ಜಿಯೋ ಉಚಿತ ಪರ್ವ ಮುಗಿಯುವ ಹೊತ್ತಿಗೆ ಮುಕೇಶ್ ಅಂಬಾನಿ ನೀಡಿರುವ ಹೊಸ ಕೊಡುಗೆಗಳೇನು?

ಡಿಜಿಟಲ್ ಕನ್ನಡ ಟೀಮ್:

ಮಾರ್ಚ್ 31ರ ನಂತರವೂ ಜಿಯೋ ಉಚಿತ ಸೇವೆ ನೀಡುತ್ತಾ? ಅಥವಾ ದುಬಾರಿ ದರ ವಿಧಿಸುತ್ತಾ? ಎಂಬ ಗೊಂದಲಗಳಿಗೆ ಈಗ ತೆರೆ ಬಿದ್ದಿದೆ. ಸುದೀರ್ಘ 6 ತಿಂಗಳ ಕಾಲ ಗ್ರಾಹಕರಿಗೆ ಉಚಿತ ಸೇವೆ ಕೊಟ್ಟ ರಿಲಾಯನ್ಸ್ ಜಿಯೋ, ಮಾರ್ಚ್ 31ರ ನಂತರ ಶುಲ್ಕ ವಿಧಿಸಲು ನಿರ್ಧರಿಸಿದೆ. ಅದೂ ಕೈಗೆಟುಕುವ ದರ. ಜಿಯೋ ಗ್ರಾಹಕರು ಜಿಯೋ ಪ್ರೈಮ್ ಸದಸ್ಯರಾದರೆ ಅವರಿಗೆ ಈ ಕಡಿಮೆ ದರದಲ್ಲಿ ಈಗ ಲಭ್ಯವಾಗುತ್ತಿರುವ ಸೇವೆಯನ್ನೇ ನೀಡಲು ನಿರ್ಧರಿಸಿದೆ.

ಈಗಾಗಲೇ 100 ಮಿಲಿಯನ್ (10 ಕೋಟಿ) ಗ್ರಾಹಕರನ್ನು ಹೊಂದಿರುವ ಜಿಯೋ ತನ್ನ ಗ್ರಾಹಕರಿಗೆ ಇತರೆ ಟೆಲಿಕಾಂ ಕಂಪನಿಗಳಿಗಿಂತ ಕಡಿಮೆ ದರದಲ್ಲಿ ಡಾಟಾ ನೀಡಲು ಮುಂದಾಗಿದೆ. ಗ್ರಾಹಕರಿಗಾಗಿ ಪರಿಚಯಿಸುತ್ತಿರುವ ಮುಂದಿನ ಯೋಜನೆಗಳ ಬಗ್ಗೆ ಮಂಗಳವಾರ ಮುಖೇಶ್ ಅಂಬಾನಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಏನಿದು ಜಿಯೋ ಪ್ರೈಮ್?

ಈಗಾಗಲೇ ಜಿಯೋ ಬಳಸುತ್ತಿರುವವರು ಜಿಯೋ ಪ್ರೈಮ್ ಸದಸ್ಯರಾಗಬಹುದು. ಒಂದು ವರ್ಷಕ್ಕೆ ₹ 99 ಪಾವತಿಸಿದರೆ ಜಿಯೋ ಪ್ರೈಮ್ ಸದಸ್ಯತ್ವ ಲಭಿಸಲಿದೆ. ಹೀಗೆ ಪ್ರೈಮ್ ಸದಸ್ಯತ್ವ ಪಡೆದವರು ಪ್ರತಿ ತಿಂಗಳು ₹ 303 ಪಾವತಿ ಮಾಡಿದರೆ ಸಾಕು. ಅವರಿಗೆ 12 ತಿಂಗಳ ಕಾಲ ಅಂದರೆ ಮುಂದಿನ ವರ್ಷ ಮಾರ್ಚ್ 31ರ ವರೆಗೂ ಈಗ ಸಿಗುತ್ತಿರುವ ಪ್ರತಿನಿತ್ಯ 1 ಜಿಬಿಯಷ್ಟು 4ಜಿ ಡಾಟಾ ಲಭ್ಯವಾಗಲಿದೆ,

ಇದನ್ನು ಲೆಕ್ಕ ಹಾಕುವುದಾದರೆ, ತಿಂಗಳಿಗೆ ₹ 303 ಪಾವತಿಸಿದರೆ ನಿತ್ಯ 1 ಜಿಬಿಯಂತೆ ಒಟ್ಟು 30 ಜಿಬಿ ಡಾಟಾ ಪಡೆಯಲಿದ್ದಾರೆ. ಅಂದರೆ ಪ್ರತಿ ನಿತ್ಯ ಬಳಸುವ 1 ಜಿಬಿ ಡಾಟಾಕ್ಕೆ ₹ 10 ಪಾವತಿ ಮಾಡಿದಂತಾಗಲಿದೆ. ಇನ್ನು ಉಚಿತ ಕರೆಗಳು ಹಾಗೇ ಮುಂದುವರಿಯಲಿವೆ. ಈ ಸದಸ್ಯತ್ವವನ್ನು ಮೈ ಜಿಯೋ ಆ್ಯಪ್ ಅಥವಾ ಜಿಯೋ ಕೇಂದ್ರಗಳಿಗೆ ಭೇಟಿ ನೀಡಿ ಪಡೆಯಬಹುದಾಗಿದೆ. ಮಾರ್ಚ್ 1ರಿಂದ ಮಾರ್ಚ್ 31ರ ಒಳಗಾಗಿ ಜಿಯೋ ಪ್ರೈಮ್ ಸದಸ್ಯತ್ವ ಪಡೆಯಬಹುದಾಗಿದೆ.

ಈ ಹೊಸ ಆಫರ್ ಘೋಷಿಸಿ ಮಾತನಾಡಿದ ಮುಖೇಶ್ ಅಂಬಾನಿ ಹೇಳಿದಿಷ್ಟು… ‘ನನ್ನ ಆತ್ಮೀಯ ಭಾರತೀಯರೆ ಹಾಗೂ ನನ್ನ 100 ಮಿಲಿಯನ್ ಜಿಯೋ ಗ್ರಾಹಕರೆ. ಕಳೆದ ಕೆಲವು ತಿಂಗಳಲ್ಲಿ ನೀವು ನೀಡಿರುವ ಬೆಂಬಲ ಮಹತ್ವದ್ದಾಗಿದೆ. 170 ದಿನಗಳಿಗೂ ಹೆಚ್ಚು ಕಾಲ ಜಿಯೋ ಪ್ರತಿ ಸೆಕೆಂಡಿಗೆ 7 ಹೊಸ ಗ್ರಾಹಕನನ್ನು ಪಡೆದಿದೆ. ಇದು ಟೆಕ್ನಾಲಜಿ ಕಂಪನಿ ಸಾಧಿಸಿರುವ ದೊಡ್ಡ ಯಶಸ್ಸು. ಭಾರತ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದ್ದೀರಿ. ಜಿಯೋ ಸೇವೆ ಆರಂಭಿಸುವ ಮುನ್ನ ಬ್ರಾಡ್ ಬ್ಯಾಂಡ್ ಬಳಕೆಯಲ್ಲಿ ಭಾರತ 150ನೇ ಸ್ಥಾನದಲ್ಲಿತ್ತು. ಕಳೆದ ಒಂದು ತಿಂಗಳಲ್ಲಿ 100 ಕೋಟಿ ಗಿಗಾಬೈಟ್ಸ್ ನಷ್ಟು ಡಾಟಾವನ್ನು ಜಿಯೋ ಸಂಪರ್ಕದ ಮೂಲಕವೇ ಬಳಕೆ ಮಾಡಲಾಗಿದ್ದು, ಇಂದು ಭಾರತ ಮೊಬೈಲ್ ಡಾಟಾ ಬಳಕೆಯಲ್ಲಿ ಮೊದಲ ಸ್ಥಾನ ಪಡೆದಿದೆ. 2018ರ ಅಂತ್ಯದ ವೇಳೆಗೆ ಭಾರತದ ಶೇ.99 ರಷ್ಟು ಜನರನ್ನು ತಲುಪುವುದು ನನ್ನ ಗುರಿ. ಜಿಯೋ ಮೂಲಕ ನಿಮಗೆ ವಿಶ್ವದರ್ಜೆ ಗುಣಮಟ್ಟದ ಹಾಗೂ ಪ್ರಮಾಣದ ಡಾಟಾವನ್ನು ಕೈಗೆಟಕುವ ಬೆಲೆಯಲ್ಲಿ ನೀಡುವ ಭರವಸೆ ಕೊಡುತ್ತಿದ್ದೇನೆ. ಬೇರೆ ಬೇರೆ ಕಂಪನಿಗಳು ವಿಭಿನ್ನ ಆಫರ್ ಗಳನ್ನು ನೀಡುತ್ತಿವೆ ಹಾಗೂ ನೀಡಲಿವೆ. ಈ ಆಫರ್ ಗಳು ಗೊಂದಲಮಯವಾಗಿದೆ. ಈ ಕಂಪನಿಗಳು ನೀಡುವ ಆಫರ್ ಗಿಂತ ಜಿಯೋ ಶೇ.20ರಷ್ಟು ಹೆಚ್ಚಿನ ಡಾಟಾವನ್ನು ಅದೇ ದರಕ್ಕೆ ನೀಡಲಿದೆ.’

ಮಂಗಳವಾರ ಮಧ್ಯಾಹ್ನ 1.30ಕ್ಕೆ ಜಿಯೋನ ಹೊಸ ಆಫರ್ ಪ್ರಕಟವಾಗುತ್ತಿದ್ದಂತೆ ಏರ್ ಟೆಲ್ ಕಂಪನಿಯ ಷೇರಿನಲ್ಲಿ ಶೇ.2.5 ರಷ್ಟು ಕುಸಿತ ಕಂಡಿದೆ. ಐಡಿಯಾ ಸೇರಿದಂತೆ ಿತರ ಜಾಲಗಳ ಷೇರು ಬೆಲೆಗೂ ಆಘಾತವಾಗಿದೆ.

1 COMMENT

Leave a Reply