ಕೊಹ್ಲಿ ಪಡೆಗೆ ಕಾಂಗರುಗಳಿಂದ ಅದೆಂಥಾ ಮಾರಕ ಹೊಡೆತ, ತಪ್ಪಲಿದೆಯಾ ಭಾರತದ ಅಜೇಯ ಯಾತ್ರೆಯ ಹಿಡಿತ?

ಭಾರತದ ಬ್ಯಾಟಿಂಗ್ ವಿಭಾಗವನ್ನು ನಿಯಂತ್ರಿಸಿ 6 ವಿಕೆಟ್ ಪಡೆದ ಆಸ್ಟ್ರೇಲಿಯಾದ ಸ್ಪಿನ್ನರ್ ಸ್ಟೀವ್ ಓ ಕೆಫೆ.

ಡಿಜಿಟಲ್ ಕನ್ನಡ ಟೀಮ್:

ತವರಿನ ಅಂಗಳದಲ್ಲಿ ಪ್ರವಾಸಿ ಕಾಂಗರೂ ಪಡೆ ಮೇಲೆ ಸವಾರಿ ಮಾಡುವ ಟೀಂ ಇಂಡಿಯಾದ ಲೆಕ್ಕಾಚಾರ ಉಲ್ಟಾ ಆಗಿದೆ. ಪುಣೆಯ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ವಿಭಾಗ ಭಾರಿ ಕುಸಿತ ಕಂಡಿದ್ದು, ಆತಿಥೇಯ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸಿದೆ. ಪರಿಣಾಮ ಭಾರತ ತಂಡ ಪಂದ್ಯವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ.

ಪಂದ್ಯದ ಎರಡನೇ ದಿನವಾದ ಶುಕ್ರವಾರ ಆಸ್ಟ್ರೇಲಿಯಾದ ಕೊನೆ ವಿಕೆಟ್ ಅನ್ನು ಬೇಗನೆ ಎಗರಿಸಿದ ಭಾರತ ಪ್ರವಾಸಿಗರನ್ನು 260 ರನ್ ಗಳಿಗೆ ಕಟ್ಟಿ ಹಾಕಿದರು. ನಂತರ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಪಡೆ ಊಹೆಗೂ ನಿಲುಕದ ರೀತಿಯಲ್ಲಿ ಆಘಾತ ಅನುಭವಿಸಿತು. ಪರಿಣಾಮ ಕೇವಲ 105 ರನ್ ಗಳಿಗೆ ಆಲೌಟ್ ಆಗುವ ಮೂಲಕ 155 ರನ್ ಗಳ ಹಿನ್ನಡೆ ಅನುಭವಿಸಿತು. ನಂತರ ಎರಡನೇ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ದಿನದಾಟ ಮುಕ್ತಾಯಕ್ಕೆ 4 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿದೆ. ಅದರೊಂದಿಗೆ ಭಾರತದ ವಿರುದ್ಧ 298 ರನ್ ಗಳ ದೊಡ್ಡ ಮುನ್ನಡೆ ಪಡೆದುಕೊಂಡಿದೆ.

ಭಾರತ ತಂಡಕ್ಕೆ ಆರಂಭಿಕ ಕೆ.ಎಲ್ ರಾಹುಲ್ (64) ಅವರ ಅರ್ಧಶತಕದ ಹೊರತಾಗಿ ಉಳಿತ ಯಾವುದೇ ಬ್ಯಾಟ್ಸ್ ಮನ್ ಗಳಿಂದ ಮಹತ್ವದ ಕಾಣಿಕೆ ದೊರೆಯಲಿಲ್ಲ. ಒಂದು ಹಂತದಲ್ಲಿ 94 ರನ್ 3 ವಿಕೆಟ್ ಕಳೆದುಕೊಂಡಿದ್ದ ಭಾರತ ಕೇವಲ 11 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಾಹುಲ್ ನಂತರ ರಹಾನೆ 13 ಹಾಗೂ ವಿಜಯ್ 10 ರನ್ ಗಳಿಸಿದರು. ಉಳಿದಂತೆ ಯಾವೊಬ್ಬ ಆಟಗಾರ ಎರಡಂಕಿ ರನ್ ಗಳಿಸಲಿಲ್ಲ. ಅತ್ಯುತ್ತಮ ಫಾರ್ಮ್ ನಲ್ಲಿರುವ ಕೊಹ್ಲಿ ಶೂನ್ಯ ಸಂಪಾದನೆಗೆ ನಿರ್ಗಮಿಸಿದ್ದು, ತಂಡಕ್ಕೆ ದುಬಾರಿ ಎನಿಸಿತು. ಕೊಹ್ಲಿ ಸುದೀರ್ಘ 104 ಅಂತಾರಾಷ್ಟ್ರಿಯ ಇನಿಂಗ್ಸ್ ನಂತರ ಮೊದಲ ಬಾರಿಗೆ ರನ್ ಖಾತೆ ತೆರೆಯದೇ ನಿರ್ಗಮಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಈ ಯಶಸ್ಸಿಗೆ ಎಡಗೈ ಸ್ಪಿನ್ನರ್ ಸ್ಟೀವ್ ಓ ಕೆಫೆ ಪ್ರಮುಖ ಕಾರಣ. 35 ರನ್ ನೀಡಿದ ಕೆಫೆ 6 ವಿಕೆಟ್ ಕಬಳಿಸುವ ಮೂಲಕ ಭಾರತ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಮುರಿದರು. ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸಂಪೂರ್ಣ ನಿಯಂತ್ರಣ ಸಾಧಿಸಿದ್ದು, ಪಂದ್ಯದಲ್ಲಿ ಇನ್ನು ಮೂರು ದಿನಗಳ ಆಟ ಬಾಕಿ ಇದೆ. ಹೀಗಾಗಿ ಟೀಂ ಇಂಡಿಯಾ ಪಂದ್ಯದಲ್ಲಿ ಪುಟಿದೇಳುವುದೇ ಅಥವಾ ಆತಿಥೇಯರಿಗೆ ಶರಣಾಗಿ ತನ್ನ 19 ಪಂದ್ಯಗಳ ಅಜೇಯ ಯಾತ್ರೆಯನ್ನು ಅಂತ್ಯಗೊಳಿಸುವುದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 260

ಭಾರತ ಮೊದಲ ಇನಿಂಗ್ಸ್ 105

ರಾಹುಲ್ 64, ರಹಾನೆ 13, ವಿಜಯ್ 10 (ಕೆಫೆ 35ಕ್ಕೆ 6, ಸ್ಟಾರ್ಕ್ 38ಕ್ಕೆ 2)

ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ಸ್ಮಿತ್ ಅಜೇಯ 59, ರೆನ್ ಶಾ 31, ಮಾರ್ಶ್ ಅಜೇಯ 21 (ಅಶ್ವಿನ್ 68ಕ್ಕೆ 3, ಜಯಂತ್ 27ಕ್ಕೆ 1)

Leave a Reply