ಕುಡಿಯಲು ಕೆಆರ್ ಎಸ್ ತಳಮಟ್ಟದ ನೀರು ಬಳಕೆ- ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಜತೆ ಚರ್ಚೆಗೆ ಸರ್ಕಾರ ನಿರ್ಧಾರ, ಶೂಟೌಟ್: ಮತ್ತೆ ಐವರ ಬಂಧನ, ಸೈನೆಡ್ ಮಲ್ಲಿಕಾ ಸ್ಥಳಾಂತರ ಏಕೆ?

ಬೆಂಗಳೂರಿನ ಜೆ.ಸಿ ನಗರದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಕಟ್ಟಡ ತೆರವು ಕಾರ್ಯ ಮಂಗಳವಾರ ನಡೆಯಿತು.

ಡಿಜಿಟಲ್ ಕನ್ನಡ ಟೀಮ್:

ಕುಡಿಯಲು ಕೆಆರ್ ಎಸ್ ನೀರು ಬಳಕೆ

ಬೇಸಿಗೆ ಆರಂಭಿಕ ಹಂತದಲ್ಲಿ ನೀರಿನ ಅಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಯಾಶಯದ ತಳಮಟ್ಟದ (ಡೆಡ್ ಸ್ಟೋರೆಜ್) ನೀರನ್ನು ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಮೇ ತಿಂಗಳ ಅಂತ್ಯದವರೆಗೆ ಬೆಂಗಳೂರು ಹಾಗೂ ಅಣೆಕಟ್ಟು ವ್ಯಾಪ್ತಿಯ ಪಟ್ಟಣಗಳಿಗೆ ಈ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನೀರಾವರಿ ಸಚಿವ ಎಂ.ಬಿ ಪಾಟೀಲ್, ‘ಮೇ ತಿಂಗಳವರೆಗೆ ಬೆಂಗಳೂರಿಗೆ ನೀರು ಒದಗಿಸಲು ಮೂರರಿಂದ ನಾಲ್ಕು ಟಿಎಂಸಿ ನೀರು ಕೊರತೆ ಎದುರಾಗಲಿದೆ. ತಳ ಮಟ್ಟದ ನೀರನ್ನು ಮೇಲಕ್ಕೆತ್ತಲು ಪಂಪಿಂಗ್ ವ್ಯವಸ್ಥೆಗಾಗಿ ₹ 40 ಕೋಟಿ ವೆಚ್ಚ ಮಾಡಲಾಗಿದೆ. ಯಾವ ಭಾಗದಿಂದ ನೀರನ್ನು ಮೇಲಕ್ಕೆತ್ತಬೇಕು ಎನ್ನುವ ಬಗ್ಗೆ ಅಧಿಕಾರಿಗಳು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಜಲಾಶಯದ ಅಡಿಪಾಯದ ರಕ್ಷಣೆ ಹಾಗೂ ಜಲಚರಗಳ ಹಿತದೃಷ್ಠಿಯಿಂದ ಕೇವಲ ಶೇ.50 ರಷ್ಟು ನೀರನ್ನು ಮಾತ್ರ ಬಳಸಲು ನಿರ್ಧರಿಸಲಾಗಿದೆ’ ಎಂದರು.

ಮೇಕೆದಾಟು ಯೋಜನೆ ಬಗ್ಗೆ ಚರ್ಚೆ…

ಇದೇ ವೇಳೆ ಉದ್ದೇಶಿತ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿರುವ ಸಚಿವರು ಹೇಳಿದಿಷ್ಟು ‘ಮೇಕೆದಾಟು ಯೋಜನೆ ಅನುಷ್ಠಾನದಿಂದ ಉಭಯ ರಾಜ್ಯಗಳಿಗೆ ಆಗುವ ಅನುಕೂಲಗಳ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಅಧಿಕಾರಿ ಹಂತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ತಮಿಳುನಾಡಿನ ನೀರಾವರಿ ಸಚಿವರು ಹಾಗೂ ಅಲ್ಲಿನ ಮುಖ್ಯಮಂತ್ರಿಗಳ ಜತೆ ಪ್ರಥಾಮಿಕವಾಗಿ ಚರ್ಚಿಸುತ್ತೇವೆ. ತಮಿಳುನಾಡು ಸರ್ಕಾರದ ಮನವೊಲಿಕೆ ಹೊರತುಪಡಿಸಿದರೆ ಈ ಯೋಜನೆಗೆ ಯಾವುದೇ ಅಡೆತಡೆಗಳಿಲ್ಲ.’

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಗಳು…

  • ಕಡಬಗೆರೆ ಶ್ರೀನಿವಾಸ್ ಮೇಲಿನ ಕೊಲೆ ಪ್ರಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದ ವಿಶೇಷ ತಂಡ ಮತ್ತೆ ಐವರನ್ನು ಬಂಧಿಸಿದೆ. ಡಕಾಯಿತಿಗೆ ಹೊಂಚು ಹಾಕಿ ಕುಳಿತಿದ್ದ ವೇಳೆ ಸೈಲೆಂಟ್ ಸುನೀಲ್, ಒಂಟೆ ರೋಹಿತನ ಸಹಚರರಾದ ಮೀಟರ್ ಮೋಹನ್, ನಾಗ, ಬಸವ, ಶಿವ ಸೇರಿ ಐವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 24 ಆಯುದ್ಧ ವಶಪಡಿಸಿಕೊಳ್ಳಲಾಗಿದ್ದು, ಇತ್ತೀಚಿಗೆ ನಡೆದ ಶೂಟೌಟ್ ನಲ್ಲಿ ಬಳಸಲಾದ ಪಿಸ್ತೂಲ್ ಸಹ ಸೇರಿದೆ. ಅದನ್ನು ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
  • ಬೆಂಗಳೂರಿನ ಹೊರವಲಯದ ಅರಿಶಿನಕುಂಟೆ ಟೋಲ್ ಬಳಿ ಕೆಎಸ್ ಆರ್ ಟಿಸಿ ಬಸ್ ಸೋಮವಾರ ರಾತ್ರಿ ಬೆಂಕಿಗೆ ಆಹುತಿಯಾಗಿದೆ. ಈ ವೇಳೆ ಮಹಿಳೆಯೊಬ್ಬರು ಸಜೀವ ದಹನಗೊಂಡಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ. ಚಿಕ್ಕಮಗಳೂರಿನಿಂದ ಬರುತ್ತಿದ್ದ ಬಸ್ ಗೆ ಏಕಾಏಕಿ ಬೆಂಕಿ ಹೊತ್ತುಕೊಂಡಿದೆ ಎಂದು ಹೇಳಲಾಗಿದೆ.
  • ಅಕ್ರಮ ಆಸ್ತ್ರಿ ಪ್ರಕರಣದಲ್ಲಿ ಅಪರಾಧಿಯಾಗಿ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಸುರಕ್ಷತೆಗಾಗಿ ಮತ್ತೊಬ್ಬ ಖೈದಿ ಸೈನೆಡ್ ಮಲ್ಲಿಕಾಳನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಸರಣಿ ಹಂತಕಿ ಸೈನೆಡ್ ಮಲ್ಲಿಕಾ (ಕೆಂಪಮ್ಮ) ಇದ್ದ ಪಕ್ಕದ ಸೆಲ್ ನಲ್ಲೇ ಶಶಿಕಲಾ ಹಾಗೂ ಇಳವರಸಿ ಅವರನ್ನು ಇರಿಸಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಶಶಿಕಲಾ ಅವರ ಪಕ್ಕದಲ್ಲೇ ಸೈನೆಡ್ ಮಲ್ಲಿಕಾ ಅವರನ್ನು ಸ್ಥಳಾಂತರಿಸಲಾಗಿದೆ. ಜತೆಗೆ ಜೈಲಿನ ಸುತ್ತಮುತ್ತ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಖೈದಿ ಹಾಗೂ ವಿಚಾರಣಾಧೀನ ಖೈದಿಗಳನ್ನು ನೋಡಲು ಬರುವವರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.

Leave a Reply