ಸರಣಿಗೂ ಮುನ್ನ ನುಡಿದಿದ್ದ ಭವಿಷ್ಯ ಸುಳ್ಳಾಯ್ತು, ಟೀಂ ಇಂಡಿಯಾ ಅಜೇಯ ಯಾತ್ರೆ ಕೊನೆಯಾಯ್ತು

ಮೊದಲ ಟೆಸ್ಟ್ ಪಂದ್ಯ ಗೆದ್ದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಆಟಗಾರರು…

ಡಿಜಿಟಲ್ ಕನ್ನಡ ಟೀಮ್:

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತ ಅನುಭವಿಸಿರುವ ಟೀಂ ಇಂಡಿಯಾ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ಸೋಲಿನ ಕಹಿ ಅನುಭವಿಸುತ್ತಿದೆ. ವಿಶ್ವದ ನಂಬರ್ ಒನ್ ಟೆಸ್ಟ್ ತಂಡದ ಸ್ಥಾನ ಅಲಂಕರಿಸಿರುವ ಭಾರತ ತಂಡ, ತನ್ನದೇ ತವರಿನಲ್ಲಿ ಸುದೀರ್ಘ 19 ಪಂದ್ಯಗಳಲ್ಲಿ ಅಜೇಯ ಯಾತ್ರೆ ನಡೆಸಿ ಅತ್ಯುತ್ತಮ ಫಾರ್ಮ್ ನಲ್ಲಿರುವಾಗ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿಗಳ ವಿರುದ್ಧ 333 ರನ್ ಗಳ ಹೀನಾಯ ಸೋಲನುಭವಿಸಿರುವುದು ತಂಡಕ್ಕೆ ದೊಡ್ಡ ಆಘಾತವೇ ಸರಿ. ಇದರೊಂದಿಗೆ ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಂಗಳದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಮೂರು ದಿನಗಳ ಒಳಗಾಗಿ ಆತಿಥೇಯರನ್ನು ಮಣಿಸಿರುವುದು ನಿಜಕ್ಕೂ ಗಮನಾರ್ಹ. ಸರಣಿ ಆರಂಭವಾಗುವ ಮುನ್ನ ಭಾರತ 4-0 ಅಂತರದಲ್ಲಿ ಸರಣಿ ಗೆದ್ದು ಆಸ್ಟ್ರೇಲಿಯಾ ತಂಡವನ್ನು ವೈಟ್ ವಾಶ್ ಮಾಡಲಿದೆ ಎಂಬುದು ಕ್ರಿಕೆಟ್ ಪಂಡಿತರಿಂದ ಹಿಡಿದು, ಅಭಿಮಾನಿಗಳವರೆಗೂ ಪ್ರತಿಯೊಬ್ಬರು ನುಡಿದ ಭವಿಷ್ಯವಾಗಿತ್ತು. ಆದರೆ ಮೊದಲ ಟೆಸ್ಟ್ ಪಂದ್ಯದ ಫಲಿತಾಂಶ ಮಾತ್ರ ಈ ಭವಿಷ್ಯವನ್ನು ಸುಳ್ಳಾಗಿಸಿದೆ.

ಸುದೀರ್ಘ 13 ವರ್ಷಗಳ ಕಾಲ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೇ ಕಂಗೆಟ್ಟಿದ್ದ ಆಸ್ಟ್ರೇಲಿಯಾ ತಂಡ ಅತಿಯಾದ ಒತ್ತಡದಿಂದಲೇ ಭಾರತಕ್ಕೆ ಪ್ರವಾಸ ಮಾಡಿತ್ತು. ಆದರೆ ಪ್ರವಾಸಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ದುಬೈನಲ್ಲಿ ಕೆಲ ದಿನಗಳ ಕಾಲ ಬೀಡುಬಿಟ್ಟು ಪೂರ್ವ ಸಿದ್ಧತೆ ಮಾಡಿಕೊಂಡಿತ್ತು. ಕಳೆದ ಕೆಲವು ವರ್ಷಗಳಲ್ಲಿ ಏಷ್ಯಾ ನೆಲದಲ್ಲಿ ನಡೆದ ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧದ ಸರಣಿಗಳಲ್ಲಿ ನಿರಂತರವಾಗಿ ಸೋತು ಸುಣ್ಣವಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಈ ಗೆಲವು ಅತ್ಮಬಲವನ್ನು ಹೆಚ್ಚಿಸಿದೆ.

ಸದ್ಯ ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ ಅದರಲ್ಲೂ ಸ್ಪಿನ್ ಬೌಲರ್ ಗಳ ಸ್ವರ್ಗವಾಗಿರುವ ತವರಿನ ಅಂಗಳದಲ್ಲಿ ಭಾರತವನ್ನು ಮಣಿಸುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವಾಗ ಆಸ್ಟ್ರೇಲಿಯಾ ಕೇವಲ 74 ಓವರ್ ಗಳಲ್ಲಿ ಭಾರತ ತಂಡವನ್ನು ಎರಡೂ ಇನಿಂಗ್ಸ್ ಗಳಲ್ಲಿ ಆಲೌಟ್ ಮಾಡಿರುವುದು, ಈ ಟೂರ್ನಿಗೂ ಮುನ್ನ ಕಾಂಗರೂ ಪಡೆ ನಡೆಸಿರುವ ತಯಾರಿ ಎಂತಹದು ಎಂಬುದನ್ನು ತೋರುತ್ತದೆ. ಈ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಲು ಪ್ರಮುಖ ಕಾರಣ, ಬ್ಯಾಟಿಂಗ್ ವಿಭಾಗದ ವೈಫಲ್ಯ ಹಾಗೂ ಕ್ಷೇತ್ರ ರಕ್ಷಣೆಯಲ್ಲಿನ ಸ್ವಯಂಕೃತ ಅಪರಾಧಗಳು.

ಭಾರತೀಯ ಬ್ಯಾಟ್ಸ್ ಮನ್ ಗಳು ಆಸ್ಟ್ರೇಲಿಯಾದ ಸ್ಪಿನ್ನರ್ ಗಳ ಎಸೆತ ಅರಿಯಲು ಸಾಧ್ಯವಾಗದೇ ಇರುವಾಗ ಕೆಟ್ಟ ಹೊಡೆತಗಳಿಗೆ ಮುಂದಾಗಿದ್ದು ಅನಗತ್ಯವಾಗಿ ವಿಕೆಟ್ ಕಳೆದುಕೊಳ್ಳುವಂತಾಯಿತು. ಇನ್ನು ಆಸ್ಟ್ರೇಲಿಯಾ ತಂಡದ ಎರಡೂ ಇನಿಂಗ್ಸ್ ಗಳಲ್ಲಿ ಭಾರತದ ಕ್ಷೇತ್ರ ರಕ್ಷಣೆಯಲ್ಲಿ ಕ್ಯಾಚ್ ಗಳನ್ನು ನೆಲಕ್ಕೆ ಹಾಕಿದ್ದು ತಂಡದ ಈ ಪರಿಸ್ಥಿತಿಗೆ ಕಾರಣವಾಗಿದೆ. ಮೊದಲ ಇನಿಂಗ್ಸ್ ಲ್ಲಿ ಅತ್ಯುತ್ತಮ ಇನಿಂಗ್ಸ್ ಮುನ್ನಡೆ ಪಡೆದ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ ನಲ್ಲಿ 285 ರನ್ ದಾಖಲಿಸಿ ಭಾರತಕ್ಕೆ 441 ರನ್ ಗಳ ಕಠಿಣ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತದ ಬ್ಯಾಟ್ಸ್ ಮನ್ ಗಳು ಮೊದಲ ಇನಿಂಗ್ಸ್ ನಲ್ಲಿ ಮಾಡಿದ ಪೆವಿಲಿಯನ್ ಪರೇಡ್ ಮುಂದುವರಿಸಿದರು. ಆಸೀಸ್ ನ ಹೊಸ ಸ್ಪಿನ್ನರ್ ಸ್ಟೀವ್ ಓ ಕೆಫೆ ಅವರ ಎಸೆತ ಅರಿಯಲು ಸಾಧ್ಯವಾಗದೆ ಭಾರತದ ವಿಕೆಟ್ ಗಳು ತರಗೆಲೆಗಳಂತೆ ಉದುರಿದವು. ಭಾರತದ ಪರ ಚೇತೇಶ್ವರ ಪೂಜಾರ 32, ರಹಾನೆ 18 ರನ್ ಗಳಿಸಿದ್ದು ಗರಿಷ್ಠ ರನ್ ಗಳಾದವು.

ಪಂದ್ಯದ ಮೊದಲ ಪಂದ್ಯದಲ್ಲೇ ಜಯ ಸಾಧಿಸಿರುವ ಆಸ್ಟ್ರೇಲಿಯಾ ತಂಡದ ಆತ್ಮ ವಿಶ್ವಾಸ ಮುಗಿಲೆತ್ತರಕ್ಕೆ ಏರಿರುವುದು ಒಂದೆಡೆಯಾದರೆ, ಆಘಾತಕಾರಿ ಸೋಲಿನಿಂದ ಬೆಚ್ಚಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ತಿರುಗಿ ಬೀಳಬೇಕಿದೆ. ಈ ಪಂದ್ಯದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಂಡು ತಂಡವನ್ನು ಮುನ್ನಡೆಯುವ ಜವಾಬ್ದಾರಿ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಹೆಗಲ ಮೇಲಿದೆ. ಮುಂದಿನ ಪಂದ್ಯ ಮಾರ್ಚ್ 4ರಿಂದ 8ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 260

ಭಾರತ ಮೊದಲ ಇನಿಂಗ್ಸ್ 105

ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ 285

ಸ್ಮಿತ್ 109, ರೆನ್ ಶಾ 31, ಮಾರ್ಶ್ 31, ಸ್ಟಾರ್ಕ್ 30 (ಅಶ್ವಿನ್ 119ಕ್ಕೆ 4, ಜಡೇಜಾ 65ಕ್ಕೆ 3)

ಭಾರತ ದ್ವಿತೀಯ ಇನಿಂಗ್ಸ್ 107

ಪೂಜಾರಾ 31, ರಹಾನೆ 18, ಕೊಹ್ಲಿ 13, ರಾಹುಲ್ 10 (ಕೆಫೆ 35ಕ್ಕೆ 6, ಲಿಯಾನ್ 53ಕ್ಕೆ 4)

ಪಂದ್ಯಶ್ರೇಷ್ಠ: ಸ್ಟೀವ್ ಓ ಕೆಫೆ

Leave a Reply