ಮತ್ತೆ ಬರುತ್ತಿದೆಯಾ ₹ 1000 ಮುಖಬೆಲೆಯ ನೋಟು? ಹಾಗಿದ್ದಲ್ಲಿ ನೋಟು ಅಮಾನ್ಯವೆಂಬುದು ಉತ್ತರ ಸಿಗದ ಒಗಟು!

ಡಿಜಿಟಲ್ ಕನ್ನಡ ಟೀಮ್:

ನೂತನ ವಿನ್ಯಾಸದೊಂದಿಗೆ ಮತ್ತೆ ₹ 1000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ‘ಈ ವರದಿಗಳು ನಿಜವಲ್ಲ… ಸದ್ಯಕ್ಕೆ ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುವ ಯೋಚನೆ ಇಲ್ಲ’ ಎಂದಿದ್ದಾರೆ. (ಅಪ್ ಡೇಟ್ ಆದ ಮಾಹಿತಿ)

ಮತ್ತೆ 1000 ಮುಖಬೆಲೆಯ ನೋಟು ಬರುತ್ತೆ… ಬರಲ್ಲ… ಎಂಬ ಗೊಂದಲಗಳ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಹೊಸ ವಿನ್ಯಾಸದೊಂದಿಗೆ ಸಾವಿರ ಮುಖಬೆಲೆಯ ನೋಟು ಮತ್ತೆ ಮಾರುಕಟ್ಟೆಗೆ ಬರಲಿದೆ ಎಂಬ ವರದಿಗಳು ದಟ್ಟವಾಗಿ ಹರಿದಾಡುತ್ತಿವೆ. ಈ ಬಗ್ಗೆ ಆರ್ಬಿಐ ಅಧಿಕೃತವಾಗಿ ಏನೂ ಹೇಳಿಲ್ಲ. ‘ನೂತನ 1000 ನೋಟನ್ನು ಜನವರಿಯಿಂದಲೇ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಬೇಡಿಕೆಗೆ ಅನುಗುಣವಾಗಿ ಹೊಸ 500 ನೋಟು ಮುದ್ರಣ ಮಾಡಿದ ಹಿನ್ನೆಲೆಯಲ್ಲಿ 1000 ನೋಟಿನ ಮುದ್ರಣ ತಡವಾಗಿದೆ. ಈಗಾಗಲೇ ಹೊಸ 1000 ನೋಟಿನ ಮುದ್ರಣ ಆರಂಭವಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ನವೆಂಬರ್ 8 ರಂದು ಹಳೆಯ 500 ಮತ್ತು 1000 ನೋಟುಗಳನ್ನು ಅಮಾನ್ಯ ಮಾಡಿ ಹೊಸದಾಗಿ 2 ಸಾವಿರದ ನೋಟು ಬಿಟ್ಟ ಕೆಲವೇ ದಿನಗಳಲ್ಲಿ ಸಾವಿರ ಮುಖಬೆಲೆಯ ನೋಟು ಮತ್ತೆ ಚಲಾವಣೆಗೆ ಬರುವ ಬಗ್ಗೆ ಚರ್ಚೆಗಳು, ವದಂತಿಗಳು ಹರಿದಾಡಿದ್ದವು. ಇನ್ನು ನವೆಂಬರ್ 10ರಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ‘ಮುಂದಿನ ಕೆಲವು ತಿಂಗಳುಗಳಲ್ಲಿ ಹೊಸ ವಿನ್ಯಾಸ ಹಾಗೂ ರೂಪದಲ್ಲಿ ₹ 1000 ನೋಟು ಚಲಾವಣೆಗೆ ಬರಲಿದೆ’ ಎಂದು  ಹೇಳಿಕೆ ಕೊಟ್ಟಿದ್ದರು.

ಮತ್ತೆ ಸಾವಿರ ಮುಖಬೆಲೆಯ ನೋಟು ಚಲಾವಣೆಗೆ ಬರುವುದರಿಂದ 2 ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ಸುಲಭವಾಗುವ ನಿರೀಕ್ಷೆಗಳು ಮೂಡಿವೆ.  ನೋಟು ಅಮಾನ್ಯದಿಂದಾಗಿ 15.44 ಲಕ್ಷ ಕೋಟಿ ಮೊತ್ತದಷ್ಟು ಹಳೆಯ 500 ಮತ್ತು 1000 ಮುಖ ಬೆಲೆ ನೋಟುಗಳು ಮೌಲ್ಯ ಕಳೆದುಕೊಂಡಿದ್ದವು. ಜನವರಿ 27ರವರೆಗಿನ ಅಂಕಿ ಅಂಶದ ಪ್ರಕಾರ ನೂತನ ಈ ವರೆಗೂ 9.92 ಲಕ್ಷ ಕೋಟಿ ಪ್ರಮಾಣದ 2 ಸಾವಿರ ಹಾಗೂ 500 ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಆರ್ಬಿಐ ಡೆಪ್ಯೂಟಿ ಗವರ್ನರ್ ಆರ್.ಗಾಂಧಿ ತಿಳಿಸಿದ್ದರು.

ಆದರೆ ಇವೆಲ್ಲ ನಿಜವಾದರೆ ಅಷ್ಟೆಲ್ಲ ಬೆಲೆ ತೆತ್ತು ನೋಟು ಅಮಾನ್ಯ ಮಾಡಬೇಕಿತ್ತೇ ಎಂಬ ಪ್ರಶ್ನೆ ಮತ್ತೆ ಜೀವಂತವಾಗುತ್ತದೆ. ಏಕೆಂದರೆ ಹೆಚ್ಚಿನ ಮುಖಬೆಲೆಯ ನೋಟುಗಳಿಂದ ಭ್ರಷ್ಟಾಚಾರಕ್ಕೆ ಸಹಾಯವಾಗುತ್ತದೆ ಎಂಬುದೊಂದು ನೋಟು ಅಮಾನ್ಯದ ಪರ ಬಲವಾದ ವಾದವಾಗಿತ್ತು. ₹2000 ನೋಟಾದರೂ ಸದ್ಯದ ಪರಿಸ್ಥಿತಿ ನಿರ್ವಹಣೆಗೆ, ಅಲ್ಲದೇ ₹2000 ನೋಟಲ್ಲಿ ಕಾಳಧನ ಸಂಗ್ರಹಿಸಿದರೆ ಕಳೆದುಕೊಳ್ಳುವ ಆತಂಕವೂ ಅತಿ ಹೆಚ್ಚಾಗಿರುತ್ತಾದ್ದರಿಂದ ಇದು ಕಾಳಧನ ಸಂಗ್ರಹ ವರ್ತನೆಯನ್ನು ಬದಲಿಸುತ್ತದೆ ಎಂದೆಲ್ಲ ನೋಟು ಅಮಾನ್ಯ ಪರ ವಾದಗಳು ಚಿಗಿತುಕೊಂಡಿದ್ದವು.

ಇಷ್ಟಕ್ಕೂ ಹಳೆನೋಟುಗಳಲ್ಲಿದ್ದ ಎಷ್ಟು ಮೊತ್ತದ ಮೌಲ್ಯ ಪುನಃ ಬ್ಯಾಂಕಿಗೆ ಬಂದಿದೆ ಎಂಬ ಲೆಕ್ಕವನ್ನಿನ್ನೂ ಆರ್ಬಿಐ ಕೊಟ್ಟಿಲ್ಲ. ಜೂನ್ ಅಂತ್ಯದವರೆಗೆ ಎನ್ನಾರೈಗಳಿಗೆ ಮಿತಿ ಇರುವುದರಿಂದ ನಂತರದಲ್ಲಿ ಲೆಕ್ಕ ಹೇಳಲಾಗುವುದು ಎಂಬ ಸಬೂಬು ಬರುತ್ತಿದೆ. ಇವೆಲ್ಲದರ ನಡುವೆ ₹1000 ಮತ್ತೆ ಬರುವುದಾದರೆ, ನೋಟು ಅಮಾನ್ಯದ ಉತ್ತಮ ಉದ್ದೇಶಗಳೇನೇ ಇದ್ದರೂ, ಕೊನೆಗೂ ಏನು ಸಾಧಿಸಿದಂತಾಯಿತು ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ.

Leave a Reply