‘ಫ್ರೀಡಂ 251’ ಎಂಬ ಅಗ್ಗದ ಸ್ಮಾರ್ಟ್ ಫೋನ್ ಆಮಿಷ ನೆನಪಿದೆಯೇ? ಇದೀಗ ರಿಂಗಿಂಗ್ ಬೆಲ್ ಕಂಪನಿ ಎಂಡಿ ಬಂಧನ

ಡಿಜಿಟಲ್ ಕನ್ನಡ ಟೀಮ್:

ಕಳೆದ ವರ್ಷ ರಿಂಗಿಂಗ್ ಬೆಲ್ ಕಂಪನಿಯು ‘ಫ್ರೀಡಂ 251’ ಹೆಸರಿನಲ್ಲಿ ಕೇವಲ ₹ 251 ಕ್ಕೆ ಸ್ಮಾರ್ಟ್ ಫೋನ್ ನೀಡುವುದಾಗಿ ಕೊಟ್ಟಿದ್ದ ಭರವಸೆ ನಿಮಗೆಲ್ಲಾ ನೆನಪಿದೆ ತಾನೆ. ಈ ಅಗ್ಗದ ಫೋನ್ ಅನ್ನು ಪಡೆಯಲು ಅನೇಕರು ದುಡ್ಡು ಕಟ್ಟಿ ಫೋನ್ ಬರುತ್ತೆ ಎಂದು ಕಾಯುತ್ತಿರುವವರು ಸಾಕಷ್ಟು ಜನರಿದ್ದಾರೆ. ಈ ಘೋಷಣೆಯಾದ ಕೆಲವೇ ದಿನಗಳಲ್ಲಿ ಇದೊಂದು ಬೋಗಸ್ ಯೋಜನೆಯೇ ಎಂಬ ಅನುಮಾನಗಳು ಎದ್ದಿದ್ದವು. ಈಗ ಈ ಅನುಮಾನಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಗೊಯೆಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇಷ್ಟು ಕಡಿಮೆ ಮೊತ್ತಕ್ಕೆ ಸ್ಮಾರ್ಟ್ ಫೋನ್ ನೀಡುವುದು ಅಸಾಧ್ಯ ಎಂಬ ವಿಶ್ಲೇಷಣೆಗಳು ಈ ಹಿಂದೆಯೇ ಬಂದಿತ್ತು. ಇದರ ಬೆನ್ನಲ್ಲೇ ಈ ಫೋನ್ ಕಂಪನಿಗೂ ಹಾಗೂ ಮೆಕ್ ಇನ್ ಇಂಡಿಯಾ ಕಂಪನಿಗೂ ಸಂಬಂಧವಿಲ್ಲ ಎಂದು ಸರ್ಕಾರವು ಘೋಷಣೆ ಮಾಡಿತ್ತು. ನಂತರ ಈ ಕಂಪನಿ ಗ್ರಾಹಕರ ಹಣದೊಂದಿಗೆ ಪರಾರಿಯಾಗುವ ಗುಮಾನಿ ಮೇರೆಗೆ ಬ್ಯಾಂಕ್ ಖಾತೆ ಮತ್ತಿತರ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಪರಿಶೀಲಿಸಿ ತನಿಖೆಗೆ ಮುಂದಾಗಿತ್ತು. ಡಿಜಿಟಲ್ ಕನ್ನಡ ಸಹ ಈ ಫೋನ್ ಖರೀದಿಸುವ ಉತ್ಸಾಹದಲ್ಲಿರುವವರು ವಹಿಸಬೇಕಾದ ಎಚ್ಚರಿಕೆ ಬಗ್ಗೆ ಲೇಖನ ಪ್ರಕಟಿಸಿತ್ತು. ಈಗ ಈ ಎಲ್ಲ ಅನುಮಾನಗಳು ನಿಜವಾಗಿದ್ದು, ‘ಗೊಯೆಲ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಗುರುವಾರ ಮಾಹಿತಿ ಕೊಟ್ಟಿದ್ದಾರೆ.

ಗೊಯಲ್ ಬಂಧನವಾಗುತ್ತಿದ್ದಂತೆ ಈ ಫೋನಿನ ವಿತರಣೆ ಮಾಡುವ ಹಕ್ಕು ಪಡೆದುಕೊಂಡಿದ್ದ ಆಯಮ್ ಎಂಟರ್ ಪ್ರೈಸಸ್, ರಿಂಗಿಂಗ್ ಬೆಲ್ ಕಂಪನಿ ವಿರುದ್ಧ ದೂರು ನೀಡಿದ್ದು, ‘ನಮ್ಮ ಕಂಪನಿಯು ಗೊಯಲ್ ಅವರಿಗೆ ಮುಂಗಡವಾಗಿ ₹ 30 ಲಕ್ಷ ಹಣ ನೀಡಿದ್ದು, ಕಂಪನಿಯು ಈವರೆಗೂ ಕೇವಲ ₹ 13 ಲಕ್ಷ ಮೌಲ್ಯದ ಫೋನ್ ಗಳನ್ನು ಮಾತ್ರ ನಮಗೆ ನೀಡಿದೆ. ಈ ಬಗ್ಗೆ ಹಲವು ಬಾರಿ ಕಂಪನಿಯ ಗಮನಕ್ಕೆ ತಂದಿದ್ದರೂ ಫೋನ್ ಗಳ ಪೂರೈಕೆ ಮಾಡದೆ ಹಾಗೂ ಹಣವನ್ನು ಮರು ಪಾವತಿ ಮಾಡಿಲ್ಲ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Leave a Reply