ಮುಂದುವರಿದ ತಮಿಳುನಾಡು ರಾಜಕೀಯ ಹೈಡ್ರಾಮಾ, ವಿಶ್ವಾಸ ಮತಯಾಚನೆ ವೇಳೆ ಸ್ಪೀಕರ್ ಗೆ ಅಗೌರವ, ಗದ್ದಲದಲ್ಲಿ ಕುರ್ಚಿ- ಮೇಜುಗಳಿಗೆ ಹಾನಿ

ತಮಿಳುನಾಡು ವಿಧಾನಸಭೆ ಸ್ಪೀಕರ್ ಧನಪಾಲ್ ಅವರನ್ನು ಡಿಎಂಕೆ ಪಕ್ಷದ ಶಾಸಕರು ಎಳೆಯುವ ಪ್ರಯತ್ನ ಮಾಡುತ್ತಿರುವುದು…

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ರಾಜಕೀಯ ಹೈಡ್ರಾಮಾ ಶನಿವಾರವೂ ಮುಂದುವರಿದಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ವಿಶ್ವಾಸಮತಯಾಚನೆ ಪ್ರಕ್ರಿಯೆ ಗದ್ದಲಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ. ಇದರೊಂದಿಗೆ ತಮಿಳುನಾಡು ರಾಜಕೀಯ ಬೆಳವಣಿಗೆ ಕೀಳುಮಟ್ಟಕ್ಕೆ ಸಾಗುತ್ತಿರುವುದು ಸ್ಪಷ್ಟವಾಗಿದೆ.

ಸುಮಾರು ಒಂದು ತಿಂಗಳಿನಿಂದ ತಮಿಳುನಾಡಿನ ರಾಜಕೀಯ ಬಿಕ್ಕಟ್ಟಿಗೆ ಇಂದಿನ ವಿಶ್ವಾಸ ಮತಯಾಚನೆ ತೆರೆ ಎಳೆಯುವ ನಿರೀಕ್ಷೆ ಇತ್ತು. ಕಳೆದ 30 ವರ್ಷಗಳಲ್ಲಿ ಮೊದಲ ಬಾರಿಗೆ ತಮಿಳುನಾಡಿನಲ್ಲಿ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಲಾಪ ವಿಶೇಷ ಮಹತ್ವ ಪಡೆದುಕೊಂಡಿತ್ತು.

ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾಗಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷ ಡಿಎಂಕೆ ನಾಯಕ ಸ್ಟಾಲಿನ್, ಎಐಎಡಿಎಂಕೆ ಪಕ್ಷದ ಓ.ಪನ್ನೀರ್ ಸೆಲ್ವಂ ಅವರು ಈ ವಿಶ್ವಾಸ ಮತಯಾಚನೆಯನ್ನು ಮುಂದೂಡಬೇಕು. ಅಷ್ಟೇ ಅಲ್ಲದೆ ರಹಸ್ಯ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ಸ್ಪೀಕರ್ ಮುಂದೆ ಇಟ್ಟರು. ಈ ವೇಳೆ ಸ್ಪೀಕರ್ ಮನವಿ ಒಪ್ಪಂದ ಹಿನ್ನೆಲೆಯಲ್ಲಿ ಡಿಎಂಕೆ ಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸಿದರು. ಆಗ ಪ್ರತಿಭಟನೆಗೆ ಮುಂದಾದ ಡಿಎಂಕೆ ಶಾಸಕರು ಸದನದ ಬಾವಿಗಿಳಿದು ಆಕ್ಷೇಪ ವ್ಯಕ್ತಪಡಿಸಿದರು. ಕಾಗದ ಪತ್ರಗಳನ್ನು ಸ್ಪೀಕರ್ ಕಡೆಗೆ ಎಸೆದರು. ಸದನದ ಕುರ್ಚಿ ಮೇಜುಗಳನ್ನು ಮುರಿದು ತೀವ್ರ ಮಟ್ಟದಲ್ಲಿ ಗದ್ದಲ ಸೃಷ್ಟಿಸಿದರು. ಈ ವೇಳೆ ಸ್ಪೀಕರ್ ಧನಪಾಲ್ ಅವರ ಬಳಿ ಹೋಗಿ ಅವರನ್ನು ಎಳೆದಾಡಲು ಮುಂದಾದರು. ಆಗ ತಕ್ಷಣವೇ ಮಧ್ಯಪ್ರವೇಶಿಸಿದ ಸದನದ ಮಾರ್ಷಲ್ ಗಳು ಸ್ಪೀಕರ್ ಅವರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆದೊಯ್ದರು. ಸ್ಪೀಕರ್ ಅವರು ಹೊರಹೋಗುತ್ತಿದ್ದಂತೆ ಡಿಎಂಕೆ ಶಾಸಕರು ಸ್ಪೀಕರ್ ಅವರ ಕುರ್ಚಿಯನ್ನು ಆಕ್ರಮಿಸಿಕೊಂಡು ಅಪಮಾನ ಮಾಡಿದರು.

ಹೀಗೆ ವಿಶ್ವಾಸ ಮತಯಾಚನೆ ಪ್ರಕ್ರಿಯೆ ವೇಳೆ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು. ವಿಶ್ವಾಸ ಮತಯಾಚನೆ ವೇಳೆ ಮಾಧ್ಯಮಗಳಿಗೆ ನಿಷೇಧ ಹೇರಲಾಗಿದ್ದು, ಕಲಾಪದಲ್ಲಿ ಎಲ್ಲವೂ ಸಿನಿಮೀಯ ರೀತಿಯಲ್ಲಿ ವಿದ್ಯಮಾನಗಳು ನಡೆದವು. ಈ ಗದ್ದಲದಲ್ಲಿ ಸದನದ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ವಿಶ್ವಾಸ ಮತ ಯಾಚನೆಗೂ ಮುನ್ನ ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಸಚಿವ ಸಂಪುಟದ ಪಟ್ಟಿಯನ್ನು ನೀಡಿದರು. ಈ ವೇಳೆ ಸಚಿವರ ಪಟ್ಟಿಯಲ್ಲಿ ಶಶಿಕಲಾ ಅವರ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಅವರ ಹೆಸರಿದ್ದು, ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿದರು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ಬಂದಿವೆ.

ಒಟ್ಟಿನಲ್ಲಿ ತಮಿಳುನಾಡಿನ ರಾಜಕೀಯ ನಾಟಕಗಳು ದಿನೇ ದಿನೇ ಕೆಳಮಟ್ಟಕ್ಕೆ ಇಳಿಯುತ್ತಿದ್ದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅವಮಾನ ಎಂದೇ ಪರಿಗಣಿಸಲಾಗುತ್ತಿದೆ.

Leave a Reply