ಕೇಂದ್ರದಲ್ಲಿರೋದು ಮಡಿವಂತಿಕೆಯ ಸರ್ಕಾರ ಅಂದಿರಾ? ‘ಸಾಥಿಯಾ’ ಮೂಲಕ ಲೈಂಗಿಕ ಅರಿವು, ಯೌವನದ ಆತಂಕಗಳಿಗೆ ಸಿಗಲಿದೆ ಸಮಾಧಾನ!

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದ ಬಿಜೆಪಿ ಸರ್ಕಾರಕ್ಕಿರುವ ಸಂಪ್ರದಾಯಬದ್ಧ ಇಮೇಜಿಗೆ ವ್ಯತಿರಿಕ್ತವಾದ ಲಿಬರಲ್ ಇಮೇಜಿನ ಯೋಜನೆಯೊಂದು ಆರೋಗ್ಯ ಇಲಾಖೆಯಿಂದ ಶುರುವಾಗಿದೆ.

ಹರೆಯಕ್ಕೆ ಕಾಲಿಡುವ ಹೊತ್ತಿನಲ್ಲಿ ಭಿನ್ನ ಲಿಂಗಿಗಳ ಜತೆ, ಕೆಲವೊಮ್ಮೆ ಸಮಾನ ಲಿಂಗಿಗಳಲ್ಲೇ ಆಕರ್ಷಣೆ ಉಂಟಾದಾಗ ಯುವ ಮನಸ್ಸುಗಳು ಹಲವು ಪ್ರಶ್ನೆಗಳನ್ನು ಎದುರಿಸುತ್ತವಲ್ಲ? ಇವಕ್ಕೆಲ್ಲ ಸಮಾಧಾನ ಹೇಳುವುದು ಸ್ವಯಂಸೇವಕರನ್ನೊಳಗೊಂಡ ಸಾಥಿಯಾ ಕಾರ್ಯಕ್ರಮದ ಉದ್ದೇಶ.

ಯಾವ ಆಕರ್ಷಮೆಗಳೂ ತಪ್ಪಲ್ಲ, ಅವನ್ನು ನಿಭಾಯಿಸುವ ಕಲೆ ಗೊತ್ತಿರಬೇಕೆಂಬುದನ್ನು ಮನದಟ್ಟು ಮಾಡಿಸಲಿದೆ ಈ ಕಾರ್ಯಕ್ರಮ.

ಸದ್ಯ ದೇಶದ 26 ಕೋಟಿ ಹದಿಹರೆಯದ ಯುವಕ ಯುವತಿಯರಿಗೆ ಆರೋಗ್ಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವ ಕೇಂದ್ರ ಸರ್ಕಾರ, ಆರೋಗ್ಯ ಇಲಾಖೆ ಮೂಲಕ ಲೈಂಗಿಕ ಕ್ರಿಯೆ, ಧೂಮಪಾನದ ಅಪಾಯ, ಹದಿಹರೆಯದಲ್ಲಿ ಮಕ್ಕಳ ವರ್ತನೆ- ಮಾನಸಿಕ ಸ್ಥಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ.

ಬಾಲ್ಯದಿಂದ ವಯಸ್ಕ ಹಂತಕ್ಕೆ ತಲುಪುವ ಹಂತದಲ್ಲಿ ಸಾಮಾನ್ಯವಾಗಿ ಅನೇಕ ವಿಚಾರಗಳ ಬಗ್ಗೆ ಯುವಕ, ಯುವತಿಯರಲ್ಲಿ ಪ್ರಶ್ನೆ, ಗೊಂದಲಗಳು ಉದ್ಭವಿಸುತ್ತವೆ. ಈ ಹಂತದಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯ ತರಬೇತಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಮಕ್ಕಳಲ್ಲಿ ಅರಿವು ಮೂಡಿಸಲು 1.65 ಲಕ್ಷ ಮಂದಿ ಉನ್ನತ ತರಬೇತುದಾರರನ್ನು ಬಳಸಿಕೊಳ್ಳಲು ಮುಂದಾಗಿದೆ. ಈ ತರಬೇತುದಾರರನ್ನು ‘ಸಾಥಿಯಾ’ ಎಂದು ಕರೆಯಲು ನಿರ್ಧರಿಸಿದ್ದು, ಇವರಿಗೆ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಮೂಲಕ ಸೂಕ್ತ ತರಬೇತಿ ನೀಡಲಾಗುತ್ತದೆ. ಈ ಯೋಜನೆಗೆ ಸೋಮವಾರ ಆರೋಗ್ಯ ಇಲಾಖೆ ಕಾರ್ಯದರ್ಶಿ ಸಿ.ಕೆ ಮಿಶ್ರಾ ಚಾಲನೆ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಯುವಕ ಯುವತಿಯರಿಗೆ ಅರಿವು ಮೂಡಿಸುವ ಪಠ್ಯಕ್ರಮಗಳನ್ನು ವಿಶ್ವಸಂಸ್ಥೆ ಜನಸಂಖ್ಯಾ ನಿಧಿಯ ಸಹಯೋಗದಲ್ಲಿ ರೂಪಿಸಲಾಗಿದ್ದು, ಇದರಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುವುದು.

‘ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಪ್ರತಿಯೊಬ್ಬರಲ್ಲೂ ತನ್ನದೇ ಲಿಂಗ ಅಥವಾ ವಿರುದ್ಧ ಲಿಂಗದವರ ಮೇಲೆ ಆಕರ್ಷಣೆ ಹುಟ್ಟುವುದು ಹಾಗೂ ಪ್ರೀತಿಸುವುದು ಸಹಜ. ಇಂತಹ ಭಾವನೆಗಳ ಬಗ್ಗೆ ಪರಸ್ಪರ ಮಾತನಾಡಿಕೊಳ್ಳುವುದು ಹಾಗೂ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಇದು ಪರಸ್ಪರ ಗೌರವ ಹಾಗೂ ಒಪ್ಪಿಗೆಯ ಮೂಲಕ ಮಾತ್ರ ನಡೆಯಬೇಕು. ಯಾರೇ ಒಬ್ಬರು ಈ ವಿಚಾರದಲ್ಲಿ ಒಪ್ಪಿಗೆ ನೀಡದಿದ್ದರೆ ಅವರ ನಿರ್ಧಾರವನ್ನು ಗೌರವಿಸಬೇಕು. ಒಂದು ಹುಡುಗಿ ತನಗೆ ಬೇಡ ಎನಿಸಿ ತಿರಸ್ಕರಿಸಿದರೆ ಅದನ್ನು ಹುಡುಗ ಅರ್ಥ ಮಾಡಿಕೊಳ್ಳಬೇಕು’ ಎಂದು ಪಠ್ಯಕ್ರಮದಲ್ಲಿ ತಿಳಿಸಲಾಗಿದೆ.

ಸಲಿಂಗ ಲೈಂಗಿಕ ಸಂಬಂಧದ ವಿಚಾರವಾಗಿ ನಿರ್ದಿಷ್ಟ ಕಾನೂನನ್ನು ಸರ್ಕಾರ ಇನ್ನಷ್ಟೇ ತರಬೇಕಿದ್ದು, ನ್ಯಾಯಾಲಯದಲ್ಲೂ ಈ ವಿಚಾರವಾಗಿ ಸಾಕಷ್ಟು ಪರ ವಿರೋಧ ವಾದಗಳು ಮಂಡನೆಯಾಗುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಲಿಂಗ ಕಾಮದ ಬಗ್ಗೆಯೂ ಅರಿವು ಮೂಡಿಸುತ್ತಿರುವುದು ಗಮನ ಸೆಳೆದಿದೆ. ಅಲ್ಲದೆ ಪ್ರೀತಿ ಪ್ರೇಮದಂತಹ ವಿಚಾರದಲ್ಲಿ ಪರಸ್ಪರ ಒಪ್ಪಿಗೆ ಹಾಗೂ ಗೌರವ ಇರಬೇಕು ಎಂದು ಅರಿವು ಮೂಡಿಸುವುದು ಅಗತ್ಯ.

ಇನ್ನು ಬಾಲಕ ಹಾಗೂ ಬಾಲಕಿಯರ ವರ್ತನೆಗೆ ಸಂಬಂಧಿಸಿದಂತೆ ಈ ಪಠ್ಯಕ್ರಮದಲ್ಲಿ ನೀಡಿರುವ ಮಾಹಿತಿ ಹೀಗಿದೆ… ‘ಒಬ್ಬ ಬಾಲಕ ತನ್ನ ಭಾವನೆಯನ್ನು ವ್ಯಕ್ತಪಡಿಸಲು ಆತ ಅಳುತ್ತಾನೆ ಎಂದಾದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಹುಡುಗನಿಗೆ ಮೃದು ಹಾಗೂ ನಾಚಿಕೆ ಸ್ವಭಾವ ಇದ್ದರೆ ಅದು ದೋಷವಲ್ಲ. ಗಡಸುತನ ಹಾಗೂ ಆಕ್ರಮಣಕಾರಿ ಮನೋಭಾವನೆಯಷ್ಟೇ ಬಾಲಕನ ಗುಣವಲ್ಲ. ಹುಡುಗನಿಗೆ ಅಡುಗೆ, ವಿನ್ಯಾಸದಂತಹ ಮಹಿಳೆಯರ ಆಸಕ್ತಿ ವಿಷಯಗಳಲ್ಲಿ ತೊಡಗಿಸಿಕೊಂಡರೆ ಆತ ಪುರುಷನಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಬಾಲಕಿಯರು ತುಂಬಾ ಮಾತನಾಡುವುದು, ಹುಡುಗನಂತೆ ಉಡುಗೆ ತೊಡುವುದು, ಆಟವಾಡುವುದು ಮಾಡಿದರೆ ತಪ್ಪಿಲ್ಲ. ಇಂತಹವರನ್ನು ‘ಹೆಣ್ಣಿಗ’ ಅಥವಾ ‘ಗಂಡುಬೀರಿ’ ಎಂದು ಹಣೆಪಟ್ಟಿ ಕಟ್ಟುವುದು ತಪ್ಪು…’

ಅಷ್ಟೇ ಅಲ್ಲದೆ, ಎಚ್ಐವಿ ಹಾಗೂ ಇತರೆ ಲೈಂಕಿಗ ರೋಗಗಳ ಬಗ್ಗೆ, ಬಾಲಕ ಮತ್ತು ಬಾಲಕಿಯರಿಗೆ ಪಿಲ್ಸ್, ನಿರೋಧ್ ಹಾಗೂ ಐಯುಸಿಡಿಗಳ ಬಗ್ಗೆ ಮಾಹಿತಿ ಒಳಗೊಂಡಿದೆ. ಇನ್ನು 18 ವರ್ಷದೊಳಗಿನ ಬಾಲಕಿಯರಿಗೆ ಗರ್ಭಪಾತ ಹಾಗೂ ಆ ಸಂದರ್ಭದಲ್ಲಿ ಪೋಷಕರ ಸಲಹೆಗಳ ಕುರಿತ ಮಾಹಿತಿ ನೀಡುವುದರ ಜತೆಗೆ ಹಸ್ತಮೈಥುನ ಹಾಗೂ ಅದರ ಕುರಿತಾದ ಹಲವು ಗೊಂದಲಗಳಿಗೆ ಪರಿಹಾರ ಮಾಹಿತಿಗಳನ್ನು ನೀಡಲಾಗುವುದು.

‘ಪ್ರಾಯದ ಹಂತಕ್ಕೆ ಕಾಲಿಡುತ್ತಿದ್ದಂತೆ ಮಕ್ಕಳಿಗೆ ಈ ವಿಷಯಗಳ ಕುರಿತಾದ ಮಾಹಿತಿ, ಜ್ಞಾನ ನೀಡುವುದರಿಂದ ಅವರ ವರ್ತನೆ ಹಾಗೂ ಆಲೋಚನಾ ಮಾದರಿ ಬದಲಾಗಿ ಸಮಾಜದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂಬುದು ಈ ಯೋಜನೆಯ ಉದ್ದೇಶವಾಗಿದೆ’ ಎಂದು ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ಇಲಾಖೆಯಿಂದ ತರಬೇತಿ ಪಡೆದ ಮಾರ್ಗದರ್ಶಕರು ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿಸಲಿದ್ದು, ಇವರಿಗೆ ಯಾವುದೇ ರೀತಿಯ ವೇತನ ನೀಡಲಾಗುವುದಿಲ್ಲ. ಬದಲಾಗಿ ಪ್ರತಿ ತಿಂಗಳಿಗೆ ಮೊಬೈಲ್ ರಿಚಾರ್ಜ್ ಹಾಗೂ ನಿಯತಕಾಲಿಗೆಗಳ ವೆಚ್ಚ ಭರಿಸಲಾಗುವುದು.

Leave a Reply