‘ಮತ್ತೆ ₹ 1000 ಮುಖಬೆಲೆ ನೋಟು ತರುವ ಯೋಚನೆ ಇಲ್ಲ…’ ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಸ್ಪಷ್ಟನೆ

ಡಿಜಿಟಲ್ ಕನ್ನಡ ಟೀಮ್:

ನೂತನ ವಿನ್ಯಾಸದೊಂದಿಗೆ ಮತ್ತೆ ₹ 1000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ‘ಈ ವರದಿಗಳು ನಿಜವಲ್ಲ… ಸದ್ಯಕ್ಕೆ ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುವ ಯೋಚನೆ ಇಲ್ಲ’ ಎಂದಿದ್ದಾರೆ.

ಮತ್ತೆ ಸಾವಿರ ಮುಖಬೆಲೆಯ ನೋಟು ಚಲಾವಣೆಗೆ ಬರಲಿದೆ, ಈಗಾಗಲೇ ನೋಟುಗಳ ಮುದ್ರಣ ನಡೆಯುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಮಾರುಕಟ್ಟೆಗೆ ಬರವಿವೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ನಿನ್ನೆ ಪ್ರಕಟವಾಗಿದ್ದ ಈ ವರದಿಗಳು ಸಾಕಷ್ಟು ಚರ್ಚೆಗೂ ಗ್ರಾಸವಾಗಿದ್ದವು. ಹೀಗಾಗಿ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿರುವ ಶಕ್ತಿಕಾಂತ್ ದಾಸ್ ಹೇಳಿರುವುದಿಷ್ಟು…

‘ಪುನಃ ₹ 1000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುವ ಯಾವುದೇ ಯೋಚನೆಗಳಿಲ್ಲ. ಈಗ ನಮ್ಮ ಗಮನ ಏನಿದ್ದರು ₹ 500 ಹಾಗೂ ಕಡಿಮೆ ಮೊತ್ತದ ನೋಟುಗಳನ್ನು ಮುದ್ರಿಸಿ ಕೊರತೆ ನೀಗಿಸುವುದಾಗಿದೆ. ಎಟಿಎಂಗಳಲ್ಲಿ ಹಣದ ಕೊರತೆ ಬಗೆಗಿನ ದೂರುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಜನರು ತಮಗೆ ಎಷ್ಟು ಅಗತ್ಯವಿದೆಯೋ ಅಷ್ಟು ಹಣವನ್ನು ಮಾತ್ರ ಡ್ರಾ ಮಾಡಿಕೊಳ್ಳಬೇಕು. ಅತಿಯಾಗಿ ಡ್ರಾ ಮಾಡಿಕೊಂಡರೆ ಇತರರಿಗೆ ಸಮಸ್ಯೆಯಾಗಲಿದೆ.’

ಆರ್ಥಿಕ ಕಾರ್ಯದರ್ಶಿಗಳ ಸ್ಪಷ್ಟನೆಯ ಮೂಲಕ ಮತ್ತೆ ಸಾವಿರ ಮುಖಬೆಲೆಯ ನೋಟು ಚಲಾವಣೆಗೆ ಬರುತ್ತದೆ ಅಥವಾ ಬರುವುದಿಲ್ಲ ಎಂಬ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ.

Leave a Reply