ಆರೆಸ್ಸೆಸ್ ಹಿರಿಯ ಪ್ರಚಾರಕ ಮೈ.ಚ.ಜಯದೇವ್ ವಿಧಿವಶ, ಮಂಗಳವಾರ ಮೈಸೂರಿನಲ್ಲಿ ಅಂತ್ಯಕ್ರಿಯೆ

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಆರೆಸ್ಸೆಸ್ ಸಂಘಟನೆಯ ಬೇರು ಗಟ್ಟಿ ಮಾಡಿದವರಲ್ಲಿ ಪ್ರಮುಖರಾದ ಮೈ. ಚ. ಜಯದೇವ (ಮೈಸೂರು ಚನ್ನಬಸಪ್ಪ ಜಯದೇವ್) ಅವರು ಸೋಮವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 85 ವರ್ಷದ ಜಯದೇವ್ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯಾಹ್ನ 12 ಗಂಟೆಯಿಂದ ಇವರ ಪಾರ್ಥಿವ ಶರೀರವನ್ನು ಆರೆಸ್ಸೆಸ್ ಕೇಂದ್ರ ಕಚೇರಿ ಕೇಶವಕೃಪಾದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಮೈಸೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

1950ರ ದಶಕದಲ್ಲಿ ಆರೆಸ್ಸೆಸ್ ನತ್ತ ಆಕರ್ಷಿತರಾದ ಜಯದೇವ್ ಅವರು ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡರು. 1960ರಲ್ಲಿ ಆರೆಸ್ಸೆಸ್ ಬೆಂಗಳೂರು ಮಹಾನಗರ ಕಾರ್ಯವಾಹ ಜವಾಬ್ದಾರಿ ಸ್ವೀಕರಿಸಿದ ಅವರು ಇಲ್ಲಿ ಸಂಘಟನೆಯ ಬೇರುಗಳನ್ನು ಗಟ್ಟಿಗೊಳಿಸಿದರು. 1965ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ಸ್ಥಾಪನೆಯಲ್ಲಿ ಜಯದೇವ್ ಅವರ ಪಾತ್ರ ಮಹತ್ವದ್ದಾಗಿದೆ. 1974ರ ವರೆಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಕಾರ್ಯವಾಹರಾಗಿ ಸುದೀರ್ಘಕಾಲ ಮಾರ್ಗದರ್ಶನ ಮಾಡಿದ್ದರು. ರಾಜಕೀಯ, ಸಮಾಜ ಸೇವೆ ಸೇರಿದಂತೆ ಹಲವು ವಲಯಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಗಣ್ಯರೊಂದಿಗೆ ಇವರಿಗೆ ನಿಕಟ ಒಡನಾಟವಿತ್ತು.

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬೆಗಳೂರಿನ ಬಸವನಗುಡಿಯಲ್ಲಿ ಸತ್ಯಾಗ್ರಹ ಮಾಡಿ 1975ರ ನವೆಂಬರ್ ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ನಂತರ 1977ರಲ್ಲಿ ಬಿಡುಗಡೆಯಾದರು. ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅನಾಥ ಶಿಶುನಿವಾಸ, ಅಬಲಾಶ್ರಮ ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗೆ ಮಾರ್ಗದರ್ಶಕರಾಗಿ ನಿಂತರು. ಜಯದೇವ್ ಅವರ ಅಗಲಿಕೆಗೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಆರೆಸ್ಸೆಸ್ ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಷಿ, ಸಹಸರಕಾರ್ಯವಾಹ ಸುರೇಶ್ ಸೋನಿ, ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

Leave a Reply