ಮತ್ತೆ ಹುಟ್ಟಿ ಬರಬಹುದೆ 10,000 ವರ್ಷಗಳ ಹಿಂದೆ ಸತ್ತ ಜೂಲಾನೆ? ವಿಜ್ಞಾನದ ಕಥೆಯಲ್ಲ- ಪ್ರಯೋಗಾಲಯದಲ್ಲಿ ಮಾಡುತ್ತಿರುವ ಪ್ರಯತ್ನ

author-ananthramuನಾವು ಯಾವ ಯುಗದಲ್ಲಿದ್ದೇವೆ ಎಂದು ಯಾರಾದರೂ ಪ್ರಶ್ನಿಸಿದರೆ ಉತ್ತರ ಕೊಡಲು ತಡವರಿಸಬೇಕಾಗುತ್ತದೆ. ಇದು ಕಂಪ್ಯೂಟರ್ ಯುಗ, ಮೊಬೈಲ್ ಯುಗ, ಅಂತರಿಕ್ಷ ಯುಗ- ಹೀಗೆ ಸಮಕಾಲೀನ ಜಗತ್ತು ವಿಜ್ಞಾನ ತಂತ್ರಜ್ಞಾನಗಳಲ್ಲಿ ಸಾಗುತ್ತಿರುವ ಹಾದಿಯನ್ನು ಆಧರಿಸಿ ಹೊಸ ಯುಗಗಳನ್ನು ಕಟ್ಟುತ್ತಲೇ ಹೋಗಬಹುದು. ಇಂದಿನ ಕಾಲಘಟ್ಟವನ್ನು ‘ಕ್ಲೋನಿಂಗ್ ಯುಗ’ ಎಂದು ಗುರುತಿಸಿದರೂ ಯಾರೂ ತಕರಾರು ಎತ್ತುವುದಿಲ್ಲ. ವಿಜ್ಞಾನ, ಪ್ರಕೃತಿಗೆ ಸದ್ದಿಲ್ಲದಂತೆ ಎಸೆದಿರುವ ಸವಾಲು ತದ್ರೂಪು ಸೃಷ್ಟಿ. ಗಂಡು ಹೆಣ್ಣಿನ ಮಿಲನವಿಲ್ಲದೆ ಜೀವ ಸೃಷ್ಟಿ ಸಾಧ್ಯ ಎಂದು ಕಾರ್ಯತಹ ಮಾಡಿ ತೋರಿಸಿರುವ ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಕುರಿಯ ಕೆಚ್ಚಲಿನಿಂದ ತೆಗೆದ ಕೋಶ ಒಂದರಿಂದಲೇ ಇಯಾನ್ ವಿಲ್ಮಟ್ ಎಂಬ ಬ್ರಿಟಿಷ್ ವಿಜ್ಞಾನಿ 1996ರಲ್ಲಿ `ಡಾಲಿ’ ಹೆಸರಿನ ಕುರಿ ಮರಿಯನ್ನು ಸೃಷ್ಟಿಸಿದ್ದು ವಿಸ್ಮಯ, ಕೋಲಾಹಲ ಎರಡಕ್ಕೂ ನಾಂದಿಹಾಡಿತು. ಜಗತ್ತಿನಲ್ಲಿ ಆ ಕುರಿಗೂ ವಿಲ್ಮೆಟ್‍ಗೂ ಏಕಕಾಲಕ್ಕೆ ಕೀರ್ತಿ ಬಂತು.

ಭ್ರೂಣ ವಿಜ್ಞಾನಕ್ಕೆ ಈಗಿನ ಒಂದೊಂದು ಸಂಗತಿಗಳೂ `ಹೈಜಂಪ್’ ಕೊಡುತ್ತಿವೆ. ಕುರಿಯನ್ನು ಸೃಷ್ಟಿಸಿದ ನಂತರ ಪ್ರಯೋಗಾಲಯದಲ್ಲಿ ಇದೇ ವಿಧಾನದಲ್ಲಿ ಹಂದಿ, ಕುದುರೆ, ಗೂಳಿಗಳು ಹುಟ್ಟಿದವು. ಈ ಬಗೆಯ ತಂತ್ರದಿಂದ ಮನುಷ್ಯನನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ವಿಲ್ಮಟ್ ಘೋಷಿಸಿದ್ದೂ ಆಯಿತು. ಡಾಲಿ ಕುರಿಮರಿ ಆರು ಮರಿಗಳನ್ನು ಕೊಟ್ಟು ಆರು ವರ್ಷ ಬಾಳಿ ಕೀಲುನೋವು, ಉಸಿರಾಟದ ತೊಂದರೆ ಅನುಭವಿಸಿದ್ದು ಬೇರೆಯ ಕಥೆ.

ತದ್ರೂಪು ಸೃಷ್ಟಿ ಇಲ್ಲಿಗೇ ನಿಂತಿಲ್ಲ ಬದಲು ವಿಜ್ಞಾನಿಗಳಿಗೆ ಇನ್ನಷ್ಟು ನೂಕುಬಲ ಕೊಟ್ಟು ಅನೇಕ ಪ್ರಾಣಿಗಳ ತದ್ರೂಪು ಸೃಷ್ಟಿಸಲು ಧೈರ್ಯಕೊಟ್ಟಿದೆ. ಹಿಮಯುಗದಲ್ಲಿ ಬಾಳಿದ್ದ ಜೂಲಾನೆ 1 ಲಕ್ಷ 35,000 ವರ್ಷಗಳಿಂದ ಕಳೆದ ಸುಮಾರು 5000 ವರ್ಷಗಳವರೆಗೆ ಹಾಯಾಗಿ ಬಾಳಿತ್ತು. ಯೂರೋಪು, ಅಮೆರಿಕ, ಏಷ್ಯ ಖಂಡಗಳಲ್ಲೂ ಇದಕ್ಕೆ ಶತ್ರುಗಳೇ ಇರಲಿಲ್ಲ. ಇಂದಿನ ಸೈಬೀರಿಯ ಜೂಲನೆಗಳ ನಿಜವಾದ ಆವಾಸವಾಗಿತ್ತು. ಸೈಬೀರಿಯದ ಹಿಮದಲ್ಲಿ ಜೂಲಾನೆಗಳ ಬದುಕು, ಬವಣೆಗಳನ್ನು ಹೇಳಲು ಆಗಾಗ ಅವುಗಳ ದೇಹ ಸಿಕ್ಕುತ್ತಲೇ ಇರುತ್ತದೆ. ಹಿಮಮುಚ್ಚಿ ಮೂಲ ದೇಹ ಕೆಡದಹಾಗೆ ಸಂರಕ್ಷಿಸಿಟ್ಟಿದೆ-ರೆಫ್ರಿಜಿರೇಟರ್ ನಲ್ಲಿ ಹಸಿ ತರಕಾರಿ ಇರುವಂತೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಜೀವಿ ವಿಜ್ಞಾನಿಗಳು ಈಗ ಜೂಲಾನೆಯನ್ನು ಮರುಸೃಷ್ಟಿ ಮಾಡಲು ಹೊರಟಿದ್ದಾರೆ. ಆಧುನಿಕ ಮನುಷ್ಯರು ಯಾರೂ ನೋಡಿರದ ಆನೆ ಈಗಿನ ಆಫ್ರಿಕದ ಆನೆಗಿಂತ ತುಸು ದೊಡ್ಡದು. ಮೈಮೇಲೆ ಜೂಲು ಧಾರಾಳವಾಗಿತ್ತು. ಏಕೆಂದರೆ ಅದು ಶೈತ್ಯವನ್ನು ನಿಭಾಯಿಸಬೇಕಾಗಿತ್ತು. ಅದರ ದಂತವೂ ಬಹು ಉದ್ದ.

mammoth-dna

ಅವು ಏಕೆ ಸಾಮೂಹಿಕವಾಗಿ ನಾಶವಾದವು? ಯಾರಿಗೂ ಈ ಕುರಿತು ಸರಿಯಾಗಿ ತಿಳಿಯದು. ಸಿದ್ಧಾಂತಗಳ ಮೇಲೆ ಸಿದ್ಧಾಂತ ಹರಿಯಬಿಟ್ಟಿದ್ದಾರೆ. ಹೆಚ್ಚಿನ ಪಾಲು ಈಗ್ಗೆ 10,000 ವರ್ಷಗಳ ಹಿಂದೆಯೇ ನಾಶವಾದವು. ಆ ಹೊತ್ತಿಗೆ ಮನುಷ್ಯ ಬೇಟೆಯಲ್ಲಿ ಪಳಗಿದ್ದ. ಈಟಿ, ಭರ್ಜಿಯನ್ನು ಬಳಸುವುದು ಗೊತ್ತಿತ್ತು. ಅದರ ದಂತವನ್ನು ಇರಿದು ತನಗೆ ಬೇಕಾದ ಆಕೃತಿಯನ್ನು ನೀಡಿದ. ಕೊನೆಗೆ ಆ ದಂತ ಅಸ್ತ್ರವೂ ಆಯಿತು. ಮನುಷ್ಯ ಕೊಲ್ಲುತ್ತ ಬಂದಿದ್ದರಿಂದ ಅವುಗಳ ಕಥೆ ಮುಗಿಯಿತೋ ಅಥವಾ ರೋಗತರುವ ಸೂಕ್ಷ್ಮಜೀವಿಗಳನ್ನು ತನಗೆ ಅರಿವಿಲ್ಲದೆ ಅವುಗಳಿಗೆ ವರ್ಗಾಯಿಸಿದನೋ ಗೊತ್ತಿಲ್ಲ. ಈಗಂತೂ `ಹವಾಗುಣ ಬದಲಾಗಿರಬಹುದು’ ಎಂಬುದು ಎಲ್ಲ ಪ್ರಸಂಗಗಳಿಗೂ ಕೊಡುವ ಕಾರಣ. ಪೂರ್ವ ಸೈಬೀರಿಯದ ಸಮುದ್ರ ದ್ವೀಪಗಳಲ್ಲಿ ಸುಮಾರು ಕಳೆದ 5,000 ವರ್ಷಗಳವರೆಗೆ ಒಂದಷ್ಟು ಗುಂಪು ಇದ್ದುವಂತೆ. ಏಕೆಂದರೆ ಅಲ್ಲಿಗೆ ಮನುಷ್ಯ ಹೋಗಲು ಸಾಧ್ಯವಿರಲಿಲ್ಲ.

ತದ್ರೂಪು ಸೃಷ್ಟಿ ಬದುಕಿರುವ ಜೀವಿಗಳನ್ನಷ್ಟೇ ಆಧರಿಸಿ ಮಾಡಬೇಕಾಗಿಲ್ಲ, ಸತ್ತಿದ್ದರೂ ಸರಿ ಸೃಷ್ಟಿಸಬಹುದು ಎನ್ನುವುದು ಹಾರ್ವರ್ಡ್ ವಿಶ್ವವಿದ್ಯಾಲಯದ ಜೀವಿ ವಿಜ್ಞಾನಿಗಳ ಮತ. ಆ ವಿಶ್ವವಿದ್ಯಾಲಯದಲ್ಲಿ ಜೂಲು ಆನೆಯನ್ನು ಮರಳಿ ಸೃಷ್ಟಿಸುವ ಒಂದು ವಿಭಾಗವೇ ಇದೆ. ಇದಕ್ಕೆ ಇನ್ನಷ್ಟು ಪೂರಕವೆಂಬಂತೆ ಸೈಬೀರಿಯದಲ್ಲಿ ಹಸಿಹಸಿ ಜೂಲಾನೆಯ ಶವಗಳೇ ಸಿಕ್ಕುತ್ತಿವೆ. ಜೂಲಾನೆ ಸೃಷ್ಟಿಸಲು ಅನುಸರಿಸುತ್ತಿರುವ ತಂತ್ರ ವಿಲ್ಮಟ್ ಡಾಲಿಯನ್ನು ಸೃಷ್ಟಿಸಿರುವ ವಿಧಾನವನ್ನೇ ಹೋಲುತ್ತದೆ, ಒಂದೆರಡು ಬದಲಾವಣೆಯ ಹೊರತು. ಜೂಲಾನೆಯ ಕೋಶದಿಂದ (ಬಹುತೇಕ ಚರ್ಮದಿಂದ ತೆಗೆದ) ಜೀನ್ ಪ್ರತ್ಯೇಕಿಸುವುದು ಮೊದಲ ಹೆಜ್ಜೆ. ಅನಂತರ ಬೆಳೆಸುವುದು ಎರಡನೆಯ ಹೆಜ್ಜೆ. ಈಗಿನ ಏಷ್ಯ ಆನೆಗೆ ಜೂಲಾನೆಗಳು ಹತ್ತಿರದ ಸಂಬಂಧಿಯಂತೆ. ರಕ್ತ ಹೆಪ್ಪುಗಟ್ಟದಂತೆ ಅವು ವಿಕಾಸವಾಗಿದ್ದವು. ಇಡೀ ಜೂಲಾನೆಯೇ ತದ್ರೂಪಿನಿಂದ ಹೊರಬರಲಾರದು. ಕೊನೆಯಪಕ್ಷ ಜೂಲಾನೆಯ ಅನೇಕ ಲಕ್ಷಣಗಳನ್ನು ಹೊತ್ತ ಆನೆಯಂತೂ ಹುಟ್ಟಿಬರುತ್ತದೆ. ಬಹುಶಃ ಅದನ್ನು ಸಂಕರ ಜೂಲಾನೆ ಎಂದರೂ ಒಪ್ಪುತ್ತದೆ.

ಪ್ರಯೋಗಗಳು ಇನ್ನೂ ಒಂದು ಅಂಶವನ್ನು ಬಹಿರಂಗಗೊಳಿಸಿದೆ. ಜೂಲಾನೆಯ ಭ್ರೂಣವನ್ನು ಕೃತಕ ಗರ್ಭಾಶಯದಲ್ಲಿ ಬೆಳೆಸುವುದು. ಇದಕ್ಕಾಗಿ ಸುಮಾರು 45 ಬೇರೆ ಬೇರೆ ಪ್ರಯೋಗಗಳಾಗಿವೆ. ಜೂಲಾನೆಯ ಡಿ.ಎನ್.ಎ.ಯನ್ನು ಏಷ್ಯದ ಹೆಣ್ಣಾನೆಯ ಜೀನೋಮ್ ಗೆ (ಒಟ್ಟು ಜೀನ್ ಗಳು) ಸೇರಿಸುವುದು. ಡಿ.ಎನ್.ಎ.ಯನ್ನು ಬೇಕಾದಕಡೆ `ಕತ್ತರಿಸಿ’ ಬೇಕೆಂದರೆ `ಪೇಸ್ಟ್’ ಮಾಡುವ ತಾಂತ್ರಿಕ ಸೌಲಭ್ಯಗಳೂ ಈಗ ಲಭ್ಯ. ಹಾರ್ವರ್ಡ್ ವಿಶ್ವವಿದ್ಯಾಲಯದ ಈ ಮಹಾ ಪ್ರಯೋಗಕ್ಕೆ ಜೀವಿ ವಿಜ್ಞಾನಿಗಳ ದೊಡ್ಡ ಪಡೆಯೇ ಬೆಂಬಲಿಸುತ್ತಿದೆ. ಒಮ್ಮೆ ಇದನ್ನು ಸಾಧಿಸಿದರೆ ಸತ್ತ ಜೀವಿ ಎದ್ದು ಬರುತ್ತದೆ ಎನ್ನುವ ನಿರೀಕ್ಷೆ ಒಂದೆಡೆಯಾದರೆ, ಈಗಾಗಲೇ ಅಳಿವಿನಂಚಿನಲ್ಲಿರುವ ಅನೇಕ ಜೀವಿಗಳನ್ನು ಹೀಗೆಯೇ ರಕ್ಷಿಸಬಹುದಲ್ಲ ಎಂಬುದು ಇನೊಂದು ಆಸೆ. ಏಕೆಂದರೆ ಮಾರಿಷಸ್ ದ್ವೀಪದಲ್ಲಿ `ಡೋಡೋ’ ಎಂಬ ಹಕ್ಕಿಗಳನ್ನು ಶಾಶ್ವತವಾಗಿ ನಿರ್ನಾಮಮಾಡಿ ಕೊನೆಗೆ 1662ರಲ್ಲಿ ಸಂಪೂರ್ಣವಾಗಿ ಅವು ಗತವಂಶಕ್ಕೆ ಸೇರಿದವು. ಹೊರಗಿನಿಂದ ಬಂದವರು ನಾಯಿ, ಇಲಿ, ಹಂದಿಗಳನ್ನೆಲ್ಲ ಬಿಟ್ಟು ಡೋಡೋ ಹಕ್ಕಿಯ ಬದುಕನ್ನು ಹೊಸಕಿಹಾಕಿದರು. ಇಂಥ ದುರ್ಗತಿ ಬೇರೆ ಜೀವಿಗಳಿಗೆ ಬರಬಾರದಲ್ಲ. ತದ್ರೂಪು ಸೃಷ್ಟಿ ಏಕಾಗಬಾರದು ಎಂದು ಬೆಂಬಲಿಸುವವರೂ ಉಂಟು. ಈಗ ಹಿಂದೆಂದಿಗಿಂತ ಸಾವಿರಪಟ್ಟು ವೇಗದಲ್ಲಿ ಜೀವಿಗಳು ಶಾಶ್ವತವಾಗಿ ಕಣ್ಮರೆಯಾಗುತ್ತಿವೆ.

`ಜುರಾಸಿಕ್ ಪಾರ್ಕ್’ (1993) ಚಿತ್ರ ನೋಡಿದ ಎಲ್ಲರಿಗೂ ಒಂದು ವಿಚಿತ್ರ ಪ್ರಯೋಗ ನೆನಪಾಗುತ್ತದೆ. ಡೈನೋಸಾರ್ ಜೀವಂತವಿದ್ದಾಗ ಅವುಗಳ ರಕ್ತ ಹೀರಿದ, ಅಂಬರದ ಅಂಟಿನಲ್ಲಿ ಸಿಕ್ಕಿಬಿದ್ದು ಸತ್ತ ಸೊಳ್ಳೆಯ ರಕ್ತ ತೆಗೆದು ಡೈನೋಸಾರ್ ಡಿ.ಎನ್.ಎ.ಯನ್ನು ಪ್ರತ್ಯೇಕಿಸಿ ಮಹಾ ಭಯಂಕರ ಡೈನೋಸಾರ್-ಟೈರನೋಸಾರಸ್ ರೆಕ್ಸ್ ಏನೆಲ್ಲ ರಾದ್ಧಾಂತಮಾಡಿತು ಎಂಬ ದೃಶ್ಯವನ್ನಂತೂ ಮರೆಯುವಂತಿಲ್ಲ. ಈಗ ಹಾರ್ವರ್ಡ್ ವಿಶ್ವವಿದ್ಯಾಲಯದ ತಜ್ಞರು ಕೈಗೆತ್ತಿಕೊಂಡಿರುವುದು ಜೂಲಾನೆಯನ್ನು ಮತ್ತೆ ಭೂಮಿಯ ಮೇಲೆ ನಡೆಸುವ ಯೋಜನೆ. ಎಷ್ಟು ವರ್ಷ ಈ ಕ್ಷಣಗಳಿಗಾಗಿ ಜಗತ್ತು ಕಾಯಬೇಕು? ಬಹುಶಃ ಎರಡು ವರ್ಷ ಸಾಕು ಎನ್ನುತ್ತಿದ್ದಾರೆ ಈ ಸೃಷ್ಟಿಕರ್ತರು.

ಈ ಅಧ್ಯಯನದ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿರುವ ವಿಡಿಯೋ ಇಲ್ಲಿದೆ ನೋಡಿ…

 

Leave a Reply