ವಿಮೆಗಾಗಿ ಕಟ್ಟುವ ಕಂತು(ಪ್ರೀಮಿಯಂ) ಖರ್ಚೆ? ಅಥವಾ ಹೂಡಿಕೆಯೇ?

authors-rangaswamyಕಳೆದ ಎರಡು ದಶಕದಿಂದ ದುಬೈನಲ್ಲಿ ವಾಸಿಸುತ್ತಿರುವ ಪ್ರವೀಣ್ ಸರಾಪುರೆ ನನ್ನ ಬಾಲ್ಯದ ಗೆಳೆಯ. ಪ್ರತಿ ವರ್ಷ ವಿಮೆಯ ಕಂತು ಎರಡು ಲಕ್ಷ ಮೀರಿದೆ. ಅದರಿಂದ ಹೆಚ್ಚಿನ ಲಾಭ ಆದಂತೆ ತೋರುತ್ತಿಲ್ಲ. ವಿಮೆ ನಿಜಕ್ಕೂ ಉತ್ತಮ ಹೂಡಿಕೆಯೇ? ಎನ್ನುವುದು ಆತನ ಪ್ರಶ್ನೆ.

ಸರಳವಾಗಿ ಹೇಳಬೇಕೆಂದರೆ ಇಲ್ಲ. ವಿಮೆಯನ್ನು ಖರ್ಚು ಎಂದು ನೋಡಬೇಕೇ ಹೊರತು ಹೂಡಿಕೆ ಎಂದಲ್ಲ. ವಿಮೆಗಾಗಿ ಕಟ್ಟಿದ ಕಂತು ಹಣ (ಪ್ರೀಮಿಯಂ) ಏನೂ ಅವಘಡ ಸಂಭವಿಸದರೆ ಹೋದರೆ ವಾಪಸ್ಸು ಬರುವುದಿಲ್ಲ ಎನ್ನುವುದನ್ನು ನಾವು ಭಾರತೀಯರು ಒಪ್ಪಲು ತಯಾರಿಲ್ಲ. ನಮ್ಮ ಮನಸ್ಥಿತಿಯ ಅರಿತ ನುರಿತ ಜನ ವಿಮೆ ಮತ್ತು ಹೂಡಿಕೆ ಒಂದೇ ಎನ್ನುವ ಭಾವನೆ ಜನರ ಮನಸ್ಸಿನಲ್ಲಿ ಬಿತ್ತಿದ್ದಾರೆ. ಹೀಗಾಗಿ ವಿದ್ಯಾವಂತ ಜನರಲ್ಲೂ ಖರ್ಚು ಮತ್ತು ಹೂಡಿಕೆ ನಡುವೆ ಗೊಂದಲ ಸೃಷಿಯಾಗಿದೆ. ಯಾವುದು ನಮಗೆ ಹೆಚ್ಚು ಲಾಭ ತಂದುಕೊಡುವುದೋ ಅದು ಹೂಡಿಕೆ. ಪಾಶ್ಚಾತ್ಯ ದೇಶಗಳಲ್ಲಿ ವಿಮೆಯನ್ನು ಖರ್ಚು ಎಂದು ಪರಿಗಣಿಸಲಾಗಿದೆ. ಇತ್ತೀಚಿಗೆ ನಮ್ಮಲ್ಲೂ ಉತ್ತಮ ಫೈನಾನ್ಸಿಯಲ್ ಅಡ್ವೈಸರ್ ಗಳು ವಿಮೆಯನ್ನು ಖರ್ಚು ಎಂದು ನೋಡಲು ತಮ್ಮ ಗ್ರಾಹಕರಿಗೆ ಹೇಳುತ್ತಾರೆ. ಆದರೆ ನಮ್ಮಲ್ಲಿ ಫೈನಾನ್ಸಿಯಲ್ ಅಡ್ವೈಸರ್ ಬಳಿ ಹೋಗುವರ ಸಂಖ್ಯೆ ಬಹಳ ಕಡಿಮೆ. ಪಕ್ಕದ ಮನೆಯವರೋ, ದೂರದ ಸಂಬಂಧಿಯೋ, ಸ್ನೇಹಿತನೋ ವಿಮಾ ಏಜೆಂಟ್ ಆಗಿದ್ದು ಆತನ ಹೇಳಿಕೆಯನ್ನು ಕೇಳಿ ನಿರ್ಧರಿಸಿ ಬಿಡುತ್ತಿವೆ. ವೃತ್ತಿನಿರತ ವ್ಯಕ್ತಿಯ ಸಲಹೆ ಹೇಗೆ ಉಪಯೋಗಕ್ಕೆ ಬರುತ್ತದೆ, ಹಾಗೆಯೇ ವಿಮೆ ಹೂಡಿಕೆಯಲ್ಲ ಎನ್ನುವುದನ್ನು ತಿಳಿಸಲು ಒಂದು ಉದಾಹರಣೆ ನೋಡೋಣ.

ವಿಮಾ ಏಜೆಂಟ್ ಒಬ್ಬರು ನಿಮಗೆ 10 ಲಕ್ಷಕ್ಕೆ ಎಂಡೋಮೆಂಟ್ ಪಾಲಿಸಿ ಕೊಳ್ಳಲು ಹೇಳುತ್ತಾರೆ. ಮಾಸಿಕ ಐದು ಸಾವಿರ ರೂಪಾಯಿ ಕಂತು (ಪ್ರೀಮಿಯಂ )15 ವರ್ಷಗಳವರೆಗೆ ಕಟ್ಟಬೇಕು. ಅಂದರೆ ನೀವು 15 ವರ್ಷದಲ್ಲಿ ಕಟ್ಟಿದ ಒಟ್ಟು ಮೊತ್ತ 9 ಲಕ್ಷ. 15 ವರ್ಷದ ನಂತರ 10 ಲಕ್ಷ ನಿಗದಿತ ಹಣ ಮತ್ತು 2 ಲಕ್ಷ ರೂಪಾಯಿ ಬೋನಸ್ ಸೇರಿ ನಿಮಗೆ 12 ಲಕ್ಷ ಸಿಗುತ್ತದೆ. ಅಲ್ಲದೆ ಆಕಸ್ಮಾತ್ ಏನಾದರು ಅವಘಡ ಸಂಭವಿಸಿದರೆ ಪ್ರೀಮಿಯಂ ಕಟ್ಟುವ ಅವಶ್ಯಕತೆ ಇಲ್ಲ ನಿಗದಿತ ಹಣ ನಿಮ್ಮದಾಗುತ್ತೆ.

hana class

ನೀವು ಈ ಪಾಲಿಸಿ ಕೊಂಡು 15 ವರ್ಷದಲ್ಲಿ ಏನೂ ಅವಘಡ ಸಂಭವಿಸದೇ ಇದ್ದರೆ ನಿಮಗೆ ಸಿಕ್ಕಿದ್ದು 12 ಲಕ್ಷ.

ಈಗ ಫೈನಾನ್ಸಿಯಲ್ ಅಡ್ವೈಸರ್ ನ ಸಲಹೆಯಂತೆ ಮಾಡಿದರೆ ಏನಾಗುತ್ತೆ ನೋಡೋಣ .

ಅದೇ 10 ಲಕ್ಷಕ್ಕೆ ಟರ್ಮ್ ಪ್ಲಾನ್ ಕೊಳ್ಳೋಣ. ತಿಂಗಳಿಗೆ 250 ರೂಪಾಯಿ ಕಂತು. 15 ವರ್ಷದಲ್ಲಿ ಏನೂ ಅಪಾಯ ಸಂಭವಿಸದಿದ್ದರೆ ಪ್ರತಿ ತಿಂಗಳು ಕಟ್ಟಿದ 250 ರೂಪಾಯಿ ವಾಪಸ್ಸು ಬರುವುದಿಲ್ಲ. ಇದು ನೇರವಾಗಿ ಖರ್ಚಿಗೆ ಸೇರಿಬಿಡುತ್ತದೆ. ಮೇಲಿನ ಉದಾಹರಣೆಯಲ್ಲಿ ಪ್ರತಿ ತಿಂಗಳಿಗೆ ಕಟ್ಟಿದ ಹಣದ ಮೊತ್ತ ಐದು ಸಾವಿರ. ಅಂದರೆ ಟರ್ಮ್ ಪ್ಲಾನ್ ಕೊಂಡಿದ್ದರಿಂದ ತಿಂಗಳಿಗೆ 4750 ರೂಪಾಯಿ ಉಳಿತಾಯ ಆಯಿತು. ಇದನ್ನು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF ) ನಲ್ಲಿ ಪ್ರತಿ ತಿಂಗಳು 15 ವರ್ಷ ಹೂಡಿಕೆ ಮಾಡುತ್ತಾ ಬಂದರೆ 17.5 ಲಕ್ಷಕ್ಕೂ ಹೆಚ್ಚು ಹಣ ಬರುತ್ತದೆ. ಮತ್ತು ಈ ಹಣ ತೆರಿಗೆಯಿಂದ ಪೂರ್ಣ ವಿನಾಯತಿ ಕೂಡ ಹೊಂದಿದೆ.

ಈ ಪ್ಲಾನ್ ನೀವು ಕೊಂಡಿದ್ದರೆ ಅವಘಡ ಉಂಟಾದರೆ ನಿಮ್ಮ ಭವಿಷ್ಯ ಭದ್ರ ಏಕೆಂದರೆ ಟರ್ಮ್ ಪ್ಲಾನ್ ನಲ್ಲಿ ಕೂಡ ಆಕಸ್ಮಿಕ ಅವಘಡವಾದರೆ ನಿಮಗೆ 10 ಲಕ್ಷ ಸಿಗುತಿತ್ತು . ಏನೂ ಆಗದೆ ಹೋದರೆ ಕಟ್ಟಿದ ಹಣ ಖರ್ಚು. ಮತ್ತು PPF  ಮೇಲಿನ ಹೂಡಿಕೆ 17.5 ಲಕ್ಷ ಗಳಿಸಿ ಕೊಡುತ್ತದೆ. ಅಂದರೆ ಸಾಂಪ್ರದಾಯಿಕ ವಿಮೆಯ ಮೇಲಿನ ಹೂಡಿಕೆಗಿಂತ 5 ಲಕ್ಷ ರೂಪಾಯಿ ಹೆಚ್ಚು!

ವಿಮೆ ಮತ್ತು ಹೂಡಿಕೆ ಎರಡು ವಿಭಿನ್ನ ಮತ್ತು ವಿಶಿಷ್ಟ ಸರಕುಗಳು. ವಿಮೆಯನ್ನು ಖರ್ಚು ಎಂದು ತಿಳಿದು ಹೂಡಿಕೆಗೆ ಇತರ ಮಾರ್ಗಗಳ ಬಳಸಿದರೆ ನಿಗದಿತ ಸಮಯದಲ್ಲಿ ಹೆಚ್ಚಿನ ಹಣ ಗಳಿಸಬಹುದು.  ನಮ್ಮ ದೇಶದಲ್ಲಿ ವಿಮೆ ಮತ್ತು ಹೂಡಿಕೆ ಎರಡನ್ನೂ ಒಂದೇ ಎನ್ನುವ ಮಟ್ಟಿಗೆ ಜಾಳಾಗಿ ಉಪಯೋಗಿಸುತ್ತವೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.

ವೃತ್ತಿಪರರ ಸಲಹೆ ಸಹಾಯ ಪಡೆದು ಹೂಡಿಕೆ ಮಾಡುವುದು ಎಲ್ಲಾ ತರದಲ್ಲೂ ಸೂಕ್ತ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಅದೇಕೆ ಒಂದು ರುಪಾಯಿಗೆ ಒಂದು ಡಾಲರ್ ಸಮವಲ್ಲ? ಸರ್ಕಾರಗಳಿಗೆ ಹಣದ ಕೊರತೆಯಾದರೆ ಹೆಚ್ಚು ನೋಟುಗಳನ್ನು ಮುದ್ರಿಸಿದರಾಗದೇ? .. ಈ ಮಾದರಿಯ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಕೇಳುವುದಕ್ಕೆ ಮುಜುಗರವೂ ಆಗಿದ್ದಿರಬಹುದು. ಅಂಥ ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

1 COMMENT

Leave a Reply