ಡಿಜಿಟಲ್ ಕನ್ನಡ ಟೀಮ್:
ಹಮ್ ತುಮ್ ಏಕ್ ಕಮರೇ ಮೆ ಬಂದ್ ಹೊ.. ಎನ್ನುತ್ತ ಕೋಣೆಯಲ್ಲಿ ನಾವಿಬ್ಬರೂ ಬಂಧಿಯಾಗಿ ಚಾವಿ ಎಲ್ಲೋ ಕಳೆದು ಹೋಗಲಿ ಎಂಬ ರೊಮ್ಯಾಂಟಿಕ್ ದಿನಗಳಿಂದ ತುಸು ಮೈ ಕೊಡವಿಕೊಂಡು ಬೇರೆ ವಿಷಯ-ವಸ್ತುಗಳಿಗೆ ಹುಡುಕಾಡುತ್ತಿರುವಂತಿದೆ ಚಿತ್ರರಂಗ.
ಹಾಗೆಂದೇ ಮಾರ್ಚ್ 17ಕ್ಕೆ ಬಿಡುಗಡೆಯಾಗಲಿರುವ ‘ಟ್ರ್ಯಾಪ್ಡ್’ ಹಿಂದಿಚಿತ್ರದ ಟ್ರೈಲರ್ ಯೂಟ್ಯೂಬಿನ ಸಂಚಲನ ಪಟ್ಟಿಯಲ್ಲಿ ಸ್ಥಾನ ಕಂಡುಕೊಂಡಿದೆ. ಬಿಡುಗಡೆಯಾದ ಕೆಲವೇ ತಾಸುಗಳಲ್ಲಿ 10 ಲಕ್ಷ ವೀಕ್ಷಣೆಗಳ ಗಡಿ ಮುಟ್ಟಿದೆ.
ಮನುಷ್ಯನಿಗೆ ಬದುಕಿನ ಪ್ರಶ್ನೆ ಬಂದಾಗ ಆತನ ಸೆಣೆಸಾಟ ಎಂಥದ್ದು ಎಂಬುದರ ಬಗ್ಗೆ ಹಲವು ಇಂಗ್ಲಿಷ್/ ವಿದೇಶಿ ಚಿತ್ರಗಳೆಲ್ಲ ಬಂದಿವೆ. ದ್ವೀಪದಲ್ಲಿ ಸಿಕ್ಕಿಬಿದ್ದು ಬದುಕಿನ ಹೋರಾಟದಲ್ಲಿ ಮುಳುಗುವ ಕಥಾನಕದ ‘ಕಾಸ್ಟ್ ಅವೆ’ ಚಿತ್ರವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಟ್ರ್ಯಾಪ್ಡ್ ಚಿತ್ರದ ಟ್ರೈಲರ್ ನಲ್ಲಿ ಕಂಡು ಬರುತ್ತಿರುವಂತೆ, ಇಲ್ಲಿ ನಿರ್ದೇಶಕ ವಿಕ್ರಮಾದಿತ್ಯ ಮೊಟ್ವಾನಿ ಹೇಳಹೊರಟಿರುವುದು ಅಪಾರ್ಟ್ ಮೆಂಟ್ ಕೊಠಡಿಯಲ್ಲಿ ಅಚಾನಕ್ ಲಾಕ್ ಆಗಿ, ಸಿಟ್ಟಿನಲ್ಲಿ ಮೊಬೈಲ್ ಫೋನನ್ನೂ ಬಿಸಾಡಿಕೊಂಡ ಯುವಕನೊಬ್ಬನ ಬದುಕುವ ಪ್ರಯಾಸ. ರಾಜ್ಕುಮಾರ್ ರಾವ್ ಮುಖ್ಯ ಭೂಮಿಕೆ. ಅಮಿತ್ ಜೋಶಿ, ಹಾರ್ದಿಕ್ ಮೆಹ್ತ ಬರೆದಿರುವ ಕತೆ.
ಟ್ರೈಲರ್ ಜನರ ಮನ ಗೆದ್ದಿದೆ. ಈ ಒಂದು ಸಾಲಿನ ಕತೆಗೆ ಎರಡು ತಾಸು ಆಕರ್ಷಿಸುವ ಸಂಗತಿಗಳನ್ನು ಹೇಗೆ ತುಂಬಿದ್ದಾರೆ ಎಂಬುದು ಚಿತ್ರ ನೋಡುವುದಕ್ಕೆ ಸಿನಿ ರಸಿಕ ಇಟ್ಟುಕೊಳ್ಳಬಹುದಾದ ಕೌತುಕ.