ಪಾಕ್ ಜಲಾಂತರ್ಗಾಮಿಯನ್ನು ಹಣಿದ ಭಾರತೀಯ ನೌಕಾಸೇನೆಯ ವೀರ ಅಧ್ಯಾಯದ ನೆನಕೆಗೆ ನೆಪ ಒದಗಿಸಿದೆ ‘ಗಾಜಿ ಅಟ್ಯಾಕ್’

ಚೈತನ್ಯ ಹೆಗಡೆ

ಸಂಕಲ್ಪ ರೆಡ್ಡಿ ನಿರ್ದೇಶನದ, ಕರಣ್ ಜೋಹರರ ಧರ್ಮ ನಿರ್ಮಾಣ ಸಂಸ್ಥೆ ನಿರ್ಮಿಸಿರುವ, ರಾಣಾ ದುಗ್ಗಬತ್ತಿ, ಕೆಕೆ ಮೆನನ್, ತಾಪ್ಸಿ ಪನ್ನು, ಅತುಲ್ ಕುಲಕರ್ಣಿ ಇತ್ಯಾದಿ ಅಭಿನಯ ಚತುರರ ತಾರಾಗಣವಿರುವ ತೆಲುಗು/ಹಿಂದಿ ಚಿತ್ರ ‘ಗಾಜಿ ಅಟ್ಯಾಕ್’ ಈಗ ಚಿತ್ರಮಂದಿರಗಳಲ್ಲಿದೆ.

ಇದು ಆ ಚಿತ್ರದ ವಿಮರ್ಶೆಯೇನೂ ಅಲ್ಲ. ಬದಲಿಗೆ, ಪ್ರೇಮ ಕಥಾನಕಗಳ ಆಚೆಗೆ ಭಾರತೀಯರಲ್ಲಿ ಅಭಿಮಾನ ಮೂಡಿಸುವ ಇಂಥ ಕತೆಗಳನ್ನು ಹೇಳುತ್ತಿರುವುದಕ್ಕೆ ಚಿತ್ರರಂಗವನ್ನು ಪ್ರಶಂಸಿಸುತ್ತಲೇ ಚರಿತ್ರೆಯಲ್ಲಿ ಈ ಗಾಜಿ ಕದನ ದಾಖಲಾಗಿರುವುದು ಹೇಗೆ ಎಂದು ಗಮನಿಸುವುದಕ್ಕೆ ಇದು ಸುಸಮಯ.

1971ರ ಬಾಂಗ್ಲಾ ಯುದ್ಧ ಕಳೆಗಟ್ಟುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಕಡೆಯಿಂದ ಬಂದು ವಿಶಾಖಪಟ್ಟಣದ ಸಾಗರದೊಡಲಲ್ಲಿ ಬೋರಲು ಬಿದ್ದ ಪಾಕಿಸ್ತಾನದ ಜಲಾಂತರ್ಗಾಮಿಯ ಹೆಸರು ಗಾಜಿ. ಗಾಜಿ ಎಂದರೆ ಅವರ ಅರ್ಥದಲ್ಲಿ ಪವಿತ್ರ ಸೈನಿಕ. ಭಾರತದ ಐಎನ್ಎಸ್ ವಿಕ್ರಾಂತ ಜಲಾಂತರ್ಗಾಮಿಯನ್ನು ಹೊಡೆದುರುಳಿಸುವುದಕ್ಕೆ ಯೋಜನೆ ರೂಪಿಸಿಕೊಂಡು ಬಂದಿದ್ದ ಗಾಜಿ ತಾನೇ ಚೂರಾದ ಕತೆಯಿದು. 1971ರ ಡಿಸೆಂಬರ್ 5ಕ್ಕೆಲ್ಲ ಅದು ಸ್ಫೋಟಗೊಂಡಿತು. ಆದರೆ ಭಾರತ ಮತ್ತು ಪಾಕಿಸ್ತಾನಗಳು ಗಾಜಿ ಸ್ಫೋಟದ ಬಗ್ಗೆ ತಮ್ಮದೇ ವ್ಯಾಖ್ಯಾನ ಹೊಂದಿವೆ.

ಐಎನ್ಎಸ್ ರಜಪೂತ ಕ್ಷಿಪಣಿ ನಾಶಕ ನೌಕೆ ಮೂಲಕ ಗಾಜಿಯನ್ನು ಚಪ್ಪಾನುಚೂರು ಮಾಡಿದ್ದರ ಬಗ್ಗೆ ಭಾರತೀಯ ಸೇನೆಗಂತೂ ಇನಿತೂ ಸಂಶಯವಿಲ್ಲ. ಆದರೆ ಪಾಕಿಸ್ತಾನ ಮಾತ್ರ, ‘ಥೋ ಥೋ..ಹಂಗೇನಿಲ್ಲ. ನಾವು ಭಾರತದ ಜಲಾಂತರ್ಗಾಮಿ ನೌಕೆಗಳನ್ನು ಎದುರಿಸುವುದಕ್ಕೆ ಬಂಗಾಳ ಕೊಲ್ಲಿಯ ಸಾಗರದಾಳದಲ್ಲಿ ನೆಲಬಾಂಬುಗಳನ್ನು ಇಡುತ್ತ ಸಾಗಿದ್ದೆವು. ವಿಶಾಖಪಟ್ಟಣ ತಲುಪುತ್ತಿದ್ದಾಗ ಆದ ಗೊಂದಲದಲ್ಲಿ ನಾವೇ ಇಟ್ಟಿದ್ದ ಬಾಂಬಿಗೆ ತುತ್ತಾಗಿ ಗಾಜಿ ಧ್ವಂಸವಾಯಿತು. ಭಾರತದ ಐಎನ್ಎಸ್ ರಜಪೂತ ಸಾಗರದಾಳದಲ್ಲಿ ನಮಗೆ ಹೊಡೆದಿದ್ದಲ್ಲ’ ಎಂದು ಪ್ರತಿಪಾದಿಸಿಕೊಂಡಿದೆ.

ಬಿಡಿ, ಪಾಕಿಸ್ತಾನದ ಈ ಮೀಸೆ ಮಣ್ಣಾಗಲಿಲ್ಲವೆಂಬ ವಿತಂಡ ವಾದಗಳು ಹೊಸತೇನಲ್ಲ. ಕಸಬ್ ತಮ್ಮವನಲ್ಲ ಎಂದು ಪೆದ್ದು ಪೆದ್ದಾಗಿ ಸುಳ್ಳು ಹೇಳುವ, ಕಾರ್ಗಿಲ್ ಯುದ್ಧದಲ್ಲಿ ಮೃತರಾದ ಪಾಕಿಸ್ತಾನ ಯೋಧರ ಮೃತದೇಹ ಸ್ವೀಕರಿಸಿದರೆ ಜಾಗತಿಕ ಒತ್ತಡಕ್ಕೆ ಒಳಗಾಗುತ್ತೇವೆಂಬ ಹೆದರಿಕೆಯಲ್ಲಿ ಅವರೆಲ್ಲ ತಮ್ಮ ಸೈನಿಕರೇ ಅಲ್ಲ ಅಂತ ಹೇಳಿದ ದೇಶ ಪಾಕಿಸ್ತಾನ. ಇಂಥ ಇತ್ತೀಚಿನ ಅನುಭವಗಳ ಆಧಾರದಲ್ಲೇ ಅದರ 1971ರ ನಿಯತ್ತನ್ನು ನಾವು ಅಂದಾಜಿಸಬಹುದಾಗಿದೆ.

ಎರಡನೇ ವಿಶ್ವಯುದ್ಧದಲ್ಲಿ ನಿರ್ಮಿತವಾಗಿದ್ದ ಅಮೆರಿಕದ ಡಿಯಾಬ್ಲೊ ಜಲಾಂತರ್ಗಾಮಿಯನ್ನು ನಂತರ ಪಾಕಿಸ್ತಾನಕ್ಕೆ ಕೊಡಮಾಡಿದಾಗ ಅದು ಪಿಎನ್ಎಸ್ ಗಾಜಿ ಎಂಬ ಹೆಸರನ್ನು ಪಡೆದುಕೊಂಡಿತಷ್ಟೆ. ಆಗಿನ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಅಟ್ಟಹಾಸ ಮಿತಿಮೀರಿ, ಅಲ್ಲಿನ ನಿರಾಶ್ರಿತರೆಲ್ಲ ಭಾರತಕ್ಕೆ ಜಮೆಯಾಗುತ್ತಿದ್ದಾಗ ಈ ವಿದ್ಯಮಾನದಲ್ಲಿ ಮಧ್ಯಪ್ರವೇಶಿಸುವುದು ಭಾರತಕ್ಕೆ ಅನಿವಾರ್ಯವಾಗಿತ್ತು. 1971ರ ನವೆಂಬರ್ ವೇಳೆಗೆಲ್ಲ ಉಭಯ ದೇಶಗಳ ನಡುವೆ ಯುದ್ಧ ಘೋಷಣೆ ಆಗಿರದಿದ್ದರೂ ಸಮರ ಕಾರ್ಮೋಡ ಆವರಿಸಿತ್ತು.

ghazimapa

ಹೀಗಿರುವಾಗ, ಭಾರತದ ಬಹು ಮಹತ್ತರ ಜಲಾಂತರ್ಗಾಮಿ ಐಎನ್ಎಸ್ ವಿಕ್ರಾಂತವು ವಿಶಾಖಪಟ್ಟಣ ತೀರದಡಿ ಬೀಡು ಬಿಡಲಿದೆ ಎಂಬುದನ್ನು ಪಾಕಿಸ್ತಾನವು ಗುಪ್ತಚರ ಸಂಪರ್ಕ ಕದ್ದಾಲಿಕೆಗಳಿಂದ ತಿಳಿದುಕೊಂಡಿತು. ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ)ಕ್ಕೆ ಹತ್ತಿರವಾಗಿರುವ ವಿಕ್ರಾಂತವನ್ನು ಇಲ್ಲವಾಗಿಸಿದರೆ ಭಾರತದ ಜಂಘಾಬಲವನ್ನೇ ಉಡುಗಿಸಿದಂತೆ ಎಂದು ನಿರ್ಧರಿಸಿದ ಪಿಎನ್ಎಸ್ ಗಾಜಿ ಶಿಕಾರಿಗೆ ಸಿದ್ಧವಾಯಿತು.

ಆದರೆ ಪೆದ್ದು ಪಾಕಿಸ್ತಾನಕ್ಕೆ ತಿಳಿದಿರದಿದ್ದ ಸಂಗತಿ ಎಂದರೆ, ಪೂರ್ವ ನೌಕಾ ಕಮಾಂಡ್ ನ ವೈಸ್ ಅಡ್ಮಿರಲ್ ಕೃಷ್ಣನ್ ಅವರು ಪಾಕಿಸ್ತಾನವನ್ನು ಹಣಿಯಲೆಂದೇ ರೂಪಿಸಿದ ಜಾಲ ಇದಾಗಿತ್ತು. ಐಎನ್ಎಸ್ ವಿಕ್ರಾಂತವು ವಿಶಾಖಪಟ್ಟಣದ ಬಳಿ ಇದೆ ಎಂಬ ತಪ್ಪು ಮಾಹಿತಿ ಪಾಕಿಸ್ತಾನವನ್ನು ಮುಟ್ಟುವಂತೆ ಯೋಜಿಸಿದ್ದು ಭಾರತದ ಮಿಲಿಟರಿ ವ್ಯೂಹವಾಗಿತ್ತು. ಯಾವಾಗ ಇದನ್ನು ನಂಬಿ ಪಿಎನ್ಎಸ್ ಗಾಜಿ ಸಾಗರದುದರ ಸೀಳುತ್ತ ಇತ್ತ ಬರತೊಡಗಿತೋ, ಅದನ್ನು ಹೊಸಕಲೆಂದೇ ಲೆಫ್ಟಿನೆಂಟ್ ಕಮಾಂಡರ್ ಇಂದರ್ ಸಿಂಗ್ ನೇತೃತ್ವದಲ್ಲಿ ಐಎನ್ಎಸ್ ರಜಪೂತ ಅಖಾಡಕ್ಕಿಳಿದಿತ್ತು!

ಐಎನ್ಎಸ್ ವಿಕ್ರಾಂತವು ಚೆನ್ನೈ ಸಮುದ್ರ ತೀರದಲ್ಲಿದ್ದು, ವಿಶಾಖಪಟ್ಟಣವನ್ನು ಮುಟ್ಟಲಿದೆ ಎಂಬರ್ಥದಲ್ಲಿ ಬೇಕಂತಲೇ ವೈರ್ಲೆಸ್ ಸಂದೇಶಗಳ ಅತಿಯಾದ ವಿನಿಮಯವಾಯಿತು. ಈ ವೈರ್ಲೆಸ್ ಸಂದೇಶಗಳನ್ನು ಭೇದಿಸುತ್ತಿದ್ದ ಪಾಕಿಸ್ತಾನದ ಪಿಎನ್ಎಸ್ ಗಾಜಿಗೆ ತಾನು ಪಕ್ಕಾ ಗುರಿಯತ್ತ ಹೋಗುತ್ತಿದ್ದೇನೆ ಅಂತ ಖುಷಿಯಾಗತೊಡಗಿತ್ತು. ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಸಹ ವಿಕ್ರಾಂತ ಮತ್ತದರ ಸಿಬ್ಬಂದಿಯ ಬರುವಿಕೆ ಬಗ್ಗೆ ಹೇಳಿ, ಅಗತ್ಯ ತಯಾರಿಗಳಿಗೆ ಸೂಚನೆ ನೀಡಿ ಭ್ರಮೆ ಸೃಷ್ಟಿಸಲಾಗಿತ್ತು. ವಾಸ್ತವದಲ್ಲಿ ಐಎನ್ಎಸ್ ವಿಕ್ರಾಂತ ಆ ಸಂದರ್ಭದಲ್ಲಿ ಸಾವಿರಾರು ಮೈಲಿ ದೂರದ ಅಂಡಮಾನ್- ನಿಕೋಬಾರ್ ದ್ವೀಪ ಸಮೂಹಗಳ ಬಳಿ ಇತ್ತು.

ಇವೆಲ್ಲದರ ಬಗ್ಗೆ ಅರಿವಿಲ್ಲದೇ ತಾನು ತುಂಬ ಶಾಣ್ಯಾ ಅಂದುಕೊಳ್ಳುತ್ತ ವಿಶಾಖಪಟ್ಟಣ ಸಾಗರದಾಳದ ಬೋನನ್ನು ಪ್ರವೇಶಿಸಿಬಿಟ್ಟಿತ್ತು ಗಾಜಿ. ಡಿಸೆಂಬರ್ 3-4ರ ರಾತ್ರಿಯಲ್ಲಿ ವರದಿಯಾಗಿದ್ದು ಭಯಂಕರ ಸ್ಫೋಟ. ಐಎನ್ಎಸ್ ರಜಪೂತ ಜಲದೊಡಲಲ್ಲಿ ತನ್ನ ಬೇಟೆ ದಾಳಿ ಶುರು ಮಾಡಿದ್ದೂ ಆಗಲೇ. ಪಿಎಎನ್ಎಸ್ ಗಾಜಿ ನುಚ್ಚು ನೂರಾಗಿ ಹೋಯಿತು. ಅದಾಗಿ ಎರಡು ದಿನಗಳ ನಂತರ ನೌಕಾ ಸೇನಾ ಪರಿಣತರು ಮುಳುಗು ಹಾಕಿದಾಗ ಅವಶೇಷಗಳ ಪೈಕಿ ನಾಲ್ಕು ಶವಗಳು, ಪಾಕಿಸ್ತಾನದ ಧ್ವಜ, ಐಎನ್ಎಸ್ ವಿಕ್ರಾಂತವನ್ನು ಧ್ವಂಸ ಮಾಡುವುದಕ್ಕೆ ಮಾಡಿಕೊಂಡಿದ್ದ ಟಿಪ್ಪಣಿಗಳೆಲ್ಲ ಸಿಕ್ಕವು.

ಇತ್ತ, ಐಎನ್ಎಸ್ ವಿಕ್ರಾಂತವು ಬಾಂಗ್ಲಾ ವಿಮೋಚನೆಗೆ ಬೇಕಾದ ನೆರವಿಗೆ ವೇದಿಕೆಯಾಯಿತು. ನಮ್ಮ ಜಲ-ಭೂ-ವಾಯು ಸೇನಾನಿಗಳ ಇಂಥದ್ದೇ ಹತ್ತು-ಹಲವು ಸಾಹಸಗಳಿಂದ ಬಾಂಗ್ಲಾ ವಿಮೋಚನೆಯಾಗಿದ್ದು ಈಗ ಇತಿಹಾಸ.

1 COMMENT

  1. For your info,
    1. INS Rajaputh is not a submarine, it’s a guided missile destroyer.
    2. The submarine which hit (as they shown in movie) the PNS Gazi is INS karanj(S 21).
    3. As INS Karanj was in classified mission navy never reveled what exactly happened with PNS Gazi and can give credit s to INS Karanj

Leave a Reply