ತಮಿಳುನಾಡಾಯ್ತು ಈಗ ನಾಗಾಲ್ಯಾಂಡಿನಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ರೆಸಾರ್ಟ್ ರಾಜಕೀಯ ಪರ್ವ, ರಾಜಕೀಯವಷ್ಟೇ ಅಲ್ಲ ಇಲ್ಲಿರೋದು ಸಾಮಾಜಿಕ ಸಂಘರ್ಷ

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಾಯಿತು, ಈಗ ನಾಗಾಲ್ಯಾಂಡಿನಲ್ಲಿ ರೆಸಾರ್ಟ್ ರಾಜಕೀಯದ ಸರದಿ. ಮುಖ್ಯಮಂತ್ರಿ ಬದಲಾಗಬೇಕು ಎಂಬುದೇ ಮುಖ್ಯ ವಿಷಯ.

ನಾಗಾಲ್ಯಾಂಡಿನಲ್ಲಿ ಅಧಿಕಾರದಲ್ಲಿರುವುದು ‘ನಾಗಾ ಪೀಪಲ್ಸ್ ಫ್ರಂಟ್’ (ಎನ್ಪಿಎಫ್) ನೇತೃತ್ವದ ಸರ್ಕಾರ. 49 ಶಾಸಕ ಬಲದ ಎನ್ಪಿಎಫ್ ನೊಂದಿಗೆ ಬಿಜೆಪಿಯ 4 ಹಾಗೂ ಸ್ವತಂತ್ರ ಅಭ್ಯರ್ಥಿಗಳ ಪೈಕಿ 7 ಶಾಸಕರು ಮೈತ್ರಿಕೂಟ ಸರ್ಕಾರದಲ್ಲಿದ್ದಾರೆ. ಈ ಪೈಕಿ ಎನ್ಪಿಎಫ್ ನ 40 ಶಾಸಕರು ಶುಕ್ರವಾರ ರಾತ್ರಿಯೇ ರಾಜ್ಯ ಬಿಟ್ಟು ಪಕ್ಕದ ಅಸ್ಸಾಮಿನ ಕಾಜಿರಂಗ ರೆಸಾರ್ಟಿಗೆ ಹೋಗಿ ತಂಗಿದ್ದಾರೆ. ಶನಿವಾರ ಸುದೀರ್ಘ ಸಭೆಯನ್ನೂ ನಡೆಸಿರುವ ಅವರೆಲ್ಲರ ಆಗ್ರಹ- ‘ಮುಖ್ಯಮಂತ್ರಿ ಟಿ ಆರ್ ಜೈಲಾಂಗ್ ಬದಲಾವಣೆಯಾಗಬೇಕು. ಆ ಸ್ಥಾನಕ್ಕೆ, ಹಿಂದಿನ ವರ್ಷ ಪಕ್ಷದಿಂದ ಅಮಾನತಾಗಿದ್ದ ನೈಪಿಹು ರಿಯೊ ಬರಬೇಕು’ ಅನ್ನೋದಾಗಿದೆ. ಲೋಕಸಭೆಯನ್ನು ಪ್ರತಿನಿಧಿಸುತ್ತಿರುವ ರಿಯೊ ಈಗ ಕಾಜಿರಂಗದ ರೆಸಾರ್ಟ್ ಸಂಗಾತಿಗಳನ್ನು ಸೇರಿಕೊಂಡಿದ್ದರೆ, ನಾಗಾಲ್ಯಾಂಡ್ ಮುಖ್ಯಮಂತ್ರಿ ಜೈಲಾಂಗ್ ದೆಹಲಿಗೆ ದೌಢಾಯಿಸಿದ್ದಾರೆ. ಬರೋಬ್ಬರಿ 40 ಶಾಸಕರು ಬಂಡಾಯದಲ್ಲಿರುವುದರಿಂದ ಜೈಲಾಂಗ್ ಉಳಿದುಕೊಳ್ಳುವುದು ಕಷ್ಟವೇ ಆಗಿದೆ.

ಇಷ್ಟಕ್ಕೂ ತಮ್ಮ ನಾಯಕನನ್ನು ಮುಖ್ಯಮಂತ್ರಿ ಜಾಗದಿಂದ ಇಳಿಸಬೇಕು ಅಂತ ಎನ್ಪಿಎಫ್ ಬಯಸುತ್ತಿರುವುದೇಕೆ? ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ. 33ರ ಮಹಿಳಾ ಮೀಸಲು ತಂದಿರುವುದನ್ನು ಅಲ್ಲಿನ ರಾಜಕೀಯ ವರ್ಗದ ಬಹುತೇಕರು ‘ಸಂಪ್ರದಾಯ’ದ ಕಾರಣ ನೀಡಿ ವಿರೋಧಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಈ ಹಿಂದೆ ಡಿಜಿಟಲ್ ಕನ್ನಡ ಸಹ ಬರೆದಿತ್ತು. ಮೀಸಲು ವಿರೋಧಕ್ಕೆ ಮುಖ್ಯಮಂತ್ರಿ ತಮ್ಮ ಜತೆ ನಿಲ್ಲುತ್ತಿಲ್ಲ, ಈ ವಿಷಯದಲ್ಲಿ ಪ್ರತಿರೋಧ ಒಡ್ಡುವಲ್ಲಿ ನಿಷ್ಕ್ರಿಯರಾಗುತ್ತಿದ್ದಾರೆ ಎಂಬುದೇ ಶಾಸಕರು ರೆಸಾರ್ಟ್ ಸೇರಿರುವುದಕ್ಕೆ ಕಾರಣ. ವಿದೇಶಿ ಮಾಧ್ಯಮ ತಾಣವೊಂದು ಇದನ್ನು ಹೀಗೆ ವಿವರಿಸಿದೆ- ‘ಮಹಿಳೆಯರನ್ನು ಮತ್ತೆ ಅಡುಗೆಮನೆಗೆ ಸೀಮಿತವಾಗಿಸುವುದಕ್ಕೆ ನಾಗಾ ಶಾಸಕರ ಬಂಡಾಯ’

ತಿಂಗಳ ಹಿಂದೆಯೇ ನಾಗಾಲ್ಯಾಂಡಿನಲ್ಲಿ ಮಹಿಳಾ ಮೀಸಲು ವಿಷಯದಲ್ಲಿ ಹಿಂಸಾಚಾರ ಹೊತ್ತಿಕೊಂಡಿತ್ತು. ಇದಕ್ಕೆ ಇಬ್ಬರು ಬಲಿಯಾಗಿದ್ದಾರೆ. ನಾಗಾಲ್ಯಾಂಡಿನ ಹಲವು ಬುಡಕಟ್ಟುಗಳನ್ನು ಪ್ರತಿನಿಧಿಸಿ ರಚನೆಯಾಗಿರುವ ಜೆಸಿಸಿ (ಜಾಯಿಂಟ್ ಕೊ ಆರ್ಡಿನೇಷನ್ ಕಮಿಟಿ) ಹೇಳುವುದೇನೆಂದರೆ- ‘ನಾಗಾ ಮಹಿಳೆಯರು ಮನೆಯಲ್ಲಿ ಮತ್ತು ಹೊಲದಲ್ಲಿ ಕೆಲಸ ಮಾಡುವವರು. ನಿರ್ಧಾರ ತೆಗೆದುಕೊಳ್ಳುವುದು, ಯುದ್ಧಕ್ಕೆ ಹೋಗುವುದು ಪುರುಷರ ಕೆಲಸ. ನೂರಾರು ವರ್ಷಗಳ ಈ ನಾಗಾ ಸಂಸ್ಕೃತಿಯನ್ನು ಹಾನಿಯಾಗುವುದಕ್ಕೆ ಬಿಡುವುದಿಲ್ಲ.’

‘ನನ್ನ ನಾಗಾ ಐಡೆಂಟಿಟಿ, ಸಂಸ್ಕೃತಿಗಳ ಬಗ್ಗೆ ನನಗೂ ಅಭಿಮಾನವಿದೆ. ಆದರೆ ಕಾಲಕ್ಕೆ ತಕ್ಕಂತೆ ನನ್ನ ಸಮಾಜವೂ ಬದಲಾಗಬೇಕು. ಗಂಡನ ಹಿಂಸೆಯಿಂದ ಬೇಸತ್ತು ವಿಚ್ಛೇದಿತೆಯಾಗಿರುವ ನನಗೆ ಮಹಿಳೆಯರ ಕಷ್ಟ ಗೊತ್ತಿದೆ’ ಎಂಬುದು ಮಹಿಳಾ ಮೀಸಲು ಪರ ಮುಂಚೂಣಿ ಧ್ವನಿ ಎತ್ತಿರುವ ಕೊಹಿಮಾ ವಿಶ್ವವಿದ್ಯಾಲಯ ಪ್ರೊಫೆಸರ್ ರೋಸ್ಮೆರಿ ಜುವಿಚು ಅಭಿಪ್ರಾಯ. 50ರ ಹರೆಯದ ಈಕೆ ತಮ್ಮ ಈ ಪ್ರತಿಪಾದನೆ ಕಾರಣದಿಂದ ಅಡಗುತಾಣದಲ್ಲಿರಬೇಕಾದ ಸ್ಥಿತಿ ಬಂದಿದೆ. ಹಾಗಿದ್ದುಕೊಂಡೇ ‘ನಾಗಾ ಮದರ್ಸ್’ ಸಂಘಟನೆ ಜತೆಯಲ್ಲಿದ್ದುಕೊಂಡು ಮಹಿಳಾ ಹಕ್ಕುಗಳ ಚಳವಳಿ ರೂಪಿಸುತ್ತಿದ್ದಾರವರು.

ಹೀಗಾಗಿ ನಾಗಾಲ್ಯಾಂಡಿನಲ್ಲಿ ತೆರೆದುಕೊಂಡಿರುವ ಮುಖ್ಯಮಂತ್ರಿ ಬದಲಾವಣೆ ಒತ್ತಾಯದ ಅಧ್ಯಾಯವು ತಮಿಳುನಾಡಿನಂತೆ ಕೇವಲ ರಾಜಕೀಯ ಸಂಘರ್ಷವಾಗಿರದೇ, ಅಲ್ಲಿನ ಸಾಮಾಜಿಕ ಸುಳಿಯೊಂದನ್ನು ಜಗತ್ತಿಗೆ ಸಾರುತ್ತಿದೆ.

Leave a Reply