ಮೈಕ್ರೋಸಾಫ್ಟ್ ನಿಂದ ಹೊಸ ಆ್ಯಪ್ ಬಿಡುಗಡೆ! ವಿಡಿಯೋ ಕಾಲಿಂಗ್ ಜತೆಗೆ ಆಧಾರ್ ಸಂಖ್ಯೆ ಬಳಸಿ ಸರ್ಕಾರಿ ಸೇವೆಗಳ ಮಾಹಿತಿ ಲಭ್ಯ

ಡಿಜಿಟಲ್ ಕನ್ನಡ ಟೀಮ್:

ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಲ್ಲಿ ಕಡಿಮೆ ಡಾಟಾವನ್ನು ಬಳಸಿಕೊಂಡು ವಿಡಿಯೋ ಕರೆ ಮಾಡುವ ಜತೆಗೆ ಆಧಾರ್ ಬಳಸಿ ಸರ್ಕಾರಿ ಸೇವೆಗಳ ಬಗ್ಗೆಯು ಮಾಹಿತಿ ಪಡೆಯಬಹುದಾದ ಆ್ಯಪ್ ವೊಂದನ್ನು ಮೈಕ್ರೋಸಾಫ್ಟ್ ಬುಧವಾರ ಬಿಡುಗಡೆ ಮಾಡಿದೆ.

ಮುಂಬೈನಲ್ಲಿ ನಡೆಯುತ್ತಿರುವ ಭಾರತದ ಅತ್ಯಂತ ದೊಡ್ಡ ಪ್ರಮಾಣದ ಡಿಜಿಟಲ್ ಕಾರ್ಯಕ್ರಮ ‘ಮೈಕ್ರೋಸಾಫ್ಟ್ ಫೂಚರ್ ಡಿಕೋಡೆಡ್’ ನಲ್ಲಿ ಕಂಪನಿಯ ಸಿಇಒ ಸತ್ಯ ನಾಡೆಲ್ಲಾ ‘ಸ್ಕೈಪ್ ಲೈಟ್’ ಆ್ಯಪ್ ಪರಿಚಯಿಸಿದರು.

ವಿಡಿಯೋ ಕರೆ, ಮೆಸೆಜ್ ನಂತಹ ಸಂವಹನ ಕ್ರಿಯೆಗೆ ಈ ಆ್ಯಪ್ ಸಹಾಯವಾಗಲಿದ್ದು, ಇದರ ಮೂಲಕ ಸರ್ಕಾರದ ಇಲಾಖೆಯ ಸೇವೆಗಳ ಮಾಹಿತಿಗಳನ್ನೂ ಪಡೆಯಬಹುದಾಗಿದೆ. ಸರ್ಕಾರದ ಸೇವೆಗಳ ಬಗ್ಗೆ ಮಾಹಿತಿ ಪಡೆಯಲು ಜನರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಜತೆ ಎಲ್ಲ ರೀತಿಯ ಚರ್ಚೆ ನಡೆಸಿ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿದೆ.

ಸ್ಕೈಪ್ ಲೈಟ್ ಆ್ಯಪ್ ಅನ್ನು ಕೇವಲ ಭಾರತದ ಮಾರುಕಟ್ಟೆಯ ದೃಷ್ಠಿಕೋನದಿಂದ ನಿರ್ಮಿಸಲಾಗಿದ್ದು, ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗಾಗಿ ನಿರ್ಮಿಸಲಾಗಿದೆ. 2ಜಿ ಮಟ್ಟದ ಇಂಟರ್ ನೆಟ್ ನಲ್ಲೂ ಆ್ಯಪ್ ಕಾರ್ಯ ನಿರ್ವಹಿಸಲಿದೆ. ಇದು ಕೇವಲ 13 ಎಂ.ಬಿ ಪ್ರಮಾಣದಷ್ಟಿದ್ದು, ಕಡಿಮೆ ಜಾಗ ಪಡೆಯಲಿದೆ. ಆ್ಯಪ್ ನಲ್ಲಿ ಡಾಟಾ ಮ್ಯಾನೇಜರ್ ಸೇರಿಸಿರುವುದರಿಂದ, ನೇರವಾಗಿ ಮೊಬೈಲ್ ಡಾಟಾ ಬಳಕೆಯಾಗದಂತೆ ತಡೆಯುತ್ತದೆ. ಇದರಲ್ಲಿ ಪ್ರಚಾರದ ಸಂದೇಶಗಳು ಹಾಗೂ ನಕಲಿ ಸಂದೇಶಗಳು ಬಾರದಂತೆ ತಡೆಯಲಾಗುವುದು. ಇವುಗಳ ಜತೆಗೆ ಕ್ರಿಕೆಟ್ ಸ್ಕೋರ್, ಹವಾಮಾನ, ಭವಿಷ್ಯ ಸೇರಿದಂತೆ ಇತರೆ ಮಾಹಿತಿ ಪಡೆಯಬಹುದು. ಈ ಆ್ಯಪ್ ಅನ್ನು ಉಚಿತವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.

Leave a Reply