ರಾಜ್ಯದಲ್ಲಿ ಆಹಾರೋತ್ಪಾದನೆ ಕುಸಿತ- ದೇಶದ ಹೆಚ್ಚುವರಿ ಉತ್ಪಾದನೆ ನೀಡಿದೆ ಸಮಾಧಾನ, ಆಗಸ್ಟ್ ನಲ್ಲಿ ಪಾವಗಡ ಸೋಲಾರ್ ಪಾರ್ಕ್ ಮೊದಲ ಹಂತದ ವಿದ್ಯುತ್ ಉತ್ಪಾದನೆ: ಡಿಕೆಶಿ, ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು…

ಶಿಕ್ಷಕರ ಸದನದಲ್ಲಿ ಬುಧವಾರ ಆರಂಭವಾದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮೇಳ 2017ರಲ್ಲಿ ಭಾಗವಹಿಸಿದ ಶಾಲಾ ಮಕ್ಕಳು…

ಡಿಜಿಟಲ್ ಕನ್ನಡ ಟೀಮ್:

ಆಹಾರ ಉತ್ಪಾದನೆ ಕುಂಠಿತ

ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ವೈಫಲ್ಯದಿಂದ 50 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಲ್ಲಿ ಕೊರತೆಯಾಗಿದೆ. ಆದರೂ ಆಹಾರ ಕೊರತೆ ಉಂಟಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ಕೃಷಿ ಸಚಿವ ಕೃಷ್ಣ ಬೈರೇಗೌಡ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿರುವುದಿಷ್ಟು… ‘ಈ ವರ್ಷ 135 ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಗುರಿ ಇತ್ತು. ಆದರೆ ಮಳೆ ಬಾರದ ಹಿನ್ನೆಲೆಯಲ್ಲಿ 91.45 ಮೆಟ್ರಿಕ್ ಟನ್ ಉತ್ಪಾದನೆ ಆಗುವ ನಿರೀಕ್ಷೆ ಇದೆ. ಭತ್ತ, ಮೆಕ್ಕೆಜೋಳ, ರಾಗಿ, ಸಿರಿಧಾನ್ಯ, ಹತ್ತಿ ಇತ್ಯಾದಿ ಉತ್ಪಾದನೆಯಲ್ಲಿ ಭಾರೀ ಕುಂಠಿತವಾಗಿದೆ. ಈ ಮಧ್ಯೆ ದ್ವಿದಳ ಧಾನ್ಯ ನಿರೀಕ್ಷೆಗೂ ಮೀರಿ ಬೆಳೆ ಬಂದಿದೆ. ಇನ್ನು ರಾಷ್ಟ್ರ ಮಟ್ಟದಲ್ಲಿ ಪರಿಗಣಿಸುವುದಾದರೆ, ವಾಡಿಕೆಯಂತೆ ಪ್ರತಿ ವರ್ಷ 160ರಿಂದ 163 ಮಿಲಿಯನ್ ಟನ್ ಆಹಾರ ಉತ್ಪಾದನೆ ಆಗುತ್ತಿತ್ತು. ಆದರೆ ಈ ಬಾರಿ 170 ಮಿಲಿಯನ್ ಟನ್ ಆಹಾರ ಉತ್ಪಾದನೆ ಆಗಿದೆ. ಆಹಾರ ಭದ್ರತೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯ ನೆರವು ನೀಡುವುದರಿಂದ ರಾಜ್ಯದಲ್ಲಿ ಆಹಾರ ಕೊರತೆ ಎದುರಾಗುವುದಿಲ್ಲ.’

ಇದೇ ವೇಳೆ ‘ನಗರ ಪಟ್ಟಣಗಳಲ್ಲಿ ಬರುವ ಹಸಿ ಕಸವನ್ನು ಕಾಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಿ, ರೈತರ ಹೊಲಗಳಿಗೆ ನೀಡಲಾಗುವುದು. ಬೆಂಗಳೂರು ಮಹಾನಗರ ಪಾಲಿಕೆವ್ಯಾಪ್ತಿಯಲ್ಲೇ 5500 ಮೆಟ್ರಿಕ್ ಟನ್ ಗೊಬ್ಬರ ಉತ್ಪಾದನೆಯಾಗಲಿದ್ದು ರೈತರಿಗೆ ಸಬ್ಸಿಡಿ ರೂಪದಲ್ಲಿ ನೀಡಲಾಗುವುದು. ಪ್ರತಿ ಟನ್ನಿಗೆ ₹ 800 ರಂತೆ ಸರ್ಕಾರ ನೇರವಾಗಿ ರೈತರಿಗೆ ನೀಡಲು ನಿರ್ಧರಿಸಲಾಗಿದೆ’ ಎಂದರು.

ಪಾವಗಡ ಸೋಲಾರ್ ಪಾರ್ಕ್ ಬಗ್ಗೆ ಸಚಿವರ ಮಾತು

ಪಾವಗಡ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತಿದೊಡ್ಡದಾದ 2000 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಸೋಲಾರ್ ಪಾರ್ಕ್ ನಲ್ಲಿ ಮೊದಲ ಹಂತದ 500 ಮೆಗಾವ್ಯಾಟ್ ವಿದ್ಯುತ್ ಆಗಸ್ಟ್ ನಲ್ಲಿ ಪ್ರಾರಂಭವಾಗಲಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಈ ಸೋಲಾರ್ ಪಾರ್ಕಿನ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು ಈ ಬಗ್ಗೆ ಮಾಹಿತಿ ಕೊಟ್ಟರು.

‘ಭೂಸ್ವಾಧೀನವಿಲ್ಲದೆ ರೈತರಿಂದ ಒಪ್ಪಂದದ ಆಧಾರದ ಮೇಲೆ 12 ಸಾವಿರ ಎಕರೆ ಭೂಮಿಯನ್ನು ಈ ಸೋಲಾರ್ ಪಾರ್ಕಿಗೆ ಬಳಸಲಾಗುತ್ತಿದ್ದು, ಮಧ್ಯವರ್ತಿಗಳ ಕಾಟವಿಲ್ಲದೆ ರೈತರಿಗೆ ಪ್ರತಿ ಎಕರೆಗೆ ₹ 21 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಎರಡು ವರ್ಷಕ್ಕೊಮ್ಮೆ ಶೇ.5 ರಷ್ಟು ಬಾಡಿಗೆ ಹೆಚ್ಚಳ ಮಾಡಲಾಗುವುದು. ಈ ಸೋಲಾರ್ ಪಾರ್ಕ್ ಮೂಲಕ 2700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಅನುಮತಿ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ 2000 ಮೆಗಾವ್ಯಾಟ್ ಉತ್ಪಾದಿಸುವ ಗುರಿ ಹೊಂದಿದ್ದು, 700 ಮೆಗಾ ವ್ಯಟ್ ವಿದ್ಯುತ್ ಅನ್ನು ಖಾಸಗಿ ಸಂಸ್ಥೆಗಳ ಮೂಲಕ ಉತ್ಪಾದಿಸಲಾಗುವುದು’ ಎಂದರು.

ಸಚಿವ ಸಂಪುಟದ ನಿರ್ಧಾರಗಳು…

  • ಭ್ರಷ್ಟಾಚಾರಕ್ಕೆ ಅಂತ್ಯ ಹಾಡುವುದು ಮತ್ತು ಗ್ರಾಮೀಣ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಗೆಜಟೆಡ್ ಪ್ರೊಫೆಷನರ್ ಗಳ ನೇಮಕಾತಿ ವ್ಯಕ್ತಿತ್ವ ಪರೀಕ್ಷೆಯಲ್ಲಿ ಒಂದು ಹುದ್ದೆಗೆ ಐದು ಅಭ್ಯರ್ಥಿಗಳನ್ನು ಹೆಚ್ಚಿಸಲು ತೀರ್ಮಾನ.
  • ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ₹ 18.55 ಕೋಟಿ ವೆಚ್ಚದಲ್ಲಿ ಶಾಲಾಪೂರ್ವ ಶಿಕ್ಷಣ ಕಿಟ್ ಖರೀದಿಗೆ ಆಡಳಿತಾತ್ಮಕ ಅನುಮೋದನೆ. ಇನ್ನು ವಿಕಲಚೇತನರಿಗೆ ₹ 14 ಕೋಟಿ ವೆಚ್ಚದಲ್ಲಿ 2000 ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಒಪ್ಪಿಗೆ.
  • ಕೊಡಗು ಜಿಲ್ಲೆಯಲ್ಲಿರುವ ಕುರುಬ ಸಮುದಾಯಕ್ಕೆ ಪರ್ಯಾಯಪದವಾಗಿ ಹಾಲುಮತ ಪದವನ್ನು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧಾರ.
  • ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರು ಪೂರೈಕೆಗಾಗಿ 12 ಮತ್ತು ಒಳಚರಂಡಿಗಾಗಿ 5 ಯೋಜನೆಗಳಿಗೆ ಹೆಚ್ಚುವರಿ ವೆಚ್ಚ ಸರಿದೂಗಿಸಲು ₹ 16.59 ಕೋಟಿ ಸಾಲ ಪಡೆಯಲು ಅನುಮತಿ.
  • ಕೊಪ್ಪಲ ಜಿಲ್ಲೆಯ ತಳಕಲ್ ಗ್ರಾಮದಲ್ಲಿ ₹ 111.89 ಕೋಟಿ ಅಂದಾಜು ವೆಚ್ಚದಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
  • ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ರಸ್ತೆಯನ್ನು ವಿಂಡ್ಸರ್ ಮ್ಯಾನರ್ ಸೇತುವೆಯಿಂದ ಹೆಬ್ಬಾಳದ ಮೇಲ್ಸೆತುವೆವರೆಗೂ 5.35 ಕಿ.ಮೀನಿಂದ 7.33 ಕಿ.ಮೀ ವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಪರಿಷ್ಕೃತ ಅಂದಾಜಿಗೂ ಸಂಪುಟ ಸಮ್ಮತಿ.

Leave a Reply