ವಿದ್ಯುತ್ ದರ ಏರಿಕೆಗೆ ಸರ್ಕಾರ ನಿರ್ಧಾರ, ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸುತ್ತೇನೆ ಅಂದ್ರು ಯಡಿಯೂರಪ್ಪ

ರಾಜ್ಯ ಸರ್ಕಾರದ ವೈಫಲ್ಯಗಳ ಜನಾಂದೋಲನ ನಡೆಸುತ್ತಿರುವ ರಾಜ್ಯ ಬಿಜೆಪಿ ಇಂದು ನಗರದ ಟೌನ್ ಹಾಲ್ ಬಳಿ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಹೆಚ್ಚಾಗಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರಾದ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಡಿಜಿಟಲ್ ಕನ್ನಡ ಟೀಮ್:

ವಿದ್ಯುತ್ ಬೆಲೆ ಏರಿಕೆ

ಸತತ ಬರಗಾಲ ಹಾಗೂ ಮಳೆಯ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ದರವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಕರಲಿಂಗೇಗೌಡರ ಜತೆ ಸುದೀರ್ಘ ಚರ್ಚೆ ನಡೆಸಿದ ನಂತರ  ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ವಿದ್ಯುತ್ ಉತ್ಪಾದನೆ ಕುಸಿತವಾಗಿರುವುದರಿಂದ ಎಸ್ಕಾಂಗಳು ಮುಕ್ತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಕೊಟ್ಟು ವಿದ್ಯುತ್ ಖರೀದಿ ಮಾಡುತ್ತಿವೆ. ಈಗಾಗಲೇ ಗ್ರಾಹಕರಿಂದ ಕಡಿಮೆ ದರ ಪಡೆಯುತ್ತಿದ್ದು, ನಷ್ಟದ ಪ್ರಮಾಣ ಹೆಚ್ಚಾಗಿದೆ. ಇದನ್ನು ಸರಿದೂಗಿಸಲು ಮಂಡಳಿ ಮುಂದಾಗಿದೆ. ಸರ್ಕಾರದ ಪರವಾಗಿ ನಾನು ಆಯೋಗದ ಅಧ್ಯಕ್ಷರಿಗೆ ಅಭಿಪ್ರಾಯ ತಿಳಿಸಿದ್ದೇನೆ. ಯಾರಿಗೂ ದುಬಾರಿ ಹಾಗೂ ನಷ್ಟವಾಗಬಾರದು ಎಂಬ ಕಾರಣಕ್ಕೆ ಎಲ್ಲ ಶಾಸಕರ ಅಭಿಪ್ರಾಯ ಪಡೆಯಲು ಸರ್ಕಾರ ಮುಂದಾಗಿದೆ’ ಎಂದರು.

ಇನ್ನು ಒಕ್ಕಲಿಗರ ಸಂಘ ಭಿನ್ನಮತ ಸೌಹಾರ್ದಯುತವಾಗಿ ಬಗೆಹರಿಸಲು ಎಲ್ಲ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು. ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ರದ್ದುಪಡಿಸಿರುವ ಸುಪ್ರೀಂ ಕೋರ್ಟಿನ ಆದೇಶವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಸುದ್ದಿ ಸಾಲುಗಳು…

  • ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ಸಿದ್ದರಾಮಯ್ಯ ಮಾಡಿರುವ ಅಕ್ರಮಗಳ ದಾಖಲೆ ಪರಿಶೀಲಿಸಿ ಜೈಲಿಗೆ ಅಟ್ಟದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಸವಾಲು ಹಾಕಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಆಯೋಜಿಸಿರುವ ಜನಾಂದೋಲನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಿದ್ದರಾಮಯ್ಯ ಕುಟುಂಬದ ಭ್ರಷ್ಟಾಚಾರ ಬಯಲಿಗೆಳೆಯುತ್ತೇನೆ. ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿಯಲ್ಲಿ ಸಿದ್ದರಾಮಯ್ಯ ಹೈಕಮಾಂಡಿಗೆ ಹಣ ಕೊಟ್ಟಿರುವುದು ಇರಲಿಲ್ಲ ಎಂದಾದರೆ ನಾನು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ’ ಎಂದರು.
  • ಚಾಮರಾಜನಗರ ಜಿಲ್ಲೆ ಬಂಡೀಪುರ ವಲಯದ ಕಲ್ಕೆರೆ ಅರಣ್ಯ ಭಾಗದಲ್ಲಿ ಬೆಂಕಿ ನಂದಿಸುವಾಗ ಸಜೀವದಹನವಾದ ಅರಣ್ಯ ರಕ್ಷಕ ಮುರುಗೆಪ್ಪ ಅವರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
  • ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯಪ್ರದೇಶ ಎಂದು ಘೋಷಿಸುವ ಅಧಿಕಾರವನ್ನು ರಾಜ್ಯ ವನ್ಯಜೀವಿ ಮಂಡಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ವನ್ಯಜೀವಿ ಮಂಡಳಿಯ 9ನೇ ವಿಶೇಷ ಸಭೆ ನಡೆಯಿತು. ಈ ಸಭೆ ವೇಳೆ ಕಪ್ಪತಗುಡ್ಡ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
  • ನಾಗಾಲ್ಯಾಂಡಿನ ಮುಂಖ್ಯಮಂತ್ರಿ ಸ್ಥಾನಕ್ಕೆ ಜೈಲಾಂಗ್ ಅವರು ರಾಜಿನಾಮೆ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿ ಓದಿ.

Leave a Reply