ಸ್ನ್ಯಾಪ್ ಡೀಲ್ ಕಂಪನಿಯ 600 ಸಿಬ್ಬಂದಿಗೆ ಗೇಟ್ ಪಾಸ್, ಅತಿ ಪ್ರಚಾರ- ಅತಿ ವೆಚ್ಚದ ಇ ಕಾಮರ್ಸ್ ಮಾದರಿ ಮುರಿದು ಬೀಳುತ್ತಿದೆ

ಡಿಜಿಟಲ್ ಕನ್ನಡ ಟೀಮ್:

ಹಣದ ಹುಚ್ಚು ಹರಿವು ಇದ್ದಾಗ ಹುಟ್ಟುವ ಆಕರ್ಷಣೆಗಳಿಗೆ ಆಯಸ್ಸು ಕಡಿಮೆ… ಎಂಬ ಮಾತು ಈಗ ನಿಜವಾಗಿದೆ. ಆರಂಭದಲ್ಲಿ ಹೆಚ್ಚಿನ ಹಣ ಹರಿವಿನಿಂದ ಸಾಕಷ್ಟು ಗಮನ ಸೆಳೆದಿದ್ದ ಸ್ನ್ಯಾಪ್ ಡೀಲ್ ಶಾಪಿಂಗ್ ಕಂಪನಿ ಈಗ ತನ್ನ ದುಂದು ವೆಚ್ಚದಿಂದ ಕೈ ಸುಟ್ಟುಕೊಂಡಿದೆ. ಪರಿಣಾಮ ಕಂಪನಿ ತನ್ನ 600 ನೌಕರರಿಗೆ ಗೇಟ್ ಪಾಸ್ ಕೊಡಲು ಮುಂದಾಗಿದೆ.

ಯಾವುದೇ ಸ್ಟಾರ್ಟ್ ಅಪ್ ಆರಂಭವಾಗಬೇಕಾದರೂ ಸ್ನ್ಯಾಪ್ ಡೀಲ್ ಹಾಗೂ ಫ್ಲಿಪ್ಕಾರ್ಟ್ ಕಂಪನಿಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಿದ್ದರು. ಈ ಎರಡು ಕಂಪನಿಗಳು ದೈತ್ಯವಾಗಿ ಬೆಳೆಯುತ್ತಿದೆ ಎಂಬೆಲ್ಲಾ ಪ್ರಚಾರ ನೀಡಲಾಗಿತ್ತು. ಆದರೆ ಈ ಕಂಪನಿಗಳು ಆರಂಭವಾಗಿ 10 ವರ್ಷ ಕಳೆದರೂ ಲಾಭದ ಹಾದಿ ಹಿಡಿಯಲು ಸಾಧ್ಯವಾಗಿಲ್ಲ. ಸಾಕಷ್ಟು ಹೆಸರು ಮಾಡಿದ್ದರು ಸ್ನ್ಯಾಪ್ ಡೀಲ್ ನಂತಹ ಕಂಪನಿ ಲಾಭ ಮಾಡಲು ಸಾಧ್ಯವಾಗಿಲ್ಲ ಏಕೆ ಎಂದು ನೋಡುವುದಾದರೆ, ತಿಳಿಯುವ ವಿಚಾರ ಅತಿಯಾದ ಹಣದ ಹರಿವು.

ಜಪಾನಿನ ಸಾಫ್ಟ್ ಬ್ಯಾಂಕ್ ಹಾಗೂ ಥೈವಾನಿನ ಫಾಕ್ಸ್ ಕಾನ್ ಸಂಸ್ಥೆಗಳು ಸ್ನ್ಯಾಪ್ ಡೀಲ್ಗೆ ಹಣ ಹೂಡಿವೆ. ಕಂಪನಿಯನ್ನು ವಿಸ್ತರಿಸುವ ಉದ್ದೇಶದಿಂದ ನಿಯಂತ್ರಣವಿಲ್ಲದೇ ಹಣದ ಹರಿವು ಮಾಡಲಾಗಿದೆ. ಈ ಹಣದ ಹರಿವು ಎಷ್ಟರ ಮಟ್ಟಿಗೆ ಹೆಚ್ಚಿತ್ತು ಎಂದರೆ 2014-15ನೇ ಸಾಲಿನಲ್ಲಿ ಕಂಪನಿಯು ತನ್ನ ನೌಕರರ ವೇತನಕ್ಕಾಗಿ ₹ 217 ಕೋಟಿಯನ್ನು ಖರ್ಚು ಮಾಡಿತ್ತು. ನಂತರ 2015-16ನೇ ಸಾಲಿನಲ್ಲಿ ಇದರ ಪ್ರಮಾಣ ₹ 673 ಕೋಟಿಗೆ ಹೆಚ್ಚಾಗಿತ್ತು. ಲಾಭದ ಹಾದಿಗೆ ಬರುವ ಮುನ್ನವೇ ಈ ರೀತಿ ಹೆಚ್ಚಿನ ಹಣ ವೆಚ್ಚ ಮಾಡಿರುವುದು ಕಂಪನಿಗೆ ಬರೆ ಬೀಳಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈಗ ಈ ಹೊಡೆತದಿಂದ ಪಾರಾಗಲು ಕಂಪನಿ ವೆಚ್ಚದ ಪ್ರಮಾಣ ಇಳಿಕೆಗೆ ಮುಂದಾಗಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಅಲ್ಲದೆ ಕಂಪನಿಯ ವಿವಿಧ ವರ್ಗಗಳನ್ನು ವಿಲೀನಗೊಳಿಸಿ ಶೇ.60 ರಷ್ಟು ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

ಅಷ್ಟೇ ಅಲ್ಲದೆ ಕಂಪನಿಯ ಸಹ ಸಂಸ್ಥಾಪಕರಾದ ಕುನಾಲ್ ಬಾಹ್ಲ್ ಮತ್ತು ರೋಹಿತ್ ಬನ್ಸಾಲ್ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದು, ‘ಕಳೆದ ಎರಡು ವರ್ಷಗಳಲ್ಲಿ ತಮ್ಮ ಕೆಲವು ತಪ್ಪು ನಿರ್ಧಾರದಿಂದ ಈ ಪರಿಸ್ಥಿತಿ ಎದುರಾಗಿದೆ. ಈಗ ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳಬೇಕಿದೆ’ ಎಂದು ಒಪ್ಪಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಈ ಇಬ್ಬರು ಸಹ ಸಂಸ್ಥಾಪಕರು ಶೇ.100 ರಷ್ಟು ವೇತನ ಕಡಿತ ಮಾಡಿಕೊಂಡಿದ್ದಾರೆ.

ಇ ಕಾಮರ್ಸ್ ಗುಳ್ಳೆ ಒಡೆಯಲಿದೆ ಎಂದು ಡಿಜಿಟಲ್ ಕನ್ನಡ ತನ್ನ ಹಲವು ವಿಶ್ಲೇಷಮೆಗಳಲ್ಲಿ ಹೇಳುತ್ತ ಬಂದಿತ್ತು. ಭವಿಷ್ಯ ಅತ್ತ ಕಡೆಯೇ ಸಾಗಿದೆ.

Leave a Reply