಮಾಡಬೇಕು? ಅದಕ್ಕಾಗಿಯೇ ಒಂದು ಅಂತಾರಾಷ್ಟ್ರೀಯ ನೀತಿಯನ್ನು ರೂಪಿಸಬೇಕಾಗುತ್ತದೆ. ಇದು ಜಾಗತಿಕ ಸಮಸ್ಯೆ ಎಂದು ಬಿಡುಬೀಸಾಗಿ ಮಾತನಾಡಿ ಕೈಕಟ್ಟಿ ಕೂರುವಂತಿಲ್ಲ. ಇದು ಜಾಗತಿಕ ಸಮಸ್ಯೆ ಎಂದರೆ, ಆ ಜಗತ್ತಿನಲ್ಲೇ ತಾನೇ ನಾವೆಲ್ಲ ಇರುವುದು? ಪ್ಲಾಸ್ಟಿಕ್ ನಿಂದ ತೈಲ ಪಡೆಯುವುದು ಒಂದು ತಾತ್ಕಾಲಿಕ ಪರಿಹಾರವಾದರೂ, ಅದು ಶಾಶ್ವತ ಪರಿಹಾರವಲ್ಲ. ಮೊದಲು ಸಾಗರಮಂಥನವಾಗಬೇಕು, ಪ್ಲಾಸ್ಟಿಕ್ ಪಾಪರಾಶಿಯನ್ನು ಎಳೆದು ತರಬೇಕು. ಸಂಕಟದಿಂದ ಸಾಗರಜೀವಿಗಳನ್ನು ಪಾರುಮಾಡಬೇಕು.

Leave a Reply