ರೋಚಕ ಸುದ್ದಿಯಾಗಷ್ಟೇ ಉಳಿಯದೆ ವಿಚಾರ ಪ್ರಚೋದಿಸಬೇಕಿರುವ ಮಲೆಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ

(ಸಾಂದರ್ಭಿಕ ಚಿತ್ರ)

author-ssreedhra-murthyಸರಿ ಸುಮಾರು ಹದಿನೈದು ವರ್ಷಗಳಷ್ಟು ಹಿಂದೆ ಖ್ಯಾತ ಗೀತರಚನೆಕಾರ ಆರ್.ಎನ್.ಜಯಗೋಪಾಲ್ ಅವರೊಂದಿಗೆ ವಾಹಿನಿಯೊಂದರ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಹೋಗಬೇಕಾಗಿ ಬಂದಿತ್ತು. ಅಲ್ಲಿ 14-15ರ ವಯಸ್ಸಿನ ಬಾಲಿಕೆಯೊಬ್ಬಳು ಆಗ ಜನಪ್ರಿಯವಾಗಿದ್ದ ಹಾಡನ್ನು ಸುಶ್ರಾವ್ಯವಾಗಿಯೇ ಹಾಡಿದಳು ಪ್ರತಿ ಸಾಲಿನಲ್ಲೂ ಅಶ್ಲೀಲತೆಯೇ ತುಂಬಿದ್ದ ಅದನ್ನು ಕೇಳಿ ಜಯಗೋಪಾಲ್ ಬೆಚ್ಚಿಬಿದ್ದರು. “ಈ ಹುಡುಗಿಗೆ ಅದರ ಅರ್ಥ ಗೊತ್ತಿಲ್ಲದಿರಬಹುದು. ಆದರೆ ಅದನ್ನು ಕೇಳಿದವರು ಇವಳ ಬಗ್ಗೆ ಏನು ತಿಳಿದು ಕೊಳ್ಳುತ್ತಾರೆ. ಜನರಿಗೆ ಹೋಗುವ ಸಂದೇಶವೇನು? ನಿಮ್ಮ ಮನೆಯ ಹುಡುಗಿ ಈ ಅರ್ಥದ ಹಾಡನ್ನು ಹಾಡಿದ್ದರೆ ಸುಮ್ಮನಿರುತ್ತೀರಾ’ ಎಂದು ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಘಟನೆ ಅವರಿಗೆ ಎಂತಹ ಕಲ್ಚರಲ್ ಶಾಕ್ ನೀಡಿತ್ತು ಎಂದರೆ ಮುಂದಿನ ಹದಿನೈದು ದಿನಗಳ ಚಿತ್ರರಂಗದ ಹೊಣೆಗಾರಿಕೆಯ ಕುರಿತೇ ನನ್ನ ಜೊತೆ ಮಾತನಾಡಿದ್ದರು. ಈ ನೆನಪು ಮತ್ತೆ ಕಾಡಲು ಕಾರಣ. ಇತ್ತೀಚೆಗೆ ನಡೆದ ಮಲೆಯಾಳಂ ಚಿತ್ರಕಲಾವಿದೆಯ ಅಪಹರಣ ಮತ್ತು ಕಾರಿನಲ್ಲೇ ಅವರ ಮೇಲೆ ನಡೆದ ದೌರ್ಜನ್ಯದ ಪ್ರಸಂಗ. ಪ್ರಕರಣದ ಭೀಕರತೆ ಜೊತೆಗೆ ಇಂತಹ ಇನ್ನಷ್ಟು ಪ್ರಕರಣಗಳು ನಡೆದಿರಬಹುದು ಎನ್ನುವ ಕಟು ವಾಸ್ತವ ಚಿತ್ರರಂಗದ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಿದೆ.

ಕೋಟಿಗಟ್ಟಲೆ ಸುರಿದು ಚಿತ್ರ ನಿರ್ಮಿಸುವ ನಾವು ಅದನ್ನು ಹಿಂದೆ ಪಡೆಯುವ ಬಗ್ಗೆಯೂ ಯೋಚಿಸಬೇಕು, ಇದು ಮನೋರಂಜನಾ ಮಾಧ್ಯಮ ಇಲ್ಲಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದು, ಸಂದೇಶ ನೀಡುವುದು ಅಸಾಧ್ಯ ಮತ್ತು ಅನಗತ್ಯ ಎಂಬ ಉತ್ತರ ಚಿತ್ರರಂಗದವರು ಸದಾ ನೀಡುತ್ತಲೇ ಬಂದಿದ್ದಾರೆ. ಇದನ್ನು ಒಪ್ಪಿಕೊಂಡರೂ ಮನೋರಂಜನೆಯ ಹೆಸರಿನಲ್ಲಿ ವಿಕೃತಿಯನ್ನು ತೋರಿಸುವ ಅಧಿಕಾರವನ್ನು ಇವರಿಗೆ ನೀಡಿದವರು ಯಾರು ಎಂದು ಪ್ರಶ್ನಿಸಲೇ ಬೇಕಾಗಿದೆ. ಎಲ್ಲೂ ಸಮಾಜದಲ್ಲಿ ವಿರಳವಾಗಿ ನಡೆಯುವ ಹೆಣ್ಣಿನ ಅಪಹರಣ, ಅತ್ಯಾಚಾರಗಳನ್ನು ಸಹಜ ಸಂಗತಿಯಾಗಿಸಿದ್ದರ ಪರಿಣಾಮವನ್ನು ಗಮನಿಸ ಬೇಕು. ಕಳೆದ ಹತ್ತು ವರ್ಷಗಳಿಂದ ನಾಯಕಿಯ ಪಾತ್ರದ ಘನತೆ ಕುಗ್ಗುತ್ತಾ ಹೋಗಿ ಅದು ಗ್ಲಾಮರ್ ಗಷ್ಟೇ ಸೀಮಿತವಾಗಿದೆ. ಈ ಗ್ಲಾಮರ್ ಕೂಡ ಶೃಂಗಾರ ಎನ್ನುವ ಅರ್ಥದಲ್ಲಿ ಅಲ್ಲವೇ ಅಲ್ಲ. ಅಂಗಾಂಗ ಪ್ರದರ್ಶನಕ್ಕಷ್ಟೇ ಅದು ಸೀಮಿತವಾಗಿದೆ, ಅವಳನ್ನು ಸರಕಾಗಿ ತೋರಿಸುವ ಎಲ್ಲಾ ಚಮತ್ಕಾರಗಳೂ ನಡೆಯುತ್ತಿವೆ. ಹೆಣ್ಣನ್ನು ಚುಡಾಯಿಸುವುದು ಗಂಡಿನ ಅಧಿಕಾರ, ಅವಳು ಒಪ್ಪದಿದ್ದರೆ ಅಪಹರಿಸಿ ಚಿತ್ರಹಿಂಸೆ ನೀಡಿದರೆ ದಾರಿಗೆ ಬರುತ್ತಾಳೆ ಎಂಬ ಹುಂಬ ಸೂತ್ರ ಹಲವು ಚಿತ್ರಗಳ ನೆಲೆಯಾಗಿದೆ.

ಮೂಲತಃ ಶೇಕ್ಸ್ ಪಿಯರ್ ನ ‘ಟೇಮಿಂಗ್ ಆಫ್ ದಿ ಶ್ರೂ’ ನಾಟಕದಿಂದ ಪ್ರೇರಣೆ ಪಡೆದ ಈ ಸೂತ್ರದ ಆಧಾರದಲ್ಲೇ ಅಬ್ಬಾ ಆ ಹುಡುಗಿ, ವೀರ ಕೇಸರಿ, ಸ್ವಯಂವರ, ಸಂಪತ್ತಿಗೆ ಸವಾಲ್, ನಂಜುಂಡಿ ಕಲ್ಯಾಣದಂತಹ ಸೂಪರ್ ಹಿಟ್ ಚಿತ್ರೆಗಳು ಬಂದಿದ್ದವು. ಇದು ಈಗ ಇನ್ನಷ್ಟು ವಿಕೃತಿಯ ದಾರಿ ಹಿಡಿದಿದೆ. ಇಂತಹ ಪಾತ್ರವನ್ನು ನಿರ್ವಹಿಸುವ ನಾಯಕಿಯ ಕುರಿತು ಮೂಡುವ ಅಭಿಪ್ರಾಯವೇನು? ಸಮಾಜಕ್ಕೆ ಹೋಗು ಸಂದೇಶವೇನು? ಎಂದು ಯಾರೂ ಚಿಂತಿಸಿಲ್ಲ. ನಾಯಕಿ ಪುರುಷ ಸಮಾಜದ ನಡುವೆ ಕಾರ್ಯ ನಿರ್ವಹಿಸಬೇಕು. ನಿರ್ದೇಶಕ, ನಿರ್ಮಾಪಕ, ಸಹ ಕಲಾವಿದರಿಂದ ಹಿಡಿದು ಮೇಕಪ್ ಮ್ಯಾನ್, ಡ್ರೈವರ್, ಲೈಟ್ ಬಾಯ್ ಹೀಗೆ ಎಲ್ಲಾ ಹಂತದಲ್ಲೂ ಹಸಿದ ಕಣ್ಣುಗಳನ್ನು ಎದುರಿಸಬೇಕು. ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ಸಮೀಕ್ಷೆಯಂತೆ ಜಗತ್ತಿನಲ್ಲಿ ನಾಯಕಿ ಹೀಗೆ ತನ್ನ ಚಿತ್ರ ತಂಡದವರಿಂದಲೇ ಲೈಂಗಿಕ ಕಿರುಕಳ ಎದುರಿಸುವ ಪ್ರಮಾಣ ಕಳೆದ ಹತ್ತು ವರ್ಷಗಳಲ್ಲಿ ಶೇ. 10ರಿಂದ ಶೇ. 38ಕ್ಕೆ ಏರಿದೆ. ಭಾರತದ ಮಟ್ಟಿಗೆ ಸಾಮಾಜಕ ಗೌರವ, ಮುಂದಿನ ಭವಿಷ್ಯ, ಚಿತ್ರರಂಗದಲ್ಲಿ ಅವಕಾಶ ಹೀಗೆ ಹಲವು ಕಾರಣಗಳಿಂದ ಶೇ 70ರಷ್ಟು ಇಂತಹ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ತಮಿಳು ಕಲಾವಿದೆ ವರಲಕ್ಷ್ಮಿ ಶರತ್ ಕುಮಾರ್ ಗುರುತಿಸಿರುವಂತೆ ‘ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.’

ಕಳೆದ ಹತ್ತು ವರ್ಷಗಳಲ್ಲಿ ಐಟಂ ಸಾಂಗ್ ಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ, ನಾಯಕಿಯರೇ ಈಗ ಐಟಂ ಸಾಂಗಿಗೆ ಹಸಿ-ಬಿಸಿಯಾಗಿ ಹೆಜ್ಜೆ ಹಾಕಲು ಸಿದ್ದರಾಗಿದ್ದಾರೆ. ಅವರನ್ನು ಇಂಚಿಂಚಾಗಿ ಬೆತ್ತಲಾಗಿಸಲು ಕ್ಯಾಮರಾಗಳು ಸಜ್ಜಾಗಿವೆ. ಸುಂದರ ಹುಡುಗಿಯಿಂದ ಡಬ್ಬಲ್ ಮೀನಿಂಗ್ ಸಂಭಾಷಣೆ ಹೇಳಿಸುವುದು ಕಾಂಚಣ ತರುವ ಮಾರ್ಗ ಎಂದು ಚಿತ್ರರಂಗದ ನಿರ್ಮಾತೃಗಳು ನಂಬಿಕೊಂಡಿದ್ದಾರೆ. ಆದರೆ ಇದಕ್ಕೆ ಪೂರಕವಾದ ಅಂಕಿ- ಅಂಶಗಳೇನು ಇಲ್ಲ. ‘ಸಿಂಪಲ್‍ ಆಗಿ ಒಂದು ಲವ್ ಸ್ಟೋರಿ’ ನಂತರ ಅಂತಹ ಬೇರೆ ಪ್ರಯೋಗಗಳು ಗೆದ್ದ ಉದಾಹರಣೆ ಇಲ್ಲ. ‘ತಿಥಿ’ ಕಲಾವಿದರಿಂದ ಡಬ್ಬಲ್ ಮೀನಿಂಗ್ ಹೇಳಿಸಿ ಗೆಲ್ಲಲು ಹೊರಟ ಚಿತ್ರಗಳೆಲ್ಲಾ ಗಲ್ಲಾ ಪೆಟ್ಟಿಗೆಯಲ್ಲಿ ದಯನೀಯವಾಗಿ ಸೋತ ಉದಾಹರಣೆ ನಮ್ಮೆದುರಿಗೇ ಇದೆ. ‘ಅನುಭವ’ ‘ನಿಷ್ಕರ್ಷ’ದಂತಹ ಬೆರಳೆಣಿಕೆಯಷ್ಟು ಚಿತ್ರಗಳನ್ನು ಹೊರತು ಪಡಿಸಿದರೆ ವಿಕೃತಿಯನ್ನು ಎತ್ತಿ ಹಿಡಿದ ಚಿತ್ರಗಳು ಗೆದ್ದ ಉದಾಹರಣೆ ಕೂಡ ಇಲ್ಲ. ಹೀಗಿದ್ದರೂ ಇಂತಹ ಚಿತ್ರಗಳು ಅಪರೂಪವಾಗುವ ಬದಲು ಅವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.

ಇದಕ್ಕೆ ಪರಿಹಾರವೇನು ಎನ್ನುವುದು ಗಂಭೀರವಾದ ಪ್ರಶ್ನೆ. ತಂತ್ರಜ್ಞಾನ ಬೆಳೆದಂತೆ ಸಿನಿಮಾ ನಿರ್ಮಾಣ ಇಂದು ಸುಲಭವಾಗುತ್ತಿದೆ. ತಾಂತ್ರಿಕವಾಗಿ ಬೆಳೆಯುತ್ತಿರುವ ಮಾಧ್ಯಮ ನೈತಿಕವಾಗಿ ಕುಸಿಯುತ್ತಿದೆ. ಚಲನಚಿತ್ರ ಅಕಾಡಮಿ ಅಥವಾ ವಾಣಿಜ್ಯ ಮಂಡಳಿಯಂತಹ ಸಂಸ್ಥೆಗಳು ಚಿತ್ರ ನಿರ್ದೇಶಕರಿಗೆ ಮೌಲ್ಯಗಳ ಪರಿಚಯ ಮಾಡಿಸಿ ಹೊಣೆಗಾರಿಕೆ ತಿಳಿಸುವ ಒಂದು ಅಲ್ಪ ಕಾಲೀನ ಕೋರ್ಸ್‍ ಅನ್ನು ಕಡ್ಡಾಯವಾಗಿಸ ಬೇಕು. ಹೆಣ್ಣನ್ನು ಸರಕಾಗಿ ತೋರಿಸುವದರಿಂದಾಗುವ ಪರಿಣಾಮಗಳ ಕುರಿತು ಜಾಗೃತಿಯನ್ನು ಉಂಟು ಮಾಡ ಬೇಕು. ನಾಯಕಿಯರೂ ಕೂಡ ತಮ್ಮ ಸ್ವಂತಿಕೆಯನ್ನು ಉಳಿಸಿ ಕೊಳ್ಳುವಲ್ಲಿ ಎಚ್ಚರಿಕೆ ವಹಿಸ ಬೇಕು. ‘ಗ್ಲಾಮರ್’ ಗೂ ‘ವಿಕೃತಿ’ಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದನ್ನು ಅರಿಯಬೇಕು. ಮಲೆಯಾಳಂ ಚಿತ್ರನಟಿಯ ಪ್ರಕರಣ ಕೇವಲ ಕೆಲವು ದಿನಗಳ ಸೆನ್ಸೇಷನ್ ಸುದ್ದಿಯಾಗಿ ಉಳಿಯದೆ ಎಚ್ಚರಿಕೆಯ ಗಂಟೆಯಾಗುವುದು ಭವಿಷ್ಯದ ದೃಷ್ಟಿಯಿಂದ ತೀರಾ ಅಗತ್ಯ.

Leave a Reply