ಶಿವ: ಸ್ಮಶಾನದಲ್ಲಿ ನಿಂತೂ ಸೆಳೆವ ಸೋಜಿಗ, ವಿಶ್ವದ ಓಘವೂ ವಿಧ್ವಂಸವೂ ಆಗಬಲ್ಲ ಪರಮಾಣು ಶಕ್ತಿ

ಡಿಜಿಟಲ್ ಕನ್ನಡ ವಿಶೇಷ:

ರಾಮ ಎಂದರೆ ಆದರ್ಶ, ಕೃಷ್ಣ ಎಂದರೆ ಬಾಲ್ಯ-ಯೌವನಗಳ ಬಣ್ಣ ಹಾಗೂ ಮಾಗಿದ ವಯಸ್ಸಿಗೂ ಸಲ್ಲುವ ಗೀತೆಯ ತತ್ವಜ್ಞಾನವನ್ನೆಲ್ಲ ನೆನಪಿಸಿದರೆ ಬ್ರಹ್ಮನೋ ನಮ್ಮ ಪಾಲಿಗೆ ಜಗತ್ತನ್ನು ಸೃಷ್ಟಿ ಮಾಡಿ ನಿದ್ರೆಯಲ್ಲಿರುವ ಇಮೇಜು. ಆತ ಮಗ್ಗಲು ಬದಲಿಸಿದರೆ ಮನ್ವಂತರಗಳು ಬದಲಾಗುವ ಕಲ್ಪನೆ.

ಆದರೆ ಶಿವ..

ಆತ ಲಯದ ಪ್ರತಿಬಿಂಬ. ಬೂದಿಬಡುಕ, ಸ್ಮಶಾನವಾಸಿ. ಹಾಗಿದ್ದೂ ಭಾರತೀಯರ ಭಕ್ತಿಯನ್ನು ಹಿಡಿದಿಟ್ಟಿರುವ ರೂಪವಿದು. ರಾಮ-ಕೃಷ್ಣರ ಸಮರಾಂಗಣ ಕಲ್ಪನೆಗಳೆಲ್ಲ ಹುರಿಗೊಳ್ಳುವುದಕ್ಕೆ ಮುಂಚಿನ ಕಾಲದ ಬುಡಕಟ್ಟಿನ ವರ್ಚಸ್ಸೊಂದಿದೆ ಶಿವನಿಗೆ.

ಶಿವ ಶಿವ ಎಂದರೆ ಭಯವಿಲ್ಲ… ನಿಜವೇ. ಲಯದ ರೂಪವಾದ ಶಿವನನ್ನು ಮೆಚ್ಚಿಕೊಳ್ಳುವ, ಆರಾಧಿಸುವ ಹಂತಕ್ಕೆ ನಿಜವಾಗಿ ಬೆಳೆದವನಿಗೆ ಭಯವೆಲ್ಲಿಯದು? ಅಂತ್ಯದಂತೆ ಅನಿಸುವ ಅದು ಆರಂಭಕ್ಕೆ ಸೂಚಕ ಎಂದುಕೊಳ್ಳುವ ಮನಸ್ಥಿತಿ.

ಸದ್ಗುರು ಜಗ್ಗಿ ವಾಸುದೇವರು ಅವರ ಉಪನ್ಯಾಸದಲ್ಲಿ ಶಿವನನ್ನು ಚೆನ್ನಾಗಿ ವಿವರಿಸುತ್ತಾರೆ. ‘ಯಾವುದಲ್ಲವೋ ಅದೇ ಶಿವ ‘ ಎನ್ನುತ್ತಾರವರು. ‘ಶಿವನನ್ನು ಬೆಳಕಿನಿಂದಲ್ಲದೇ ಕತ್ತಲಿನೊಡನೆ ಸಮೀಕರಿಸುತ್ತೇವೆ. ದೃಶ್ಯ ಸೊಬಗಿದೆ ಎಂಬ ಕಾರಣಕ್ಕೆ ಮನುಕುಲ ಬೆಳಕನ್ನು ವೈಭವೀಕರಿಸಿದೆ. ಆದರೆ ಬೆಳಕೆಂಬುದು ಸೀಮಿತ ವಿದ್ಯಮಾನ. ಏಕೆಂದರೆ ಬಲ್ಬೊ, ಸೂರ್ಯನೋ ಉರಿಯುತ್ತಿರುವಷ್ಟು ಹೊತ್ತು ಬೆಳಕು. ಆದರೆ ಕತ್ತಲು ಎಲ್ಲೆಡೆ ಇದೆ. ಇದಕ್ಕಾಗಿ ಯಾವುದೂ ಉರಿಯಬೇಕಿಲ್ಲ. ಯೋಗಿಕ್ ಪರಂಪರೆಯಲ್ಲಿ ಶಿವ ದೇವರಲ್ಲ. ಆತ ಹಿಮಾಲಯ ಪ್ರದೇಶದಲ್ಲಿ ನಡೆದಾಡಿಕೊಂಡಿದ್ದ ಯೋಗಿ. ಮನುಷ್ಯನ ಪ್ರಜ್ಞೆಯ ಅರಿವಿಗೆ ಆತ ನೀಡಿದ ಕೊಡುಗೆ ನಿರ್ಲಕ್ಷಿಸಲಾಗದ್ದು. ಸಾವಿರ ವರ್ಷಗಳಿಂದೀಚೆಗೆ ಬೇರೆ ಬೇರೆ ದೇವರುಗಳಿಗೆಲ್ಲ ದೇವಾಲಯಗಳು ನಿರ್ಮಾಣವಾದವು. ಅದಕ್ಕೂ ಮುಂಚೆ ಎಲ್ಲೆಲ್ಲೂ ಬಹು ವ್ಯಾಪಕವಾಗಿದ್ದದ್ದು ಶಿವ ದೇವಾಲಯವೇ..’

ಜಿನೆವಾದದಲ್ಲಿರುವ ‘ಯುರೋಪಿಯನ್ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯರ್ ರಿಸರ್ಚ್’ ಕಟ್ಟಡದ ಎದುರಿಗೂ ನಟರಾಜನ ವಿಗ್ರಹವಿದೆ. 2004ರಲ್ಲಿ ಭಾರತವೇ ಉಡುಗೊರೆಯಾಗಿ ನೀಡಿದ್ದದು. ಶಿವನಿಗೂ ವಿಜ್ಞಾನಕ್ಕೂ ಸಂಬಂಧ ಕಲ್ಪಿಸುವ ಸರ್ಕಸ್ಸು ಮಾಡಬೇಕಿಲ್ಲ. ಆದರೆ ಎಲ್ಲವೂ ಶುರುವಾಗುವುದು ಒಂದು ಕಲ್ಪನೆಯಿಂದ ತಾನೇ? ಹಾಗೆಂದೇ ವಿಶ್ವವನ್ನು ಹಿಡಿದಿಟ್ಟರುವ ಕಾಸ್ಮಿಕ್ ನೃತ್ಯವೊಂದರ ಪರಿಕಲ್ಪನೆಯನ್ನು ಶಿವನ ನೃತ್ಯ ಪ್ರತಿಬಿಂಬಿಸುತ್ತದೆ ಎಂಬುದೊಂದು ಕಲಾತ್ಮಕ ಸತ್ಯ ಅಷ್ಟೆ.

ಶಿವನ ಕುರಿತ ಇಂಥದೇ ಕಲ್ಪನೆಗಳು ಬೆಳೆಯುತ್ತಲೇ ಹೋಗುತ್ತವೆ. ಹಿಂದಿನ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಡಿಜಿಟಲ್ ಕನ್ನಡ ಪ್ರಕಟಿಸಿದ್ದ ಲೇಖನವನ್ನೂ ಓದಬಹುದು. ಶಕ್ತಿಸ್ವರೂಪಿ ಮಹಾಶಿವನಿಗೂ ಅಣುಶಕ್ತಿ ಸ್ಥಾವರಗಳಿಗೂ ಏನು ಸಂಬಂಧ?

Leave a Reply