ಡೈರಿ ಅಸ್ತ್ರದೊಂದಿಗೆ ಬಿಜೆಪಿಗೆ ಬಂತು ಚುನಾವಣಾ ಪ್ರಚಾರದ ಬಲ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ಕಾಣಿಕೆ ನೀಡಿರುವ ಡೈರಿ ಪ್ರಕರಣ ಸದ್ಯ ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ತನ್ನ ಹೈ ಕಮಾಂಡಿಗೆ ಕೋಟಿಗಟ್ಟಲೆ ಹಣವನ್ನು ನೀಡಿರುವ ಮಾಹಿತಿ ಡೈರಿಯಲ್ಲಿ ಉಲ್ಲೇಖವಾಗಿದೆ. ಇದರಲ್ಲಿರುವ ಮಾಹಿತಿ ಸುಳ್ಳಾಗಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕೆಲ ದಿನಗಳ ಹಿಂದೆ ಸವಾಲೆಸೆದಿದ್ದರು. ಈಗ ಆ ಡೈರಿಯ ಮಾಹಿತಿಗಳು ಬಹಿರಂಗವಾಗಿದ್ದು, ಬಿಜೆಪಿಗೆ ಚುನಾವಣಾ ಪ್ರಚಾರಕ್ಕೆ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ.

ಕಾಂಗ್ರೆಸ್ ಮುಖಂಡ ಎಂಎಲ್ ಸಿ ಗೋವಿಂದ ರಾಜು ಅವರ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕಿದ್ದು ಎನ್ನಲಾಗಿರುವ ಡೈರಿಯಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ₹ 1000 ಕೋಟಿ ನೀಡಿರುವ ಬಗ್ಗೆ ಮಾಹಿತಿಗಳು ಬೆಳಕಿಗೆ ಬಂದಿವೆ. ಈ ಡೈರಿಯಲ್ಲಿ ನಾಯಕರ ಹೆಸರು ಸ್ಪಷ್ಟವಾಗಿ ಇಲ್ಲವಾದರೂ ರಾಷ್ಟ್ರ ನಾಯಕರ ಹೆಸರನ್ನು ಹೋಲುವ ಗುರುತಿನ ಅಕ್ಷರಗಳು ಕಂಡು ಬಂದಿವೆ. ಈ ಡೈರಿಯಲ್ಲಿ ಇರುವ ಗುರುತಿನ ಅಕ್ಷರಗಳನ್ನು ಈ ರೀತಿಯಾಗಿ ಪರಿಗಣಿಸಲಾಗುತ್ತಿದೆ. ಆರ್.ಜಿ ಕಚೇರಿ (ರಾಹುಲ್ ಗಾಂಧಿ ಕಚೇರಿ), ಡಿಕೆಎಸ್ (ಡಿ.ಕೆ ಶಿವಕುಮಾರ್), ಡಿವಿಜಿಎಸ್ (ದಿಗ್ವಿಜಯ್ ಸಿಂಗ್), ಎಂ ವೋರಾ (ಮೋತಿ ಲಾಲ್ ವೋರಾ), ಆರ್ ವಿಡಿ (ಆರ್.ವಿ ದೇಶಪಾಂಡೆ), ಕೆಜೆಜಿ (ಕೆ.ಜೆ.ಜಾರ್ಜ್), ಹೆಚ್.ಎಂ (ಹೆಚ್ ಮಹದೇವಪ್ಪ), ಎಐಸಿಸಿ (ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ), ಎಸ್.ಜಿ (ಸೋನಿಯಾ ಗಾಂಧಿ) ಎಂದು ಹೇಳಲಾಗುತ್ತಿದೆ. ಈ ಡೈರಿಯಲ್ಲಿ ಯಾರು ಯಾರಿಗೆ ಎಷ್ಟು ಹಣ ನೀಡಿದ್ದಾರೆ ಎಂದೆಲ್ಲಾ ಮಾಹಿತಿಗಳು ಇವೆ.

ಆರಂಭದಲ್ಲಿ ಯಡಿಯೂರಪ್ಪನವರ ಡೈರಿ ಬಾಂಬ್ ಅನ್ನು ರಾಜಕೀಯ ಆರೋಪ ಪ್ರತ್ಯಾರೋಪವೆಂದು ಭಾವಿಸಲಾಗಿತ್ತು. ಆದರೆ ಡೈರಿಯಲ್ಲಿನ ಮಾಹಿತಿಗಳು ದೊಡ್ಡ ಬಲವನ್ನು ತಂದಿದೆ.

ಈ ಆರೋಪಗಳೆಲ್ಲಾ ಸ್ಥಿರವಾಗುತ್ತವೆಯೇ?

ಹಣದ ವ್ಯವಹಾರದ ಕುರಿತಂತೆ ಡೈರಿಯಲ್ಲಿ ನಮೂದಿಸಲಾಗಿರುವ ಮಾಹಿತಿಗಳ ಆಧಾರದ ಮೇಲೆ ಮಾಡಿರುವ ಆರೋಪ ಸ್ಥಿರವಾಗುತ್ತವೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟತ್ತದೆ. ಆದರೆ ಇದು ಸಾಧ್ಯವಿಲ್ಲ ಎಂಬುದನ್ನು ಈ ಹಿಂದಿನ ಹಲವು ಪ್ರಕರಣಗಳೇ ಸಾಕ್ಷಿಯಾಗುತ್ತವೆ. ನರೇಂದ್ರ ಮೋದಿ ಅವರ ಹೆಸರು ಉಲ್ಲೇಖವಾಗಿದೆ ಎಂಬ ಸಹಾರ ಡೈರಿಯ ವಿಚಾರವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಭೂಕಂಪವಾಗಲಿದೆ ಎಂಬ ರಾಹುಲ್ ಗಾಂಧಿಯವರ ಆರೋಪ ಏನಾಯಿತು, ಈ ಹಿಂದೆ ಹವಾಲ ಹಗರಣದಲ್ಲಿ ಕೆಲವು ನಾಯಕರ ಹೆಸರಿನ ಅಕ್ಷರಗಳು ಇವೆ ಎಂಬ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಹೀಗಾಗಿ ಈ ಪ್ರಕರಣವೂ ನ್ಯಾಯಾಲಯದಲ್ಲಿ ದೊಡ್ಡ ಮಟ್ಟದ ಫಲಿತಾಂಶ ಬರುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.

ಆದರೆ ಇಲ್ಲಿ ಇರುವುದು ಕಾನೂನಿನ ಪ್ರಶ್ನೆಯಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಾಗ ಜನರ ಗ್ರಹಿಕೆ ಯಡಿಯೂರಪ್ಪನವರ ವಿರುದ್ಧವಾಗಿತ್ತು. ಕೆಲವು ವರ್ಷಗಳ ನಂತರ ಇತ್ತೀಚೆಗೆ ಯಡಿಯೂರಪ್ಪನವರು ನ್ಯಾಯಾಲಯದಲ್ಲಿ ಆ ಆರೋಪಗಳಿಂದ ಮುಕ್ತರಾಗಿದ್ದಾರೆ. ಆದರೆ ಆರೋಪ ಬಂದ ಮೇಲೆ ಯಡಿಯೂರಪ್ಪನವರಿಗೆ ದೊಡ್ಡ ಪೆಟ್ಟು ನೀಡಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಈಗ ಕೂಡ ಡೈರಿ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಘನತೆಗೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆಗಳು ಹೆಚ್ಚಿವೆ.

ಕಾರಣ, ಬೆಂಗಳೂರಿನಲ್ಲಿ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸರ್ಕಾರ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಾಗ ಕಾಂಗ್ರೆಸ್ ಈ ಯೋಜನೆಯಿಂದ ಬರುವ ಹಣದಲ್ಲಿ ಹೈಕಮಾಂಡಿಗೆ ಕಪ್ಪ ಹಣ ರವಾನಿಸಲು ಮುಂದಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅದಕ್ಕೆ ಪುಷ್ಟಿ ನೀಡುವಂತೆ ಈ ಡೈರಿಯಲ್ಲಿ ಸ್ಟೀಲ್ ಬ್ರಿಡ್ಜ್ ಫ್ಲೈಓವರ್ ಯೋಜನೆಯಿಂದ ಹೈಕಮಾಂಡಿಗೆ ₹ 65 ಕೋಟಿ ಹಣ ರವಾನೆಯಾಗಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಿದೆ. ಇನ್ನು ಕೆಜೆಜಿ, ಡಿಕೆಎಸ್, ಆರ್ ವಿಡಿ, ಎಸ್ ಬಿ, ರಘು ಸೇರಿದಂತೆ ಇತರರಿಂದ ಒಟ್ಟು ₹ 629 ಕೋಟಿ ಪಡೆದು ಎಐಸಿಸಿಗೆ ₹ 450 ಕೋಟಿ ನೀಡಿರುವ ಬಗ್ಗೆ ಉಲ್ಲೇಖವಿದೆ.

ಕಾನೂನಿನ ವ್ಯಾಪ್ತಿಯಲ್ಲಿ ಯಡಿಯೂರಪ್ಪನವರ ಆರೋಪಗಳು ಈ ಡೈರಿಯ ಮಾಹಿತಿಯ ಆಧಾರದ ಮೇಲೆ ಸಾಬೀತಾಗದಿದ್ದರೂ ವಿಧಾನ ಸಭೆ ಚುನಾವಣೆಗೆ ಕೇವಲ ಒಂದು ವರ್ಷ ಮಾತ್ರ ಬಾಕಿ ಇರುವಾಗ ಸರ್ಕಾರದ ಘನತೆಗೆ ನೀಡುವ ಹೊಡೆತ ಮಹತ್ವದ್ದಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಬಿಜೆಪಿ ಚುನಾವಣಾ ಪ್ರಚಾರದ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವುದು ಸ್ಪಷ್ಟವಾಗಿದೆ.

Leave a Reply