ಕಾಂಗ್ರೆಸ್-ಎನ್ಸಿಪಿ ಅಪ್ರಸ್ತುತ, ವಿಜಯೀ ಕೇಸರಿ ಪಾಳೆಯದ ನಡುವೆಯಷ್ಟೇ ತಿಕ್ಕಾಟ: ಮುಂಬೈ ಪಾಲಿಕೆ ಫಲಿತಾಂಶ ಸಾರಿರುವ ಸಂಗತಿ

ಡಿಜಿಟಲ್ ಕನ್ನಡ ಟೀಮ್:

ಏಷ್ಯಾದ ಶ್ರೀಮಂತ ಪಾಲಿಕೆ ಎಂದೇ ಖ್ಯಾತಿ ಗಳಿಸಿರುವ ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಶಿವಸೇನೆ ಹಾಗೂ ಬಿಜೆಪಿ ಪಾರುಪತ್ಯ ಜೋರಾಗೆ ಸಾಗಿದೆ. ಕಳೆದ 20 ವರ್ಷಗಳಿಂದ ಬಿಎಂಸಿಯಲ್ಲಿ ಬಿಗಿ ಹಿಡಿತ ಸಾಧಿಸಿರುವ ಶಿವಸೇನೆ ಹಾಗೂ ಬಿಜೆಪಿ ಈ ಬಾರಿ ಮೈತ್ರಿ ಮಾಡಿಕೊಳ್ಳದೇ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೂ ಭರ್ಜರಿ ಮುನ್ನಡೆ ಸಾಧಿಸಿವೆ.

227 ವಾರ್ಡ್ ಗಳ ಪೈಕಿ ಶಿವಸೇನೆ 84, ಬಿಜೆಪಿ 81 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಇನ್ನು ಕಾಂಗ್ರೆಸ್ ಹಾಗೂ ಎನ್ ಸಿಪಿ ಕ್ರಮವಾಗಿ 31 ಹಾಗೂ 09 ಸೀಟುಗಳನ್ನು ಗೆದ್ದು ತೀವ್ರ ಹಿನ್ನಡೆ ಅನುಭವಿಸಿವೆ. ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಭಿನ್ನಮತ ಉದ್ಭವಿಸಿದ ಪರಿಣಾಮ ಈ ಬಾರಿಯ ಚುನಾವಣೆಯಲ್ಲಿ ಶಿವಸೇನೆ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿತ್ತು. ಕಳೆದ ಬಾರಿಯ (2012) ಚುನಾವಣೆಯಲ್ಲಿ ಶಿವಸೇನೆ 75, ಬಿಜೆಪಿ 31, ಕಾಂಗ್ರೆಸ್ 52 ಹಾಗೂ ಎನ್ ಸಿಪಿ 13 ಸೀಟುಗಳನ್ನು ಗೆದ್ದುಕೊಂಡಿದ್ದವು.

ಈ ನಿಟ್ಟಿನಲ್ಲಿ ನೋಡಿದಾಗ ಶಿವಸೇನೆಗಿಂತ ಹಿಂದೆ ಬಿದ್ದರೂ ಬಿಜೆಪಿಯ ಪ್ರಗತಿ ಭರ್ಜರಿಯಾಗಿದೆ. ಅಲ್ಲಿಗೆ ನೀನಾ-ತಾನಾ ಎಂಬ ಬಿಜೆಪಿ ಮತ್ತು ಶಿವಸೇನೆಯ ವಾಕ್ಸಮರಗಳು ಮುಂದುವರಿಯುತ್ತವಾದರೂ ಇಬ್ಬರಿಗೂ ಅವರವರ ಬಲವಿದೆ ಎಂಬುದನ್ನು ಖಾತ್ರಿಯಾಗಿಸಿದೆ ಈ ಚುನಾವಣೆ.

ಈ ಬಾರಿ ಬಿಎಂಸಿ ಚುನಾವಣೆ ಜತೆಗೆ 11 ಜಿಲ್ಲಾ ಪರಿಷತ್ ಹಾಗೂ 118 ಪಂಚಾಯ್ತಿ ಸಮಿತಿಗಳ ಚುನಾವಣೆ ನಡೆದು ಇಂದೇ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಈ ಚುನಾವಣೆಗಳನ್ನು ಮಿನಿ ವಿಧಾನಸಭೆ ಚುನಾವಣೆ ಎಂದೇ ಪರಿಗಣಿಸಲಾಗಿತ್ತು. ಪಾಲಿಕೆ ಅಧಿಕಾರ ಹಿಡಿಯಲು 114 ಬಹುಮತ ಸಂಖ್ಯೆಯಾಗಿದ್ದು, ಶಿವಸೇನೆ ಹಾಗೂ ಬಿಜೆಪಿ ಒಂದಾಗಿ ಅಧಿಕಾರ ಹಿಡಿಯುವುದೇ ಅಥವಾ ಬೇರೆಯವರ ಜತೆ ಕೈ ಜೋಡಿಸುವುದೇ ಎಂಬುದು ಕುತೂಹಲ ಮೂಡಿಸಿದೆ.

ಬಿಎಂಸಿ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸುವುದಾದರೆ ಶಿವಸೇನೆ ಎಂದಿನಂತೆ ತನ್ನ ಪಾರುಪತ್ಯ ಮುಂದುವರಿಸಿರುವುದು ಸ್ಪಷ್ಟವಾಗಿದೆ. ಆದರೆ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿದ್ದರೂ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆದ್ದಿರುವುದು ಆತ್ಮ ವಿಶ್ವಾಸ ಹಿಗ್ಗಿಸಿದೆ. ಈ ಬಾರಿಯ ಚುನಾವಣೆಯನ್ನು ಶಿವಸೇನೆ ವರ್ಸಸ್ ಬಿಜೆಪಿ ಅಂತಲೇ ಕರೆಯಲಾಗಿತ್ತು. ಬಿಜೆಪಿ ಶಿವಸೇನೆಗಿಂತ ಕಡಿಮೆ ಸೀಟು ಗೆದ್ದರೂ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ ದೊಡ್ಡ ಸಾಧನೆ ಎಂದೇ ಪರಿಗಣಿಸಬಹುದು. ಕಳೆದ ಚುನಾವಣೆಯಲ್ಲಿ ಕೇವಲ 31 ಸೀಟು ಗೆದ್ದಿದ್ದ ಬಿಜೆಪಿ ಈ ಬಾರಿ 80 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಮಹತ್ವದ ಸಾಧನೆಯಾಗಿದೆ.

ಈ ಚುನಾವಣೆಯಲ್ಲಿ ನಿಜವಾಗಿಯೂ ತೀವ್ರ ಮುಖಭಂಗವಾಗಿರೋದು ಕಾಂಗ್ರೆಸ್ ಹಾಗೂ ಶರದ್ ಪವಾರ್ ನೇತೃತ್ವದ ಎನ್ ಸಿಪಿಗೆ. ಕಳೆದ ಬಾರಿ 51 ಕ್ಷೇತ್ರದಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಕೇವಲ 31 ಕ್ಷೇತ್ರಗಳಲ್ಲಿ ಮಾತ್ರ ಗೆದ್ದುಕೊಂಡಿದೆ. ಪಕ್ಷ ತೀವ್ರ ಮುಖಭಂಗ ಅನುಭವಿಸಿದ ಕಾರಣ ಸಂಜಯ್ ನಿರುಪಮ್ ಮುಂಬೈನ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಒಂದು ಹಂತದಲ್ಲಿ ಬಿಎಂಸಿ ಫಲಿತಾಂಶದಲ್ಲಿ ಶಿವಸೇನೆಯು ಬಿಜೆಪಿಗಿಂತ ಸುಮಾರು 20 ಕ್ಷೇತ್ರಗಳಷ್ಟು ಮುನ್ನಡೆಯಲ್ಲಿತ್ತಾದರೂ ನಂತರ ಬಿಜೆಪಿ ಮಹತ್ವದ ಮುನ್ನಡೆ ಪಡೆದು ಮೊದಲ ಹಾಗೂ ಎರಡನೇ ಸ್ಥಾನದ ಅಂತರವನ್ನು ಕೇವಲ 3 ಕ್ಷೇತ್ರಗಳಿಗೆ ಇಳಿಸಿಕೊಂಡಿತು. ಮುಂಬೈ ಹೊರತಾಗಿ ಬಿಜೆಪಿ ಭಾಗಗಳಲ್ಲಿನ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದೆ. ಪುಣೆಯಲ್ಲಿ ಎನ್ ಸಿಪಿ ಪಕ್ಷವನ್ನು ಹಿಂದಿಕ್ಕಿರುವ ಬಿಜೆಪಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಜತೆಗೆ ನಾಶಿಕ್ ಮತ್ತು ನಾಗ್ಪುರದಲ್ಲೂ ಮುನ್ನಡೆ ಸಾಧಿಸಿದೆ.

ಒಟ್ಟಾರೆಯಾಗಿ ಶಿವಸೇನೆ ಹಾಗೂ ಬಿಜೆಪಿ ಕಳೆದ ಬಾರಿ ಚುನಾವಣೆಗಿಂತಲೂ ಭಾರಿ ಮುನ್ನಡೆ ಸಾಧಿಸಿವೆಯಾದರೂ ಬಿಜೆಪಿಯ ಗೆಲುವಿನ ಅಂತರ ದುಪ್ಪಟ್ಟಿಗೂ ಹೆಚ್ಚಾಗಿದೆ. ಹೀಗಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮಗೆದುರಾಗಿದ್ದ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೇ ಭಾರತದ ಹಣಕಾಸು ರಾಜಧಾನಿ ಎಂದೇ ಗುರುತಿಸಲ್ಪಡುವ ಮುಂಬೈಗೆ ನೋಟು ಅಮಾನ್ಯದಿಂದ ಏನೇ ತೊಂದರೆಯಾಗಿದ್ದಿರಬಹುದಾದರೂ ಅದು ಬಿಜೆಪಿ ವಿರುದ್ಧ ಜನಾಕ್ರೋಶವಾಗಿಲ್ಲ ಎಂಬುದಂತೂ ನಿಚ್ಚಳವಾಗಿಹೋಗಿದೆ.

Leave a Reply