ಭಾರತವನ್ನು ಕೊಲ್ಲುತ್ತಿದೆ ಖಿನ್ನತೆ! ವಿಶ್ವ ಆರೋಗ್ಯ ಸಂಸ್ಥೆ ಹರವಿಟ್ಟಿರುವ 5 ಕೋಟಿ ಆತಂಕದಂಕಿ

ಡಿಜಿಟಲ್ ಕನ್ನಡ ಟೀಮ್:

ಜಗತ್ತು ಸಣ್ಣದಾಗಿದೆ, ಹಿಂದಿಗಿಂತ ಚೆನ್ನಾಗಿ ಬೆಸೆದುಕೊಂಡಿದೆ ಎಂದೆಲ್ಲ ಅಚ್ಚರಿಗೊಳ್ಳುತ್ತೇವೆ. ಆದರೆ ಈ ಬೆಸುಗೆ ಮನುಷ್ಯನ ಏಕಾಕಿತನವನ್ನು ತೊಲಗಿಸುತ್ತಿಲ್ಲವೇ? ಅದೇಕೆ ಹೆಚ್ಚೆಚ್ಚು ಮಂದಿ ಖಿನ್ನತೆ ಮತ್ತು ಭವಿಷ್ಯದ ಕುರಿತ ಆತಂಕಗಳಿಗೆ ಸಿಲುಕುತ್ತಿದ್ದಾರೆ?

ಭಾರತದಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಜನ ಖಿನ್ನತೆಯಿಂದ ಬಳಲುತ್ತಿದ್ದಾರೆ. ಆ ಮೂಲಕ ವಿಶ್ವದಲ್ಲಿನ ಆತ್ಮಹತ್ಯೆ ಸಾಲಿಗೆ ಭಾರತದ ಕೊಡುಗೆ ಹೆಚ್ಚಿನ ಪ್ರಮಾಣದಲ್ಲಿದೆ ಎಂಬ ಆಘಾತಕಾರಿ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಒ) ಅಧ್ಯಯನದ ವರದಿ ಬಹಿರಂಗ ಪಡಿಸಿದೆ.

ವಿಶ್ವಸಂಸ್ಥೆ 2015ರಲ್ಲಿ ನಡೆಸಿರುವ ‘ನೂತನ ಜಾಗತಿಕ ಆರೋಗ್ಯ ಅಂದಾಜು- ಖಿನ್ನತೆ ಹಾಗೂ ಇತರೆ ಮಾನಸಿಕ ಕಾಯಿಲೆ’ ಕುರಿತಾದ ಅಧ್ಯಯನದಲ್ಲಿ ಈ ಮಾಹಿತಿ ತಿಳಿದುಬಂದಿದ್ದು, ಜಾಗತಿಕ ಮಟ್ಟದಲ್ಲಿ ಭಾರತದಂತಹ ಮಧ್ಯಮ ಹಾಗೂ ಕಡಿಮೆ ಆದಾಯ ರಾಷ್ಟ್ರಗಳಲ್ಲಿ ಆತ್ಮಹತ್ಯಾ ಪ್ರಕರಣಗಳು ಹೆಚ್ಚಾಗಿವೆ.

ಪ್ರಪಂಚದಲ್ಲಿ ಸುಮಾರು 322 ಮಿಲಿಯನ್ (32.2 ಕೋಟಿ) ಜನರು ಖಿನ್ನತೆಗೆ ಒಳಗಾಗಿದ್ದಾರೆ. ಇದರಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾದ ನೈರುತ್ಯ ಭಾಗ, ಪಶ್ಚಿಮ ಪೆಸಿಫಿಕ್ ಪ್ರದೇಶದ ರಾಷ್ಟ್ರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ವರದಿಯಲ್ಲಿರುವ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 2005 ರಲ್ಲಿ ಇದ್ದ ಖಿನ್ನತೆಯ ಪ್ರಮಾಣಕ್ಕೂ 2015ರಲ್ಲಿನ ಖಿನ್ನತೆಯ ಪ್ರಮಾಣಕ್ಕೂ ಶೇ.18 ರಷ್ಟು ಹೆಚ್ಚಳವಾಗಿದೆ. 2015 ರಲ್ಲಿ ಭಾರತದ 5,66,75,969 ಜನ ಖಿನ್ನತೆಗೆ ಒಳಗಾಗಿದ್ದು, ಇದು ದೇಶದ ಜನಸಂಖ್ಯೆಯ ಶೇ.4.5 ರಷ್ಟಿದೆ. ಇನ್ನು ಇತರೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಸಂಖ್ಯೆ 3,84,25,093. ಇದು ದೇಶದ ಜನಸಂಖ್ಯೆಯ ಶೇ.3 ರಷ್ಟಿದೆ.

2015ರಲ್ಲಿ 7,88,000 ಜನ ಆತ್ಮಹತ್ಯೆ ಮೂಲಕ ಸಾವನ್ನಪ್ಪಿದರೆ, ಇದಕ್ಕೂ ಹೆಚ್ಚು ಪ್ರಮಾಣದಷ್ಟು ಮಂದಿ ಆತ್ಮಹತ್ಯೆಗೆ ಯತ್ನಿಸಿ ವಿಫಲರಾಗಿದ್ದಾರೆ. ಪ್ರಪಂಚದಲ್ಲಿ ಜನರ ಸಾವಿನ ಸಂಖ್ಯೆಯಲ್ಲಿ ಶೇ.1.5 ರಷ್ಟು ಮಂದಿ ಆತ್ಮಹತ್ಯೆಯಿಂದ ಪ್ರಾಣ ಬಿಟ್ಟಿದ್ದಾರೆ, ಆ ಮೂಲಕ ಆತ್ಮ ಹತ್ಯೆ ಸಾವಿನ ಕಾರಣಗಳ ಪಟ್ಟಿಯಲ್ಲಿ ಅಗ್ರ 20ರಲ್ಲಿ ಸ್ಥಾನ ಪಡೆದಿದೆ. ಈ ಆತ್ಮಹತ್ಯೆಯ ಪ್ರಮಾಣದಲ್ಲಿ ಶೇ.78 ರಷ್ಟು ಮಂದಿ ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಿಂದ ಎಂಬ ಅಂಶ ಆತಂಕ ಮೂಡಿಸಿದೆ.

Leave a Reply