ಕಂಜಲ್ ಐಎಎಸ್- ಇದು ಸಿನಿಮಾ ಕಥೆಯಲ್ಲ: ತಂದೆಯ ಹಂತಕರನ್ನು ಸರಳುಗಳ ಹಿಂದೆ ಕಳುಹಿಸಿ, ಕಾನ್ಯರ್ ಗೆ ಬಲಿಯಾದ ತಾಯಿಯ ಪ್ರತಿಜ್ಞೆ ನೆರವೇರಿಸಿದ ದಿಟ್ಟೆ

ಡಿಜಿಟಲ್ ಕನ್ನಡ ಟೀಮ್:

‘ಮನೆಗೆ ಆಧಾರವಾಗಿದ್ದ ಯಜಮಾನ ಕೊಲೆಯಾಗುವುದು, ನಂತರ ಆತನ ಪತ್ನಿ ತನ್ನ ಮಕ್ಕಳನ್ನು ಬೆಳೆಸಲು ಹಗಲಿರುಳು ಶ್ರಮವಹಿಸುವುದು. ನಂತರ ಆ ಮಕ್ಕಳು ಬಾಲ್ಯದಿಂದಲೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾ ಬೆಳೆದು ದೊಟ್ಟಮಟ್ಟಕ್ಕೆ ತಲುಪಿ ನಂತರ ತನ್ನ ತಂದೆಯನ್ನು ಕೊಂದವರಿಗೆ ಶಿಕ್ಷೆಯಾಗುವಂತೆ ಮಾಡುವುದು…’ ಕೇಳಲು ಪಕ್ಕಾ ಯಾವುದೋ ಸಿನಿಮಾದ ಕಥೆ ಎನಿಸುತ್ತಿದೆ ಅಲ್ಲವೇ? ಆದರೆ ಇದು ಸಿನಿಮಾ ಸ್ಕ್ರಿಪ್ಟ್ ಅಲ್ಲ. ಭಾರತದ ಖ್ಯಾತ ಮಹಿಳಾ ಅಧಿಕಾರಿ ಕಿಂಜಲ್ ಸಿಂಗ್ ಅವರ ಜೀವನದ ಕಥೆ.

ಹೌದು, ತನ್ನ ಬಾಲ್ಯದಲ್ಲಿ ತಂದೆಯ ಜತೆ ಆಟವಾಡುತ್ತಾ ಅವರ ವಾತ್ಸಲ್ಯವನ್ನು ಪಡೆಯುತ್ತಾ ಬೆಳೆಯಬೇಕಿದ್ದ ಕಿಂಜಲ್, ತನ್ನ ತಾಯಿಯ ಜತೆ ಕೋರ್ಟ್ ನಲ್ಲಿ ಅಲೆದಾಡುತ್ತಾ ಬೆಳೆದು ಸುದೀರ್ಘ 31 ವರ್ಷಗಳ ಹೋರಾಟದ ನಂತರ ಕೊಲೆಗಡುಕರಿಗೆ ಶಿಕ್ಷೆಯಾಗುವಂತೆ ಮಾಡಿದ್ದಾರೆ. ಕೇಳಲು ಸಿನಿಮಾ ಕಥೆಯಂತಿರುವ ಕಿಂಜಲ್ ಅವರ ಜೀವನದ ಹಾದಿಯ ಪ್ರತಿಯೊಂದು ಘಟ್ಟವೂ ನಿಜಕ್ಕೂ ಅಗ್ನಿ ಪರೀಕ್ಷೆಯೇ ಸರಿ. ಈ ಎಲ್ಲ ಸವಾಲಿನ ಪರಿಸ್ಥಿತಿಯಲ್ಲೂ ಎದೆಗುಂದದೇ ತನ್ನ ಗುರಿಸಾಧನೆ ಮಾಡಿರುವ ಕಿಂಜಲ್ ಅವರ ಯಶೋಗಾಥೆ ನಿಮ್ಮ ಮುಂದೆ…

ಅದು 1982ನೇ ಇಸವಿ ಕಿಂಜಲ್ ಸಿಂಗ್ ಆಗತಾನೇ ತನ್ನ ಕಾಲ ಮೇಲೆ ನಿಲ್ಲಲು ಹಾಗೂ ಪುಟ್ಟ ಹೆಜ್ಜೆಯನ್ನಿಡಲು ಪ್ರಯತ್ನಿಸುತ್ತಿದ್ದ ಪುಟ್ಟ ಹುಡುಗಿ. ಆಗ ಡೆಪ್ಯೂಟಿ ಸೂಪರಿಂಟೆಂಡೆಂಟ್ ಪೊಲೀಸ್ ಅಧಿಕಾರಿಯಾಗಿದ್ದ ಕಿಂಜಲ್ ಅವರ ತಂದೆ ಕೆ.ಪಿ ಸಿಂಗ್ ಅವರು ಸಹೊದ್ಯೋಗಿಗಳ ಗುಂಡೇಟಿಗೆ ಕೊಲೆಯಾಗಿದ್ದರು. ಆ ಸಂದರ್ಭದಲ್ಲಿ ಕಿಂಜಲ್ ಅವರ ತಾಯಿ ವಿಭಾ ಸಿಂಗ್ ಎರಡನೇ ಮಗುವಿಗೆ ಗರ್ಭ ಧರಿಸಿದ್ದರು.

ಒಂದು ವರ್ಷದ ಆಸುಪಾಸಿನಲ್ಲಿದ್ದ ಮಗು, ತನ್ನ ಗರ್ಭದಲ್ಲಿ ಬೆಳೆಯುತ್ತಿದ್ದ ಮತ್ತೊಂದು ಮಗುವನ್ನು ಹೊತ್ತಿದ್ದ ವಿಭಾ ಏಕಾಂಗಿಯಾಗಿ ಜೀವನ ನಡೆಸುವುದರ ಜತೆಗೆ ಗಂಡನ ಕೊಲೆ ಪ್ರಕರಣದಲ್ಲಿ ನ್ಯಾಯ ಪಡೆಯಲು ಹೋರಾಟ ನಡೆಸುತ್ತಿದ್ದರು. ನಂತರ ಕೆಲಸಕ್ಕೆ ಸೇರಿದ ವಿಭಾ ಅವರು ತಾವು ದುಡಿದ ಬಹುತೇಕ ಸಂಪಾದನೆಯನ್ನು ನ್ಯಾಯಾಲಯದ ಹೋರಾಟಕ್ಕೆ ಸುರಿಯುತ್ತಿದ್ದರು. ಇಷ್ಟೆಲ್ಲಾ ಕಠಿಣ ಸಂದರ್ಭಗಳ ನಡುವೆ ವಿಭಾ ತನ್ನ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಟ್ಟರು.

ತಾನೊಬ್ಬ ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಟ್ಟಿದ್ದ ಕೆ.ಪಿ ಸಿಂಗ್ ಐಎಎಸ್ ಪರೀಕ್ಷೆಯನ್ನು ಬರೆದಿದ್ದರು. ಆದರೆ ದುರಾದೃಷ್ಟವಶಾತ್ ಈ ಪರೀಕ್ಷೆಯ ಫಲಿತಾಂಶ ಬರುವ ಕೆಲ ದಿನಗಳ ಮುಂಚೆ ಕೊಲೆಯಾಗಿದ್ದರು. ನಂತರ ಪ್ರಕಟವಾದ ಫಲಿತಾಂಶದಲ್ಲಿ ಕೆ.ಪಿ ಸಿಂಗ್ ಉತ್ತೀರ್ಣರಾಗಿದ್ದರು.

ತನ್ನ ಗಂಡನ ಐಎಎಸ್ ಆಸೆಯನ್ನು ತನ್ನ ಇಬ್ಬರು ಮಕ್ಕಳ ಮೂಲಕ ಈಡೇರಿಸಬೇಕು ಎಂದು ವಿಭಾ ನಿರ್ಧರಿಸಿದರು. ಈ ಕನಸನ್ನು ಈಡೇರಿಸಲು ಕಿಂಜಲ್ ಹಾಗೂ ಆಕೆಯ ಸಹೋದರಿ ಪ್ರಂಜಲ್ ಹಗಲಿರುಳು ಶ್ರಮಿಸಿದರು.

ಶಾಲಾ ಮಟ್ಟದಿಂದಲೇ ವಿದ್ಯಾಭ್ಯಾಸದಲ್ಲಿ ಮುಂದೆ ಇದ್ದ ಕಿಂಜಲ್ ದೆಹಲಿಯ ಪ್ರತಿಷ್ಠಿತ ಕಾಲೇಜಿಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಹಂತದಲ್ಲಿ ಕಿಂಜಲ್ ಬದುಕಿಗೆ ಮತ್ತೊಂದು ಬರ ಸಿಡಿಲು ಬಡೆಯಿತು. ಅದೇನೆಂದರೆ ತನ್ನ ಶಕ್ತಿಯಾಗಿ ನಿಂತಿದ್ದ ತಾಯಿ ವಿಭಾ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಪ್ರಾಣ ಬಿಟ್ಟರು. ಆಕೆಯನ್ನು ಉಳಿಸಿಕೊಳ್ಳಲು ಕಿಂಜಲ್ ಸಾಕಷ್ಟು ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ತನ್ನ ತಾಯಿಯ ವೇದನೆ ಕಂಡು ಕಿಂಜಲ್ ಕುಗ್ಗಿದ್ದರು. ಈ ಹಂತದಲ್ಲಿ ತಾನು ಮುಂದೊಂದು ದಿನ ಐಎಎಸ್ ಅಧಿಕಾರಿಯಾಗಿ ತನ್ನ ತಂದೆಯನ್ನು ಕೊಂದವರಿಗೆ ಶಿಕ್ಷೆ ದೊರಕುವಂತೆ ಮಾಡುವುದಾಗಿ ತಾಯಿಗೆ ಮಾತು ಕೊಟ್ಟರು. ಇದಾದ ಕೆಲವೇ ದಿನಗಳಲ್ಲಿ ವಿಭಾ ಅವರು ಸಾವನ್ನಪ್ಪಿದ್ದರು.

ತನ್ನ ತಾಯಿ ಸತ್ತ ಎರಡೇ ದಿನಕ್ಕೆ ದೆಹಲಿಗೆ ಮರಳಿದ ಕಿಂಜಲ್ ತಾಯಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಶ್ರಮಿಸಿದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಅಗ್ರ ಶ್ರೇಯಾಂಕ ಪಡೆದು ಚಿನ್ನದ ಪದಕ ಗೆದ್ದರು. ತಮ್ಮ ಸಂಬಂಧಿಕರ ಮನೆಯಲ್ಲಿ ತಂಗಿ ಜತೆ ಕಿಂಜಲ್ ಆಶ್ರಯ ಪಡೆದರು. ಈ ಸಹೋದರಿಯರು ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತು ಒಟ್ಟಿಗೆ ಐಎಎಸ್ ಪರೀಕ್ಷೆಗೆ ತಯಾರಿ ನಡೆಸಿದರು. 2007ರಲ್ಲಿ ಈ ಇಬ್ಬರೂ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕಿಂಜಲ್ 25ನೇ ಸ್ಥಾನ ಪಡೆದರೆ ಪ್ರಂಜಲ್ 252ನೇ ಸ್ಥಾನ ಪಡೆದರು.

ಐಎಎಸ್ ಅಧಿಕಾರಿಯಾಗುವ ಬಗ್ಗೆ ತಾಯಿಗೆ ಕೊಟ್ಟ ಮಾತನ್ನು ಪೂರ್ಣಗೊಳಿಸಿದ ಕಿಂಜಲ್, ನಂತರ ತನ್ನ ತಂದೆಯನ್ನು ಕೊಂದವರಿಗೆ ಶಿಕ್ಷೆ ದೊರಕಿಸುವ ಹೋರಾಟದತ್ತ ಗಮನ ಹರಿಸಿದರು. ಈ ಇಬ್ಬರ ಹೋರಾಟ ಕಂಡು ಅನೇಕರು ನಿಬ್ಬೆರಗಾಗಿದ್ದರು. ಕೆ.ಪಿ ಸಿಂಗ್ ಅವರನ್ನು ಕೊಂದ ಪ್ರಕರಣದಲ್ಲಿ ಉತ್ತರ ಪ್ರದೇಶದ ಕೋರ್ಟ್ ಆರೋಪಿಗಳಾದ ಮೂವರು ಪೊಲೀಸ್ ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿತು. ಆ ಮೂಲಕ ಕಿಂಜಲ್ ತಮ್ಮ ಹೋರಾಟದಲ್ಲಿ ಸಂಪೂರ್ಣ ಯಶಸ್ವಿಯಾದರು,

ಕಿಂಜಲ್ ಅವರ ಈ ಹೋರಾಟವಷ್ಟೇ ಅಲ್ಲ. ಅವರ ದಕ್ಷ ಆಡಳಿತವೂ ಕೂಡ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದ್ದು, ಈಕೆಯ ಹೆಸರು ಕೇಳಿದರೆ ಅಪರಾಧಿಗಳ ಎದೆಬಡಿತ ಹೆಚ್ಚುತ್ತದೆ.

ಜೀವನದಲ್ಲಿ ಎದುರಾಗುವ ಸಣ್ಣ ಪುಟ್ಟ ಸಮಸ್ಯೆಗಳಿಗೆ ಹೆದರಿ ಖಿನ್ನತೆಗೆ ಸಿಲುಕಿ, ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೆ ಮುಂದಾಗುತ್ತಿರುವ ಸಾವಿರಾರು ಯುವಕರಿಗೆ ಕಿಂಜಲ್ ಹಾಗೂ ಅವರ ಸಹೋದರಿ ಮಾದರಿ ಎಂದರೆ ತಪ್ಪಿಲ್ಲ.

Leave a Reply