‘ಉಗ್ರವಾದದಲ್ಲಿ ಜಗತ್ತು ಚಿಂತಿಸಬೇಕಿರುವುದು ಅಣ್ವಸ್ತ್ರದ ಬಗ್ಗೆ ಅಲ್ಲ…’ ಎನ್ನುತ್ತಾ ವಿಶ್ವಕ್ಕೆ ಬಿಲ್ ಗೇಟ್ಸ್ ಕೊಟ್ಟ ಎಚ್ಚರಿಕೆ ಏನು?

ಡಿಜಿಟಲ್ ಕನ್ನಡ ಟೀಮ್:

ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಸಂದರ್ಭದಲ್ಲಿ ವಿಶ್ವದ ಬಹುತೇಕ ದೇಶಗಳು ತಲೆಕೆಡಿಸಿಕೊಂಡು ಅಣ್ವಸ್ತ್ರ ಹಾಗೂ ಭದ್ರತೆಯ ವಿಷಯಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡುತ್ತಿವೆ. ಈ ವ್ಯಾಪಕ ಚರ್ಚೆಗಳ ನಡುವೆ ವಿಶ್ವದ ಅತಿ ದೊಡ್ಡ ಶ್ರೀಮಂತ ಬಿಲ್ ಗೇಟ್ಸ್, ಭವಿಷ್ಯದಲ್ಲಿ ಭಯೋತ್ಪಾದನೆ ಅಣ್ವಸ್ತ್ರಕ್ಕಿಂತ ಜೈವಿಕ ಭಯೋತ್ಪಾದನಾ ಅಸ್ತ್ರಗಳನ್ನು ಬಳಸುವ ಸಾಧ್ಯತೆಗಳ ಬಗ್ಗೆ ವಿಶ್ವಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ಮ್ಯುನಿಚ್ ಭದ್ರತಾ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಬಿಲ್ ಗೇಟ್ಸ್, ‘ಮುಂದಿನ 10-15 ವರ್ಷಗಳ ನಂತರ ಅಣ್ವಸ್ತ್ರ ಭಯೋತ್ಪಾದನೆಯ ಪ್ರಮುಖ ಅಸ್ತ್ರವಾಗಿರುವುದಿಲ್ಲ. ಬದಲಾಗಿ ಜೈವಿಕ ಭಯೋತ್ಪಾದನಾ ಅಸ್ತ್ರಗಳು ಹೆಚ್ಚು ಅಪಾಯಕಾರಿಯಾಗಲಿವೆ’ ಎಂದಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಬಿಲ್ ಗೇಟ್ಸ್ ಅವರು ವಿಶ್ವಕ್ಕೆ ನೀಡಿದ ಎಚ್ಚರಿಕೆ ಹೀಗಿದೆ…

‘ಸದ್ಯದ ಪರಿಸ್ಥಿತಿಯಲ್ಲಿ ಜೈವಿಕ ಭಯೋತ್ಪಾದನೆಯನ್ನು ಯಾವುದೇ ರಾಷ್ಟ್ರ ಗಂಭೀರವಾಗಿ ಪರಿಗಣಿಸಿಲ್ಲ. ಈ ಜೈವಿಕ ಭಯೋತ್ಪಾದನೆಯಲ್ಲಿ ಮನುಷ್ಯನ ಮೇಲೆ ಮಾರಣಾಂತಿಕ ವೈರಸ್ ಗಳನ್ನು ಅಸ್ತ್ರವಾಗಿ ಬಳಸಲಾಗುತ್ತದೆ. ಈ ವೈರಸ್ ಗಳ ಮೂಲಕ ದಾಳಿ ನಡೆಸಿ ಕೋಟ್ಯಂತರ ಜನರನ್ನು ಬಲಿಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಣ್ವಸ್ತ್ರ ದಾಳಿಯಲ್ಲಿ ಲಕ್ಷ ಮಂದಿ ಬಲಿಯಾದರೆ, ಜೈವಿಕ ಅಸ್ತ್ರಗಳ ದಾಳಿಯಲ್ಲಿ ಹತ್ತಾರು ಕೋಟಿ ಜನರು ಸಾಯುವ ಅಪಾಯವಿದೆ. ಅಣ್ವಸ್ತ್ರದಿಂದ ಆಗುವ ಅಪಾಯದ ಬಗೆಗಿನ ಚಿಂತನೆಯಲ್ಲಿ ತಲ್ಲೀನರಾಗಿರುವ ನಾವು, ಜೈವಿಕ ಭಯೋತ್ಪಾದನೆ ಎದುರಿಸಲು ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಜೈವಿಕ ಭಯೋತ್ಪಾದಕ ದಾಳಿ ನಡೆದರೆ ಭೀಕರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ದೇಶಗಳು ಈ ಬಗ್ಗೆ ಹೆಚ್ಚಿನ ಅಧ್ಯಯನಗಳ ಮೂಲಕ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ವಿರುದ್ಧ ಹೋರಾಡಲು ಸಿದ್ಧವಾಗಬೇಕು. ಅದಕ್ಕಾಗಿ ಎಲ್ಲ ರೀತಿಯ ನೂತನ ಜೈವಿಕ ಸಂಶೋಧನೆ, ಆವಿಷ್ಕಾರ ಹಾಗೂ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಎಲ್ಲ ರಾಷ್ಟ್ರಗಳು ಈ ಬಗ್ಗೆ ಪರಸ್ಪರ ಸಹಕಾರ ನೀಡಬೇಕು. ಒಂದು ವೇಳೆ ಈ ದಾಳಿಯಾದರೆ ತಜ್ಞರ ಅಂದಾಜಿನ ಪ್ರಕಾರ ಒಂದು ವರ್ಷದೊಳಗೆ 30 ಮಿಲಿಯನ್ ಜನರು ಬಲಿಯಾಗುವ ಸಾಧ್ಯತೆಗಳಿವೆ.’

Leave a Reply