ಜಾತಿ ಬಿಡುತ್ತೇನೆ ಅಂತ ಹೋದವರಿಗೆ ಎದುರಾಗುವ ಸವಾಲುಗಳಾದರೂ ಏನು?

author-geetha‘ಒಮ್ಮೊಮ್ಮೆ ಯಾಕೆ ಎಂದು ತಿಳಿಯದೆ ಜಾತಿಯ ಪ್ರಶ್ನೆ ಎದ್ದುಬಿಡುತ್ತದೆ. ‘ನೀನು ಶೂದ್ರಳು’ ಎಂದು ಎತ್ತಿ ತೋರಿಸಲು ಜನ ಪ್ರಯತ್ನಿಸುತ್ತಿದ್ದಾರೆ ಎಂದು ಅನ್ನಿಸಿ ಬೇಸರವಾಗುತ್ತದೆ. ಮಾತನಾಡುವುದೇ ಬೇಡ ಅನ್ನಿಸುತ್ತದೆ’ ಎಂಬ ಸ್ನೇಹಿತೆಯ ಮಾತು ನನ್ನ ಲೇಖನಕ್ಕೆ ಸ್ಫೂರ್ತಿ.

ಜಾತಿ ಬೇಡ ಅನ್ನುವವರಿಗೆ ‘ನೀನು ಶೂದ್ರಳು’ ಅಂದರೂ ಬೇಸರವೇ ‘ನೀನು ಬ್ರಾಹ್ಮಣಳೂ’ ಅಂದರೂ ಬೇಸರವೇ… ‘ದಲಿತಳೂ’ ಅಂದರೆ ಮತ್ತಷ್ಟು ಬೇಸರ. ಯಾಕೆ? ನಂಬಿಕೆ ಇಲ್ಲದ್ದಾಗ, ಜಾತಿ ಬೇಡದ್ದಾಗ ಈ ಬೇಸರಕ್ಕೆ ಅರ್ಥವೇ ಇಲ್ಲ…

ಒಳಗೆಲ್ಲೊ ಕೀಳರಿಮೆ, ಮೇಲಿರಿಮೆ ಇದ್ದಾಗ, ಇನ್ನೊಬ್ಬರು ನಮ್ಮನ್ನು ನಮ್ಮ ಜಾತಿಯ ಮೂಲಕ ಗುರುತಿಸಿದರೆ ಕೋಪ, ಬೇಸರ…

ಈ ಜಾತಿ ಪದ್ಧತಿ ನಮ್ಮ ದೇಶದಲ್ಲಿ ಒಂದು ಭೂತದ ತರಹ. ಬಾಗಿಲಿನಿಂದ ಹೊರ ಹಾಕಿದರೆ ಕಿಟಕಿಯಿಂದ ಒಳಬರುತ್ತದೆ. ಕಿಟಕಿಯಿಂದ ಹೊರದೂಡಿದರೆ, ಗವಾಕ್ಷಿಯಿಂದ ಒಳ ಬರುತ್ತದೆ. ಗವಾಕ್ಷಿ ಮುಚ್ಚಿದರೆ ಬಾಗಿಲಿನಿಂದಲೇ ಒಳ ಬರುತ್ತದೆ. ಬೇಡ ಬೇಡ ಎಂದಷ್ಟು ಜಾತ್ಯಾತೀತ ಎಂದು ಡಂಗೂರ ಹೊಡೆದಷ್ಟು ಜಾತಿ ಅತಿಯೇ ಆಗುತ್ತಿದೆ.

ನನ್ನ ಸ್ನೇಹಿತರೊಬ್ಬರು 70ರ ದಶಕದಲ್ಲಿ ಜನಿವಾರ ಕಿತ್ತುಹಾಕಿ, ಬ್ರಾಹ್ಮಣ ಎಂಬ ಹಣೆಪಟ್ಟಿ ಅಳಿಸಿ ಮನೆಯವರಿಂದ ದೂರವಾಗಿ… ಎಲ್ಲಾ ಜಾತಿಯವರೊಂದಿಗೆ ಬೆರೆತು ಹಲವು ನಾಟಕಗಳಲ್ಲಿ ಅಭಿನಯಿಸುತ್ತಾ ನಲವತ್ತೈದು ವರ್ಷಗಳು ಕಳೆದ ಮೇಲೆ… ಮೊನ್ನೆ ಮೊನ್ನೆ ‘ನೀವು ಬ್ರಾಹ್ಮಣರೇ ಹೀಗೇ’ ಎಂಬ ಹೀಯಾಳಿಕೆಯ ಮಾತು ಕೇಳಿ ದಿಗ್ಬ್ರಮೆಗೊಂಡರು. ನಾವು ಬಿಟ್ಟರೂ ನಾವು ಬಿಟ್ಟಿದ್ದೇವೆಂದು ಇತರರು ಗುರುತಿಸುವವರೆಗೂ ಈ ಜಾತಿ ಹಣೆಪಟ್ಟಿ ಹೋಗುವುದಿಲ್ಲ. ಇತರರು ಅವರ ಅನುಕೂಲಕ್ಕೆ ತಕ್ಕಂತೆ, ಅನಾನುಕೂಲವಾಗದ ಹಾಗೆ ಜಾತಿಯನ್ನು ಬಳಸಿಕೊಳ್ಳುತ್ತಾರೆ. ಕೆಲವರನ್ನು ಹತ್ತಿರ ಸೇರಿಸಿಕೊಳ್ಳಲು, ಹಲವರನ್ನು ದೂರವಿಡಲು ಬಳಸಿಕೊಳ್ಳುತ್ತಾರೆ.

ನಾನು ಒಂಬತ್ತನೇ ತರಗತಿ ಓದಿದ್ದು ಚಿಂತಾಮಣಿಯ ಸರ್ಕಾರಿ ಪ್ರೌಢಶಾಲೆಯಲ್ಲಿ. ನಮ್ಮ ತರಗತಿಯಲ್ಲಿ ಶೆಟ್ಟರ ಹಾಗೂ ಮುಸ್ಲಿಮರ ಹುಡುಗಿಯರೇ ಹೆಚ್ಚು. ಪ್ಲಾನ್ ಮಾಡಿ ಪಿಕ್ ನಿಕ್ ಗೆ ಹೋದೆವು. ಹಂಚಿ ತಿನ್ನುವಾಗ ಜಾತಿ ನೋಡಲಿಲ್ಲ. ‘ನುಸ್ರತ್ ಡಬ್ಬಿದು ತಿಂದಿದ್ಯಾ… ನಿಮ್ಮಮ್ಮ ನಿನ್ನ ಮನೆಗೆ ಸೇರಿಸಲ್ಲ’ ಎಂಬ ಎಚ್ಚರಿಕೆ ಕಿವಿಗೆ ಬೀಳಲಿಲ್ಲ. ತಿಂದೆ, ತಿನ್ನಲಿಲ್ಲ… ಎಂಬ ವಿಚಾರಗಳು ಮನೆಯಲ್ಲಿ ಹೇಳಲಿಲ್ಲ ಅಷ್ಟೇ. ನುಸ್ರತ್ ಳ ಡಬ್ಬಿಯಿಂದ ತಿನ್ನದ ಶೆಟ್ಟರ ಸುಜಾತಳ ದೃಷ್ಟಿಯಲ್ಲಿ ನಾನು ನಾಲ್ಕು ಮೆಟ್ಟಿಲು ಇಳಿದೆ. ಅವಳಮ್ಮ, ನಮ್ಮಮ್ಮನಿಗೆ ಹೇಳಿದರೂ ಅಪ್ಪನ ಬೆಂಬಲ ಇದ್ದಿದ್ದರಿಂದ ಅಮ್ಮ ಕೂಡ ಅವರ ಅಭಿಪ್ರಾಯವನ್ನು ಹೇರದವರಾಗಿದ್ದರಿಂದ ನನ್ನ ಬದುಕು ಕೊಂಚ ನಿರಾಳ. ಕೊಂಚವಷ್ಟೇ… ಏಕೆಂದರೆ ಬ್ರಾಹ್ಮಣಿಕೆಯನ್ನು ಪಾಲಿಸುವುದಿಲ್ಲ ಎಂದು ಬ್ರಾಹ್ಮಣರಿಗೆ ಬೇಸರ… ಹುಟ್ಟಿನಿಂದ ಬ್ರಾಹ್ಮಣಳು, ಬ್ರಾಹ್ಮಣಿಕೆ ವಿರುದ್ಧ ಮಾತನಾಡುವುದಿಲ್ಲ ಎಂದು ಇತರರಿಗೆ ಬೇಸರ.

ಜಾತಿ ಬೇಡ ಎಂಬ ಕೂಗು ನಿರಂತರವಾಗಿ ಇದ್ದರೂ ಪ್ರತಿಯೊಂದಕ್ಕೂ ಜಾತಿಯನ್ನು ನಮೂದಿಸಬೇಕಾಗಿ ಇರುವುದು ದುರಂತ. ಜಾತಿ ಹೆಸರು ಕೇಳಿದೊಡನೆ ನಮ್ಮ ಪೂರ್ವಾಗ್ರಹಗಳು ಎದ್ದು ನಿಲ್ಲುತ್ತವೆ. ಆರ್ಥಿಕ ಪರಿಸ್ಥಿತಿಯ ಮೇಲೆ ಮೀಸಲಾತಿ ನೀಡುವ ರೀತಿ, ನೀತಿ ಬರುವವರೆಗೂ ಇದು ನಿರಂತರ.

ಶಾಲೆಯಿಂದಲೇ ಶುರು. ಮಗುವಿನ ಜಾತಿ ನಮೂದಿಸಬೇಕು ಅಪ್ಲಿಕೇಷನ್ನಿನಲ್ಲಿ. ಧರ್ಮ ಯಾವುದು ಬರೆಯಬೇಕು.

ನಂತರ ಪಾಠ ಶುರು. ಹ್ಯೂಮಾನಿಟೀಸ್, ಸೋಷಿಯಲ್ ಸೈನ್ಸಸ್ ಹೆಸರಿನಲ್ಲಿ ಇವರು ಹಿಂದುಗಳು… ಇವರು ಈ ರೀತಿ ಬಟ್ಟೆ ಧರಿಸುತ್ತಾರೆ. ಇವರು ಈ ಹಬ್ಬಗಳನ್ನು ಆಚರಿಸುತ್ತಾರೆ. ಈ ಬಗೆಯ ಸಿಹಿ ತಿಂಡಿ ಮಾಡುತ್ತಾರೆ. ಇವರು ಮುಸಲ್ಮಾನರು… ಇವರ ಪವಿತ್ರ ಗ್ರಂಥ ಇದು, ಇವರು ಈ ಬಗೆಯ ಬಟ್ಟೆ ಹಾಕಿಕೊಳ್ಳುತ್ತಾರೆ. ಈ ಹಬ್ಬಗಳನ್ನು ಆಚರಿಸುತ್ತಾರೆ. ಹೀಗೇ… ಪಾಠ!

ಮನೆಯಲ್ಲಿ ಜಾತಿ, ಧರ್ಮದ ಭೇದ ಬೇಡ ಎಂದು ಮಕ್ಕಳನ್ನು ಬೆಳೆಸುತ್ತಿದ್ದರೆ ಏನು ಪ್ರಯೋಜನವಿಲ್ಲ. ಮೂರನೇ ತರಗತಿಗೆ ಬರುವ ವೇಳೆಗೆ ಧರ್ಮ, ಜಾತಿ, ಪಂಗಡ ಎಲ್ಲಾ ಗೊತ್ತಾಗಿರುತ್ತವೆ. ಮೇಲರಿಮೆಯೋ, ಕೀಳರಿಮೆಯೋ ಬಂದು ತಲೆಯಲ್ಲಿ ಕೂತಿರುತ್ತದೆ. ಈ ಭಾವನೆ ಬೆಳೆಯುತ್ತಾ ಹೋಗುತ್ತದೆ.

ತಪ್ಪು ಮಾಡಿದಕ್ಕೇ ಬೈದರೂ ತಪ್ಪನ್ನು ಮುಚ್ಚಿಟ್ಟು, ಜಾತಿಯಿಂದಾಗಿ ಬೈದದ್ದು ಎಂದು ದೋಷಾರೋಪ ಮಾಡುವುದು ಹೆಚ್ಚಾಗಿದೆ. ಮುಸಲ್ಮಾನ ಹಣೆಪಟ್ಟಿ, ದಲಿತ ಹಣೆಪಟ್ಟಿ ಹಚ್ಚಿಕೊಂಡು ದೂರು ಕೊಡುವುದು, ಗೊಣಗುವುದು ಹೆಚ್ಚಿದೆ.

ಎಲ್ಲಾ ಬಿಟ್ಟು ಪಾಶ್ಚಾತ್ಯರನ್ನು ಅನುಕರಣೆ ಮಾಡಿದವರಲ್ಲಿ ಬ್ರಾಹ್ಮಣರು (ನಾನು ಕಂಡ ಹಾಗೆ) ಮೊದಲಿದ್ದರು. ಆದರೆ ಈಗನಾವೆಲ್ಲಾ ಒಂದುಗೂಡಬೇಕು… ನಾವು ಬ್ರಾಹ್ಮಣರು ಎಂಬ ಮಾತು ಕೇಳಿ ಬರುತ್ತಿದೆ.

ಲಿಂಗಾಯಿತರಲ್ಲಿ ಪಂಗಡಗಳು, ಗೌಡರಲ್ಲಿ ಪಂಗಡಗಳು… ರಾಜಕೀಯ ಲಾಭದ ದೃಷ್ಟಿಯಿಂದ ಬೇರಾಗುತ್ತವೆ ಅಥವಾ ಒಂದಾಗುತ್ತವೆ. ಬ್ರಿಟೀಷರು ಬಿಟ್ಟು ಹೋದ ‘ಒಡೆದು ಆಳು’ ನೀತಿಯನ್ನು ನಮ್ಮ ರಾಜಕೀಯ ಮುಖಂಡರು ಬಳಸಿಕೊಳ್ಳುತ್ತಿದ್ದಾರೆ.

ಮೂವತ್ತು ವರ್ಷಗಳ ಹಿಂದೆ ಮುಸಲ್ಮಾನ ಹೆಂಗಸರು ಸೀರೆ ಉಟ್ಟು ನೆಮ್ಮದಿಯಿಂದ ಓಡಾಡಿಕೊಂಡು ಇದ್ದರು. ಈಗ ಕಾಲೇಜಿಗೆ ಬರುವ ಮುಸಲ್ಮಾನ ತರುಣಿ ಬುರ್ಖಾ ಹಾಕಿಕೊಂಡು ಅದೂ ಕಂಗಳು ಮಾತ್ರ ಕಾಣುವ ಬುರ್ಖಾ ಹಾಕಿಕೊಂಡು ಬರುತ್ತಾಳೆ.

ಅವರ ಒಳ ಪಂಗಡಗಳ ಜಗಳ ಬೀದಿಗೆ ಬರುತ್ತಿದೆ. ಕ್ರೈಸ್ತರು ಕೂಡ ಚರ್ಚಿಗೆ ಹೋಗುವುದನ್ನು ಕಡ್ಡಾಯ ಮಾಡಿ ತಮ್ಮ ಗುಂಪನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ.

ಮುಸಲ್ಮಾನರು, ಕ್ರಿಶ್ಚಿಯನ್ನರು ಹಿಂದೂಗಳ ಮನಪರಿವರ್ತನೆ ಮಾಡಿ ತಮ್ಮ ಜಾತಿಗೆ ಸೇರಿಸಿಕೊಳ್ಳುತ್ತಾರೆ ಎಂದು ಹಿಂದುಗಳು ಗುಂಪುಗಾರಿಕೆ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಕಡ್ಡಾಯವಲ್ಲದ ನಿಯಮಗಳನ್ನು ಕಡ್ಡಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ರಕ್ಷಿಸುತ್ತೇವೆ ಎಂದು ಹೋಗಿ ಅವರ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದಾರೆ.

ಅವರಲ್ಲಿ ಹಾಗೆ, ಇವರಲ್ಲಿ ಹಾಗೆ… ಎಂದು ಇರುವುದಕ್ಕಿಂಥ ಹಿಂದೆ ಹೋಗುತ್ತಿರುವುದನ್ನು (ಆಚಾರ ವಿಚಾರಗಳಲ್ಲಿ) ನೋಡಿದರೆ ಖೇದವೆನ್ನಿಸುತ್ತದೆ, ಗಾಬರಿಯಾಗುತ್ತದೆ.

ಟೆಕ್ನಾಲಜಿಯಿಂದ ಪ್ರಪಂಚ ಒಂದು ಗ್ಲೋಬಲ್ ವಿಲೇಜ್ ಆಗುತ್ತಿದೆ. ಸಂವಹನ ಸಲೀಸಾಗುತ್ತಿದೆ. ಆದರೆ ಮನಸ್ಸು ಕೂಪಮಂಡೂಕವಾಗುತ್ತಿದೆ. ಸೈರಣೆ, ಸಹಿಷ್ಣುತೆ ಒಂದು virtue ಎನ್ನಿಸಿಕೊಳ್ಳದೆ, ವೀಕ್ ನೆಸ್ ಎನ್ನಿಸಿಕೊಂಡು… ಯಾರು ಎಷ್ಟು ಹಿಂದೆ ಉಳಿದಿದ್ದೇವೆ ಎಂದು ತೋರಿಸಿಕೊಳ್ಳುವುದು Fasion ಆಗಿದೆ.

ಮೊನ್ನೆ ಒಬ್ಬರ ಮನೆಗೆ ಕರೆಯಲು ಹೋಗಿದ್ದೆವು. ಅವರ ಜಾತಿ ಗೊತ್ತಿಲ್ಲ ನನಗೆ… ತುಂಬಾ ಸುಂದರವಾಗಿತ್ತು ಅವರ ದೇವರ ಮನೆ. ‘ನಿಮ್ಮ ದೇವರ ಮನೆ ತುಂಬಾ ಚೆನ್ನಾಗಿದೆ’ ಅಂದೆ, ಮನೆಯೊಡೆಯ ಬಳಿ ಬಂದರು. ‘ನಮ್ಮಲ್ಲಿ ತುಂಬಾ ಮಡಿ ಮೇಡಂ. ಹೆಂಗಸರನ್ನು ದೇವರ ಮನೆಗೆ ಸೇರಿಸೊಲ್ಲ. ಕ್ಲೀನಿಂಗ್ ಎಲ್ಲವೂ ನಾವು ಗಂಡಸರೇ ಮಾಡೋದು’ ಅಂದರು.

ನನ್ನೊಳಗಿನ ಕಥೆಯೇ ಬೇರೆ. ನನ್ನ ಮುಖ ಹೇಳುವ ಕಥೆಯೇ ಬೇರೆ!

ಈ ಜಾತಿ bias, gender bias (ಪಕ್ಷಪಾತ) ಗಳಿಂದ ಹೊರಬರದ ಹೊರತು ಪ್ರಗತಿ ಸಾಧ್ಯವಿಲ್ಲ. ಆದರೆ ಈ ಪಕ್ಷಪಾತ ಧೋರಣೆ ಹೆಚ್ಚಾಗುತ್ತಲೇ ಇರುವುದು ಗಾಬರಿ ಹುಟ್ಟಿಸುತ್ತದೆ.

Leave a Reply