ಹಿಂದು ಸ್ಮಶಾನ ಉಲ್ಲೇಖ- ಕ್ಷತ್ರಿಯ ಗುಣವೆಲ್ಲ ಕೋಮುವಾದ, ಪಠಾಣಗಿರಿ- ಅಲ್ಪಸಂಖ್ಯಾತರಿಗೇ ಮೊದಲ ಹಕ್ಕೆಂಬುದು ಉದಾರವಾದ!

ಡಿಜಿಟಲ್ ಕನ್ನಡ ವಿಶೇಷ:

ನಿನ್ನೆ ಉತ್ತರ ಪ್ರದೇಶದ ಫಾತೆಪುರ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳು ಈಗ ವಿವಾದದ ಸ್ಪರ್ಶ ಪಡೆಯುತ್ತಿವೆ. ಅಖಿಲೇಶ್ ಯಾದವ್ ಅವರ ಸರ್ಕಾರದ ತಾರತಮ್ಯ ನೀತಿಯನ್ನು ಟೀಕಿಸುವ ಸಂದರ್ಭದಲ್ಲಿ ಪ್ರಧಾನಿ ಅವರ ಹೇಳಿಕೆಯ ಒಂದು ಭಾಗ ಈಗ ಚರ್ಚೆಗೆ ಗ್ರಾಸವಾಗಿದ್ದು, ಆ ಅಂಶ ಹೀಗಿದೆ…

‘ಒಂದು ಗ್ರಾಮದಲ್ಲಿ ಕಬ್ರಿಸ್ತಾನಕ್ಕೆ ಜಾಗ ಕೊಡುವುದಾದರೆ ಸ್ಮಶಾನಕ್ಕೂ ಜಾಗ ನೀಡಬೇಕು. ರಂಜಾನ್ ಹಬ್ಬದ ದಿನ ಎಲ್ಲೆಡೆ ನಿರಂತರವಾಗಿ ವಿದ್ಯುತ್ ನೀಡುವುದಾದರೆ ದೀಪಾವಳಿ ಹಬ್ಬದ ದಿನವೂ ಎಲ್ಲೆಡೆ ವಿದ್ಯುತ್ ನೀಡಬೇಕು. ಭೇದ ಭಾವ ಇದ್ದರೆ ಅದು ಸಮಾನತೆ ಆಗುವುದಿಲ್ಲ. ಜಾತಿ ಹಾಗೂ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬಾರದು..’

ಚಾಣಾಕ್ಷ್ಯ ರಾಜಕಾರಣಿಯಾಗಿ ಮೋದಿ ಇಲ್ಲಿ ಸಮಾಜವಾದಿ ಪಕ್ಷದ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಪರೋಕ್ಷವಾಗಿ ಟೀಕಿಸಿದ್ದೇನೋ ಹೌದು. ಆದರೆ ಇದು ಕೋಮುವಾದಿ ಹೇಳಿಕೆ ಆಗುತ್ತದೆಯೇ ಎಂಬುದು ಈಗ ನಡೆಸಬೇಕಾದ ಚರ್ಚೆ. ಹೌದೆನ್ನುತ್ತ ಕಾಂಗ್ರೆಸ್ ದೂರು ಹಿಡಿದುಕೊಂಡು ಚುನಾವಣ ಆಯೋಗದ ಬಾಗಿಲು ಬಡಿಯುತ್ತಿದೆ.

ಮೋದಿ ಅವರ ಮಾತುಗಳಲ್ಲಿ ಯಾವುದೇ ಧರ್ಮ ಅಥವಾ ಸಮುದಾಯದ ಬಗ್ಗೆ ಅವಹೇಳನವಾಗಿ ಮಾತನಾಡಿಲ್ಲ. ಸಮಾನತೆಯ ಭಾಷಣ ಮಾಡುತ್ತಾ ಅಧಿಕಾರಕ್ಕೆ ಬಂದವರು ಮಾಡಿರುವ ತಾರತಮ್ಯವನ್ನು ಪ್ರಶ್ನಿಸಿದ್ದಾರೆ. ಹೀಗಾಗಿ ಮೋದಿ ಅವರ ಮಾತುಗಳು ಕೋಮುವಾದ ಹೇಗಾಗುತ್ತದೆ ಎಂಬುದು ಕೆಲವರ ವಾದ.

‘ಈ ದೇಶದ ಅಲ್ಪಸಂಖ್ಯಾತರಿಗೆ ಸಂಪನ್ಮೂಲದ ಮೇಲೆ ಮೊದಲ ಹಕ್ಕಿದೆ’ ಎಂಬ ಮನಮೋಹನ ಸಿಂಗ್ ಅವರ ಮಾತು ಉದಾರವಾದ ಆಗುವುದಾದರೆ, ಹಿಂದುಗಳಿಗೂ ಸ್ಮಶಾನ ನಿರ್ಮಿಸಿಕೊಡಿ ಎಂಬ ಮಾತು ಕೋಮುವಾದ ಹೇಗಾಗಿಬಿಡುತ್ತದೆ ಎಂಬುದು ಟ್ವಿಟ್ಟರ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿರುವ ಪ್ರಶ್ನೆ.

ಇದಕ್ಕೆ ಸ್ವಲ್ಪ ದಿನಗಳ ಹಿಂದೆ ವಿಶಾಲ್ ಸಿಕ್ಕಾ ತಮ್ಮ ಸಂದರ್ಶನದಲ್ಲಿ ಹೇಳಿದ್ದ ಮಾತೂ ಹೀಗೆಯೇ ಚರ್ಚೆಗೆ ಒಳಗಾಗಿತ್ತು.

ಒಂದು ವಾರದ ಹಿಂದೆ ಇನ್ಫೋಸಿಸ್ ಕಂಪನಿಯ ಆಡಳಿತದ ಬಗ್ಗೆ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಕಂಪನಿಯ ಸಿಇಒ ವಿಶಾಲ್ ಸಿಕ್ಕಾ, ‘ನಾನುಕ್ಷತ್ರಿಯನಂತೆ ಹೋರಾಡಿ ಸಮಸ್ಯೆಗಳನ್ನು ಜಯಿಸುತ್ತೇನೆ’ ಎಂದು ಹೇಳಿಕೆ ಕೊಟ್ಟರು. ಸಿಕ್ಕಾ ಅವರ ಈ ಹೇಳಿಕೆಯನ್ನು ಹಲವು ಸೆಕ್ಯುಲರ್ ವಾದಿಗಳು ಪ್ರಶ್ನಿಸಿದರು. ಆ ಪೈಕಿ ಪತ್ರಕರ್ತೆ ಬರ್ಕಾ ದತ್ತ ಕೂಡ ಒಬ್ಬರು. ‘ಇನ್ಫೋಸಿಸ್ ನ ಆಡಳಿತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಜಾತಿಯ ಆಯಾಮ ನೀಡುವುದು ಎಷ್ಟು ಸರಿ? ಉತ್ತರ ಪ್ರದೇಶದ ಚುನಾವಣೆ ಸಂದರ್ಭದಲ್ಲೂ ರಾಜಕಾರಣಿಗಳು ಈ ರೀತಿಯಾಗಿ ಮಾತನಾಡುತ್ತಿಲ್ಲ’ ಎಂದು ಬರ್ಕಾ ದತ್ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದರು. ಬರ್ಕಾ ದತ್ ಅವರ ಈ ಪ್ರಶ್ನೆಗೆ ಇತರೆ ಟ್ವಿಟಿಗರು ತಕ್ಕ ಉತ್ತರವನ್ನೇ ಕೊಟ್ಟರು. ಆ ಟ್ವೀಟ್ ಗಳ ಪೈಕಿ ಕೆಲವು ಇಲ್ಲಿವೆ.

  • ಕ್ರತುಪ್ರಾ: ಶಾರುಖ್ ಖಾನ್ ತಾನು ಮುಸ್ಲಲ್ಮಾನನಾಗಿರಲು ಹೆಮ್ಮೆ ಪಡುತ್ತೇನೆ ಎಂದು ಹೇಳಿಕೊಳ್ಳಬಹುದು, ಆದರೆ ಕ್ಷತ್ರೀಯ ಎಂದು ಹೇಳಿಕೊಂಡರೆ ಅದು ಕೋಮುವಾದವಾಗುತ್ತದೆಯೇ?
  • ದೀಪಿಕಾ: ಕ್ಷತ್ರೀಯ ಎಂಬುದು ಒಂದು ಗುಣವೇ ಹೊರತು ಜಾತಿ ಅಲ್ಲ…
  • ನನ್ನ ಧರ್ಮವನ್ನು ಹೆಮ್ಮೆಯಿಂದ ತೊಳೆನ ಮೇಲೆ ಹೊತ್ತು ಸಾಗುತ್ತೇನೆ… ಎಂದ ಪತ್ರಕರ್ತೆ ರಾಣಾ ಅಯೂಬ್ ಮಾತು ಪತ್ರಿಕೋದ್ಯಮಕ್ಕೆ ಸಹ್ಯವಾಗುತ್ತದೆ, ಆದರೆ ಹಿಂದು ಆಗಿರುವುದಕ್ಕೆ ನಾಚಿಕೆ ಪಡಬೇಕೆ?

ಆಶ್ಚರ್ಯ ಏನೆಂದರೆ, ಹೀಗೆಲ್ಲ ಹಿಂದು ಸ್ಮಶಾನದ ಬಗ್ಗೆ ಮಾತಾಡಿದ್ದಕ್ಕೆ ಆಕ್ಷೇಪ ಹಾಗೂ ಕ್ಷತ್ರಿಯ ಹೇಳಿಕೆಯಲ್ಲಿ ಜಾತಿ ಹುಡುಕುವವರಿಗೆ ಬಾಲಿವುಡ್ ನಟಿ ಕರಿನಾ ಕಪೂರ್ ತನ್ನ ಮಗನ ಕುರಿತಾಗಿ ನೀಡಿದ ಹೇಳಿಕೆ ಮಾತ್ರ ಆಕ್ಷೇಪಾರ್ಹ ಎನಿಸದೇ ಇರೋದು.  ‘ನನ್ನ ಮಗ ತೈಮುರ್ ಅಲಿ ಖಾನ್ ಅತ್ಯಂತ ಸುಂದರವಾಗಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆತನಲ್ಲಿ ಪಠಾಣನ ಗುಣಗಳಿರುವುದು ಅದಕ್ಕೆ ಕಾರಣ’ ಎಂಬುದು ಕರಿನಾ ಅವರ ಹೇಳಿಕೆ. ಕರಿನಾ ಕಪೂರ್ ತನ್ನ ಮಗನ ವಿಚಾರದಲ್ಲಿ ಹೆಮ್ಮೆಯಿಂದ ಧರ್ಮದ ಪ್ರಸ್ತಾಪ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲವಾದರೆ, ಸಿಕ್ಕಾ ಅವರ ಹೇಳಿಕೆ ಮಾತ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವುದೇಕೆ?

taimur

ಇವೆಲ್ಲ ಈಗ ಚರ್ಚೆಯಾಗುತ್ತಿರುವ ಸಂಗತಿಗಳು. ಒಂದರ್ಥದಲ್ಲಿ ಇದೊಂದು ಹಿಂದು ಫೋಬಿಯಾ.

Leave a Reply