ಕೇವಲ 15 ತಿಂಗಳ ಅವಧಿಯಲ್ಲಿ ಕೇರಳದ ಆಹಾರ ಕಲಬೆರಕೆ ಧಂದೆಗೆ ಇತಿಶ್ರೀ ಹಾಡಿದ ಲೇಡಿ ಸಿಂಗಂ ಅನುಪಮಾ!

ಡಿಜಿಟಲ್ ಕನ್ನಡ ಟೀಮ್:

ಕಾಳಸಂತೆ, ಕಲಬೆರಕೆ, ಭ್ರಷ್ಟಾಚಾರದಂತ ಅಕ್ರಮಗಳು ತುಂಬಿರುವ ಸಮಾಜವನ್ನು ಸರಿಪಡಿಸಲು ಒಬ್ಬ ಪ್ರಾಮಾಣಿಕ ಅಧಿಕಾರಿ ಸಾಕು ಎಂಬುದನ್ನು ನಾವು ಅನೇಕ ಸಿನಿಮಾಗಳಲ್ಲಿ ನೋಡಿದ್ದೇವೆ. ಇದು ವಾಸ್ತವವಾಗಿಯೂ ಸಾಧ್ಯ ಎಂದು ಹೇಳಿದರೆ ನಂಬಲು ಸ್ವಲ್ಪ ಕಷ್ಟ. ಆದರೆ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿದ್ದರೆ ಸಾಕು ಸಮಾಜದಲ್ಲಿನ ಅಕ್ರಮ ವ್ಯವಸ್ಥೆಗಳನ್ನು ಸರಿಪಡಿಸಬಹುದು ಎಂಬುದಕ್ಕೆ ತಾಜಾ ಉದಾಹರಣೆಯಾಗಿ ನಮ್ಮ ಮುಂದೆ ನಿಂತಿದ್ದಾರೆ ಕೇರಳದ ಯುವ ಐಎಎಸ್ ಅಧಿಕಾರಿ ಟಿ.ವಿ. ಅನುಪಮಾ.

ಕೇರಳದ ಆಹಾರ ಭದ್ರತೆ ಇಲಾಖೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕೇವಲ 15 ತಿಂಗಳ ಅವಧಿಯಲ್ಲಿ ಅನುಪಮಾ ಅವರ ಪರಿಣಾಮಕಾರಿ ಕೆಲಸ ನೋಡಿದರೆ ಇವರನ್ನು ಲೇಡಿ ಸಿಂಗಂ ಅತಲೇ ಕರೆಯುತ್ತೀರಿ. ಅವರ ನಿಷ್ಠೆ ಹಾಗೂ ಕಟ್ಟುನಿಟ್ಟಿನ ಕ್ರಮಗಳು ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ ಎಂದರೆ, ಅವರ ಹೆಸರು ಕೇಳಿದರೆ ಈಗಲೂ ಕೇರಳದ ಆಹಾರ ಕಲಬೆರಕೆ ಮಾಡುವವರ ಎದೆಯಲ್ಲಿ ನಡುಕ ಹುಟ್ಟುತ್ತದೆ. ಕೇರಳದ ಆಹಾರ ಕಲಬೆರಕೆ ಜಾಲಕ್ಕೆ ದುಃಸ್ವಪ್ನವಾದ ಅನುಪಮಾ, ದೇಶದ ಎಲ್ಲ ಸರ್ಕಾರಿ ಅಧಿಕಾರಿಗಳಿಗೂ ಮಾದರಿ ಎಂದರೆ ತಪ್ಪಿಲ್ಲ.

ಕಿರಿಯ ವಯಸ್ಸಿನಲ್ಲೇ ತಮ್ಮ ದಕ್ಷ ಕಾರ್ಯದಿಂದ ಇಷ್ಟೆಲ್ಲಾ ಹೆಸರು ಮಾಡಿರುವ ಅನುಪಮಾ ಅವರ ಹಿನ್ನೆಲೆ ಏನು ಅವರು ಮಾಡಿರುವ ಸಾಧನೆ ಎಂತಹುದು ಎಂಬುದನ್ನು ನೋಡೋಣ ಬನ್ನಿ…

2010ರ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಅನುಪಮಾ, ಕೇರಳದ ಆಹಾರ ಕಲಬೆರಕೆ ಧಂದೆಕೋರರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಆಹಾರ ಭದ್ರತೆಯ ಇಲಾಖೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಅಲ್ಪಾವಧಿಯಲ್ಲಿ 6000 ಕಲಬೆರಕೆ ಆಹಾರ ಪದಾರ್ಥಗಳನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ. 750 ಪ್ರಕರಣಗಳಲ್ಲಿ ಆಹಾರ ಕಲಬೆರಕೆ ಸಾಬೀತಾಗಿ ಈ ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗುವಂತೆ ಮಾಡಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಕೇರಳದ ಹಲವು ಮಾರುಕಟ್ಟೆಗಳ ಮೇಲೆ ದಾಳಿ ನಡೆಸಿರುವ ಅನುಪಮಾ, ಆಹಾರ ಧಾನ್ಯ ಸಂರಕ್ಷಣೆಗೆ ನಿಗದಿ ಮಾಡಿರುವ ಕೀಟನಾಶಕ ಪ್ರಮಾಣಕ್ಕಿಂತ 300 ಪಟ್ಟು ಹೆಚ್ಚಿನ ಪ್ರಮಾಣ ಬಳಕೆ ಮಾಡಿರುವುದನ್ನು ಪತ್ತೆಹಚ್ಚಿದ್ದಾರೆ. ಇಷ್ಟು ಪ್ರಮಾಣದಲ್ಲಿ ಕೀಟನಾಶಕ ಬಳಕೆ ಮನುಷ್ಯನ ಪ್ರಾಣಕ್ಕೆ ಸಂಚಕಾರ ತರುವುದು ಖಚಿತ. ಈ ರೀತಿಯಾಗಿ ಜನಸಾಮಾನ್ಯರಿಗೆ ಮೋಸ ಮಾಡುವುದರ ವಿರುದ್ಧ ಸಮರ ಸಾರಿದ ಅನುಪಮಾ ತಮ್ಮ ಕಾರ್ಯದಲ್ಲಿ ಎಂದಿಗೂ ರಾಜಿಯಾಗದೇ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇವರ ಕಾರ್ಯಕ್ಕೆ ಅದೆಷ್ಟೋ ಮಂದಿ ಆಹಾರ ಕಲಬೆರಕೆ ಮಾಡುವುದನ್ನೇ ಕೈ ಬಿಟ್ಟಿದ್ದಾರೆ.

ಅನುಪಮಾ ಅವರು ಕೇವಲ ಆಹಾರ ಕಲಬೆರಕೆ ವಿರುದ್ಧದ ಹೋರಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಜನರು ತಮಗೆ ಬೇಕಾಗಿರುವ ತರಕಾರಿಗಳನ್ನು ತಾವೇ ಮನೆಯ ಹಿಂದೆ ಬೆಳೆದುಕೊಂಡು ತಾಜಾ ತರಕಾರಿಗಳನ್ನು ಸೇವಿಸುವುದರ ಬಗ್ಗೆ ಫೇಸ್ ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ನಡೆಸಿದರು. ಇದನ್ನು ಜನರು ಹೃತ್ಪೂರ್ವಕವಾಗಿ ಸ್ವಾಗತಿಸಿ ತಮಗೆ ಅಗತ್ಯವಿರುವ ತರಕಾರಿಗಳನ್ನು ತಾವೇ ಬೆಳೆದುಕೊಳ್ಳಲು ಮುಂದಾದರು. ಅನುಪಮಾ ಅವರ ಈ ಅಭಿಯಾನದಿಂದ ಪ್ರೇರೇಪಿತವಾದ ಕೇರಳ ಸರ್ಕಾರ ಈ ಕಾರ್ಯಕ್ಕೆ ಮತ್ತಷ್ಟು ಬೆಂಬಲ ನೀಡಿತು. ಅನುಪಮಾ ಅವರ ಈ ಅಭಿಯಾನ ಯಾವ ರೀತಿ ಪರಿಣಾಮ ಬೀರಿತು ಎಂದರೆ, ಈ ಹಿಂದೆ ಶೇ.70 ರಷ್ಟು ತರಕಾರಿಗಳನ್ನು ಕರ್ನಾಟಕ ಹಾಗೂ ತಮಿಳುನಾಡಿನಿಂದ ಆಮದು ಮಾಡಿಕೊಳ್ಳುತ್ತಿದ್ದ ಕೇರಳ, ಈಗ ಅದೇ ಶೇ.70 ರಷ್ಟು ತರಕಾರಿಗಳನ್ನು ತಾನೇ ಬೆಳೆದುಕೊಳ್ಳುತ್ತಿದೆ.

ಪೊಲೀಸರು, ಆಡಳಿತ ವ್ಯವಸ್ಥೆ, ಸರ್ಕಾರಿ ಅಧಿಕಾರಿಗಳ ಮೇಲೆ ನಂಬಿಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಅನುಪಮಾ ಅವರ ಈ ಸಾಧನೆ ನಿಜಕ್ಕೂ ಶ್ಲಾಘನೀಯ.

3 COMMENTS

  1. Good work, continue where ever you go ?
    It’s good to have officer’s like you.
    Motivate the mixing people to lead life in less cash and more peaceful.

Leave a Reply