ಜಾಹಿರಾತು ಕ್ಷೇತ್ರದಲ್ಲೂ ಶತಕ ಸಿಡಿಸಿದ ಕೊಹ್ಲಿ! ಪೂಮಾ ಕಂಪನಿ ಜತೆ ಪಕ್ಕಾ ಆಯ್ತು ₹100 ಕೋಟಿ ಒಪ್ಪಂದ!

ಡಿಜಿಟಲ್ ಕನ್ನಡ ಟೀಮ್:

ಪ್ರಸ್ತುತ ವಿಶ್ವ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೊಹ್ಲಿ ಈಗ ಮೈದಾನದ ಆಚೆಯೂ ಭರ್ಜರಿ ಶತಕವೊಂದನ್ನು ಬಾರಿಸಿದ್ದಾರೆ. ಅದು ರನ್ ರೂಪದಲ್ಲಿ ಅಲ್ಲ ಹಣದ ರೂಪದಲ್ಲಿ! ಹೌದು, ಪೂಮಾ ಕಂಪನಿಯ ರಾಯಭಾರಿಯಾಗಿ ಒಪ್ಪಂದಕ್ಕೆ ಸಹಿ ಹಾಕಿರುವ ಕೊಹ್ಲಿ ಆ ಮೂಲಕ ತಮ್ಮ ಖಾತೆಗೆ ₹110 ಕೋಟಿ ಇಳಿಸಿಕೊಂಡಿದ್ದಾರೆ.

ಸದ್ಯದ ಕ್ರಿಕೆಟ್ ತಲೆಮಾರಿನ ಶ್ರೇಷ್ಠ ಆಟಗಾರ ಎಂಬ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಹಿಂದೆ ವಿವಿಧ ಕಂಪನಿಗಳು ತಮ್ಮ ರಾಯಭಾರಿಯಾಗಿಸಿಕೊಳ್ಳಬೇಕೆಂದು ದುಂಬಾಲು ಬಿದ್ದಿವೆ. ಅದರ ಪರಿಣಾಮವಾಗಿ ಪೂಮಾ ಕಂಪನಿ ಶತಕೋಟಿ ಸಂಭಾವನೆ ನೀಡುತ್ತಾ ಕೊಹ್ಲಿ ಅವರನ್ನು ತಮ್ಮ ಕಂಪನಿಯ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಇದರೊಂದಿಗೆ ಒಂದೇ ಕಂಪನಿಯ ಜತೆ ಶತಕೋಟಿಯ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಹಾಗೂ ಮಹೇಂದ್ರ ಸಿಂಗ್ ಧೋನಿ ವಿವಿಧ ಬ್ರ್ಯಾಂಡ್ ಹಾಗೂ ಪ್ರತಿಭಾ ನಿರ್ವಹಣಾ ಸಂಸ್ಥೆಗಳ ರಾಯಭಾರಿಯಾಗಿ ಶತಕೋಟಿ ಒಪ್ಪಂದ ಬಾಚಿಕೊಂಡಿದ್ದರು. ಸಚಿನ್ ಅವರು 2006ರಲ್ಲಿ ಸಾಚಿ ಮತ್ತು ಸಾಚಿ ಐಕಾನಿಕ್ಸ್ ಎಂಬ ಜಾಹೀರಾತು ಕಂಪನಿ ಜತೆ ಮೂರು ವರ್ಷಗಳ ಅವಧಿಗೆ ₹175 ಕೋಟಿ ಹಾಗೂ ಮಹೇಂದ್ರ ಸಿಂಗ್ ಧೋನಿ ರಿತಿ ಸ್ಪೋರ್ಟ್ಸ್ ಜತೆಗೆ ₹180 ಕೋಟಿಯ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆ ಮೂಲಕ ಕೊಹ್ಲಿ ಶತಕೋಟಿ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಮೂರನೇ ಕ್ರಿಕೆಟ್ ಆಟಗಾರನಾಗಿದ್ದಾರೆ.

ಎಂಟು ವರ್ಷಗಳ ಕಾಲಾವಧಿಗೆ ಈ ಒಪ್ಪಂದವಾಗಿದ್ದು, ಆ ಮೂಲಕ ಜಮೈಕಾದ ಸ್ಪ್ರಿಂಟರ್ ಗಳಾದ ಉಸೇನ್ ಬೋಲ್ಟ್, ಅಸಾಫಾ ಪೊವೆಲ್, ಫುಟ್ಬಾಲ್ ಆಟಗಾರರಾದ ಥೈರಿ ಹೆನ್ರಿ ಮತ್ತು ಒಲಿವರ್ ಗಿರೌಡ್ ಜತೆ ಈ ಕಂಪನಿಗೆ ರಾಯಭಾರಿಯಾಗಿದ್ದಾರೆ.

ಈ ಒಪ್ಪಂದವನ್ನು ಪಡೆದ ನಂತರ ಮಾತನಾಡಿರುವ ವಿರಾಟ್ ಕೊಹ್ಲಿ ಹೇಳಿದಿಷ್ಟು… ‘ಪುಮಾದಂತಹ ಪ್ರತಿಷ್ಠಿತ ಕಂಪನಿಗೆ ರಾಯಭಾರಿಯಾಗಿ ವಿಶ್ವದ ಖ್ಯಾತನಾಮ ಅಥ್ಲೀಟ್ ಗಳ ಸಾಲಿನಲ್ಲಿ ಸೇರ್ಪಡೆಯಾಗಿರುವುದು ನನ್ನ ಅದೃಷ್ಟ. ಈ ಕಂಪನಿ ಕೇವಲ ಉಸೇನ್ ಬೋಲ್ಟ್ ರಂತಹ ಈ ತಲೆಮಾರಿನ ತಾರೆಯರನ್ನು ರಾಯಭಾರಿಯನ್ನಾಗಿ ಹೊಂದಿಲ್ಲ. ಫುಟ್ಬಾಲ್ ಇತಿಹಾಸದ ದಂತಕಥೆಗಳಾದ ಪೀಲೆ, ಮರಡೋನಾ, ಥೈರಿ ಹೆನ್ರಿಯಂತಹ ಇತರೆ ಸರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳಿಗಳನ್ನು ರಾಯಭಾರಿಯನ್ನಾಗಿ ಪಡೆದಿದೆ. ನಾನು ಮತ್ತು ಪೂಮಾ ಸುದೀರ್ಘ ಸಹಯೋಗಕ್ಕೆ ಮುಂದಾಗಿದ್ದು, ಭಾರತದ ಮಾರುಕಟ್ಟೆಯಲ್ಲಿ ಪೂಮಾ ಗಳಿಸುತ್ತಿರುವ ಯಶಸ್ಸು ಗಮನಾರ್ಹ.’

Leave a Reply